ಬೆಂಗಳೂರು, ಜೂ. 4: ದೇಶಾದ್ಯಂತ ಚುನಾವಣಾ ಆಯೋಗ ಎಸ್‌ಐಆರ್ (ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆ ನಡೆಸುತ್ತಿದೆ. ಕೇರಳಂ ಸೇರಿ ವಿವಿಧ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದ್ದು, ಕರ್ನಾಟಕದಲ್ಲಿ ಈ ತಿಂಗಳಲ್ಲಿ ಆರಂಭವಾಗಲಿದೆ. ಎಸ್‌ಐಆರ್ (SIR) ಬಗ್ಗೆ ವಿಪಕ್ಷಗಳು ಆತಂಕ ವ್ಯಕ್ತಪಡಿಸುತ್ತಿರುವ ಮಧ್ಯೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಈ ಸಂಬಂಧ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಯಾವುದೇ ಪ್ರಜೆ ತನ್ನ ಅತ್ಯಮೂಲ್ಯ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ.
ವಿಧಾನಸೌಧದ ಸಭಾಂಗಣದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ʼʼಎಸ್‌ಐಆರ್ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯದೆ ಅತ್ಯಂತ ಪಾರದರ್ಶಕವಾಗಿ ನಡೆಯಬೇಕು ಮತ್ತು ಎಲ್ಲ ಮತದಾರರಲ್ಲಿ ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕುʼʼ ಎಂದು ಆದೇಶಿಸಿದ್ದಾರೆ.
ಡಿಕೆಶಿ ಅವರ ಎಕ್ಸ್ ಪೋಸ್ಟ್:
ಜಾಗೃತಿ ಮೂಡಿಸಿ
ʼʼಬೇರೆ ಅನೇಕ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಜನರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಆದರೆ ಕೇರಳಂನಲ್ಲಿ ಈ ಪ್ರಕ್ರಿಯೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ನಮ್ಮ ರಾಜ್ಯದಲ್ಲೂ ಯಾರೊಬ್ಬರ ಹೆಸರೂ ಮತದಾರರ ಪಟ್ಟಿಯಿಂದ ಕೈತಪ್ಪದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳ ತಂಡವನ್ನು ನೇಮಿಸಬೇಕುʼʼ ಎಂದು ಹೇಳಿದ್ದಾರೆ.
ʼʼಸಾರ್ವಜನಿಕರಿಗೆ ನೆರವಾಗಲು ಅಗತ್ಯವಿರುವ ಕಡೆಗಳಲ್ಲಿ ತತ್ ಕ್ಷಣವೇ 'ಹೆಲ್ಸ್ ಡೆಸ್ಕ್' ಸ್ಥಾಪಿಸಬೇಕು. ಕೇರಳಂನಂತೆ ನಮ್ಮಲ್ಲೂ ಈ ಪ್ರಕ್ರಿಯೆ ಅತ್ಯಂತ ಯಶಸ್ವಿಯಾಗಿ ನಡೆಯಬೇಕಿದ್ದು, ಯಾರೊಬ್ಬರ ಹೆಸರೂ ಮತದಾರರ ಪಟ್ಟಿಯಿಂದ ಕೈತಪ್ಪದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕುʼʼ ಎಂದು ಸೂಚನೆ ನೀಡಿದ್ದಾರೆ.
ʼʼಯಾವುದೇ ವ್ಯಕ್ತಿ ಎಸ್ಐಆರ್‌ನಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವಂತೆ ಆಗಬಾರದು. ಈ ಪ್ರಕ್ರಿಯೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳದಿದ್ದರೆ ಸವಲತ್ತುಗಳನ್ನು ಕಳೆದುಕೊಳ್ಳಲಿದ್ದಾರೆ. ಸಿಎಂ ಹಾಗೂ ಡಿಸಿಎಂ ಸೇರಿ ಎಲ್ಲರೂ ಮತದಾರರು. ಎನ್ಯುಮರೇಷನ್ ಅರ್ಜಿ ತುಂಬಿ, ಸಹಿ ಹಾಕಿ, ದಾಖಲೆ ಸಮೇತ ಸಲ್ಲಿಸಬೇಕು. ಇಲ್ಲವಾದರೆ ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ ಎಂದು ಜಾಗೃತಿ ಮೂಡಿಸಬೇಕು. ಇದಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ನೀಡಿದ್ದೇನೆ” ಎಂದು ಮಾಹಿತಿ ನೀಡಿದರು.
“ಇತಿಹಾಸ ಓದಲು, ಇತಿಹಾಸ ಬರೆಯಲು ಇಷ್ಟವಿಲ್ಲ. ಇತಿಹಾಸ ಸೃಷ್ಟಿ ಮಾಡಿ ಸಾಕ್ಷಿಗುಡ್ಡೆ ಬಿಟ್ಟುಹೋಗಬೇಕು. ನೀವು ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿ ಎಂದು ಹೇಳಿರುವೆ. ಕಾನೂನು ಹೊರತಾಗಿ ಬೇರೆ ಯಾವ ಒತ್ತಡಕ್ಕೂ ಮಣಿಯಬಾರದು. ಮಂತ್ರಿಗಳು, ಶಾಸಕರು, ನನ್ನ ಕಚೇರಿಯವರ ಮಾತು ಕೇಳದೇ, ಕಾನೂನು ವ್ಯಾಪ್ತಿಯಲ್ಲಿ ಸಕಾರಾತ್ಮಕ ಮನೋಭಾವದಲ್ಲಿ ಕೆಲಸ ಮಾಡಿ. ಸಮಸ್ಯೆಗಳಿಗೆ ವ್ಯವಸ್ಥೆ ಚೌಕಟ್ಟಿನಲ್ಲೇ ಪರಿಹಾರ ಹುಡುಕಿ ಎಂದು ಸೂಚಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕಡ್ಡಾಯವಾಗಿ ಆಯಾ ಜಿಲ್ಲೆಗಳಲ್ಲಿರುವ ತಾಲೂಕುಗಳಿಗೂ ಹೋಗಿ ಪರಿಶೀಲನೆ ಮಾಡಬೇಕು.
ಸಿಎಂ ಕುರ್ಚಿ ನನ್ನದಲ್ಲ, ಜನರದ್ದು: ಸಿಎಂ ಡಿ.ಕೆ. ಶಿವಕುಮಾರ್
ಎನ್‌ಆರ್‌ಐಗಳಿಗೆ ಪ್ರತ್ಯೇಕ ಸಚಿವಾಲಯ?
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ "ಎನ್‌ಆರ್‌ಐಗಳಿಗೆ ಪ್ರತ್ಯೇಕ ಸಚಿವಾಲಯವನ್ನು ರಚಿಸಲು ನಾನು ಅಧಿಕಾರಿಗಳನ್ನು ಕೇಳಿದ್ದೇನೆ. ಮುಕ್ತ ಮತ್ತು ನ್ಯಾಯಯುತ ಆಡಳಿತವನ್ನು ಖಚಿತಪಡಿಸಿಕೊಳ್ಳಲು, ಯಾವುದೇ ಒತ್ತಡಕ್ಕೆ ಒಳಗಾಗದಂತೆ ನಾನು ಅಧಿಕಾರಿಗಳು ಮತ್ತು ಸಚಿವರಿಗೆ ಸೂಚಿಸಿದ್ದೇನೆ'' ಎಂದು ತಿಳಿಸಿದ್ದಾರೆ. ʼʼಎಲ್ಲ ಇಲಾಖೆಗಳ ಕುರಿತು 15 ದಿನಗಳಲ್ಲಿ ವರದಿ ನೀಡುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಉದ್ಯೋಗ ಸೃಷ್ಟಿ ಕುರಿತು ವರದಿಗಳನ್ನು ಕೇಳಿದ್ದೇನೆ ಮತ್ತು ಖಾಸಗಿ ಉದ್ಯೋಗದಾತರು ಮತ್ತು ಇತರರಿಗೆ ಅನುಕೂಲವಾಗುವಂತೆ ಉದ್ಯೋಗ ವಿನಿಮಯ ಕೇಂದ್ರವನ್ನು ರಚಿಸಲಾಗುವುದುʼʼ ಎಂದು ವಿವರಿಸಿದ್ದಾರೆ.
"ನಮಗೆ ಚುನಾವಣೆ ಮುಖ್ಯವಲ್ಲ. ಜನರ ಜೀವನದ ಗುಣಮಟ್ಟ ಮುಖ್ಯ ಎಂಬುದನ್ನು ನೋಡುತ್ತೇವೆ. ಆದ್ದರಿಂದ ಗ್ಯಾರಂಟಿಗಳ ಮೂಲಕ ಕನಿಷ್ಠ ಸುರಕ್ಷಿತ ಜೀವನವನ್ನಾದರೂ ನೀಡಬೇಕೆಂದು ಬಯಸುತ್ತೇವೆ" ಎಂದು ಹೇಳಿದ್ದಾರೆ.
ಗೆಲುವಿನ ಅಂತರಕ್ಕಿಂತ ಡಿಲೀಟ್ ಆದ ಮತಗಳೇ ಹೆಚ್ಚು: ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಐಆರ್ ವಿರುದ್ಧ ಟಿಎಂಸಿ ಕಿಡಿ
ಎಸ್‌ಐಆರ್ ಎಂದರೇನು?
ಎಸ್‌ಐಆರ್ ಎಂದರೆ ವಿಶೇಷ ಮತಪಟ್ಟಿ ಪರಿಷ್ಕರಣೆ. ಇದನ್ನು ಕಾಲಕಾಲಕ್ಕೆ ಕೇಂದ್ರ ಚುನಾವಣಾ ಆಯೋಗ ನಡೆಸುತ್ತದೆ. ಈ ಪ್ರಕ್ರಿಯೆಯಲ್ಲಿ ಮತಪಟ್ಟಿಗೆ ಅರ್ಹರ ಹೆಸರು ಸೇರ್ಪಡೆ, ಅನರ್ಹರ ಹೆಸರು ಡಿಲೀಟ್, ಎರೆಡೆರಡು ಕಡೆ ನೋಂದಾಯಿತರಾಗಿದ್ದವರ ಹೆಸರು ಒಂದು ಕಡೆ ರದ್ದು, ಮೃತಪಟ್ಟವರ ಹೆಸರು ರದ್ದು, ವಾಸ ಸ್ಥಳ ಬದಲಾಗಿದ್ದವರ ಹೆಸರು ರದ್ದು ಮಾಡಲಾಗುತ್ತದೆ. ವಿಶೇಷ ಮತಪಟ್ಟಿ ಪರಿಷ್ಕರಣೆ ಹಿಂದೆ ಕೇಂದ್ರದ ಬಿಜೆಪಿ ಸರ್ಕಾರದ ಕುತಂತ್ರವಿದೆ. ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿರಿಸಿ ಚುನಾವಣೆ ಗೆಲ್ಲಲು ಬಿಜೆಪಿ ಈ ಪರಿಷ್ಕರಣೆ ನಡೆಸುತ್ತಿದೆ ಎನ್ನುವುದು ಕಾಂಗ್ರೆಸ್ ಸೇರಿ ವಿಪಕ್ಷಗಳ ಆರೋಪ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.