ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂದು ಕಲಬುರಗಿಯಲ್ಲಿ 801 ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ: 3 ದಿನ, ಅರ್ಧರಾಜ್ಯ: ಡಿಕೆ ಮಿಂಚು

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಶಿವಕುಮಾರ್ ಗುರುವಾರ ಕಲಬುರಗಿಯಲ್ಲಿ, ಸುಮಾರು 1775 ಕೋಟಿ ರು. ಮೊತ್ತದ 801 ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಅದಕ್ಕೂ ಮೊದಲು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಪೊಲೀಸ್ ಪೆರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನಾಳೆ ಮಂಗಳೂರಲ್ಲಿ ಸಂಪುಟ ಸಭೆ, ನಾಡಿದ್ದು ಮಲೆನಾಡಲ್ಲಿ ಕಸ್ತೂರಿ ಚರ್ಚೆ

3 ದಿನಗಳಲ್ಲಿ ಶೇ.50ರಷ್ಟು ಜಿಲ್ಲೆ ಜನರನ್ನು ತಲುಪಲು ಕಾರ್ಯಕ್ರಮ ಜೋಡಣೆ

ಬೆಂಗಳೂರು: ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಜಿಲ್ಲೆಗೆ ಭೇಟಿ ನೀಡುತ್ತಿರುವ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದಿನ ಮೂರು ದಿನದಲ್ಲಿ ಶೇ.50ಕ್ಕೂ ಹೆಚ್ಚು ಜಿಲ್ಲೆ ಗಳೊಂದಿಗೆ ಸಂಪರ್ಕ ಸಾಧಿಸುವಂತೆ ಪ್ರವಾಸ ಕೈಗೊಳ್ಳಲಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸಹದ ಭಾಗವಾಗಿ ಕಲಬುರಗಿಗೆ ಗುರುವಾರ ಭೇಟಿ ನೀಡಲಿರುವ ಶಿವಕುಮಾರ್, ಶುಕ್ರವಾರ ಕರಾವಳಿ ಭಾಗದ ಸಮಸ್ಯೆಗೆ ಪರಿಹಾರ ಎನ್ನುವಂತೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಇದಾದ ಬಳಿಕ ಶನಿವಾರದಂದು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಚರ್ಚಿಸಲು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ಮೂರು ದಿನಗಳಲ್ಲಿ ಕಲ್ಯಾಣ ಕರ್ನಾಟಕ, ಕರಾವಳಿ ಹಾಗೂ ಮಲೆನಾಡ ಭಾಗದ ಹಲವು ಜಿಲ್ಲೆಗಳ ಜನರು ಭಾಗವಹಿಸಲಿದ್ದಾರೆ. ಈ ಮೂರು ದಿನಗಳಲ್ಲಿ ಕೇವಲ ಮುಖ್ಯ ಮಂತ್ರಿಯಷ್ಟೇ ಅಲ್ಲದೇ, ಇಡೀ ಸರಕಾರ ಆಯಾ ಭಾಗಕ್ಕೆ ತೆರಳುತ್ತಿರುವುದು ಸ್ಥಳೀಯ ಸಮಸ್ಯೆಗೆ ಪರಿಹಾರ, ಹೊಸ ಘೋಷಣೆಯ ವಿಶ್ವಾಸವನ್ನು ಹೆಚ್ಚಿಸಿದೆ.

ಇದನ್ನೂ ಓದಿ: CM DK Shivakumar: ಸಿಎಂ ಡಿ.ಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು; ವಿಧಾನಸೌಧದಲ್ಲೇ ಚಿಕಿತ್ಸೆ

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಶಿವಕುಮಾರ್ ಗುರುವಾರ ಕಲಬುರಗಿಯಲ್ಲಿ, ಸುಮಾರು 1775 ಕೋಟಿ ರು. ಮೊತ್ತದ 801 ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಅದಕ್ಕೂ ಮೊದಲು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಪೊಲೀಸ್ ಪೆರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಲೋಕಾರ್ಪಣೆ ನಡೆಯಲಿದೆ. ಒಟ್ಟು 801 ಕಾಮಗಾರಿಗಳ ಪೈಕಿ 557ಕ್ಕೆ ಅಡಿಗಲ್ಲು ನೆರವೇರಿಸಲಾಗು ತ್ತಿದ್ದು, 244 ಯೋಜನೆಗಳನ್ನು ಬಳಕೆಗೆ ಸಮರ್ಪಿಸಲಾಗುತ್ತದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಮತ್ತು ನಗರಾಭಿವೃದ್ಧಿ ಕ್ಷೇತ್ರಗಳ ಯೋಜನೆಗಳು ಇದರಲ್ಲಿ ಸೇರಿವೆ.

ಶುಕ್ರವಾರ ಮಂಗಳೂರಿನಲ್ಲಿ ಸಚಿವ ಸಂಪುಟ: ರಾಜ್ಯ ಸರಕಾರದ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆಯು ತುಳುನಾಡು ಕರಾವಳಿಯ ರಾಜಧಾನಿ ಮಂಗಳೂರಿನಲ್ಲಿ ಸೆ.18ರಂದು ಸಮಾ ವೇಶಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕರಾವಳಿಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ, ತುಳು ಭಾಷೆ ಅಸ್ಮಿತೆ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಅಧಿಕೃತ ಮುದ್ರೆ ಬೀಳುವ ನಿರೀಕ್ಷೆ ಗರಿಗೆದರಿದೆ.

ಕರ್ನಾಟಕದ ಆಡಳಿತ ಶಕ್ತಿಸೌಧವೇ ಕರಾವಳಿಯಂಗಳಕ್ಕೆ ಇಳಿದು ಬರುತ್ತಿರುವ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಧಾರ್ಮಿಕ ಸಾಮಾಜಿಕ ಸಂಘಟನೆಗಳು ಹಾಗೂ ಕೈಗಾರಿಕಾ ಒಕ್ಕೂಟಗಳು ಸರ್ಕಾರದ ಮುಂದಿಟ್ಟಿರುವ ಪ್ರಮುಖ ಪ್ರಸ್ತಾವನೆಗಳು ಮತ್ತು ಅವುಗಳ ಸಂಪುಟ ಅನುಮೋದನೆಯ ಸಾಧ್ಯತೆಗಳು ಹೀಗಿದೆ.

ತುಳು ಭಾಷೆಯನ್ನು ರಾಜ್ಯದ 2ನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯನ್ನಾಗಿ ತಕ್ಷಣವೇ ಘೋಷಿಸಬೇಕು ಮತ್ತು ಸಂವಿಧಾನದ 8ನೇ ಅನುಸೂಚಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಬಲ ಶಿಫಾರಸು ಕಳುಹಿಸಬೇಕು ಎಂದು ಅವಳಿ ಜಿಲ್ಲೆಯ ಶಾಸಕರು, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ ಬಿಜೆಪಿ ನಿಯೋಗ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಬಲವಾಗಿ ಆಗ್ರಹಿಸಿವೆ. ಇದಕ್ಕೆ ಪೂರಕವಾಗಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಾ.ಎಂ.ಮೋಹನ್ ಆಳ್ವ ಸಮಿತಿ ಸಲ್ಲಿಸಿದ ವರದಿಯನ್ನು ಯಥಾವತ್ ಜಾರಿಗೊಳಿಸಲು ಸಂಪುಟ ಸಭೆಯಲ್ಲೇ ಅಧಿಕೃತ ನಿರ್ಣಯ ಕೈಗೊಳ್ಳಬೇಕೆಂದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.

ಇದು ದಶಕಗಳ ಕಾಲದ ತೀವ್ರ ಭಾವನಾತ್ಮಕ ಬೇಡಿಕೆಯಾಗಿದ್ದು, ಸಂಪುಟ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆದು, ಘೋಷಣೆ ನಿರ್ಧಾರ ಪ್ರಕಟವಾಗುವ ಸಾಧ್ಯತೆ ದಟ್ಟವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕ್ರೀಡಾಂಗಣಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಮತ್ತು ಸುಧಾರಿತ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರಾವಳಿಯ ಶಾಸಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉಡುಪಿಯಲ್ಲಿ ’ಭಾರತ್ ಜೋಡೋ ಕ್ರೀಡಾ ವಿಶ್ವವಿದ್ಯಾಲಯ’ ಆರಂಭಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗಿದ್ದು, ಕ್ರೀಡಾ ಮೂಲಸೌಕರ್ಯ ಬಲವರ್ಧನೆಗೆ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ಮತ್ತು ಆರಂಭಿಕ ಅನುದಾನ ಮಂಜೂರಾಗುವ ಸಾಧ್ಯತೆಯಿದೆ.

19ಕ್ಕೆ ತೀರ್ಥಹಳ್ಳಿಯಲ್ಲಿ ಸಂವಾದ: ಕಸ್ತೂರಿ ರಂಗನ್ ವರದಿ ಹಾಗೂ ಬರಗಾಲಕ್ಕೆ ಸಂಬಂಧಿಸಿ ದಂತೆ ಚರ್ಚಿಸಲು ಸೋಮವಾರದಿಂದ ಕರೆದಿರುವ ವಿಶೇಷ ಅಧಿವೇಶನಕ್ಕೂ ಮುನ್ನ ಮಲೆನಾಡ ಭಾಗದ ಜನರ ಅಭಿಪ್ರಾಯವನ್ನು ಪಡೆಯಲು ತೀರ್ಮಾನಿಸಿದ್ದು, 19ರಂದು ಈ ಸಂಬಂಧ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕಸ್ತೂರಿ ರಂಗನ್ ವರದಿ ಕುರಿತು ಮಲೆನಾಡಿನ ರೈತರು, ಕೃಷಿ ಕಾರ್ಮಿಕರು ಹಾಗೂ ಸಾರ್ವಜನಿಕರಲ್ಲಿರುವ ಆತಂಕ ಮತ್ತು ಅಭಿಪ್ರಾಯಗಳನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆ.19ರಂದು ಶಿವಮೊಗ್ಗ ಜಿಯ ತೀರ್ಥಹಳ್ಳಿಗೆ ಆಗಮಿಸ ಲಿದ್ದಾರೆ. ಈ ವೇಳೆ ರೈತರು ಹಾಗೂ ಸಾರ್ವಜನಿಕರಿಂದ ಖುzಗಿ ಮಾಹಿತಿ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

3 ದಿನಗಳಲ್ಲಿ ಏನೇನು?

ಇಂದು ಕಲಬುರಗಿಯಲ್ಲಿ 1775 ಕೋಟಿ ರು.ಗಳ 801 ಕಾಮಗಾರಿಗಳಿಗೆ ಚಾಲನೆ, ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳನ್ನು ತಲುಪಲು ಯೋಜನೆ

ಶುಕ್ರವಾರ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ, ಉತ್ತರ ಕನ್ನಡ, ದ.ಕನ್ನಡ, ಉಡುಪಿ ಜಿಲ್ಲೆಗಳ ಜನರ ಆಶೋತ್ತರಗಳಿಗೆ ಉತ್ತರಿಸುವ ನಿರೀಕ್ಷೆ

ಶನಿವಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಭೇಟಿ. ಕಸ್ತೂರಿ ರಂಗನ್ ವರದಿ ಬಗ್ಗೆ ಮಲೆನಾಡಿಗಿರುವ ಆತಂಕಗಳ ಕುರಿತು 4 ಜಿಲ್ಲೆ ಜನರೊಂದಿಗೆ ಸಂವಾದ

image

ಗುರುವಾರದಿಂದ ಮೂರು ದಿನಗಳ ಕಾಲ ವಿವಿಧ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಾಗುವುದು. ಕಲಬುರಗಿ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ ಜಿಗಳ ಪ್ರವಾಸ ಮಾಡಲಿದ್ದೇನೆ. ವಿಧಾನಮಂಡಲ ಅಽವೇಶನದಲ್ಲಿ ಬರಗಾಲ ಹಾಗೂ ಕಸ್ತೂರಿ ರಂಗನ್ ವರದಿಯ ಕುರಿತಂತೆ ಚರ್ಚೆ ನಡೆಯಲಿದೆ.

-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ