ರಾಹುಲ್ ಗಾಂಧಿ ಜತೆ ದೆಹಲಿಯಲ್ಲಿ ಚರ್ಚೆ ನಡೆಸಿದ ಸಿಎಂ ಡಿಕೆಶಿ 2 ಸಚಿವ ಸ್ಥಾನ, ಪರಿಷತ್ ನಾಮನಿರ್ದೇಶನದ ಬಗ್ಗೆಯೂ ಪ್ರಸ್ತಾಪ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಲೆಕ್ಕಾಚಾರದಲ್ಲಿ ಆಕಾಂಕ್ಷಿಗಳು ಇದೀಗ ನವರಾತ್ರಿ ಪೂರ್ಣ ಗೊಳ್ಳುವ ತನಕ ಕಾಯುವ ಪರಿಸ್ಥಿತಿಯಿದೆ. ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಸಿಡ್ಲ್ಯೂಸಿ ಸಭೆಯಲ್ಲಿ ಭಾಗವಹಿಸುವ ಮುನ್ನ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ.
ಈ ವೇಳೆ ಡಿಕೆ ಸಂಪುಟದಲ್ಲಿ ಖಾಲಿಯಿರುವ ಎರಡು ಸ್ಥಾನವನ್ನು ಭರ್ತಿ ಮಾಡುವ ಬಗ್ಗೆ, ವಿಧಾನ ಪರಿಷತ್ ನಾಮ ನಿರ್ದೇಶನ ಸ್ಥಾನಗಳ ಭರ್ತಿ ಹಾಗೂ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ನೇಮಕಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ. ಖಾಲಿಯಿರುವ 2 ಸ್ಥಾನದಲ್ಲಿ ಒಂದನ್ನು ಮಹಿಳಾ ಕೋಟಾ ಹಾಗೂ ಎಸ್‌ಟಿ ಕೋಟಾದಲ್ಲಿ ಅನ್ನಪೂರ್ಣ ತುಕಾರಾಂ ಅವರಿಗೆ ನೀಡಬೇಕು ಎಂದು ಈಗಾಗಲೇ ತೀರ್ಮಾನಿಸಲಾಗಿದೆ.
ಇದನ್ನೂ ಓದಿ: Cabinet Meeting: ಕರಾವಳಿ ಭಾಗಕ್ಕೆ ಭರ್ಜರಿ ಗಿಫ್ಟ್: 32,611 ಕೋಟಿ ರೂ. ಯೋಜನೆಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ!
ಆದರೆ ಇನ್ನುಳಿದ ಒಂದು ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿರುವುದರಿಂದ ಯಾರಿಗೆ ನೀಡಿದರೂ ಇನ್ನುಳಿದವರಿಗೆ ಅಸಮಾಧಾನವಾಗಲಿದೆ. ಆದ್ದರಿಂದ ದಸರಾ ಮುಗಿಯುವ ತನಕ ಯಾವುದೇ ತೀರ್ಮಾನ ಕೈಗೊಳ್ಳುವುದು ಬೇಡ. ಮುಂದಿನ ನಾಲ್ಕೈದು ತಿಂಗಳಲ್ಲಿ ಸರಣಿ ಚುನಾವಣೆಗಳು ಇರುವುದರಿಂದ ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಭವನ ನಿರ್ಮಾಣದ ಬಗ್ಗೆಯೂ ಚರ್ಚೆ: ಇದೇ ವೇಳೆ ರಾಜ್ಯದಲ್ಲಿ 100 ಕಾಂಗ್ರೆಸ್ ಕಚೇರಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದ ಸಮಯ ನಿಗದಿ ಬಗ್ಗೆ ಚರ್ಚೆ ನಡೆಸಲಾಗಿದ್ದು, ಭಾರತ್ ಜೋಡೋ ಪಾದಯಾತ್ರೆಯ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡ 84 ಕ್ಷೇತ್ರಗಳಲ್ಲಿ ಪಕ್ಷದ ವತಿಯಿಂದ ಭಾರತ್ ಜೋಡೋ 2.0 ಕಾರ್ಯಕ್ರಮ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದ ವಿಶೇಷ ತೀವ್ರ ಪರಿಷ್ಕರಣೆ ವಿಚಾರದಲ್ಲಿ ರಾಜ್ಯ ಸರಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ ಎಂದು ಮೂಲಗಳು ತಿಳಿಸಿವೆ.