ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯ ಸಿಎಂಆರ್ ವಿಶ್ವವಿದ್ಯಾಲಯಕ್ಕೆ ೮ ಆಗಸ್ಟ್ 2025ರಂದು ‘ನ್ಯಾಕ್ ಎ ಗ್ರೇಡ್ ಮಾನ್ಯತೆ’ ಲಭಿಸಿದೆ.
ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರೆಡಿಷನ್ ಕೌನ್ಸಿಲ್(ನ್ಯಾಕ್) ಮೊದಲ ಅವದಿಯಲ್ಲಿ ಸಿಎಂಆರ್ ವಿಶ್ವವಿದ್ಯಾಲಯಕ್ಕೆ 5 ವರ್ಷಗಳ ಅವಧಿಗೆ ನ್ಯಾಕ್ ಎ ಮಾನ್ಯತೆಯನ್ನು ನೀಡಿದೆ. ಈ ಮೂಲಕ ಕರ್ನಾಟಕ ರಾಜ್ಯದಲ್ಲಿ ನ್ಯಾಕ್ ‘ಎ’ ಮಾನ್ಯತೆ ಪಡೆದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ.
ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪ್ರಮುಖ 7 ಅಂಶಗಳ ಮಾನದಂಡದಲ್ಲಿ ಮೌಲ್ಯೀಕರಿಸಲಾಗುತ್ತದೆ. ಪಠ್ಯಕ್ರಮ, ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನ, ಸಂಶೋಧನೆ, ನಾವೀನ್ಯತೆ ಮತ್ತು ವಿಸ್ತರಣೆ, ಮೂಲಭೂತ ಸೌಕರ್ಯ ಮತ್ತು ಕಲಿಕಾ ಸಂಪನ್ಮೂಲಗಳು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಸಾಧನೆ, ಆಡಳಿತ, ನಾಯಕತ್ವ ಮತ್ತು ನಿರ್ವಹಣೆ ಇವುಗಳು ನ್ಯಾಕ್ ‘ಎ’ ಮಾನ್ಯತೆಯ ಸಮರ್ಪಕ ಮೌಲ್ಯಮಾಪನಗಳಾಗಿವೆ.
ಇದನ್ನೂ ಓದಿ: Roopa Gururaj Column: ವೆಂಕಟೇಶ ಸುಪ್ರಭಾತದ ಹಿನ್ನೆಲೆ
ನ್ಯಾಕ್ ‘ಎ’ ಮಾನ್ಯತೆ ಮತ್ತು ಮನ್ನಣೆ ಕುರಿತು ಮಾತನಾಡಿದ ಸಿಎಂಆರ್ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಬಿ. ರಾಘವೇಂದ್ರ ಅವರು ಈ ಸಾಧನೆಗೆ ಆಡಳಿತ ಮಂಡಳಿಯ ಸಮರ್ಪಣಾ ಮನೋಭಾವ ಮತ್ತು ಸಮರ್ಥ ನಾಯಕತ್ವ , ನುರಿತ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗ, ಪ್ರತಿಭಾವಂತ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪರಿಶ್ರಮ ಈ ಸಾಧನೆಗೆ ಕಾರಣ ಎಂದು ಹೇಳಿದರು.
ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ದೇಶಕ್ಕೆ ಸಮರ್ಥ ಸಂಪನ್ಮೂಲರಾಗಬಲ್ಲ ವೃತ್ತಿಪರ ವಿದ್ಯಾರ್ಥಿ ಸಮುದಾಯವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಿಎಂಆರ್ ವಿಶ್ವವಿದ್ಯಾಲಯ ಶ್ರಮಿಸುತ್ತಾ ಬಂದಿದ್ದು ನ್ಯಾಕ್ ‘ಎ’ ಮಾನ್ಯತೆ ಪಡೆದಿರುವುದು ಹೆಮ್ಮೆ ಪಡುವಂತಹ ಸಾಧನೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನ್ಯಾಕ್ ಮಾನದಂಡಗಳು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಹಾಗೂ ನಿರ್ವಹಣಾ ಸಾಮರ್ಥ್ಯವನ್ನು ಕಾಪಾಡಿಕೊಂಡು ಸದಾ ಮುನ್ನಡೆಯುವಂತೆ ಪ್ರೇರೇಪಿಸುತ್ತವೆ. ಈ ನಿಟ್ಟಿನಲ್ಲಿ ಸಿಎಂಆರ್ ವಿಶ್ವವಿದ್ಯಾಲಯ ಸದಾ ಆತ್ಮವಿಶ್ವಾಸ ಮತ್ತು ಸಮರ್ಪಣಾ ಮನೋಭಾವ ದಿಂದ ಮುನ್ನಡೆಯಲು ಬದ್ಧವಾಗಿದೆ ಎಂದರು.