ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ಗುಲಾಬಿ ಮಾರ್ಗವನ್ನು (Bengaluru Metro Pink Line) ಶುಕ್ರವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಇನ್ನು ಈ ಮಾರ್ಗದಲ್ಲಿ ನಾಳೆಯಿಂದಲೇ (ನ.14) ವಾಣಿಜ್ಯ ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿ 8 ನಿಮಿಷಕ್ಕೊಂದು ರೈಲು ಕಾರ್ಯಾಚರಣೆ ನಡೆಸಲಿದೆ.
ಗುಲಾಬಿ ಮಾರ್ಗದ ಉದ್ಘಾಟನೆಯೊಂದಿಗೆ ಬೆಂಗಳೂರಿನ ಜೀವನಾಡಿ 'ನಮ್ಮ ಮೆಟ್ರೋ' ಇದೀಗ 103.6 ಕಿ.ಮೀ ಉದ್ದದ ಸಂಪರ್ಕ ಜಾಲದೊಂದಿಗೆ ಶತಕದ ಗಡಿ ದಾಟಿದೆ. ಈ ಮೂಲಕ 100 ಕಿ.ಮೀ.ಗೂ ಅಧಿಕ ಮೆಟ್ರೋ ಜಾಲ ಹೊಂದಿರುವ ದೇಶದ ಮೂರನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.
ನೂತನ ಗುಲಾಬಿ ಮಾರ್ಗದ 6 ನಿಲ್ದಾಣಗಳು ಎಲ್ಲೆಲ್ಲಿ?
- ಕಾಳೇನ ಅಗ್ರಹಾರ
- ಹುಳಿಮಾವು
- ಬಿಳೇಕಹಳ್ಳಿ ಐಐಎಂಬಿ
- ಎನ್.ಎಸ್ ಪಾಳ್ಯ - ಜೆ.ಪಿ. ನಗರ 4ನೇ ಹಂತ
- ಜಯದೇವ ಆಸ್ಪತ್ರೆ ( ಹಳದಿ ಮಾರ್ಗದೊಂದಿಗೆ ಇಂಟರ್ಚೇಂಜ್ ಸೌಲಭ್ಯ)
- ಎಸ್.ಜಿ. ಪಾಳ್ಯ (ಸುದ್ದಗುಂಟೆಪಾಳ್ಯ)
ವೇಳಾಪಟ್ಟಿ ಇಲ್ಲಿದೆ
ಇನ್ನು ನವೆಂಬರ್ 14 ರಿಂದಲೇ ಪಿಂಕ್ಲೈನ್ ಮೆಟ್ರೋ ಸಂಚಾರ ಆರಂಭವಾಗಲಿದ್ದು, ಮೊದಲ ರೈಲು ಬೆಳಗ್ಗೆ 6 ಗಂಟೆಗೆ, ಕೊನೆಯ ರೈಲು ರಾತ್ರಿ 11ಕ್ಕೆ ಸಂಚಾರ ಮಾಡಲಿವೆ. ಹೊಸ ಮಾರ್ಗದಲ್ಲಿ ಪ್ರತಿ 8 ನಿಮಿಷಕ್ಕೊಂದು ರೈಲು ಓಡಾಟ ನಡೆಸಲಿವೆ.
7.5 ಕಿ.ಮೀ. ಉದ್ದದ ನಮ್ಮ ಮೆಟ್ರೋ ಪಿಂಕ್ ಲೈನ್ಗೆ ಪ್ರಧಾನಿ ಮೋದಿ ಚಾಲನೆ
ಗುಲಾಬಿ ಮಾರ್ಗ ಎಲ್ಲಿ೦ದ ಎಲ್ಲಿಗೆ?
ಗುಲಾಬಿ ಮಾರ್ಗದ ಒಟ್ಟು ಉದ್ದ 21.25 ಕಿ.ಮೀ. ಇದ್ದು, ಒಟ್ಟು 18 ನಿಲ್ದಾಣಗಳು ಇರಲಿವೆ. ಸದ್ಯ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ಎಸ್. ಜಿ. ಪಾಳ್ಯದವರೆಗೆ 7.5 ಕಿ.ಮೀ ಉದ್ದದ ಮಾರ್ಗ ಉದ್ಘಾಟನೆಯಾಗಿದೆ.
ಎರಡನೇ ಹಂತದಲ್ಲಿ ಡೈರಿ ಸರ್ಕಲ್ನಿಂದ ನಾಗವಾರದವರೆಗೆ 13.76 ಕಿ.ಮೀ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. 2027ರ ವೇಳೆಗೆ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.