ಬೆಂಗಳೂರು: ಸುಪ್ರೀಂ ಕೋರ್ಟ್ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯನ್ನು ಬಿಡುಗಡೆ ಮಾಡಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಕಾರಾಗೃಹ ಇಲಾಖೆಯ ಡಿಐಜಿ (DIG) ಎಂ. ಸೋಮಶೇಖರ್ (DIG Somashekhara) ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹಲವು ಸ್ಫೋಟಕ ವಿಚಾರಗಳು ಬಯಲಾಗಿವೆ. ಬಿಡುಗಡೆ ನಂತರ ಪತ್ನಿಗೆ ಕೈದಿ ಕೈಕೊಟ್ಟಿದ್ದರಿಂದ ಪ್ರಕರಣ ಬಹಿರಂಗವಾಗಿದೆ ಎನ್ನಲಾಗಿದ್ದು, ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಕೆರಳಿ ಪತ್ನಿ ಸತ್ಯ ಹೇಳಿದ್ದಾರೆ ಎನ್ನಲಾಗಿದೆ.
ಕೈದಿಯ ಬಿಡುಗಡೆಗೆ ಪ್ರತಿಯಾಗಿ ಡಿಐಜಿ ಸೋಮಶೇಖರ್ ಅವರು ಕೈದಿಯ ಪತ್ನಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಲ್ಲದೆ, ಆಕೆಯನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಡಿಯೋ ಕಾಲ್ ಮೂಲಕವೂ ಆಕೆಗೆ ಕಿರುಕುಳ ನೀಡುತ್ತಿದ್ದರೆಂದು ವರದಿಯಾಗಿದೆ. ಮತ್ತೊಂದು ಮದುವೆಯಾಗಿದ್ದ. ಇದರಿಂದ ಆಕ್ರೋಶಗೊಂಡ ಮೊದಲ ಪತ್ನಿ (ಯಾರನ್ನು ಡಿಐಜಿ ಶೋಷಿಸಿದ್ದರೋ ಆಕೆ), ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಅನಾಮಧೇಯ ಪತ್ರ ಹಾಗೂ ದೂರು ನೀಡುವ ಮೂಲಕ ಪತಿಯ ಅಕ್ರಮ ಬಿಡುಗಡೆ ಮತ್ತು ಡಿಐಜಿಯ ಕರ್ಮಕಾಂಡವನ್ನು ಸಂಪೂರ್ಣವಾಗಿ ಬಯಲಿಗೆಳೆದಿದ್ದಾಳೆ.
ಜೈಲಿನ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶದ ನಕಲಿ ಪ್ರತಿಯನ್ನು ಪರಿಶೀಲಿಸಿದಾಗ ವಂಚನೆ ನಡೆದಿರುವುದು ದೃಢಪಟ್ಟಿದೆ. ತನಿಖೆ ನಡೆಸಿದ ಎಲೆಕ್ಟ್ರಾನಿಕ್ಸ್ ಸಿಟಿ ಡಿಸಿಪಿ ಎಂ. ನಾರಾಯಣ ನೇತೃತ್ವದ ವಿಶೇಷ ಪೊಲೀಸ್ ತಂಡವು ಪ್ರಸ್ತುತ ಕಲಬುರಗಿ ವಲಯದಲ್ಲಿದ್ದ ಡಿಐಜಿ ಸೋಮಶೇಖರ್ ಅವರನ್ನು ಬಂಧಿಸಿದೆ. ಪ್ರಸ್ತುತ ಪೊಲೀಸರು ಸೋಮಶೇಖರ್ ಅವರ ಮೊಬೈಲ್ ಕರೆಗಳು, ಸಂದೇಶಗಳು ಹಾಗೂ ಡಿಜಿಟಲ್ ಪುರಾವೆಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದು, ಈ ಜಾಲದಲ್ಲಿ ಜೈಲು ಇಲಾಖೆಯ ಇನ್ನುಳಿದ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.
ನ್ಯಾಯಾಲಯದ ಆದೇಶದಂತೆ ಆರೋಪಿ ಡಿಐಜಿ ಎಂ. ಸೋಮಶೇಖರ್ ಅವರನ್ನು ಅಕ್ಟೋಬರ್ 5ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ಅಕ್ಟೋಬರ್ 9ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. ಸುಪ್ರೀಂ ಕೋರ್ಟ್‌ನ ಆದೇಶ ತಲುಪಿದಾಗ ಜೈಲಿನ ನಿಯಮಾವಳಿಗಳ ಪ್ರಕಾರ ಪರಿಶೀಲನೆ ನಡೆಸದ ಇಲಾಖೆಯ ಇನ್ನುಳಿದ ಅಧಿಕಾರಿಗಳು ಯಾರು ಎಂಬುದರ ಕುರಿತು ಸೋಮಶೇಖರ್ ಸಮ್ಮುಖದಲ್ಲೇ ವಿಚಾರಣೆ ನಡೆಸಲಾಗುತ್ತಿದೆ.