7.5 ಕಿ.ಮೀ. ಉದ್ದದ ನಮ್ಮ ಮೆಟ್ರೋ ಪಿಂಕ್ ಲೈನ್ಗೆ ಪ್ರಧಾನಿ ಮೋದಿ ಚಾಲನೆ
Metro Pink Line: ಬಹುನಿರೀಕ್ಷಿತ ನಮ್ಮ ಮೆಟ್ರೋ 'ಗುಲಾಬಿ ಮಾರ್ಗ'ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಿದರು. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ (ಸುದ್ದಗುಂಟೆ ಪಾಳ್ಯ) 7.5 ಕಿಲೋಮೀಟರ್ ಉದ್ದದ ಮಾರ್ಗವು ಸಾರ್ವಜನಿಕರ ಸೇವೆಗೆ ಮುಕ್ತಗೊಂಡಿದೆ.
ಮೆಟ್ರೋ ಗುಲಾಬಿ ಮಾರ್ಗಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ -
ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ 'ಗುಲಾಬಿ ಮಾರ್ಗ'ಕ್ಕೆ (Pink Line) ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರು ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಿದರು. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ (ಸುದ್ದಗುಂಟೆ ಪಾಳ್ಯ) 7.5 ಕಿಲೋಮೀಟರ್ ಉದ್ದದ ಮಾರ್ಗವು ಸಾರ್ವಜನಿಕರ ಸೇವೆಗೆ ಮುಕ್ತಗೊಂಡಿದೆ. ಸುದ್ದಗುಂಟೆ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಹಸಿರು ನಿಶಾನೆ ತೋರುವ ಮೂಲಕ 6 ಬೋಗಿಗಳ ಮೆಟ್ರೋ ರೈಲಿಗೆ ಚಾಲನೆ ನೀಡಿದರು.
ಬಳಿಕ ಸ್ವತಃ ಟಿಕೆಟ್ ಖರೀದಿಸಿದ ಪ್ರಧಾನಿಯವರು, ತಾವರೆಕೆರೆಯಿಂದ ಬಿಳೇಕಹಳ್ಳಿಯ ಐಐಎಂಬಿ ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಪ್ರಧಾನಿಯವರ ಮೆಟ್ರೋ ಪ್ರಯಾಣದ ವೇಳೆ ರಾಜ್ಯಪಾಲರಾದ ಡಾ. ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಕೃಷ್ಣ ಬೈರೇಗೌಡ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಜೊತೆಗಿದ್ದು, ವಿವಿಧ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಿದರು.
ಸುಮಾರು 3,470 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಹೊಸ ಮಾರ್ಗದ ಸೇರ್ಪಡೆಯೊಂದಿಗೆ ಬೆಂಗಳೂರಿನ ಒಟ್ಟು ಮೆಟ್ರೋ ಜಾಲದ ಉದ್ದ 103.6 ಕಿಲೋಮೀಟರ್ಗೆ ತಲುಪಿದೆ. ಇದರಿಂದ ದಕ್ಷಿಣ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಭಾಗದ ಸಾವಿರಾರು ಪ್ರಯಾಣಿಕರಿಗೆ ಹಾಗೂ ಐಟಿ ಉದ್ಯೋಗಿಗಳಿಗೆ ಸಂಚಾರ ದಟ್ಟಣೆಯಿಂದ ದೊಡ್ಡ ಮಟ್ಟದ ಮುಕ್ತಿ ಸಿಗಲಿದೆ.
ಪ್ರಶಾಂತಿ ಕುಟೀರ ಕಾರ್ಯಕ್ರಮ; ಯೋಗದ ಕುರಿತು ಮಾತನಾಡುತ್ತಾ, ಡಾ. ರಾಜ್ಕುಮಾರ್ ಸ್ಮರಿಸಿದ ಮೋದಿ
ಮೆಟ್ರೋ ಉದ್ಘಾಟನೆಯ ಜೊತೆಗೆ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ 15,600 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಬಹುನಿರೀಕ್ಷಿತ ಯಶವಂತಪುರ-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹಾಗೂ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣಗಳ ಲೋಕಾರ್ಪಣೆಯೂ ಸೇರಿದೆ.