ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಜ್ಞಾನಿಗಳು ಹುಡುಕುವ ಕ್ಷುದ್ರಗ್ರಹಗಳ ಕುಳಿ ಬೆಂಗಳೂರಿನಲ್ಲೇ ಇದೆ: ಇದು ‘ಬ್ರ್ಯಾಂಡ್‌ ಬೆಂಗಳೂರು’ ವೈಭವ ಎಂದ ಜೆಡಿಎಸ್‌; ಕೆನಡಾ ಪ್ರಜೆ ಹಂಚಿಕೊಂಡ ವಿಡಿಯೊ ವೈರಲ್‌

Viral Video: ಬೆಂಗಳೂರಿನ ಇಂದಿರಾ ನಗರದಲ್ಲಿನ ರಸ್ತೆ, ಫುಟ್‌ಪಾತ್‌ ಅವ್ಯವಸ್ಥೆಯ ಮೇಲೆ ಕೆನಡಾದ ಕಂಟೆಂಟ್‌ ಕ್ರಿಯೇಟರ್‌ ಕ್ಯಾಲೆಬ್‌ ಫ್ರೀಸೆನ್ ಬೆಳಕು ಚೆಲ್ಲಿದ್ದು, ವಿಡಿಯೊ ವೈರಲ್‌ ಆಗಿದೆ. ಈ ವಿಡಿಯೊವನ್ನು ಹಂಚಿಕೊಂಡ ಜೆಡಿಎಸ್‌ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದೇ ‘ಬ್ರ್ಯಾಂಡ್‌ ಬೆಂಗಳೂರು’ ವೈಭವ ಎಂದು ವ್ಯಂಗ್ಯವಾಡಿದೆ.

ಬೆಂಗಳೂರು ಇಂದಿರಾ ನಗರದ ಅವ್ಯವಸ್ಥೆ ತೆರೆದಿಟ್ಟ ಕೆನಡಾ ಪ್ರಜೆ

ಬೆಂಗಳೂರು, ಅ. 4: ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರು ದೇಶದ ಐಟಿ ಸಿಟಿ, ಸ್ಟಾರ್ಟ್‌ಅಪ್‌ ರಾಜಧಾನಿ ಎನಿಸಿಕೊಂಡಿದೆ. ದೇಶ-ವಿದೇಶಗಳ ಪ್ರಜೆಗಳು ಇಲ್ಲಿ ವಾಸವಾಗಿದ್ದಾರೆ. ದಿನದಿಂದ ದಿನಕ್ಕೆ ನಗರ ಬೆಳೆಯುತ್ತಲೇ ಇದೆ. ಬೆಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಅನೇಕರು ಇಲ್ಲಿನ ಟ್ರಾಫಿಕ್‌ ಸಮಸ್ಯೆ, ಮೂಲ ಸೌಕರ್ಯ ಕೊರತೆ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಈ ಬಗ್ಗೆ ಅನೇಕರು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇಂದಿರಾ ನಗರದಲ್ಲಿನ ರಸ್ತೆ, ಫುಟ್‌ಪಾತ್‌ ಅವ್ಯವಸ್ಥೆಯ ಮೇಲೆ ಕೆನಡಾದ ಕಂಟೆಂಟ್‌ ಕ್ರಿಯೇಟರ್‌ ಕ್ಯಾಲೆಬ್‌ ಫ್ರೀಸೆನ್ ಬೆಳಕು ಚೆಲ್ಲಿದ್ದು, ವಿಡಿಯೊ ವೈರಲ್‌ ಆಗಿದೆ (Viral Video). ಈ ವಿಡಿಯೊವನ್ನು ಹಂಚಿಕೊಂಡ ಜೆಡಿಎಸ್‌ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದೇ ‘ಬ್ರ್ಯಾಂಡ್‌ ಬೆಂಗಳೂರು’ ವೈಭವ ಎಂದು ವ್ಯಂಗ್ಯವಾಡಿದೆ. ಸದ್ಯ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕಾಮಗಾರಿ ಆರಂಭಿಸಿದಾರೆ.

ಕ್ಯಾಲೆಬ್‌ ಫ್ರಿಯೆಸನ್‌ ಆಗಾಗ ಭಾರತದಲ್ಲಿನ ಅಭಿವೃದ್ದಿ ಕಾಮಗಾರಿಗಳ ವಿಡಿಯೊ, ಸುದ್ದಿ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು ತಮ್ಮ ವಿಡಿಯೊದಲ್ಲಿ ಇಂದಿರಾನಗರದ 12ನೇ ಮುಖ್ಯ ರಸ್ತೆಯಲ್ಲಿನ ಮುರಿದ ಫುಟ್‌ಪಾತ್‌ಗಳು, ರಾಶಿ ಬಿದ್ದಿರುವ ಅವಶೇಷಗಳು ಮತ್ತು ಹಾನಿಗೊಳಗಾದ ರಸ್ತೆಗಳನ್ನು ತೋರಿಸಿದ್ದಾರೆ.

ಕೆನಡಾದ ಕಂಟೆಂಟ್‌ ಕ್ರಿಯೇಟರ್‌ ಕ್ಯಾಲೆಬ್‌ ಫ್ರೀಸೆನ್ ಅವರ ಪೋಸ್ಟ್‌:



ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊವೊಂದರಲ್ಲಿ ಕ್ಯಾಲೆಬ್‌ ಹಾನಿಗೊಳಗಾದ ಹಲವು ಪಾದಚಾರಿ ಮಾರ್ಗಗಳನ್ನು ತೋರಿಸಿದ್ದಾರೆ. "ಬೇರೆ ಯಾವುದೇ ದೇಶ ಇಂತಹ ಪಾದಚಾರಿ ಮಾರ್ಗವನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಬೆಂಗಳೂರು ಭಾರತದ ಅತ್ಯಂತ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಇದು ದೇಶದ ತಂತ್ರಜ್ಞಾನ ರಾಜಧಾನಿಯೂ ಹೌದು. ಅನೇಕ ಸ್ಟಾರ್ಟ್‌ಅಪ್‌ ಮತ್ತು ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ನೆಲೆಗೊಂಡಿರುವ ನಗರದ ಪ್ರಮುಖ ಕೇಂದ್ರವೊಂದರಲ್ಲೇ ಇಂತಹ ಪಾದಚಾರಿ ಮಾರ್ಗಗಳಿವೆ. ಇದು ಶೋಚನೀಯ ಸ್ಥಿತಿ" ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತ ಯುವತಿ ಹೇಳಿದ್ದೇನು?

ಅವರು ಕಲ್ಲು-ಮಣ್ಣಿನ ರಾಶಿಗಳು, ಬಿರುಕು ಬಿಟ್ಟ ಫುಟ್‌ಪಾತ್ ಮತ್ತು ಕಸದಿಂದ ತುಂಬಿದ ದೊಡ್ಡ ಗುಂಡಿಯನ್ನು ತೋರಿಸಿದ್ದಾರೆ. ʼʼಇದನ್ನು ನೋಡಿದರೆ ಯಾವುದೋ ಕ್ಷುದ್ರಗ್ರಹವೊಂದು ಭೂಮಿಗೆ ಡಿಕ್ಕಿ ಹೊಡೆದು ದೊಡ್ಡ ಗುಂಡಿಯನ್ನು ಸೃಷ್ಟಿಸಿದಂತಿದೆ. ಸಹಜವಾಗಿಯೇ ಈಗ ಜನರು ಇಲ್ಲಿ ಕಸವನ್ನು ಎಸೆಯುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಅನಧಿಕೃತ ಕಸದ ತೊಟ್ಟಿಯಂತಾಗಿಬಿಟ್ಟಿದೆʼʼ ಎಂದಿದ್ದಾರೆ.

"ಇಂದಿರಾನಗರ ಹೀಗಿರಬಾರದು" ಎಂದು ಅವರು ಕ್ಯಾಪ್ಷನ್‌ನಲ್ಲಿ ಉಲ್ಲೇಖಿಸಿದ್ದಾರೆ. "ಪಾದಾಚಾರಿ ಮಾರ್ಗಗಳು ಸುಲಭವಾಗಿ ನಡೆಯಲು ಯೋಗ್ಯವಾಗಿರಬೇಕು. ಸುರಕ್ಷಿತವಾಗಿರಬೇಕು, ಪಾದಚಾರಿ ಸ್ನೇಹಿಯಾಗಿರಬೇಕು. ಆದರೆ ವಾಸ್ತವದಲ್ಲಿ ಇಲ್ಲಿ ಅವು ಅವ್ಯವಸ್ಥೆಯ ಆಗರವಾಗಿವೆ. ಇಂದಿರಾನಗರದ 12ನೇ ಮುಖ್ಯ ರಸ್ತೆಯಲ್ಲಿ ಸಂಘರ್ಷ ನಡೆಯುವ ಪ್ರದೇಶವನ್ನೇ ಹೋಲುವಂತಹ ಕಲ್ಲು-ಮಣ್ಣಿನ ರಾಶಿಗಳಿವೆ. ಅನ್ಯಗ್ರಹದ ರಚನೆಯಂತೆ ಕಾಣುವಷ್ಟು ದೊಡ್ಡ ಗುಂಡಿಗಳಿವೆ. ಯಾವುದೇ ಕ್ಷಣದಲ್ಲಿ ಕುಸಿದು ಬೀಳುವಂತಿರುವ ಕಾಂಕ್ರೀಟ್ ಚಪ್ಪಡಿಗಳಿವೆ ಹಾಗೂ ಕಸದ ತೊಟ್ಟಿಗಳಂತೆಯೇ ಬಳಕೆಯಾಗುತ್ತಿರುವ ಮರಗಳಿವೆʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಆರಂಭ

ಈ ವಿಡಿಯೊ ವೈರಲ್‌ ಆಗಿ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತು ಕಾಮಗಾರಿ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಉತ್ತಮ ಪಾದಚಾರಿ ಮಾರ್ಗಗಳಿಗಾಗಿ ಅಭಿಯಾನ ನಡೆಸುತ್ತಿರುವ ಅರುಣ್ ಪೈ, ಇಂದಿರಾನಗರದ 12ನೇ ಮುಖ್ಯ ರಸ್ತೆಯಲ್ಲಿ ದುರಸ್ತಿ ಕಾಮಗಾರಿ ಆರಂಭವಾಗಿದೆ ಎಂಬ ತಿಳಿಸಿದ್ದಾರೆ. ʼʼಇಂದಿರಾನಗರದ 12ನೇ ಮುಖ್ಯ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದೆ. ನಿಮ್ಮ ವಿಡಿಯೋಗೆ ಧನ್ಯವಾದಗಳು ಕ್ಯಾಲೆಬ್‌. ಟೀಮ್ ಡೊಮ್ಲೂರ್ ಮತ್ತು ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್‌ಗೆ ತ್ವರಿತವಾಗಿ ಸ್ಪಂದಿಸಿದೆ. ಬನ್ನಿ ಬೆಂಗಳೂರನ್ನು 'ವಾಕಲೂರು' ಆಗಿ ಪರಿವರ್ತಿಸೋಣ!" ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಬರ ಪರಿಸ್ಥಿತಿ ಮಧ್ಯೆ ʼಬೆಂಗಳೂರು ಜಾತ್ರೆʼ ಆಯೋಜಿಸಿದ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್‌ ಕಿಡಿ

ಜೆಡಿಎಸ್‌ ಎಕ್ಸ್‌ ಪೋಸ್ಟ್‌:



ಜೆಡಿಎಸ್‌ ಪೋಸ್ಟ್‌

ಇನ್ನು ಜೆಡಿಎಸ್‌ ಕೂಡ ಈ ಬಗ್ಗೆ ಬರೆದುಕೊಂಡಿದೆ. ʼʼವಿದೇಶಿ ಹೂಡಿಕೆದಾರರು ಮತ್ತು ಟೆಕ್ಕಿಗಳು ಇಂದಿರಾ ನಗರಕ್ಕೆ ಬಂದರೆ ಸಾಕು—ನಾಸಾ ವಿಜ್ಞಾನಿಗಳು ಹುಡುಕುವ ಚಂದ್ರನ ಮೇಲ್ಮೈ ಹಾಗೂ ಕ್ಷುದ್ರಗ್ರಹಗಳ ಕುಳಿಗಳು ಇಲ್ಲಿನ ಫುಟ್‌ಪಾತ್‌ನಲ್ಲೇ ದರ್ಶನವಾಗುತ್ತವೆ. ಸ್ಥಳೀಯ ನಾಗರಿಕರು ವರ್ಷಗಟ್ಟಲೆ ಗೋಳಾಡಿದರೂ ಜಪ್ಪಯ್ಯ ಅನ್ನದ ಪಾಲಿಕೆ, ಕೆನಡಾದ ಪ್ರಜೆಯೊಬ್ಬರು ಜಾಗತಿಕ ಮಟ್ಟದಲ್ಲಿ ಮಾನ ಹರಾಜು ಹಾಕಿ ಲೋಕಾಯುಕ್ತರು ಚಾಟಿ ಬೀಸಿದ ಮೇಲಷ್ಟೇ ಎಚ್ಚೆತ್ತುಕೊಂಡಿದೆ. ವಿದೇಶಿಗರು ಛೀಮಾರಿ ಹಾಕಿದರೆ ಮಾತ್ರ ನಿಮ್ಮ ಸರ್ಕಾರಕ್ಕೆ ‘ಜ್ಞಾನೋದಯ’ವಾಗುವುದೇ?ʼʼ ಎಂದು ಪ್ರಶ್ನಿಸಿದೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author