ದ್ವೇಷ ಭಾಷಣ ಮಸೂದೆಯಿಂದ ತೀವ್ರ ದುಷ್ಪರಿಣಾಮ: ರಾಜ್ಯಪಾಲರಿಗೆ ಸಿಟಿಜನ್ಸ್ ಫಾರ್ ಡೆಮಾಕ್ರಸಿ ಪತ್ರ
ರಾಜೀವ್ ಗಾಂಧಿ ಕಾಲದಲ್ಲಿ ದ್ವೇಷ ಭಾಷಣ ಸಂಬಂಧಿತ ಮಸೂದೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಮಸೂದೆ ಕಾನೂನಾದರೆ ಬಹಳಷ್ಟು ಜನರಿಗೆ ತೊಂದರೆ ಆಗಲಿದೆ. ಸಾಂಸಾರಿಕ ಸಮಸ್ಯೆ, ನೆರೆಹೊರೆಯವರ ನಡುವಿನ ಗೊಂದಲದ ವಿಷಯದಲ್ಲೂ ಸಮಸ್ಯೆ ಆಗಲಿದೆ ಎಂದು ಹಿರಿಯ ವಕೀಲ ಎಂ.ಸಿ.ನಾಣಯ್ಯ ತಿಳಿಸಿದ್ದಾರೆ.
ದ್ವೇಷ ಭಾಷೆ ಮಸೂದೆ ವಿರೋಧಿಸಿ ರಾಜ್ಯಪಾಲರಿಗೆ ಸಿಟಿಜನ್ಸ್ ಫಾರ್ ಡೆಮಾಕ್ರಸಿ ಸಂಘಟನೆ ಮನವಿ. -
ಬೆಂಗಳೂರು: ದ್ವೇಷ ಭಾಷಣ ಮಸೂದೆ (Hate speech bill) ವಿರೋಧಿಸಿ ಸಿಟಿಜನ್ಸ್ ಫಾರ್ ಡೆಮಾಕ್ರಸಿ ವತಿಯಿಂದ ರಾಜ್ಯಪಾಲ ಥಾವರ್ ಗೆಹ್ಲೋಟ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಈ ಬಗ್ಗೆ ಹಿರಿಯ ವಕೀಲ ಎಂ.ಸಿ.ನಾಣಯ್ಯ ಪ್ರತಿಕ್ರಿಯಿಸಿ, ದ್ವೇಷ ಭಾಷಣ ಸಂಬಂಧಿತ ಮಸೂದೆಯನ್ನು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಲೋಕಸಭೆಯಲ್ಲಿ ಮಂಡಿಸಿದ್ದರು. ರಾಜ್ಯಸಭೆಯಲ್ಲಿ ಚರ್ಚಿಸಿದ ಬಳಿಕ ಅದು ಲೋಕಸಭೆಗೆ ಬಂದಿತ್ತು. ಜನರು ಇದನ್ನು ತೀವ್ರವಾಗಿ ಖಂಡಿಸಿದ್ದರು. ಆದ್ದರಿಂದ ಅದನ್ನು ಜಾರಿ ಮಾಡಿರಲಿಲ್ಲ ಎಂದು ತಿಳಿಸಿದರು.
ಗೌರವಾನ್ವಿತ ರಾಜ್ಯಪಾಲರಿಗೆ ಸಿಟಿಜನ್ಸ್ ಫಾರ್ ಡೆಮಾಕ್ರಸಿ ವತಿಯಿಂದ ಮನವಿ ನೀಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ವಕೀಲ ಎಂ.ಸಿ.ನಾಣಯ್ಯ ಅವರು, ಈ ಮಸೂದೆ ಕಾನೂನಾದರೆ ಬಹಳಷ್ಟು ಜನರಿಗೆ ತೊಂದರೆ ಆಗಲಿದೆ. ಸಾಂಸಾರಿಕ ಸಮಸ್ಯೆ, ನೆರೆಹೊರೆಯವರ ನಡುವಿನ ಗೊಂದಲದ ವಿಷಯದಲ್ಲೂ ತೊಂದರೆ ಸಂಭವಿಸಬಹುದು ಎಂದು ನುಡಿದರು. ಕಾನೂನಿನಲ್ಲಿ ಇದು ಈಗಾಗಲೇ ಇದೆ ಎಂದು ಗಮನ ಸೆಳೆದರು.
ಕೆಟ್ಟ ಭಾಷೆ ಬಳಸಿದ ತಪ್ಪಿತಸ್ಥರಿಗೆ ಕನಿಷ್ಠ 3 ವರ್ಷ ಶಿಕ್ಷೆ, 50 ಸಾವಿರ ದಂಡ ವಿಧಿಸಲು ಸೂಚನೆ ಇದೆ. ಅದು ಜಾಸ್ತಿಯಾದರೆ 7 ವರ್ಷ ಶಿಕ್ಷೆ ಕೊಡುವ ಅವಕಾಶ ಇದೆ. ಇದು ಪುನರಾವರ್ತನೆ ಆದರೆ, 10 ವರ್ಷ ಶಿಕ್ಷೆ, 1 ಲಕ್ಷ ದಂಡ ವಿಧಿಸಲು ಅವಕಾಶ ಇದೆ ಎಂದು ತಿಳಿಸಿದರು. ದ್ವೇಷ ಭಾಷಣ ಮಸೂದೆಯಿಂದ ತೀವ್ರ ದುಷ್ಪರಿಣಾಮ ಆಗಲಿದೆ ಎಂದು ತಿಳಿಸಿದರು.
ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ಮಾತನಾಡಿ, ದ್ವೇಷ ಭಾಷಣ ಸಂಬಂಧಿತ ಮಸೂದೆ ವಿರುದ್ಧ ರಾಜ್ಯಪಾಲರ ಬಳಿ ತಿಳಿಸಿ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರಕಾರ ಈಚೆಗೆ ಜಾರಿಗೊಳಿಸಿದ ಬಿಎನ್‍ಎಸ್ ಅಧಿನಿಯಮದ ಅನೇಕ ಸೆಕ್ಷನ್‍ಗಳು ದ್ವೇಷ ಭಾಷಣದ ಕುರಿತು ಉಲ್ಲೇಖಿಸುತ್ತವೆ. ಕೇಂದ್ರ ಕಾನೂನಿನಲ್ಲಿ ಇದೆಲ್ಲ ಇದ್ದಾಗ ರಾಜ್ಯದಲ್ಲಿ ಪ್ರತ್ಯೇಕ ಕಾನೂನು ಬೇಕೇ ಎಂದು ಪ್ರಶ್ನಿಸಿದರು. ರಾಜ್ಯ ಕಾನೂನು ಅಸ್ತಿತ್ವಕ್ಕೆ ಬರಲು ಸಾಧ್ಯವೇ ಎಂದು ಕೇಳಿದರು.
ಇಂಥ ಸಂದರ್ಭದಲ್ಲಿ ಸಂವಿಧಾನ ಏನು ಹೇಳುತ್ತದೆ ಎಂಬ ಬಗ್ಗೆ ಮಾನ್ಯ ರಾಜ್ಯಪಾಲರ ಜತೆ ಚರ್ಚಿಸಿದ್ದೇವೆ. ಕೇಂದ್ರದ ಕಾನೂನು ಇದ್ದಾಗ ಅದೇ ವಿಷಯದಲ್ಲಿ ರಾಜ್ಯವೂ ಪ್ರತ್ಯೇಕ ಕಾಯಿದೆ ತರಲು ಹೊರಟಲ್ಲಿ ಅದನ್ನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಕಳಿಸಬೇಕಾಗುತ್ತದೆ ಎಂದು ಗಮನ ಸೆಳೆದುದಾಗಿ ಹೇಳಿದರು.
ಹರಿರಾಮ್ ಅವರು ಮಾತನಾಡಿ, ದ್ವೇಷ ಭಾಷಣ ಸಂಬಂಧಿತ ಮಸೂದೆಯನ್ನು ಸರಕಾರ ಮಂಜೂರು ಮಾಡಿದೆ. ಇದು ದ್ವೇಷ ಭಾಷಣ ಮಸೂದೆ ಅಲ್ಲ; ಇದು ಮಾತನ್ನೇ ನಿಲ್ಲಿಸುವ ಕ್ರಮ ಎಂದು ಆಕ್ಷೇಪಿಸಿದರು. ಇದರಿಂದ ಪ್ರತಿ ಮನೆಯಲ್ಲೂ ಒಬ್ಬೊಬ್ಬ ಕಾನೂನು ಸಲಹೆಗಾರರನ್ನು ಇಟ್ಟುಕೊಳ್ಳುವ ಪರಿಸ್ಥಿತಿ ಬರಲಿದೆ ಎಂದು ತಿಳಿಸಿದರು.
ಲಕ್ಷ್ಮಿ ಅಯ್ಯಂಗಾರ್ ಅವರು ಮಾತನಾಡಿ, ದ್ವೇಷ ಭಾಷಣ ಸಂಬಂಧಿತ ಮಸೂದೆಯನ್ನು ತರಾತುರಿಯಲ್ಲಿ ತರಲು ಹೊರಟಿದ್ದಾರೆ. ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು. ಸಮಾಜದ ಮೇಲೆ ಆಗಬಹುದಾಗ ಪರಿಣಾಮದ ಕುರಿತು ಚರ್ಚೆ ಮಾಡಿಲ್ಲ ಎಂದು ವಿವರಿಸಿದರು. ಬಿಎನ್‍ಎಸ್ ಅಡಿಯಲ್ಲಿ ಇರುವ ಅಂಶಗಳನ್ನೇ ಇಲ್ಲಿಯೂ ಪ್ರಸ್ತಾಪಿಸಲಾಗಿದೆ. ಕೇಂದ್ರದ ಕಾಯ್ದೆ ಇರುವಾಗ ರಾಜ್ಯದಲ್ಲಿ ಪ್ರತ್ಯೇಕ ಮಸೂದೆ ಅಗತ್ಯ ಇರಲಿಲ್ಲ ಎಂದು ತಿಳಿಸಿದರು.
ವಿವಿಧ ಬೇಡಿಕೆ ಮುಂದಿಟ್ಟು ರಾಜ್ಯಪಾಲರಿಗೆ ಬಿಜೆಪಿ ಮನವಿ

ಬೆಂಗಳೂರು: ಕರ್ನಾಟಕವನ್ನು ಗೂಂಡಾ ರಾಜ್ಯದಿಂದ ಕಾಪಾಡಿ ಎಂದು ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾಗಿ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಅವರು ತಿಳಿಸಿದರು. ಲೋಕಭವನದ ಬಳಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಬಿಜೆಪಿ ನಿಯೋಗವು ಇಂದು ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿತು. ದ್ವೇಷ ಭಾಷಣ ಮಸೂದೆ ವಿರೋಧಿಸಿ ಮನವಿ ನೀಡಲಾಗಿದೆ ಎಂದರು. ಇದಕ್ಕೆ ವಿಧಾನಮಂಡಲದಲ್ಲಿ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಆಕ್ಷೇಪಿಸಿದರು.
Thimmanna Bhagwat Column: ದ್ವೇಷ ಭಾಷಣ ವಿಧೇಯಕ: ದ್ವೇಷ ಸಾಧನೆಯ ಸಾಧನವಾಗಬಾರದು
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಸಂಸದ ಪಿ.ಸಿ. ಮೋಹನ್, ಶಾಸಕ ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು, ವಿಧಾನಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಕೇಶವ ಪ್ರಸಾದ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ರಾಜ್ಯ ಕಾರ್ಯದರ್ಶಿ ಎಚ್.ಸಿ. ತಮ್ಮೇಶ್ ಗೌಡ, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್, ನಿವೃತ್ತ ಐ.ಪಿ.ಎಸ್. ಅಧಿಕಾರಿ ಭಾಸ್ಕರ್ ರಾವ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.