CJ Roy Death: ಐಟಿ ದಾಳಿಗೆ ಹೆದರಿ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ
Bengaluru News: ಬೆಂಗಳೂರಿನ ಉದ್ಯಮಿ ಸಿ.ಜೆ.ರಾಯ್ ಅವರ ನಿವಾಸದ ಮೇಲೆ ಗುರುವಾರ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದರ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಐಟಿ ದಾಳಿಯಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಉದ್ಯಮಿ ಸಿ.ಜೆ.ರಾಯ್ -
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್, ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ (CJ Roy suicide) ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಟಿ ದಾಳಿಗೆ ಹೆದರಿ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಬಂಗಲೆಯಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಸಿ.ಜೆ ರಾಯ್ ಸಾವಿಗೆ ಶರಣಾಗಿದ್ದಾರೆ.
ಇಂದು ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದರ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಗರದಲ್ಲಿ ಇವರ ಹೆಸರಿನಲ್ಲಿ ಹಲವು ದೊಡ್ಡ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಇದ್ದವು. ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೃತರಿಗೆ ಪತ್ನಿ ಲಿನಿ ರಾಯ್, ರೋಹಿತ್ ಮತ್ತು ರಿಯಾ ಎಂಬ ಇಬ್ಬರು ಮಕ್ಕಳು ಇದ್ದರು. ಮಗ ರೋಹಿತ್, ಕಾನ್ಸಿಡೆಂಟ್ ಗ್ರೂಪ್‌ನ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವಿನ್ಯಾಸ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ.
ಐಟಿ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ್ರಾ?
ಈ ಹಿಂದೆ ಹಲವು ಬಾರಿ ಆದಾಯ ತೆರಿಗೆ ಇಲಾಖೆಯಿಂದ ಕಾನ್ಫಿಡೆಂಟ್ ಗ್ರೂಪ್‌ನ ಕಚೇರಿಗಳು ಮತ್ತು ಸಿ.ಜೆ ರಾಯ್ ಅವರ ನಿವಾಸದ ಮೇಲೆ ದಾಳಿ ನಡೆದಿತ್ತು. ಪದೇಪದೆ ಐಡಿ ದಾಳಿಯಿಂದ ಖಿನ್ನತೆಗೊಳಗಾಗಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ಕೂಡ ಐಟಿ ದಾಳಿ ವೇಳೆ ಸುಮಾರು ಒಂದು ಗಂಟೆ ಕಾಲ ಉದ್ಯಮಿ ವಿಚಾರಣೆ ಎದುರಿಸಿದ್ದರು. ಮತ್ತಷ್ಟು ದಾಖಲೆ ತರಲು ರೂಮ್‌ಗೆ ತೆರಳಿದ್ದ ವೇಳೆ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಿ.ಜೆ. ರಾಯ್ ಯಾರು?
ಕಾನ್ಫಿಡೆಂಟ್ ಗ್ರೂಪ್‌ನ (Confident Group) ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಸಿ.ಜೆ. ರಾಯ್ (Dr. C.J. Roy) ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ, ಬಿಲ್ಡರ್ ಮತ್ತು ಮಲಯಾಳಂ ಚಲನಚಿತ್ರ ನಿರ್ಮಾಪಕರು. ಕೇರಳದ ಕೊಚ್ಚಿ ಮೂಲದವರಾದ ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು. ರಿಯಲ್ ಎಸ್ಟೇಟ್, ಶಿಕ್ಷಣ, ಆತಿಥ್ಯ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ವ್ಯಾಪಕ ವ್ಯವಹಾರ ಹೊಂದಿದ್ದರು.
ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಶಿಕ್ಷಣ ಪೂರೈಸಿದ್ದ ಇವರು, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ವೃತ್ತಿ ಜೀವನ ಆರಂಭಿಸಿ, ನಂತರ ಭಾರತದಲ್ಲಿ ಕಾನ್ಫಿಡೆಂಟ್ ಗ್ರೂಪ್ ಮೂಲಕ ದಕ್ಷಿಣ ಭಾರತದಾದ್ಯಂತ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ವಿಸ್ತರಿಸಿದರು. ಇವರು ಚಲನಚಿತ್ರ ನಿರ್ಮಾಪರೂ ಆಗಿದ್ದು, ಮಲಯಾಳಂನ ಮೋಹನ್‌ಲಾಲ್ ಅಭಿನಯದ ಸೂಪರ್‌ಹಿಟ್ 'ಕ್ಯಾಸನೋವಾ' (Casanova - 2012) ಚಿತ್ರ ನಿರ್ಮಾಣ ಮಾಡಿದ್ದರು. ಮಲಯಾಳಂ ಮತ್ತು ಕನ್ನಡದಲ್ಲಿ 11 ಚಿತ್ರಗಳನ್ನು ನಿರ್ಮಿಸಿದ್ದಾರೆ. 'ಮರಕ್ಕಾರ್' ಎಂಬ ಅತಿ ದೊಡ್ಡ ಬಜೆಟ್‌ನ ಮಲಯಾಳಂ ಚಿತ್ರವನ್ನು ಸಹ ನಿರ್ಮಿಸಿದ್ದಾರೆ.
2006 ರಲ್ಲಿ 'ಐಡಿಯಾ ಸ್ಟಾರ್ ಸಿಂಗರ್' ಎಂಬ ಜನಪ್ರಿಯ ಟಿವಿ ಕಾರ್ಯಕ್ರಮಕ್ಕೆ ಹಣಕಾಸು ಒದಗಿಸುವ ಮೂಲಕ ಕಾನ್ಫಿಡೆಂಟ್ ಗ್ರೂಪ್ ಅನ್ನು ಪ್ರಚಾರ ಮಾಡುವ ಅವರ ಆಲೋಚನೆ ಯಶಸ್ವಿಯಾಗಿತ್ತು. ಕಾನ್ಫಿಡೆಂಟ್ ಗ್ರೂಪ್ ಬಿಗ್ ಬಾಸ್ ಕನ್ನಡ, ಮಲಯಾಳಂನಂತಹ ರಿಯಾಲಿಟಿ ಶೋಗಳಿಗೆ ಪ್ರಾಯೋಜಕತ್ವ ವಹಿಸಿತ್ತು.