ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste Census: ಜಾತಿ ಸಮೀಕ್ಷೆ ವೇಳೆ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರ ಬಿಡುಗಡೆ

compensation to Teachers: ಜಾತಿ ಸಮೀಕ್ಷೆ ಕಾರ್ಯದ ವೇಳೆ ಮೃತಪಟ್ಟಿದ್ದ ಬಾಗಲಕೋಟೆ ತಾಲೂಕಿನ ರಾಂಪೂರ ಸರ್ಕಾರಿ ಆಶ್ರಯ ಕಾಲೋನಿ ಶಾಲೆ ಸಹ ಶಿಕ್ಷಕಿ ದಾನಮ್ಮ ಐ ನಂದರಗಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ದಿಗುವಕೋಟೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ವೈ.ವಿ ರಾಮಕೃಷ್ಣಪ್ಪ ಅವರ ಕುಟುಂಬಗಳಿಗೆ ತಲಾ 20 ಪರಿಹಾರವನ್ನು ಸರ್ಕಾರ ಘೋಷಿಸಿದೆ.

ಸಹ ಶಿಕ್ಷಕಿ ದಾನಮ್ಮ ಐ ನಂದರಗಿ ಮತ್ತು ಸಹ ಶಿಕ್ಷಕ ವೈ.ವಿ ರಾಮಕೃಷ್ಣಪ್ಪ

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Caste Census) ಕಾರ್ಯದ ಕರ್ತವ್ಯದ ವೇಳೆಯಲ್ಲಿ ಮರಣ ಹೊಂದಿದ್ದ ಇಬ್ಬರು ಸರ್ಕಾರಿ ನೌಕರರ ಅವಲಂಬಿತ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಧನ ಬಿಡುಗಡೆ ಮಾಡಿದೆ. ಸೆ.22ರಿಂದ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಶಿಕ್ಷಕರ ಸೇವೆಯನ್ನು ಬಳಸಿಕೊಂಡು ನಡೆಸಲಾಗುತ್ತಿದೆ. ಆದರೆ, ಸಮೀಕ್ಷೆ ಕಾರ್ಯದ ವೇಳೆ ಮೃತಪಟ್ಟಿದ್ದ ಇಬ್ಬರು ಶಿಕ್ಷಕರ ಕುಟುಂಬಗಳಿಗೆ ಇದೀಗ ತಲಾ 20 ಲಕ್ಷ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಿದೆ.

ಬಾಗಲಕೋಟೆ ತಾಲೂಕಿನ ರಾಂಪೂರ ಸರ್ಕಾರಿ ಆಶ್ರಯ ಕಾಲೋನಿ ಶಾಲೆ ಸಹ ಶಿಕ್ಷಕಿ ದಾನಮ್ಮ ಐ ನಂದರಗಿ ಅವರು ಸಮೀಕ್ಷಾ ಕಾರ್ಯ ಮುಗಿಸಿಕೊಂಡು ಕರ್ತವ್ಯದಿಂದ ಹಿಂದಿರುಗುವಾಗ ಅ.3ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅದೇ ರೀತಿ ಸಮೀಕ್ಷೆ ಕಾರ್ಯದ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ದಿಗುವಕೋಟೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ವೈ.ವಿ ರಾಮಕೃಷ್ಣಪ್ಪ ಅವರು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸೆ.28ರಂದು ಮೃತಪಟ್ಟಿದ್ದರು.

ಈ ಸುದ್ದಿಯನ್ನೂ ಓದಿ | Caste Census: ಜಾತಿ ಗಣತಿ ಮಾಡುತ್ತಿದ್ದಾಗಲೇ ಶಿಕ್ಷಕಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಮೃತ ನೌಕರರ ಅವಲಂಬಿತ ಕುಟುಂಬಕ್ಕೆ ಪರಿಹಾರ ಧನ ಮಂಜೂರು ಮಾಡಲು ಜಿಲ್ಲಾಧಿಕಾರಿಗಳು ಕೋರಿದ್ದರು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕರ್ತವ್ಯದ ವೇಳೆಯಲ್ಲಿ ಮೃತರಾದ ಸರ್ಕಾರಿ ನೌಕರರಿಗೆ ತಲಾ 20 ರೂ. ಲಕ್ಷ ಪರಿಹಾರ ಧನ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಸಮೀಕ್ಷಾ ಕರ್ತವ್ಯದ ವೇಳೆಯಲ್ಲಿ ಮೃತರಾದ ಇಬ್ಬರು ಸರ್ಕಾರಿ ನೌಕರರ ಅವಲಂಬಿತ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಪರಿಹಾರ ಧನ ನೀಡಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಒಟ್ಟು ರೂ.40 ಲಕ್ಷಗಳನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.