Sugarcane Farmers Protest: ಕಬ್ಬು ರಿಕವರಿ ಆಧಾರದಲ್ಲಿ ದರ ಹೆಚ್ಚಳ ಮಾಡಿ; ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿಎಂ ಸೂಚನೆ
CM Siddaramaiah meeting with sugar factory owners: ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ವಿಧಾನಸೌಧದಲ್ಲಿ ಶುಕ್ರವಾರ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ಅವರು, ಸಹಕಾರಿ ರಂಗದ ಇಐಡಿ ಪ್ಯಾರಿ ಶುಗರ್ ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ಪ್ರಸ್ತುತ 3211 ರೂ. ಪಾವತಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಉಳಿದ ಕಾರ್ಖಾನೆಗಳಿಗೆ ಯಾಕೆ ಪಾವತಿ ಸಾಧ್ಯವಿಲ್ಲ? ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.
-
ಬೆಂಗಳೂರು, ನ.7: ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಪ್ರಸ್ತುತ ಕಬ್ಬು ಬೆಳೆಗಾರರು (Sugarcane Farmers Protest) ಬೀದಿಗಿಳಿದಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ 3200 ರೂ. ನಿಗದಿಪಡಿಸಿದ್ದು, ಇದಕ್ಕೆ ಕಾರ್ಖಾನೆಗಳು ಒಪ್ಪಿಕೊಂಡರೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬಹುದಾಗಿದೆ. ಆಯಾ ಪ್ರದೇಶದ ಇಳುವರಿ ರಿಕವರಿ ಪ್ರಮಾಣದ ಆಧಾರದಲ್ಲಿ ದರವನ್ನು ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಿ ಎಂದು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ವಿಧಾನಸೌಧದಲ್ಲಿ ಶುಕ್ರವಾರ ಸಭೆ ನಡೆಸಿದ ಸಿಎಂ ಅವರು, ಸಹಕಾರಿ ರಂಗದ ಇಐಡಿ ಪ್ಯಾರಿ ಶುಗರ್ ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ಪ್ರಸ್ತುತ 3211 ರೂ. ಪಾವತಿಸುತ್ತಿದೆ. ಇದೇ ಮಾದರಿಯಲ್ಲಿ ಉಳಿದ ಕಾರ್ಖಾನೆಗಳಿಗೆ ಯಾಕೆ ಪಾವತಿ ಸಾಧ್ಯವಿಲ್ಲ? ಎಂದು ಮುಖ್ಯಮಂತ್ರಿ ಅವರು ಪ್ರಶ್ನಿಸಿದರು.
ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳನ್ನು ಆಲಿಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿಯೇ, ಸಕ್ಕರೆ ಎಂಎಎಸ್‌ಪಿ ಕೆ.ಜಿ.ಗೆ 41 ರೂ.ಕ್ಕೆ ನಿಗದಿಪಡಿಸಲು ಕೋರಿ ಪ್ರಧಾನಿಯವರಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಅವರು ಸಮಯ ನೀಡಿದರೆ ನಾಳೆಯೇ ನಿಯೋಗ ಕರೆದುಕೊಂಡು ಹೋಗಲು ಸಿದ್ಧರಿದ್ದೇವೆ ಎಂದರು.
ಅವಧಿಗಿಂತ ಮೊದಲು ಕಬ್ಬು ಕಟಾವು ಮಾಡದಿರುವುದು ಸೇರಿದಂತೆ ಕಬ್ಬಿನ ಇಳುವರಿ ರಿಕವರಿ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುವ ಕುರಿತು ರೈತರಿಗೆ ಜಾಗೃತಿ ಮೂಡಿಸುವುದು ಸಕ್ಕರೆ ಕಾರ್ಖಾನೆಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಕಾರ್ಖಾನೆ ಮಾಲೀಕರು, ರೈತರ ಬೇಡಿಕೆ ತಕ್ಕಂತೆ ಹಣ ಕೊಡುವುದು ನಮಗೆ ಕಷ್ಟ ಆಗ್ತದೆ. ರಾಜ್ಯ ಸರ್ಕಾರ ನೆರವು ನೀಡಲಿ ಎಂದು ಕೋರಿದರು.
ಈ ವೇಳೆ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಹಾಗಾದರೆ ನೀವೆಲ್ಲಾ ಒಟ್ಟಾಗಿ ಮಾಧ್ಯಮಗಳ ಮುಂದೆ ಸತ್ಯ ಹೇಳಿ. ಈ ಸಮಸ್ಯೆ ಸೃಷ್ಟಿ ಆಗಿರುವುದು, ನೀವುಗಳು ಸಮಸ್ಯೆಯಲ್ಲಿ ಇರುವುದು ಕೇಂದ್ರ ಸರ್ಕಾರದ ಕಾರಣದಿಂದ ಎನ್ನುವ ಹೇಳಿಕೆ ನೀಡಿ, ಕೇಂದ್ರಕ್ಕೆ ಪತ್ರ ಬರೆಯಿರಿ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Sugarcane Farmers Protest: ಬೆಳಗಾವಿಯಲ್ಲಿ 3 ಕಿ.ಮೀ.ವರೆಗೆ ಪೊಲೀಸರನ್ನು ಬೆನ್ನಟ್ಟಿ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು
ನಂತರ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವೀಸ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, "MSP ದರ ಹೆಚ್ಚಿಸುವಂತೆ ಒತ್ತಾಯಿಸಿದ" ಪತ್ರ ಪ್ರದರ್ಶಿಸಿ, ಈ ಪತ್ರದಂತೆ ಪ್ರಧಾನಿಯವರು MSP ಹೆಚ್ಚಿಸಲು ಒತ್ತಾಯಿಸೋಣ ಎಂದು ತಿಳಿಸಿದ್ದಾರೆ.