ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಗನ MBBS ಫೀಸ್ ಕಟ್ಟಿದ್ದೇನೆ, ಮಗಳನ್ನು ವಿದೇಶಕ್ಕೆ ಕಳುಹಿಸಲು 2 ಸಾವಿರ ರೂ. ನೆರವಾಯಿತು; ಸಿಎಂ ಡಿಕೆಶಿ ಬಳಿ ಗೃಹಲಕ್ಷ್ಮಿ ಯೋಜನೆ ಯಶೋಗಾಥೆ ತೆರೆದಿಟ್ಟ ಮಹಿಳೆಯರು

Gruha Lakshmi Scheme: ಗೃಹಲಕ್ಷ್ಮಿ ಫಲಾನುಭವಿಗಳ ಪರಿಶೀಲನೆ ಸಂದರ್ಭದಲ್ಲಿ ಸರಿಯಾದ ಮಾಹಿತಿ ಅದರಲ್ಲೂ ವಿಶೇಷವಾಗಿ ನಿಮ್ಮದೇ ದೂರವಾಣಿ ಸಂಖ್ಯೆ ನಮೂದಿಸಿ. ನಮ್ಮ ಸಂದೇಶ ನಿಮಗೆ ತಲುಪಬೇಕು. ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ವ್ಯವಹಾರ, ಉದ್ಯಮಗಳಲ್ಲಿ ತೊಡಗಿಸಿಕೊಂಡವರು, ಮಕ್ಕಳ ಶಿಕ್ಷಣಕ್ಕೆ ಬಳಸಿಕೊಂಡಿರುವುದು ತಿಳಿದು ಸಂತೋಷವಾಯಿತು. ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ನಿಲ್ಲಿಸೋದಿಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು, ನ.06: ಸಿಎಂ ಡಿ.ಕೆ. ಶಿವಕುಮಾರ್ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಗೃಹಲಕ್ಮಿ ಯೋಜನೆ (Gruha Lakshmi Scheme) ಫಲಾನುಭವಿಗಳ ಜತೆ ಶುಕ್ರವಾರ ನಡೆಸಿದ ಸಂವಾದ ಹಲವಾರು ಭಾವುಕ ಕ್ಷಣಗಳಿಗೆ ಜತೆಗೆ ಸ್ವಾವಲಂಬಿ ಸಾಧನೆಯ ಕಥೆಗಳಿಗೆ ಸಾಕ್ಷಿಯಾಯಿತು. ಸಿಎಂ ಆಗಮಿಸಿದೊಡನೆ ಅವರ ವಂದನೆಗೆ ಉತ್ಸಾಹದಿಂದ ಪ್ರತಿವಂದನೆ ಸಲ್ಲಿಸಿದ ಮಹಿಳೆಯರು, ಗೃಹಲಕ್ಷ್ಮಿ ಯೋಜನೆಯಿಂದ ತಮಗಾದ ಅನುಕೂಲ, ತಮ್ಮ ಅನುಭವಗಳನ್ನು ಮುಕ್ತವಾಗಿ ತೆರೆದಿಟ್ಟರು. ಇದೇ ತಮ್ಮ ಊರಿನ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತಂದಿದ್ದಾರೆ.

"ನನ್ನ ಮಗ ಕೊಪ್ಪಳದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಗೃಹಲಕ್ಷ್ಮಿ ಹಣದಿಂದ ಸುಮಾರು 59 ಸಾವಿರದಷ್ಟು ಫೀಸ್ ಕಟ್ಟಿದ್ದೇನೆ. ಶಕ್ತಿ ಯೋಜನೆ ಇರುವ ಕಾರಣಕ್ಕೆ ಆಗಾಗ್ಗೆ ಮಗನನ್ನು ನೋಡಿಕೊಂಡು ಬರಲು ಅನುಕೂಲವಾಗಿದೆ" ಎಂದು ಚಿಕ್ಕಮಗಳೂರು ಜಿಲ್ಲೆಯ ಮಹಿಳೆಯೊಬ್ಬರು ಹೇಳಿದಾಗ ಇಡೀ ಸಭಾಂಗಣವೇ ಭಾವುಕತೆಯಲ್ಲಿ ಮಿಂದೆದ್ದಿತು.

"ನಿಮ್ಮ ಮಗ ಎಷ್ಟು ಮಾರ್ಕ್ಸ್ ತಗೊಂಡಿದಾನೆ ತಾಯಿ" ಎಂದು ಸಿಎಂ ಕೇಳಿದಾಗ, "ಮಗ ಪಿಯುಸಿಯಲ್ಲಿ 98 ಪರ್ಸೆಂಟ್ ತಗೊಂಡಿದ್ದಾನೆ" ಎಂದು ಹೇಳುವಾಗ ತಾಯಿಯ ಹುಮ್ಮಸ್ಸು ಇಮ್ಮಡಿಯಾಗಿತ್ತು.

_Gruha Lakshmi Scheme (2)

ಗೃಹಲಕ್ಷ್ಮಿ ಯೋಜನೆ ನಿಲ್ಲಿಸೋದಿಲ್ಲ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಿರಿಯ ಮಹಿಳೆಯೊಬ್ಬರು, "ಗೃಹಲಕ್ಷ್ಮಿಯ ಮೊತ್ತ ಹಿರಿಯ ಮಹಿಳೆಯರ ಔಷಧಿಗೆ, ಸ್ವಾಭಿಮಾನದ ಬದುಕಿಗೆ ನೆರವಾಗಿದೆ" ಎಂದು ಭಾವುಕರಾಗಿ ನುಡಿದರು. ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಿದಂತೆ ಫಲಾನುಭವಿಗಳು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, "ಈ ಯೋಜನೆ ನಿಲ್ಲಿಸಲಾಗದು" ಎಂದು ಭರವಸೆ ನೀಡಿದರು.



ನೃತ್ಯ ಕಲಿಯಲು ಮಗಳನ್ನು ವಿದೇಶಕ್ಕೆ ಕಳಿಸಿದ್ದೇವೆ

"ನಮ್ಮ ಮಗಳ ಹೆಸರು ಆಶಾ. ಪಿಯುಸಿ ಓದುತ್ತಿದ್ದಾಳೆ. ಜತೆಗೆ ಅವಳಿಗೆ ನೃತ್ಯದ ಮೇಲೆ ಸಾಕಷ್ಟು ಆಸಕ್ತಿ. ಮಗಳಿಗೆ ನೃತ್ಯ ಕಾರ್ಯಕ್ರಮ ನೀಡಲು ಮಲೇಷ್ಯಾಗೆ ಕಳುಹಿಸಲು ಗೃಹಲಕ್ಷ್ಮಿ ಹಣ, ತಮ್ಮ ಉಳಿತಾಯದ ಹಣ ನೆರವಾಯಿತು. ಚನ್ನರಾಯಪಟ್ಟಣದಿಂದ ಮಲೆಷ್ಯಾವರೆಗೆ ಪ್ರಯಾಣ ಬೆಳೆಸಲು ನೆರವಾದ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದಗಳು" ಎಂದು ತಾಯಿಯೊಬ್ಬರು ಹೇಳಿದಾಗ ಇಡೀ ಸಭಾಂಗಣವೇ ಕರಾಡತನದಲ್ಲಿ ಮುಳುಗಿತು.

ವ್ಯಾಪಾರ ವಿಸ್ತರಣೆಗೆ ದ್ವಿಚಕ್ರ ವಾಹನ

ತುಮಕೂರು ಜಿಲ್ಲೆಯ ತ್ರಿವೇಣಿ ಬಸವರಾಜ್ ತಮ್ಮ ಸಿರಿಧಾನ್ಯ, ರಾಗಿ ಉತ್ಪನ್ನಗಳ ಮಾರಾಟಕ್ಕೆ ಗೃಹಲಕ್ಷ್ಮಿ ನೆರವಾಗಿದ್ದನ್ನು ಹೆಮ್ಮೆಯಿಂದ ವಿವರಿಸಿದರು. "ಗೃಹಲಕ್ಷ್ಮಿಯ ಹಣದೊಂದಿಗೆ ತಮ್ಮ ಉಳಿತಾಯದ ಹಣ ಸೇರಿಸಿ ದ್ವಿಚಕ್ರ ವಾಹನ ಖರೀದಿಸಿ, ವ್ಯಾಪಾರ ವಿಸ್ತರಿಸಲು ಅನುಕೂಲವಾಯಿತು. ತಾವು ತಯಾರಿಸಿದ ಚಕ್ಕುಲಿ, ಕೋಡುಬಳೆ ಮತ್ತಿತರ ಉತ್ಪನ್ನಗಳನ್ನು ಈಗ ಹೊರರಾಜ್ಯ, ಹೊರದೇಶಗಳಿಗೂ ಕಳುಹಿಸುತ್ತಿದ್ದೇನೆ" ಎಂದು ತಿಳಿಸಿದರು.

"ಚಕ್ಕುಲಿ ತಂದಿದ್ದೀರಾ" ಎಂದು ಸಿಎಂ ಕೇಳಿದಾಗ,"ನಿಮಗಾಗಿಯೇ ತಂದಿದ್ದೇನೆ" ಎಂದು ನುಡಿದರು. "ಈ ಯೋಜನೆಯಿಂದಾಗಿ ನಿಮ್ಮನ್ನು ನೋಡುವ ಭಾಗ್ಯ ಇಂದು ನಮಗೆ ಸಿಕ್ಕಿದೆ" ಎಂದು ಹರ್ಷಿಸಿದರು.

ತರೀಕೆರೆಯ ಲಂಬಾಣಿ ಸಮಾಜದ ಮಹಿಳೆಯೊಬ್ಬರು, "ಗೃಹಲಕ್ಷ್ಮಿ ಯೋಜನೆಯ ಮೊತ್ತವು ಲಂಬಾಣಿ ಕಸೂತಿ ಉದ್ಯಮವನ್ನು ದೊಡ್ಡಮಟ್ಟದಲ್ಲಿ ಪ್ರಾರಂಭಿಸಲು ಅನುಕೂಲವಾಯಿತು" ಎಂದು ವಿವರಿಸಿದರು. ಶಕ್ತಿ ಯೋಜನೆಯಿಂದ ಮಕ್ಕಳಿಗೆ ಅನುಕೂಲವಾಗಿದ್ದನ್ನು ಸ್ಮರಿಸಿ, "ಮಕ್ಕಳು ಒಳ್ಳೆ ವಿದ್ಯಾಭ್ಯಾಸ ಮಾಡಲು ಕಾಂಗ್ರೆಸ್ ಸರ್ಕಾರವೇ ಕಾರಣ. ಎಲ್ಲರ ಹಾರೈಕೆ ನಮ್ಮಣ್ಣನ ಮೇಲಿದೆ" ಎಂದು ತುಂಬು ಹೃದಯದಿಂದ ಹಾರೈಸಿದರು.



ಮೊಮ್ಮಗಳಿಗೆ ಆಟಿಕೆ ತೊಟ್ಟಿಲು ಕೊಂಡ ಸಿಎಂ

ಕಲಬುರಗಿ ಜಿಲ್ಲೆಯ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನೇ ಬಂಡವಾಳವಾಗಿಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ಹೆಮ್ಮೆಯಿಂದ ತಿಳಿಸಿ, ತಾವು ತಂದ ತೊಟ್ಟಿಲು, ದೀಪ ಮತ್ತಿತರ ವಸ್ತುಗಳನ್ನು ಪ್ರದರ್ಶಿಸಿದರು. ಆ ವಸ್ತುಗಳನ್ನು ಸಿಎಂ ಗೆ ಉಡುಗೊರೆ ನೀಡಿ, ಮಗುವಿಗೆ ಶುಭವಾಗಲಿ ಎಂದು ಹಾರೈಸಿದರು.

“ತೊಟ್ಟಿಲು ನಂಗೆ ಕೊಡಮ್ಮ, ಮೊಮ್ಮಗಳಿಗೆ ಕೊಡ್ತೇನೆ. ಎಷ್ಟು ರೂಪಾಯಿ ಆಗುತ್ತೆ ಇದು" ಎಂದು ಕೇಳಿ 500 ರೂಪಾಯಿ ನೀಡಿ ತೊಟ್ಟಿಲು ಕೊಂಡು ಕೊಂಡರು. ಕಲಬುರಗಿ ಅಫಜಲಪುರ ತಾಲ್ಲೂಕಿನ ಶ್ರೀದೇವಿ ಪಾಟೀಲ ಅವರು 'ಗೃಹಲಕ್ಷ್ಮಿಯಿಂದ ಬಡ ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ' ಎಂದರು. ತಮ್ಮ ಸಮಾಜ ಸೇವಾ ಕಾರ್ಯಗಳನ್ನು ವಿವರಿಸಿದ ಅವರು, 'ಅಂಗನವಾಡಿ ಮಕ್ಕಳಿಗೆ ಯುನಿಫಾರಂ ನೀಡಿರುವುದಾಗಿ ತಿಳಿಸಿದರು. ತಾಯಾಗಿ ನಿಮ್ಮ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ" ಎಂದು ಭರವಸೆಯಿತ್ತರು.

_Gruha Lakshmi Scheme (1)

ಉಡುಪಿ ಜಿಲ್ಲೆಯ ಕಾಂಗ್ರೆಸ್ ಮುಖಂಡರಾಗಿರುವ ಮಹಿಳೆಯೊಬ್ಬರು, ಪಕ್ಷದ ಕೆಲಸದಲ್ಲಿ ಭೇಟಿಯಾಗಲು ಆಗಲಿಲ್ಲ. ಆದರೆ ಈಗ ಗೃಹಲಕ್ಷ್ಮಿ ಫಲಾನುಭವಿಯಾಗಿ ನನಗೆ ತಮ್ಮನ್ನು ಭೇಟಿಯಾಗುವ ಸೌಭಾಗ್ಯ ದೊರೆಯಿತು ಎಂದು ಹರ್ಷಿಸಿದರು. ಸಮಾಜ ಸೇವಕಿಯೂ ಆಗಿರುವ ಇವರು ತಮ್ಮ ಕಾರ್ಯಚಟುವಟಿಕೆಗಳಿಗೆ ಓಡಾಡಲು ಶಕ್ತಿ ಯೋಜನೆ ನೆರವಾಗಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇಲ್ಲ. ಆದರೆ ಗೃಹಲಕ್ಷ್ಮಿ ಯೋಜನೆಯನ್ನು ತಾವು ಪಕ್ಷಾತೀತವಾಗಿ ಜಾರಿ ಮಾಡಿದ್ದೇವೆ. ಈ ಬಗ್ಗೆ ಸ್ಥಳೀಯ ಮಹಿಳೆಯರ ಅಭಿಪ್ರಾಯವೇನು? ಎಂದು ಸಿಎಂ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಹಿಳೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಹಿಳೆಯರಲ್ಲಿ ಮೆಚ್ಚುಗೆ ಇದೆ ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಕೂಲಿಕಾರ ಮಹಿಳೆ, ತಮ್ಮ ಮಕ್ಕಳನ್ನು ಓದಿಸಲು ಗೃಹಲಕ್ಷ್ಮಿಯಿಂದ ಸಾಧ್ಯವಾಯಿತು ಎಂದರು. ಜೊತೆಗೆ ತಮ್ಮ ಊರಿಗೆ ಬಸ್ ಇಲ್ಲ. ದಿನಾ 5 ಕಿ.ಮೀ. ನಡೆದು ಹೋಗಬೇಕು. ಊರಿಗೆ ಬಸ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.

ವಿಜಯಪುರ ಜಿಲ್ಲೆಯ ಚಡಚಣದ ಮಹಿಳೆ ಜರ್ಸಿ ಆಕಳು ಖರೀದಿಸಿ, ಹೈನುಗಾರಿಕೆ ಮಾಡುತ್ತಿರುವುದಾಗಿ ವಿವರಿಸಿದರು. ಅಂಗನವಾಡಿ ಮಕ್ಕಳಿಗೆ ಯೂನಿಫಾರಂ, ಬ್ಯಾಗ್ ಕೊಡಿಸಿರುವುದಾಗಿ ತಿಳಿಸಿದರು.

ಗದಗ ಜಿಲ್ಲೆಯ ಕಪ್ಪತ್ತಗಿರಿಯ ಲಂಬಾಣಿ ಮಹಿಳೆ ತಮ್ಮ ಊರಿನಲ್ಲಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ತವರುಮನೆ ಉಡುಗೊರೆಗೆ ಕಾದಂತೆ ಕಾಯುತ್ತಿರುತ್ತಾರೆ ಎಂದಾಗ ಇತರರು ಹೌದೌದು ಎಂದು ತಲೆಯಾಡಿಸಿದರು.

ಚಿತ್ರದುರ್ಗದ ವಿಧವೆಯೊಬ್ಬರು, ತಮ್ಮ ಬದುಕಿನ ಏಕಾಂಗಿ ಹೋರಾಟದಲ್ಲಿ ಗೃಹಲಕ್ಷ್ಮಿ ಜೊತೆಯಾಗಿದ್ದನ್ನು ಸ್ಮರಿಸಿಕೊಂಡರು. ರೊಟ್ಟಿ ಮಾರಿ ಬದುಕುತ್ತಿದ್ದ ಅವರು ಗೃಹಲಕ್ಷ್ಮಿ ಮೊತ್ತದಲ್ಲಿ ರೊಟ್ಟಿ ಯಂತ್ರ ಖರೀದಿಸಿ, ಇಬ್ಬರು ಸಹಾಯಕಿಯರ ನೆರವಿನಿಂದ ಕೆಲಸ ಮಾಡುತ್ತಿರುವುದನ್ನು ಕೃತಜ್ಞತೆಯಿಂದ ವಿವರಿಸಿದರು.

ಬಳ್ಳಾರಿಯ ಆಸ್ಪತ್ರೆಯೊಂದರಲ್ಲಿ ಸಣ್ಣ ಹುದ್ದೆಯೊಂದರಲ್ಲಿರುವ ಮಹೇಶ್ವರಿ, ಗೃಹಲಕ್ಷ್ಮಿ ಹಣದಲ್ಲಿ ವಾಷಿಂಗ್ ಮಷಿನ್, ಟಿವಿ ಮತ್ತಿತರ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಿದೆ. ಮನೆಗೆಲಸ ಹಗುರಾಗಿದೆ ಎಂದರು.

ರಾಯಚೂರಿನ ಮಹಿಳೆ ಹೊಲಿಗೆಯಂತ್ರ ಖರೀದಿಸಿ ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಲ್ಲದೆ ಮೂವರಿಗೆ ಉದ್ಯೋಗದಾತೆಯಾಗಿದ್ದಾರೆ. ದಿನಕ್ಕೆ ಸಾವಿರದಿಂದ ಎರಡು ಸಾವಿರ ದುಡಿಯುತ್ತಿದ್ದಾರೆ. ಇದರಿಂದಾಗಿ ತಮಗೆ ಪತಿಯ ಗೌರವ, ಅತ್ತೆ ಮಾವಂದಿರ ಪ್ರೀತಿ ಲಭಿಸಿದೆ ಎಂದು ನುಡಿದರು.

ವಿಜಯಪುರ ಜಿಲ್ಲೆಯ ಮಹಿಳೆ ಮಗಳ ಕ್ರೀಡಾ ತರಬೇತಿ ಫೀಸ್ ಕಟ್ಟಲು ಅನುಕೂಲವಾಗಿದ್ದು, ಮಗಳು ರಾಜ್ಯಮಟ್ಟದಲ್ಲಿ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುವುದನ್ನು ಹೆಮ್ಮೆಯಿಂದ ವಿವರಿಸಿದರು.

ಶಿವಮೊಗ್ಗ ಜಿಲ್ಲೆಯ ಕೂಲಿಕಾರ ಮಹಿಳೆಯೊಬ್ಬರು ಚಿಕನ್ ವ್ಯಾಪಾರ ಪ್ರಾರಂಭಿಸಿದ ಯಶೋಗಾಥೆಯನ್ನು ತೆರೆದಿಟ್ಟರು.

ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು- ಗಂಡಬೊಮ್ಮನಹಳ್ಳಿ ಪಂಚಾಯಿತಿಯ ಮಹಿಳೆ ಗೃಹಲಕ್ಷ್ಮಿ ಯೋಜನೆಯಿಂದ ತಮ್ಮ ಸ್ವಸಹಾಯ ಗುಂಪಿನ ಗೆಳತಿಯರು ಕುರಿ ಸಾಕಾಣಿಕೆಯನ್ನು ಬೆಳೆಸಿದ ಪರಿಯನ್ನು ವಿವರಿಸಿದರು. ಐದು ಕುರಿಯಿಂದ ಪ್ರಾರಂಭವಾಗಿ ಇಂದು 300 ಕುರಿಗಳನ್ನು ಸಾಕುತ್ತಿರುವುದಾಗಿ ಹೇಳಿದರು. ಜೊತೆಗೆ ಕುರಿ ಮೇಯಿಸಲು ಐದು ಜನ ಗಂಡುಮಕ್ಕಳಿಗೆ ಉದ್ಯೋಗ ನೀಡಿರುವುದಾಗಿ ಹೇಳಿದಾಗ ಸಿಎಂ ಆದಿಯಾಗಿ ಎಲ್ಲರಿಂದ ಚಪ್ಪಾಳೆಯ ಸುರಿಮಳೆ.

ಗೃಹ ಲಕ್ಷ್ಮಿಯ ಹಣದಲ್ಲಿ ಹೊಲಿಗೆ ಮಷೀನ್ ಖರೀದಿಸಿರುವುದಾಗಿ ಮತ್ತೊಬ್ಬರು ಹೇಳಿದರು. ಬಟ್ಟೆ ವ್ಯಾಪಾರಕ್ಕೆ ಬಂಡವಾಳ ಒದಗಿಸಿದೆ. ಗ್ಯಾಸ್ ಖರೀದಿಸಿ ಹೊಟ್ಟೆ ತುಂಬ ಊಟ ಮಾಡುವ ಸಂತೃಪ್ತಿಯನ್ನು ನೀಡಿದೆ. ಮಕ್ಕಳ ಕನಸಿಗೆ ರೆಕ್ಕೆ ಮೂಡಿಸಿದ ಹೆಮ್ಮೆ, ವ್ಯಾಪಾರ ವಿಸ್ತರಣೆ, ಹಿರಿಯ ಮಹಿಳೆಯರಿಗೆ ಭದ್ರತೆಯ ಭಾವನೆ ಹೀಗೆ ಹಲವಾರು ಯಶೋಗಾಥೆಗಳು ಸಿಎಂ ಸಂವಾದದಲ್ಲಿ ಅನಾವರಣಗೊಂಡವು.

ಕಾರ್ಯಕ್ರಮದ ಅಂತ್ಯದಲ್ಲಿ ಸಿಎಂ ಜೊತೆ ಫೋಟೋ ತೆಗೆಸಿಕೊಂಡ ಮಹಿಳೆಯರ ಕಣ್ಣಲ್ಲಿ ದೀಪಾವಳಿಯ ಹೊಂಬೆಳಕು ನಳನಳಿಸುತ್ತಿತ್ತು.

'ಗೃಹಲಕ್ಷ್ಮಿ' ಯೋಜನೆಗೆ ಪ್ರೇರಣೆ ಜಾನಪದ ಗೀತೆ

"ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದವ್ವ, ನಾಯಿಗಿಂತ ಕಡೆಯಾಗಿ ಹೋಯಿತೇ ನನ್ನ ಬಾಳು ಕೇಳವ್ವ…" ಜಾನಪದ ಹಾಡಿನ ಈ ಸಾಲುಗಳು ದೇಶದ ಅತಿದೊಡ್ಡ ಸಾಮಾಜಿಕ ಭದ್ರತಾ ಯೋಜನೆಯಾಗಿರುವ ಗೃಹಲಕ್ಷ್ಮಿ ಉದಯಕ್ಕೆ ಪ್ರೇರಣೆಯಾಗಿದೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, “ಒಂದು ರಾತ್ರಿ ನನ್ನ ಕಸಿನ್ ಈ ಹಾಡು ಹೇಳುವಾಗ ಗೃಹಲಕ್ಷ್ಮಿ ಯೋಜನೆ ಕುರಿತ ಕಲ್ಪನೆ ನನ್ನಲ್ಲಿ ಮೂಡಿತು. ಹೆಣ್ಣುಮಕ್ಕಳಿಗೆ ಶಕ್ತಿ ನೀಡಬೇಕೆಂದು ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಯಿತು. ಹೆಣ್ಣುಮಕ್ಕಳ ಜೀವನದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ನಾವು ಅಂದುಕೊಂಡಂತೆ ಮಹಿಳೆಯರ ಬದುಕಿನಲ್ಲಿ ಬದಲಾವಣೆ ಆಗಿದೆ” ಎಂದು ಆತ್ಮತೃಪ್ತಿ ವ್ಯಕ್ತಪಡಿಸಿದರು. ಸಿಎಂ ಮಾತಿಗೆ ದನಿಗೂಡಿಸಿದ ಮಹಿಳೆಯರು ಈ ಮೊತ್ತ ನಮಗೆ “ತವರುಮನೆ ಉಡುಗೊರೆಯಂತೆ” ಎಂದು ಬಣ್ಣಿಸಿದರು

“ಮಹಿಳೆಯರಿಗೆ ಶಕ್ತಿ ತುಂಬಬೇಕು. ಸರ್ಕಾರ ಅವರಿಗೆ ತವರಿನ ಪ್ರೀತಿ, ವಾತ್ಸಲ್ಯ ನೀಡಬೇಕು ಎಂಬ ಉದ್ದೇಶದೊಂದಿಗೆ ಕಾಂಗ್ರೆಸ್ ಸರ್ಕಾರ ಈ ಗೃಹಲಕ್ಷ್ಮಿ ಯೋಜನೆಯನ್ನು ಆರಂಭಿಸಿದೆ” ಎಂದು ಹೇಳಿದಾಗ ಅಲ್ಲಿದ್ದ ಗೃಹಲಕ್ಷ್ಮಿಯರು ಭಾವುಕರಾದರು.

ಪ್ರತಿ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಸಮಾವೇಶ

"ಗೃಹಲಕ್ಷ್ಮಿ ಯೋಜನೆಗೆ 86,000 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದು 1 ಲಕ್ಷ ಕೋಟಿ ಮೊತ್ತಕ್ಕೆ ತಲುಪಿದಾಗ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿಯರ ಸಮಾವೇಶ ಮಾಡಲಾಗುವುದು. ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಯ ಮಡಿಲಿಗೆ ನಾನು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರು 2000 ರೂಪಾಯಿಗಳನ್ನಿಟ್ಟು ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡುವ ಶಕ್ತಿ ಕೊಡಮ್ಮ ಎಂದು ಪ್ರಾರ್ಥಿಸಿದ್ದೆವು. ಜನರು ನಮಗೆ 136 ಸೀಟುಗಳೊಂದಿಗೆ ಆಶೀರ್ವಾದ ಮಾಡಿದರು” ಎಂದು ಸಿಎಂ ತಿಳಿಸಿದರು.

"ಸಚಿವರಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು 1.24 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಸೌಲಭ್ಯ ತಲುಪುತ್ತಿದೆ. ಗೃಹಜ್ಯೋತಿ ಯೋಜನೆಯನ್ನು ಬೆಳಗಾವಿಯಲ್ಲಿ, ನಂತರ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಯುವನಿಧಿ ಯೋಜನೆ, ಪ್ರಿಯಾಂಕಾ ಗಾಂಧಿಯವರು ಭೇಟಿ ನೀಡಿದಾಗ ಗೃಹಲಕ್ಷ್ಮಿ ಹೀಗೆ ಎಲ್ಲ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಚುನಾವಣೆಯ ಸಂದರ್ಭದಲ್ಲಿ ನೀಡಿದ್ದೆವು" ಎಂದರು.

ಬೇರೆ ರಾಜ್ಯಗಳಲ್ಲಿ ಗ್ಯಾರಂಟಿಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ

“ನಮ್ಮ ರಾಜ್ಯದಲ್ಲಿ ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಪರಿಪೂರ್ಣವಾಗಿ ಜಾರಿಗೆ ತಂದಿದ್ದೇವೆ. ಇದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಂದಿರಾ ಗಾಂಧಿಯವರು ವೃದ್ಧಾಪ್ಯ ವೇತನ ಯೋಜನೆ ಜಾರಿಗೆ ತಂದರು. ಅದನ್ನು ನಿಲ್ಲಿಸಲು ಸಾಧ್ಯವಾಯಿತೇ? ಬೇರೆ ರಾಜ್ಯಗಳನ್ನು ನಮ್ಮ ಗ್ಯಾರಂಟಿ ಯೋಜನೆಯನ್ನು ಕಾಪಿ ಮಾಡಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಯಾರೂ ಜಾರಿಗೆ ತಂದಿಲ್ಲ” ಎಂದು ತಿಳಿಸಿದರು.

ಗೃಹಲಕ್ಷ್ಮಿ ದುರುಪಯೋಗ ತಡೆಯಲು ಮರು ಪರಿಶೀಲನೆ: ನಿಮ್ಮದೇ ದೂರವಾಣಿ ಸಂಖ್ಯೆ ನಮೂದಿಸಿ

"ಇತ್ತೀಚೆಗೆ ಗೃಹಜ್ಯೋತಿ ಯೋಜನೆಯ ಕುರಿತು ಸಮೀಕ್ಷೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಹಳ ಜನ ಯೋಜನೆಯ ಸೌಲಭ್ಯ ಬೇಡ ಎಂದರು. ಕೆಲವರು ದಾಖಲೆ ನೀಡಲು ಹಿಂಜರಿದರು” ಎಂದರು.

“ಗೃಹಲಕ್ಷ್ಮಿ ಯೋಜನೆಯಲ್ಲೂ ದುರುಪಯೋಗ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಒಂದು ಲಕ್ಷಕ್ಕೂ ಹೆಚ್ಚು ಮೃತರ ಖಾತೆಗೆ ಹಣ ಹೋಗುತ್ತಿರುವುದು, ಇತರ ರಾಜ್ಯದ ಮಹಿಳೆಯರು ಈ ಸೌಲಭ್ಯದ ದುರುಪಯೋಗ ಪಡೆದಿರುವುದು, ಬಾಗಲಕೋಟೆಯ ಫಲಾನುಭವಿಯ ವಿವರ ಪರಿಶೀಲಿಸಿದಾಗ ಫೋನ್ ನಂಬರ್ ಒಂದು ಊರಿನದ್ದು, ಹಣ ಬೇರೆಯವರಿಗೆ ತಲುಪುತ್ತಿರುವುದು ಇಂತಹ ವ್ಯತ್ಯಾಸಗಳು ಗಮನಕ್ಕೆ ಬಂದಿವೆ. ಗೃಹಲಕ್ಷ್ಮಿ ಮೊತ್ತ ಸಾಲಕ್ಕೆ ವಜಾ ಆಗುತ್ತಿರುವ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಫಾರಂ ಸಿದ್ಧಪಡಿಸಲಾಗಿದೆ. ಮಹಿಳೆಯರು ತಮ್ಮದೇ ದೂರವಾಣಿ ಸಂಖ್ಯೆ ನಮೂದಿಸಬೇಕು” ಎಂದು ಮನವಿ ಮಾಡಿದರು.

"ಗುರುವಾರದಂದು ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷಗಳಾದವು. ಆರ್ಥಿಕವಾಗಿ ಹೆಣ್ಣು ಕುಟುಂಬದ ಕಣ್ಣು ಎನ್ನುತ್ತಾರೆ. ಬಹುತೇಕ ಮಹಿಳೆಯರು ಗೃಹಲಕ್ಷ್ಮಿ ಮೊತ್ತವನ್ನು ತಮ್ಮ ಕುಟುಂಬಕ್ಕಾಗಿ, ಸಾಲ ತೀರಿಸಲು ಬಳಕೆ ಮಾಡಿಕೊಂಡಿದ್ದಾರೆ. ಕೆಲವರು ತಮಗಾಗಿ ಬಳಸಿಕೊಂಡಿದ್ದಾರೆ. ಈ ಯೋಜನೆಯ ಸದ್ಬಳಕೆಯಾಗಬೇಕು. ನೀವು ಈ ಮೊತ್ತವನ್ನು ಯಾಕೆ ಬಳಸುತ್ತಿದ್ದೀರಿ ಎಂಬ ಮಾಹಿತಿಬೇಕು ಎಂಬ ಕಾರಣಕ್ಕಾಗಿ ಈ ಸಂವಾದ ಏರ್ಪಡಿಸಲಾಗಿದೆ. ಪಂಚಾಯಿತಿ ಮಟ್ಟದಲ್ಲಿಯೂ ಗ್ಯಾರಂಟಿ ಸಮಿತಿ ರಚಿಸಲಾಗುತ್ತಿದ್ದು, ಅವರು ನಿಮ್ಮ ಸಂಪರ್ಕದಲ್ಲಿರುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ಶೀಘ್ರದಲ್ಲೇ ಮಹಿಳಾ ಸಚಿವೆ

“ಮುಂದಿನ ಅಧಿವೇಶನಕ್ಕೂ ಮೊದಲೇ ಮಹಿಳೆಯೊಬ್ಬರನ್ನು ಸಚಿವರನ್ನಾಗಿ ನೇಮಕ ಮಾಡಲಾಗುವುದು. ಗೃಹಲಕ್ಷ್ಮಿ ಫಲಾನುಭವಿಗಳ ಪರಿಶೀಲನೆ ಸಂದರ್ಭದಲ್ಲಿ ಸರಿಯಾದ ಮಾಹಿತಿ ಅದರಲ್ಲೂ ವಿಶೇಷವಾಗಿ ನಿಮ್ಮದೇ ದೂರವಾಣಿ ಸಂಖ್ಯೆ ನಮೂದಿಸಿ. ನಮ್ಮ ಸಂದೇಶ ನಿಮಗೆ ತಲುಪಬೇಕು. ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ವ್ಯವಹಾರ, ಉದ್ಯಮಗಳಲ್ಲಿ ತೊಡಗಿಸಿಕೊಂಡವರು, ಮಕ್ಕಳ ಶಿಕ್ಷಣಕ್ಕೆ ಬಳಸಿಕೊಂಡಿರುವುದು ತಿಳಿದು ಸಂತೋಷವಾಯಿತು. ವಿದ್ಯೆ ಬಹುದೊಡ್ಡ ಆಸ್ತಿ. ಆದರೆ ಈ ಮೊತ್ತವನ್ನು ಎಂದಿಗೂ ಬಡ್ಡಿ ವ್ಯವಹಾರ ಅಥವಾ ಚೀಟಿ ವ್ಯವಹಾರಕ್ಕೆ ಬಳಸಿಕೊಳ್ಳಬೇಡಿ. ನಿಮ್ಮ ಆಶೀರ್ವಾದ ಇರಲಿ. ಮತ್ತೆ ನಾವು 2028 ರಲ್ಲಿ ಅಧಿಕಾರಕ್ಕೆ ಬರುತ್ತೇವೆ. ಈ ಬಗ್ಗೆ ನಿಮ್ಮ ಪತಿ, ನಿಮ್ಮ ಗೆಳತಿಯರಿಗೂ ಅರಿವು ಮೂಡಿಸಿ” ಎಂದು ಹೇಳಿದರು.

"ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣಕಾಸಿನ ವ್ಯವಹಾರಗಳ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ, ಮೀಟರ್ ಬಡ್ಡಿ ಹಾಗೂ ಚೀಟಿ ವ್ಯವಹಾರಗಳ ಸುಳಿಗೆ ಸಿಲುಕದಂತೆ ಎಚ್ಚರಿಕೆ ನೀಡಲಾಗುವುದು" ಎಂದು ಕಿವಿಮಾತು ಹೇಳಿದರು.

"ಫಲಾನುಭವಿಗಳ ಬ್ಯಾಂಕ್ ಖಾತೆಗಳಿಂದ ಸಾಲದ ಹಣದ ಬಾಬ್ತು ತೆಗೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಎಲ್ಲ ವಿಚಾರಗಳ ಕುರಿತು ಪರಿಶೀಲನೆ ನಡೆಸುತ್ತಿದ್ದೇನೆ. ಫಲಾನುಭವಿಗಳ ಪೈಕಿ ಶೇ.30ರಿಂದ 35ರಷ್ಟು ಮಂದಿಯ ಬಳಿ ಬೇರೆ ಬೇರೆ ವ್ಯಕ್ತಿಗಳ ಫೋನ್ ನಂಬರ್ ಗಳಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಫಲಾನುಭವಿಗಳು ತಮ್ಮದೇ ಮೊಬೈಲ್ ಫೋನ್ ಬಳಸಬೇಕು. ಬೇರೆಯವರ ಫೋನ್ ನಂಬರ್ ನೀಡಬಾರದು ಎಂಬುದಾಗಿ ಮನವರಿಕೆ ಮಾಡಿಕೊಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಕರೆದು ಮಾತನಾಡಿಸಿ, ಸಮೀಕ್ಷೆ ನಡೆಸುವ ಮೂಲಕ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದೇನೆ" ಎಂದರು.

"ದೀಪಾವಳಿ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಗೆ 36 ತಿಂಗಳು, ಅಂದರೆ ಮೂರು ವರ್ಷ ಪೂರ್ಣಗೊಂಡಿದೆ. ನಿನ್ನೆ (ಗುರುವಾರ) ಒಂದೇ ದಿನ ಸುಮಾರು 7 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇನೆ. ಫಲಾನುಭವಿಗಳಿಗೆ ಇನ್ನೂ ಏನಾದರೂ ಸಮಸ್ಯೆಗಳಿವೆಯೇ ಎಂಬುದನ್ನು ವಿಚಾರಿಸಿದ್ದೇನೆ. ಶಕ್ತಿ ಯೋಜನೆಯಿಂದ ಆಗಿರುವ ಅನುಕೂಲಗಳ ಬಗ್ಗೆಯೂ ಮಹಿಳೆಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಉಳಿದವರೊಂದಿಗೂ ಮಾತನಾಡಿ, ಅಗತ್ಯ ಕ್ರಮ ಕೈಗೊಳ್ಳುತ್ತೇನೆ" ಎಂದರು.

ಮೀಟರ್ ಬಡ್ಡಿ ವ್ಯವಹಾರಕ್ಕೆ ಕಡಿವಾಣ

ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಬಾರದು ಎಂದು ಎಚ್ಚರಿಕೆ ನೀಡುತ್ತಿರುವುದಕ್ಕೆ ಕಾರಣವೇನಿದೆ ಎಂಬ ಪ್ರಶ್ನೆಗೆ, "ಕೆಲವರು ಬೆಳಗ್ಗೆ ಮಾರುಕಟ್ಟೆಗೆ ಹೋಗುವಾಗ 2 ಸಾವಿರ ರೂಪಾಯಿ ಸಾಲ ಪಡೆದು, ಸಂಜೆ ಹಣ ಹಿಂದಿರುಗಿಸುವಾಗ ಶೇ 10 ರಷ್ಟು ನೀಡುವಂತಹ ಅತಿಯಾದ ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ. ಶೇ.5-10 ರೂಪಾಯಿಗಳ ಲೆಕ್ಕದಲ್ಲಿ ಬಡ್ಡಿ ವಸೂಲಿ ಮಾಡುವ ಪದ್ಧತಿಯೂ ಇದೆ. ಇಂತಹ ವ್ಯವಹಾರಗಳಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದಲ್ಲದೆ, ಅಪರಾಧ ಪ್ರಕರಣಗಳೂ ಹೆಚ್ಚಾಗುತ್ತಿವೆ. ಆದರೆ, ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಇಂತಹ ವ್ಯವಹಾರಗಳಿಗೆ ಒಳಗಾಗದಂತೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಅಗತ್ಯಬಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

ರಾಜ್ಯದ ಹಲವೆಡೆ ಪೆಟ್ರೋಲ್‌ನಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಪತ್ತೆ: ಡಾ.ಜಿ. ಪರಮೇಶ್ವರ್

ಚೀಟಿ ವ್ಯವಹಾರದಲ್ಲೂ ಎಚ್ಚರಿಕೆ ಅಗತ್ಯ

ಚೀಟಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ, "ಚೀಟಿ ವ್ಯವಹಾರದಲ್ಲಿ ಹಲವು ಸಮಸ್ಯೆಗಳಿವೆ. ಕೊನೆಯಲ್ಲಿ ಹಣ ಕಟ್ಟಿದವರಿಗೆ ಹಣ ಸಿಗದೆ ಹೋಗುವ ಸಾಧ್ಯತೆಯಿದ್ದು, ನಂತರ ಕಾನೂನು ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ, ಇಂತಹ ವ್ಯವಹಾರಗಳಿಂದ ದೂರವಿರುವಂತೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದೇನೆ" ಎಂದು ಹೇಳಿದರು.