ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್‌ ಪ್ರತಿಭಟನೆ; ಅನ್ನ ನೀಡುವ ರೈತ ಜಮೀನು ಇಟ್ಟುಕೊಳ್ಳಬಾರದೇ?: ವಿಜಯೇಂದ್ರ ಪ್ರಶ್ನೆ

BY Vijayendra: ಮುಖ್ಯಮಂತ್ರಿ ಆಗಬೇಕು ಎಂಬ ಡಿ.ಕೆ. ಶಿವಕುಮಾರ್ ಅವರ ದಶಕಗಳ ಕನಸು ಈಡೇರಿದೆ. ಆದರೆ ದುರಾಸೆ ಬಂದರೆ ಯಾವುದೂ ಸಾಕಾಗೋದಿಲ್ಲ ಎಂಬುದು ಸಾಬೀತಾಗಿದೆ. ಸಿಎಂ ಆದ ತಕ್ಷಣ ನಿಮ್ಮ ಆದ್ಯತೆ ಉತ್ತರ ಕರ್ನಾಟಕದ ಅಭಿವೃದ್ಧಿ ಆಗಿರಲಿಲ್ಲ. ಅವರ ಸಂಕಷ್ಟಕ್ಕೆ ಮಿಡಿಯಲಿಲ್ಲ. ಬದಲು ಬಿಡದಿ ಟೌನ್‍ಶಿಪ್, ಕನಕಪುರದಲ್ಲಿ ವಿಮಾನ ನಿಲ್ದಾಣ ಮಾಡಲು ಮುಂದಾದ್ರಿ. ಇದರಲ್ಲಿ ರಿಯಲ್ ಎಸ್ಟೇಟ್ ಬಿಟ್ಟರೆ ಬೇರೆ ಹಿತಾಸಕ್ತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು.

ಬೆಂಗಳೂರು, ಜು.17: ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು ಬೇಕಾದರೆ ಸಾವಿರಾರು ಎಕರೆ ಜಮೀನು ಇಟ್ಟುಕೊಳ್ಳಬಹುದು. ಆದರೆ ದೇಶಕ್ಕೆ ಅನ್ನ ನೀಡುವ ರೈತ ತುತ್ತಿಗಾಗಿ ನಾಲ್ಕೈದು ಎಕರೆ ಜಮೀನು ಇಟ್ಟುಕೊಳ್ಳಬಾರದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಪ್ರಶ್ನಿಸಿದ್ದಾರೆ. ಬಿಡದಿ ಟೌನ್‌ಶಿಪ್ (Bidadi Township) ನಿರ್ಮಾಣಕ್ಕಾಗಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ವಿರೋಧಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಲವಂತವಾಗಿ ಬಿಡದಿಯಲ್ಲಿ ಫಲವತ್ತಾದ ರೈತರ ಜಮೀನು ಕಸಿದುಕೊಳ್ಳಲು ಮುಂದಾಗಿದೆ. ಗೂಂಡಾಗಿರಿ ಮಾಡ್ತಾ ಡಿ.ಕೆ. ಶಿವಕುಮಾರ್ ಅವರು, ತಮ್ಮ ಚಪಲ ತೀರಿಸಿಕೊಳ್ಳಲು ಸ್ಯಾಟಲೈಟ್ ಟೌನ್ ಮಾಡಲು ಹೋಗಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರಣಕಹಳೆ ಊದಿದೆ

ರಾಜ್ಯದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಣಕಹಳೆ ಊದಿದೆ. ರೈತರ ಪರವಾಗಿ ಆಲೋಚನೆ ಮಾಡದೆ ರಿಯಲ್ ಎಸ್ಟೇಟ್ ಬಗ್ಗೆಯೇ ಆಲೋಚನೆ ಮಾಡುವ ಸಿಎಂ, ಅಧಿಕಾರದ ಚುಕ್ಕಾಣಿ ಹಿಡಿದರೆ ಇದೇ ಆಗೋದು ಎಂದು ಟೀಕಿಸಿದ ಅವರು, ರೈತರ ಜಮೀನನ್ನು ಬಲವಂತವಾಗಿ ಕಸಿದುಕೊಳ್ಳುವುದಿಲ್ಲ ಎಂದು ಹೇಳುವ ಸಿಎಂ, ಮತ್ತೊಂದು ಕಡೆ ರಾತ್ರೋರಾತ್ರಿ ರೈತರ ಮನೆಗಳಿಗೆ ಗೂಂಡಾಗಳನ್ನು ಕಳುಹಿಸಿ ರೈತ ಕುಟುಂಬಗಳಿಗೆ ಬೆದರಿಕೆ ಹಾಕ್ತಾ ಇದ್ದಾರೆ. ಜಮೀನು ನೀಡದಿದ್ದರೆ ಉಳಿಗಾಲ ಇಲ್ಲ ಎಂದು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.

ದುರಾಸೆ ಬಂದರೆ ಯಾವುದೂ ಸಾಕಾಗೋದಿಲ್ಲ

ಮುಖ್ಯಮಂತ್ರಿ ಆಗಬೇಕು ಎಂಬ ಡಿ.ಕೆ. ಶಿವಕುಮಾರ್ ಅವರ ದಶಕಗಳ ಕನಸು ಈಡೇರಿದೆ. ಆದರೆ ದುರಾಸೆ ಬಂದರೆ ಯಾವುದೂ ಸಾಕಾಗೋದಿಲ್ಲ ಎಂಬುದು ಸಾಬೀತಾಗಿದೆ. ಸಿಎಂ ಆದ ತಕ್ಷಣ ನಿಮ್ಮ ಆದ್ಯತೆ ಉತ್ತರ ಕರ್ನಾಟಕದ ಅಭಿವೃದ್ಧಿ ಆಗಿರಲಿಲ್ಲ. ಅವರ ಸಂಕಷ್ಟಕ್ಕೆ ಮಿಡಿಯಲಿಲ್ಲ. ಬದಲು ಬಿಡದಿ ಟೌನ್‍ಶಿಪ್, ಕನಕಪುರದಲ್ಲಿ ವಿಮಾನ ನಿಲ್ದಾಣ ಮಾಡಲು ಮುಂದಾದ್ರಿ. ಇದರಲ್ಲಿ ರಿಯಲ್ ಎಸ್ಟೇಟ್ ಬಿಟ್ಟರೆ ಬೇರೆ ಹಿತಾಸಕ್ತಿ ಇಲ್ಲ ಎಂದು ಕಿಡಿಕಾರಿದರು.

B.Y. Vijayendra

ಡಿಕೆಶಿ ನುಡಿದಂತೆ ನಡೆಯುವವರು. ಸಿದ್ದರಾಮಯ್ಯ ಅವರನ್ನು ಇಳಿಸಿ ನನ್ನನ್ನು ಸಿಎಂ ಮಾಡಿದರೆ ಬಿಡದಿ ಟೌನ್‍ಶಿಪ್ ಮಾಡಲು ಡಿಎಲ್‍ಎಫ್‍ಗೆ ಅವಕಾಶ ಮಾಡಿಕೊಡ್ತೇನೆ ಎಂದು ಪ್ರಿಯಾಂಕಾ ಗಾಂಧಿ ಅವರಿಗೆ ಭರವಸೆ ನೀಡಿದ್ದಾರೆ. ಅದರ ಈಡೇರಿಕೆಗೆ ಹೊರಟಿದ್ದಾರೆ ಎಂದರು. ಕೋಟ್ಯಧಿಪತಿಗಳ ತಾಳಕ್ಕೆ ಕುಣಿಯಲು, ಹೈಕಮಾಂಡ್ ಹೊಟ್ಟೆ ತುಂಬಿಸಲು ಬಿಡದಿ ಭಾಗದ ರೈತರ ಹೊಟ್ಟೆ ಮೇಲೆ ಹೊಡೆಯಲು ಸಿಎಂ ಮುಂದಾಗಿದ್ದಾರೆ. ರೈತನ ಕೋಪಕ್ಕೆ ತುತ್ತಾದ ಯಾವುದೇ ಸರ್ಕಾರ ಉಳಿದಿಲ್ಲ. ಅಧಿಕಾರದ ಮದ ಹಾಗೂ ದರ್ಪ ಇದನ್ನೆಲ್ಲ ಮಾಡಿಸುತ್ತಿದೆ. ಪ್ರತಿಭಟನೆ ಮಾಡುವ ರೈತರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕ್ತಾ ಇದ್ದಾರೆ ಎಂದು ಅವರು ಆರೋಪಿಸಿದರು.

Protest

ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ

ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ರೈತರ ಶಾಪ ಸರ್ಕಾರವನ್ನು ಕಿತ್ತು ಹಾಕಲಿದೆ. ರೈತರು ಬೀದಿಗಿಳಿದು ಸರ್ಕಾರ ಕಿತ್ತೊಗೆಯಲಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಸಚಿವರು ಯಾರು?

ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ದಿನವಾದರೂ ಕೃಷಿ ಸಚಿವರು ಯಾರು ಎಂದು ಪತ್ತೆ ಇಲ್ಲ. ಅವರ ನೇಮಕ ಆಗಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಲ್ಲಾ ಖಾತೆ ಬದಿಗಿಟ್ಟು ರಿಯಲ್ ಎಸ್ಟೇಟ್ ಖಾತೆ ಸಚಿವರು ಎಂದು ಹೇಳಿಕೊಳ್ಳಲಿ. ಆಗ ನೀವು ನ್ಯಾಯ ಕೊಡಬಹುದು. ಲಜ್ಜೆಗೆಟ್ಟ ರಾಜ್ಯದ ಮುಖ್ಯಮಂತ್ರಿಗಳು ರೈತರನ್ನು ರಕ್ಷಿಸುವ ಬದಲು ರಿಯಲ್ ಎಸ್ಟೇಟ್ ಮಾಫಿಯಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

BJP Karnataka

ಎಲ್ಲಿದ್ದಾರೆ ರಾಹುಲ್ ಗಾಂಧಿ?

ರೈತರ ಹಿತ ರಕ್ಷಿಸುತ್ತೇನೆ ಎಂದು ಹೇಳಿಕೊಂಡು ಭಾರತ್ ಜೋಡೊ ಯಾತ್ರೆ ಮಾಡಿದ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ. ರಾಹುಲ್ ಗಾಂಧಿ ಅವರ ಪರಮಾಪ್ತ ಡಿ.ಕೆ. ಶಿವಕುಮಾರ್ ಅವರ ಸರ್ಕಾರವೇ ಇಲ್ಲಿದೆ. ರೈತರ ಬದುಕಿಗೆ ಬೆಂಕಿ ಇಡುವ ಬದಲು ಅವರನ್ನು ಉಳಿಸುವ ಮಹತ್ವದ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಟೌನ್‍ಶಿಪ್‍ನಿಂದ ಸರ್ಕಾರ ಹಿಂದೆ ಸರಿಯಲಿ

ಬಿಡದಿ ಟೌನ್ ಶಿಪ್‍ನಿಂದ ಸರ್ಕಾರ ಹಿಂದೆ ಸರಿಯಲೇ ಬೇಕು. ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಬೇಕು. ಕಾಂಗ್ರೆಸ್ ಹೈಕಮಾಂಡ್ ಸರ್ಕಾರದ ಜತೆ ಕೈ ಜೋಡಿಸುವುದನ್ನು ಬಿಡಲಿ. ರೈತರಿಗೆ ನ್ಯಾಯ ಸಿಗುವವರೆಗೆ ಬಿಜೆಪಿ ವಿರಮಿಸುವುದಿಲ್ಲ. ಸದನದ ಹೊರಗೆ ಮತ್ತು ಒಳಗೆ ಹೋರಾಟ ಮಾಡೇ ಮಾಡ್ತೇವೆ. ಜಯ ಸಿಗುವವರೆಗೆ ಹೋರಾಟ ನಡೆದೇ ನಡೆಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.

ಯಾರೂ ಜೈಲಿಗೆ ಕಳಿಸಲು ನೋಡುತ್ತಿಲ್ಲ, ಅನುಕಂಪ ಗಿಟ್ಟಿಸಿಕೊಳ್ಳೋ ಯತ್ನ: ಸಿಎಂ ಡಿಕೆಶಿ ಹೇಳಿಕೆಗೆ ಜೋಶಿ ತಿರುಗೇಟು

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೋರ್ ಕಮಿಟಿ ಸದಸ್ಯರು, ಕೇಂದ್ರ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಕೇಂದ್ರದ ಮಾಜಿ ಸಚಿವರು, ಮಾಜಿ ಸಂಸದರು, ರಾಜ್ಯದ ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.