ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ 4 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್; ಬಂಧನದ ವೇಳೆ ಹೈಡ್ರಾಮಾ, Video Viral

ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಹಣ ಹೂಡಿಕೆಗೆ ಸಂಬಂಧಿಸಿ ವಂಚನೆ ಪ್ರಕರಣದಲ್ಲಿ ಆರೋಪಿಗಳನ್ನು ಬಿಡಿಸಲು 5 ಲಕ್ಷ ನೀಡುವಂತೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಬೇಡಿಕೆ ಇಟ್ಟಿದ್ದರು. ಒಂದು ಲಕ್ಷ ಮೊದಲೇ ಪಡೆದಿದ್ದ ಪೊಲೀಸ್‌ ಅಧಿಕಾರಿ, ಉಳಿದ 4 ಲಕ್ಷ ಲಂಚ ಸ್ವೀಕರಿಸುವಾಗ ವಶಕ್ಕೆ ಪಡೆಯಲಾಗಿದೆ.

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್; ಬಂಧನದ ವೇಳೆ ಹೈಡ್ರಾಮಾ!

ಲಂಚ ಪಡೆದ ಇನ್ಸ್‌ಪೆಕ್ಟರ್ ಗೋವಿಂದರಾಜು. -

Prabhakara R
Prabhakara R Jan 30, 2026 5:26 PM

ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಪೊಲೀಸ್‌ ಇನ್ಸ್‌ಪೆಕ್ಟರ್ (Bengaluru Inspector) ಒಬ್ಬರು ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ಘಟನೆ (Lokayukta Raid) ನಗರದ ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ನಡೆದಿದೆ. ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರನ್ನು ಲಂಚ ಸ್ವೀಕಾರದ ವೇಳೆ ವಶಕ್ಕೆ ಪಡೆಯಲಾಗಿದೆ. ಟ್ರ್ಯಾಪ್ ವೇಳೆ ಲೋಕಾಯುಕ್ತ ಪೊಲೀಸರ ವಿರುದ್ಧ ಇನ್ಸ್‌ಪೆಕ್ಟರ್ ಗೋವಿಂದರಾಜು ಕೂಗಾಡಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಏನಿದು ಪ್ರಕರಣ?

ಹಣ ಹೂಡಿಕೆಗೆ ಸಂಬಂಧಿಸಿ ವಂಚನೆಗೊಳಗಾದ ಬಗ್ಗೆ ಧನರಾಜ್ ಎಂಬುವವರು ಕೆ.ಪಿ.ಅಗ್ರಹಾರ ಠಾಣೆಗೆ ದೂರು ನೀಡಿದ್ದರು. ಹಣ ಹೂಡಿಕೆ ಮಾಡಿದರೆ ಲಾಭ ಬರುತ್ತದೆ ಎಂದು ನಂಬಿಸಿ ಸೂರಜ್, ಸುಜನ್ ಮತ್ತು ಶ್ರೀನಿವಾಸ್ ಎಂಬುವವರು ಧನರಾಜ್‌ ಅವರಿಂದ 19 ಲಕ್ಷ ರೂ. ಪಡೆದು ವಂಚಿಸಿದ್ದರು. ಹಣ ವಾಪಸ್ ಕೇಳಿದಾಗ ಆರೋಪಿಗಳು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ ಜನವರಿ 22 ರಂದು ಕೆ.ಪಿ. ಅಗ್ರಹಾರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಬಂಧನದ ವೇಳೆ ಇನ್ಸ್‌ಪೆಕ್ಟರ್‌ ಕೂಗಾಡಿದ ವಿಡಿಯೊ



ಇನ್ಸ್‌ಪೆಕ್ಟರ್ ವಿರುದ್ಧದ ಆರೋಪ ಏನು?

ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಸೂರಜ್ ಮತ್ತು ಸುಜನ್ ಮನೆಗೆ ಇನ್ಸ್‌ಪೆಕ್ಟರ್ ಗೋವಿಂದರಾಜು ನೇತೃತ್ವದ ತಂಡ ತೆರಳಿತ್ತು. ಈ ವೇಳೆ ಪೊಲೀಸರು ಮತ್ತು ಆರೋಪಿಗಳ ನಡುವೆ ಗಲಾಟೆ ನಡೆದಿತ್ತು. ಬಳಿಕ ಠಾಣೆಯಲ್ಲಿ ಪ್ರಕರಣವನ್ನು ಡೀಲ್ ಮಾಡಲು ಮುಂದಾದ ಇನ್ಸ್‌ಪೆಕ್ಟರ್ ಗೋವಿಂದರಾಜು, ಕೇಸ್‌ನಿಂದ ಬಿಡಿಸಲು ಮತ್ತು ಬಂಧಿಸದಿರಲು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಲಂಚಕ್ಕೆ ಬೇಡಿಕೆ ಬಗ್ಗೆ ಆರೋಪಿಗಳ ಕಡೆಯವರಾದ ಮೊಹಮ್ಮದ್ ಅಕ್ಬರ್ ಎಂಬುವವರು ನೀಡಿದ ದೂರಿನನ್ವಯ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ಟ್ರ್ಯಾಪ್ ಪ್ಲಾನ್ ಮಾಡಲಾಗಿತ್ತು. ಇನ್ಸ್‌ಪೆಕ್ಟರ್ ಗೋವಿಂದರಾಜು ಈಗಾಗಲೇ 1 ಲಕ್ಷ ರೂಪಾಯಿ ಲಂಚ ಪಡೆದಿದ್ದರು. ಉಳಿದ 4 ಲಕ್ಷ ರೂಪಾಯಿ ಪಡೆಯಲು ಚಾಮರಾಜಪೇಟೆಯ ಸಿಎಆರ್ ಮೈದಾನಕ್ಕೆ ಬಂದಿದ್ದರು. ಹಣ ಸ್ವೀಕರಿಸುತ್ತಿದ್ದಂತೆಯೇ ಲೋಕಾಯುಕ್ತ ಪೊಲೀಸರು ಸುತ್ತುವರಿದು, ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಪೊಲೀಸರು ತನ್ನನ್ನು ಹಿಡಿಯುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಗೋವಿಂದರಾಜು ಕೂಗಾಡಲು ಶುರು ಮಾಡಿದ್ದಾರೆ. "ನನ್ನನ್ನು ಬಿಡಿ, ನಾನು ನಿಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲ" ಎಂದು ಜೋರಾಗಿ ಕಿರುಚುತ್ತಾ ಹೈಡ್ರಾಮಾ ಸೃಷ್ಟಿಸಿದ್ದಾರೆ. ಆದರೆ ಲೋಕಾಯುಕ್ತ ಪೊಲೀಸರು ಇನ್ಸ್‌ಪೆಕ್ಟರ್ ಅನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್‌ ದೇವರಾಜು ಪ್ರತಿಕ್ರಿಯಿಸಿ, "ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್ ಅಡಿ ನಾವು ಟ್ರ್ಯಾಪ್ ಮಾಡಿದ್ದೇವೆ. ಕೆ.ಪಿ. ಅಗ್ರಹಾರ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು 5 ಲಕ್ಷ ಹಣ ಡಿಮ್ಯಾಂಡ್ ಮಾಡಿದ್ದರು. ಉಳಿದ 4 ಲಕ್ಷ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಇನ್ನು ಕೆಲವು ಅಧಿಕಾರಿಗಳ ಭಾಗಿಯಾಗಿರುವ ಸಾಧ್ಯತೆಯಿದ್ದು, ತನಿಖೆ ನಡೆಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

ವಿಜಯನಗರದಲ್ಲಿ ಶಾಕಿಂಗ್‌ ಘಟನೆ; ತಂದೆ, ತಾಯಿ, ತಂಗಿಯನ್ನು ಭೀಕರವಾಗಿ ಕೊಲೆಗೈದ ಯುವಕ

ಮತ್ತೊಂದೆಡೆ, ಆರೋಪಿಗಳು ತಾವು ಈಗಾಗಲೇ ಹಣವನ್ನು ವಾಪಸ್ ಕೊಟ್ಟಿದ್ದೇವೆ ಮತ್ತು ಇದು ಸಿವಿಲ್ ಪ್ರಕರಣವಾಗಿದ್ದರೂ ಬರ್ಡ್ಸ್ ಆ್ಯಕ್ಟ್ ಹಾಕಲಾಗಿದೆ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.