ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: ಫೇಸ್‌ಬುಕ್‌ ಆಟೋ ಟ್ರಾನ್ಸ್‌ಲೇಷನ್‌ ಎಡವಟ್ಟು; ಮೆಟಾದವರು ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ ಎಂದ ಸಿಎಂ

Facebook’s auto-translation: ನಮ್ಮ ಕಚೇರಿ ಕನ್ನಡದಲ್ಲಿ ಮಾಡಿದ್ದ ಮೂಲ ಪೋಸ್ಟ್‌ ಕೆಲವರ ನ್ಯೂಸ್ ಫೀಡ್‌ನಲ್ಲಿ ಇಂಗ್ಲಿಷ್‌ಗೆ ಭಾಷಾಂತರಗೊಂಡು ಕಾಣಿಸಿಕೊಂಡಿದೆ. ಈ ಭಾಷಾಂತರವೇ ದೋಷಪೂರ್ಣವಾಗಿದೆ. ಮೆಟಾದವರು ತಮ್ಮ ತಪ್ಪಿಗೆ ಕ್ಷಮೆ ಕೇಳಿ, ದೋಷವನ್ನು ಸರಿಪಡಿಸುವುದಾಗಿ ಇ-ಮೇಲ್‌ ಮೂಲಕ ತಿಳಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು: ನಟಿ ಬಿ. ಸರೋಜಾದೇವಿ ಅವರಿಗೆ ಕನ್ನಡದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದ ಫೇಸ್‌ಬುಕ್ ಪೋಸ್ಟ್‌ನ ಆಟೋ ಟ್ರಾನ್ಸ್‌ಲೇಷನ್‌ ಅವಾಂತರದ ಬಗ್ಗೆ ಸಿಎಂ ಸಿದ್ದರಾಮಯ್ಯ‌ (CM Siddaramaiah) ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮೆಟಾದವರು ತಮ್ಮ ತಪ್ಪಿಗೆ ಕ್ಷಮೆ ಕೇಳಿ, ದೋಷವನ್ನು ಸರಿಪಡಿಸುವುದಾಗಿ ಇ-ಮೇಲ್‌ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ಈ ಬಗ್ಗೆ ಸಿಎಂ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಜುಲೈ 15ರಂದು ಮೃತರಾದ ಬಿ. ಸರೋಜಾದೇವಿ ಅವರಿಗೆ ಅವರ ಮನೆಗೆ ತೆರಳಿ ನನ್ನ ಶ್ರದ್ಧಾಂಜಲಿ ಸಲ್ಲಿಸಿದ್ದೆ. ಈ ಸುದ್ದಿಯನ್ನು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಫೇಸ್‌ಬುಕ್‌ ಖಾತೆಯಿಂದ (Chief Minister of Karnataka ) ಕನ್ನಡ ಭಾಷೆಯಲ್ಲಿ ಪೋಸ್ಟ್‌ ಮಾಡಲಾಗಿತ್ತು. ಆದರೆ ಕೆಲವು ಫೇಸ್‌ಬುಕ್‌ ಬಳಕೆದಾರರ ವಾಲ್‌ನಲ್ಲಿ ನನ್ನ ಕನ್ನಡದ ಪೋಸ್ಟ್‌ನ ಇಂಗ್ಲಿಷ್‌ ಭಾಷಾಂತರ ಕಾಣಿಸಿಕೊಂಡಿದೆ.

ಅಪಾರ್ಥ ಕಲ್ಪಿಸುವ, ಗಂಭೀರವಾದ ದೋಷದಿಂದ ಕೂಡಿದ ಈ ಪೋಸ್ಟ್ ಓದಿದ ಅನೇಕ ಮಂದಿ ನಮ್ಮ ಕಚೇರಿಯಿಂದಲೇ ಇಂಗ್ಲಿಷ್ ಪೋಸ್ಟ್ ಹಾಕಿರಬಹುದೆಂದು ತಿಳಿದು ಟೀಕೆ-ಟಿಪ್ಪಣಿ ಮಾಡಿರುವುದನ್ನು ನಾನು ಗಮನಿಸಿದ್ದೇನೆ. ಈ ಕಾರಣಕ್ಕಾಗಿ ಸ್ಪಷ್ಟೀಕರಣವನ್ನು ನೀಡಬೇಕಾಗಿ ಬಂದಿದೆ ಎಂದು ತಿಳಿಸಿದ್ದಾರೆ.



ಫೇಸ್‌ಬುಕ್‌ನಲ್ಲಿ ಆಟೋ ಟ್ರಾನ್ಸ್‌ಲೇಷನ್‌ (ಸ್ವಯಂ ಅನುವಾದ) ಎಂಬ ಆಯ್ಕೆಯಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ. ಈ ಆಯ್ಕೆ ಮುಕ್ತವಾಗಿದ್ದು, ಇದನ್ನು ರದ್ದುಪಡಿಸುವ ಅವಕಾಶ ಪೋಸ್ಟ್ ಮಾಡುವ ಖಾತೆದಾರನಿಗೆ ಇರುವುದಿಲ್ಲ. ಇದರಿಂದಾಗಿ ಜಗತ್ತಿನ ಯಾವುದೇ ಭಾಷಿಕರು ಇದನ್ನು ತಮ್ಮ ಭಾಷೆಗೆ ಭಾಷಾಂತರಿಸಿಕೊಂಡು ಓದಬಹುದಾಗಿದೆ. ಈ ಸ್ವಯಂ ಅನುವಾದದ ಪ್ರಕ್ರಿಯೆಯೇ ದೋಷಪೂರ್ಣವಾಗಿದೆ. (Facebook’s auto-translation feature shows up on user feeds based on their settings, and content creators have no way to disable or control the auto-translation feature on viewers feed).

ನಮ್ಮ ಕಚೇರಿ ಕನ್ನಡದಲ್ಲಿ ಮಾಡಿದ್ದ ಮೂಲ ಪೋಸ್ಟ್‌ ಕೆಲವರ ನ್ಯೂಸ್ ಫೀಡ್‌ನಲ್ಲಿ ಇಂಗ್ಲಿಷ್‌ಗೆ ಭಾಷಾಂತರಗೊಂಡು ಕಾಣಿಸಿಕೊಂಡಿದೆ. ಈ ಭಾಷಾಂತರವೇ ದೋಷಪೂರ್ಣವಾಗಿದೆ. ಅಪಾರ್ಥ ಕಲ್ಪಿಸುವ ಇಂಗ್ಲಿಷ್ ಪೋಸ್ಟ್ ನೋಡಿದ ಕೆಲವರು ಕೂಡಲೇ ಅದರ ಕೆಳಭಾಗದಲ್ಲಿರುವ 'See Original Post' (ಮೂಲ ಬರಹವನ್ನು ನೋಡಿ) ಎಂಬ ಆಯ್ಕೆಯ ಮೂಲಕ ಮೂಲ ಕನ್ನಡ ಪೋಸ್ಟ್ ನೋಡಿ ಸರಿಯಾದ ಸುದ್ದಿಯನ್ನು ಗ್ರಹಿಸಿ ಕೊಂಡಿದ್ದು ಮಾತ್ರವಲ್ಲ, ಫೇಸ್‌ಬುಕ್‌ನ ಸ್ವಯಂ ಭಾಷಾಂತರದಲ್ಲಿ ಕಂಡುಬಂದಿರುವ ದೋಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ನನ್ನ ಮಾಧ್ಯಮ ಸಲಹೆಗಾರರು ಮೆಟಾದವರನ್ನು ಸಂಪರ್ಕಿಸಿ, ದೋಷವನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು. ಮೆಟಾದವರು ತಮ್ಮ ತಪ್ಪಿಗೆ ಕ್ಷಮೆ ಕೇಳಿ, ದೋಷವನ್ನು ಸರಿಪಡಿಸುವುದಾಗಿ ಇ-ಮೇಲ್‌ ಮೂಲಕ ತಿಳಿಸಿರುವುದಾಗಿ ಸಿಎಂ ಹೇಳಿದ್ದಾರೆ.

ಈ ಹಿಂದೆಯೂ ಮೆಟಾ/ಫೇಸ್‌ಬುಕ್‌ ಮೂಲ ಭಾಷೆಯನ್ನು ಸ್ವಯಂ ಅನುವಾದ ಮಾಡಿ, ಜಾಗತಿಕ ಮಟ್ಟದಲ್ಲಿ ಇಂತಹ ಎಡವಟ್ಟುಗಳನ್ನು ಮಾಡಿಕೊಂಡಿತ್ತು. ಇಂತಹ ತಪ್ಪುಗಳಿಗಾಗಿ ಇತ್ತೀಚೆಗೆ ಮಲೇಷಿಯಾ(2024) ಸೇರಿ ಮಯನ್ಮಾರ್‌(2018), ಪ್ಯಾಲೇಸ್ತೀನ್‌(2017) ಮತ್ತಿತರ ಕಡೆಗಳಲ್ಲೂ ಸಾರ್ವಜನಿಕವಾಗಿ ತೀವ್ರ ವಿರೋಧ ಎದುರಿಸಿತ್ತು ಎಂದು ತಿಳಿಸಿದ್ದಾರೆ.

ಸುಮಾರು 2 ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಫೇಸ್‌ಬುಕ್‌ಗೆ ದೊಡ್ಡ ಪ್ರಮಾಣದ ಕನ್ನಡಿಗರು ಸೇರಿ ಭಾರತದಲ್ಲಿ ಅತಿಹೆಚ್ಚು ಬಳಕೆದಾರರಿದ್ದಾರೆ. ಆದರೆ ಸ್ವಯಂ ಅನುವಾದ ನೀಡುವಾಗ ಮೂಲ ಭಾಷೆಯಲ್ಲಿ ಹೇಳಿದ್ದು ಅನರ್ಥವಾಗಿ ಭಾಷಾಂತರಗೊಳ್ಳುತ್ತಿರುವುದು ವಿಷಾದನೀಯ. ಮೆಟಾ ಸ್ವಯಂ ಅನುವಾದ (Auto translation) ಮಾಡುವಲ್ಲಿ ಆಗುತ್ತಿರುವ ದೋಷವನ್ನು ಸರಿಪಡಿಸುವ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಳ್ಳುತ್ತದೆ ಎಂದು ಭಾವಿಸಿದ್ದೇನೆ.

ಈ ಸುದ್ದಿಯನ್ನೂ ಓದಿ | CM Siddaramaiah: ತಪ್ಪು ಕನ್ನಡ ಅನುವಾದ, ಸಿಎಂ ಸಿದ್ದರಾಮಯ್ಯ ಕ್ಷಮೆ ಯಾಚಿಸಿದ ಮೆಟಾ

ಫೇಸ್‌ಬುಕ್‌ನವರ ಸ್ವಯಂ ಅನುವಾದದಿಂದ (Auto translation) ಆಗಿರುವ ತಪ್ಪನ್ನು ಕೆಲವರು ಸ್ಕ್ರೀನ್‌ಶಾಟ್‌ ತೆಗೆದುಕೊಂಡು ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇಂತಹ ಕಿಡಿಗೇಡಿತನ ಮಾಡುವವರಲ್ಲಿ ವಿರೋಧಪಕ್ಷದ ಕೆಲವು ಶಾಸಕರು, ಮಾಜಿ ಸಚಿವರು ಕೂಡಾ ಸೇರಿರುವುದು ವಿಷಾದನೀಯ. ಹಾಗಾಗಿ ಯಾರೂ ಈ ಸುಳ್ಳು ಸುದ್ದಿಯ ಬಗ್ಗೆ ಗೊಂದಲಕ್ಕೆ ಒಳಗಾಗಬಾರದೆಂದು ಮನವಿ ಮಾಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.