ಬೆಂಗಳೂರು, ಡಿ.21: ಮಕ್ಕಳಿಗೆ ಪಲ್ಸ್ ಪೊಲೀಯೊ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೋ ಅಭಿಯಾನ-2025ಕ್ಕೆ (Pulse Polio Campaign 2025) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಕಚೇರಿ ಕೃಷ್ಣಾದಲ್ಲಿ ಭಾನುವಾರ ಚಾಲನೆ ನೀಡಿದರು. ಈ ವೇಳೇ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ಪಲ್ಸ್ ಪೋಲಿಯೋ ಅಭಿಯಾನದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಿಮ್ಮ ಮನೆಯಲ್ಲಿ 5 ವರ್ಷದೊಳಗಿನ ಪುಟ್ಟ ಮಕ್ಕಳಿದ್ದಲ್ಲಿ ಇಂದಿನಿಂದ ಡಿಸೆಂಬರ್ 24ರ ಒಳಗಾಗಿ ತಪ್ಪದೇ ಸಮೀಪದ ಲಸಿಕಾ ಕೇಂದ್ರಕ್ಕೆ ತೆರಳಿ ಪೋಲಿಯೋ ಲಸಿಕೆ ಹಾಕಿಸಿ, ಪೋಲಿಯೋ ಮುಕ್ತ ಭಾರತ ಅಭಿಯಾನದ ಜೊತೆಯಾಗಿ. ಇಂದು ನೀವು ಮಗುವಿಗೆ ಹಾಕಿಸುವ ಎರಡು ಹನಿ ಲಸಿಕೆ, ಅದರ ಭವಿಷ್ಯವನ್ನು ಶಾಶ್ವತ ಅಂಗವೈಕಲ್ಯದಿಂದ ರಕ್ಷಿಸಲಿದೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ 24ರವರೆಗೆ ನಡೆಯಲಿದೆ ಪಲ್ಸ್ ಪೋಲಿಯೋ ಅಭಿಯಾನ
ಡಿಸೆಂಬರ್ 21ರಿಂದ 24ರವರೆಗೆ ಬೆಂಗಳೂರು ಸೇರಿ ರಾಜ್ಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ – 2025 (Pulse Polio Campaign 2025) ಹಮ್ಮಿಕೊಂಡಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವಂತೆ ಪೋಷಕರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಹತ್ತಿರದ ಪೋಲಿಯೋ ಬೂತ್, ಯುಪಿಎಚ್‌ಸಿ ಹಾಗೂ ನಮ್ಮ ಕ್ಲಿನಿಕ್‌ಗಳ ಮಾಹಿತಿಗಾಗಿ QR ಕೋಡ್ ಹಾಗೂ ವೆಬ್‌ಸೈಟ್ ಲಿಂಕ್ ಅನ್ನು: https://gba.karnataka.gov.in/polio/ ಜಿಬಿಎ ಬಿಡುಗಡೆ ಮಾಡಿದೆ. ವೆಬ್‌ಸೈಟ್‌ನಲ್ಲಿ ಪಾಲಿಕೆ, ಜೋನ್, ವಾರ್ಡ್ ಆಯ್ಕೆ ಮಾಡಿದರೆ ಹತ್ತಿರದ ಪೋಲಿಯೋ ಬೂತ್, ಪ್ರಾಥಮಿಕ ಆಸ್ಪತ್ರೆ ಮಾಹಿತಿ ಪಡೆಯಬಹುದು.
ಇಂದು (ಡಿ. 21) ಬೆಳಗ್ಗೆ 8 ರಿಂದ ಅಭಿಯಾನ ಆರಂಭವಾಗಿದ್ದು, ಸಂಜೆ 5 ಗಂಟೆವರೆಗೆ ಬೂತ್‌ಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಡಿ. 22 ರಿಂದ 24ರವರೆಗೆ ಮನೆಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯ ನಡೆಯುತ್ತದೆ. ಎಲ್ಲಾ 4 ದಿನಗಳಲ್ಲಿ ಸಂಚಾರ ಕೇಂದ್ರಗಳು ಹಾಗೂ ಹೆಚ್ಚಿನ ಅಪಾಯ ಪ್ರದೇಶಗಳಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ಮಾಹಿತಿ ನೀಡಿದೆ.
ಹಾಗೆಯೇ ಆರೋಗ್ಯ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೋಲಿಯೋ ಬೂತ್, ಪ್ರಾಥಮಿಕ ಆಸ್ಪತ್ರೆ ಮಾಹಿತಿ ಪಡೆಯಲು QR ಕೋಡ್ ಬಿಡುಗಡೆ ಮಾಡಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ, App (Nearby Vaccination centres) ಲಿಂಕ್ ಕಾಣುತ್ತದೆ. ಅದನ್ನು ಮೊಬೈಲ್‌ನಲ್ಲಿ ಡೌನ್‌ಲೋನ್ ಮಾಡಿಕೊಂಡು, ಲೊಕೇಶನ್ ಆನ್ ಮಾಡಿದರೆ ಹತ್ತಿರದ ಪೋಲಿಯೋ ಬೂತ್, ಆಸ್ಪತ್ರೆ ವಿಳಾಸ, ಲೊಕೇಶನ್ ಲಿಂಕ್ ಸಿಗುತ್ತದೆ.
ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪಲ್ಸ್ ಪೋಲಿಯೋ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದ ತಂಡದ ಜತೆಗೆ ವೈದ್ಯಕೀಯ, ನರ್ಸಿಂಗ್ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು, ರೋಟರಿ–ಲಯನ್ಸ್ ಕ್ಲಬ್‌ಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಅನೇಕ ಸಂಘ–ಸಂಸ್ಥೆಗಳು ಸಹಭಾಗಿಯಾಗಿವೆ.