ರಾಜ್ಯದ ಜನತೆಗೆ ಮತ್ತೊಂದು ಗುಡ್‌ನ್ಯೂಸ್; ಸಾರ್ವಜನಿಕರ ಸಮಸ್ಯೆ ಆಲಿಸಲು ಹೊಸ ಸಚಿವಾಲಯ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
D.K. Shivakumar: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಜನತೆಗೆ ಗುಡ್‌ನ್ಯೂಸ್ ನೀಡಿದ್ದಾರೆ. ರಾಜ್ಯದಲ್ಲಿ ಸಾರ್ವಜನಿಕ ಕುಂದು ಕೊರತೆ ನಿರ್ವಹಣೆಗೆ ಹೊಸದೊಂದು ಸಚಿವಾಲಯ ಆರಂಭಿಸುವುದಾಗಿ ಘೋಷಿಸಿದ್ದಾರೆ. ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಡಿಕೆಶಿ ಬಳಿಕ ಈ ಪ್ರಮುಖ ಘೋಷಣೆ ಹೊರಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು, ಜೂ. 4: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮೊದಲ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೇರಿ 6 ಮಹತ್ವದ ಯೋಜನೆ ಪ್ರಕಟಿಸಿ ಗಮನ ಸೆಳೆದ ಡಿ.ಕೆ. ಶಿವಕುಮಾರ್ (D.K. Shivakumar) ಇದೀಗ ರಾಜ್ಯದ ಜನತೆಗೆ ಮತ್ತೊಂದು ಗುಡ್‌ನ್ಯೂಸ್ ನೀಡಿದ್ದಾರೆ. ರಾಜ್ಯದಲ್ಲಿ ಸಾರ್ವಜನಿಕ ಕುಂದು ಕೊರತೆ ನಿರ್ವಹಣೆಗೆ ಹೊಸದೊಂದು ಸಚಿವಾಲಯ ಆರಂಭಿಸುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಸಮಸ್ಯೆ ಆಲಿಸಲು ಪ್ರತ್ಯೇಕ ಸಚಿವರನ್ನು ನೇಮಿಸುವುದಾಗಿಯೂ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಗುರುವಾರ (ಜೂನ್ 4) ರಾಜ್ಯದ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಮಹತ್ವದ ಜಂಟಿ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಪ್ರಮುಖ ಘೋಷಣೆ ಹೊರಡಿಸಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡುವುದಾಗಿಯೂ ಡಿಕೆಶಿ ತಿಳಿಸಿದ್ದಾರೆ. ಶಿಕ್ಷಣಕ್ಕಾಗಿ ಬೆಂಗಳೂರಿಗೆ ವಲಸೆ ಬರುವುದನ್ನು ತಪ್ಪಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಅಧಿಕಾರಿಗಳು ತಾಲೂಕು, ಜಿಲ್ಲಾ ಕೇಂದ್ರಗಳಿಗೆ ತೆರಳಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ಬುಧವಾರ ಘೋಷಿಸಿದ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ವಿದ್ಯಾರ್ಥಿಗಳಿಗೂ ಫ್ರೀ ಬಸ್ ಪಾಸ್; ಮೊದಲ ಸಚಿವ ಸಂಪುಟ ಸಭೆಯಲ್ಲೇ 6 ಪ್ರಮುಖ ನಿರ್ಣಯ ಘೋಷಿಸಿದ ಸಿಎಂ ಡಿಕೆಶಿ
ಅಧಿಕಾರಿಗಳಿಗೆ ಹೇಳಿದ್ದೇನು?
ʼʼರಾಜ್ಯದಲ್ಲಿ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿ ದುರ್ಬಳಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ತಕ್ಷಣವೇ ಬ್ರೇಕ್ ಹಾಕಿ, ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕುʼ’ ಎಂದು ಹೇಳಿದ್ದಾರೆ. ʼʼಪ್ರತಿಯೊಬ್ಬ ಅಧಿಕಾರಿಯೂ ಆತ್ಮಸಾಕ್ಷಿ ಒಪ್ಪುವ ಹಾಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸಬೇಕು. ಅಭಿವೃದ್ಧಿಯ ಹಾದಿಗೆ ಮೆಟ್ಟಿಲಾಗಿ ಜನ ಮೆಚ್ಚುವಂತೆ ಕೆಲಸ ಮಾಡಿʼʼ ಎಂದು ಕರೆ ನೀಡಿದ್ದಾರೆ.
ಡ್ರಗ್ಸ್ ದಂಧೆ ವಿರುದ್ಧ ಗುಡುಗು
ಇದೇ ವೇಳೆ ನೂತನ ಸಿಎಂ ರಾಜ್ಯದಲ್ಲಿ ಬೇರು ಬಿಟ್ಟಿರುವ ಡ್ರಗ್ಸ್ ದಂಧೆಯನ್ನು ಬುಡ ಸಮೇತ ಕಿತ್ತು ಹಾಕುವಂತೆ ಐಪಿಎಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ʼʼರೌಡಿಗಳ ಹೆಡೆಮುರಿ ಕಟ್ಟಿ, ಜೂಜು ಮತ್ತು ಡ್ರಗ್ಸ್ ದಂಧೆಯನ್ನು ಬೇರು ಸಹಿತ ಕಿತ್ತೊಗೆಯಬೇಕು. ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಡಿಕೆಶಿ ತಿಳಿಸಿದ್ದಾರೆ.
ಸಾಷ್ಟಾಂಗ ನಮಸ್ಕಾರ ಮಾಡಿ ಶಕ್ತಿಸೌಧಕ್ಕೆ ಡಿಕೆಶಿ ಎಂಟ್ರಿ; ನೂತನ ಸಿಎಂ ಆಗಿ ಅಧಿಕಾರ ಸ್ವೀಕಾರ
ಮೊದಲ ಸಚಿವ ಸಂಪುಟ ಸಭೆಯಲ್ಲೇ ಕೈಗೊಂಡ 6 ಪ್ರಮುಖ ನಿರ್ಣಯ
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಸರ್ಕಾರಿ ಹುದ್ದೆ ಭರ್ತಿ ಜತೆಗೆ ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ, 10 ಸಾವಿರ ಯುವಕರ ಸಂಘ ಸ್ಥಾಪನೆ, ಒಸಿ ಸಿಸಿ ಸಮಸ್ಯೆಗೆ ಪರಿಹಾರ, ರಾಜ್ಯದೆಲ್ಲೆಡೆ ಬಿ ಖಾತಾಯಿಂದ ಎ ಖಾತಾ ಪರಿವರ್ತನೆ ಮತ್ತು ಬೆಂಗಳೂರು ನಗರದ ರಸ್ತೆಗಳ ಡಾಮರು ಕಾಮಗಾರಿಗೆ 2 ಸಾವಿರ ಕೋಟಿ ರುಪಾಯಿ ಅನುದಾನವನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಡಿಕೆಶಿ ಘೋಷಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.