ಡಿಕೆ ಆಪ್ತರ ಪ್ರಕಾರ 15 ಶಾಸಕರ ಅಡ್ಡಮತದ ನಿರೀಕ್ಷೆ, ನಾಲ್ವರು ಅಡ್ಡಮತ ಹಾಕಿಲ್ಲವೆಂಬ ಬೇಸರ
ಮುಂದಿನ ಚುನಾವಣಾ ಸಮಯದಲ್ಲಿ ದೋಸ್ತಿ ಶಾಸಕರು ಕಾಂಗ್ರೆಸ್ ಸೇರುವುದು ಬಹುತೇಕ ನಿಶ್ಚಿತ
ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನಕ್ಕೆ ಮೈತ್ರಿಪಕ್ಷ ಬಿಜೆಪಿ- ಜೆಡಿಎಸ್ ನಾಯಕರು ‘ಕೆಂಡ’ವಾಗಿದ್ದಾರೆ. ಆದರೆ ಐದೂ ಸ್ಥಾನಗಳನ್ನು ಗೆದ್ದ ಬಳಿಕವೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಬೇಸರವಿದೆಯಂತೆ. ಅದಕ್ಕೆ ಕಾರಣ ನಿರೀಕ್ಷೆಗಿಂತ ಕಡಿಮೆ ಅಡ್ಡಮತದಾನವಾಗಿದ್ದು!
ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಐದನೇ ಅಭ್ಯರ್ಥಿ ಹಾಕುವಾಗಲೇ ಅಡ್ಡಮತದಾನದ ಸುಳಿವು ಪ್ರತಿಪಕ್ಷಗಳಿಗೆ ಸಿಕ್ಕಿತ್ತು. ಗೆಲುವು ನಿಶ್ಚಿತವಾಗಿದ್ದರೂ ಕಾಂಗ್ರೆಸ್ ತನ್ನ ಶಾಸಕರನ್ನು ರೆಸಾರ್ಟ್‌ನಲ್ಲಿ ಉಳಿಸಿದ್ದರಿಂದ ಐದನೇ ಅಭ್ಯರ್ಥಿಯ ಗೆಲುವಿಗೆ ಅಗತ್ಯವಿರುವಷ್ಟು ಮಂದಿ ಅಡ್ಡಮತದಾನ ಮಾಡುವುದು ಖಚಿತ ಎನ್ನಲಾಗಿತ್ತು. ಆದರೆ ಫಲಿತಾಂಶದ ವೇಳೆ ನಿರೀಕ್ಷೆಗೂ ಮೀರಿದ್ದು 11 ಮಂದಿ ಅಡ್ಡಮತದಾನ ಮಾಡಿದ್ದು ಬಿಜೆಪಿ-ಜೆಡಿಎಸ್‌ಗೆ ನುಂಗಲಾರದ ತುತ್ತಾಗಿದೆ.
ಈ ನಡುವೆ ಡಿ.ಕೆ.ಶಿವಕುಮಾರ್ ಆಪ್ತವಲಯದ ಪ್ರಕಾರ 15 ಶಾಸಕರು ಅಡ್ಡಮತದಾನ ಮಾಡುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದರು. ಇದಕ್ಕೆ ಪೂರಕವಾಗಿ ಜೆಡಿಎಸ್‌ನ ಹಲವು ಶಾಸಕರ ನಿಯೋಗ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆಯನ್ನು ನಡೆಸಿತ್ತು. ಆದರೆ ಚುನಾವಣೆ ಯ ದಿನ ಕೇವಲ 11 ಮಂದಿ ಅಡ್ಡಮತದಾನ ಮಾಡಿರುವುದರಿಂದ ಇನ್ನುಳಿದ ಆ ನಾಲ್ಕು ಶಾಸಕರೇಕೆ ಮತ ಹಾಕಲಿಲ್ಲ ಎನ್ನುವ ಬೇಸರದಲ್ಲಿ ನಾಯಕರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: MLC Election: ಮತ ಕೊಟ್ಟರೆ ಕಿಸೆಗೆ 50 ಕೋಟಿ, ಕ್ಷೇತ್ರಕ್ಕೆ 100 ಕೋಟಿ ಅನುದಾನದ ಆಮಿಷ: ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ಆರೋಪ
ಕಾಂಗ್ರೆಸ್‌ನತ್ತ ದೋಸ್ತಿ ಶಾಸಕರು?: ಅಡ್ಡಮತದಾನ ಮಾಡಿರುವ ಶಾಸಕರಲ್ಲಿ ಹಲವರು ಚುನಾವಣೆ ವೇಳೆಗೆ ಕಾಂಗ್ರೆಸ್‌ನತ್ತ ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.
ರಾಜಕೀಯ ಮೊಗಸಾಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಕೆಲ ಶಾಸಕರು ಕಾಂಗ್ರೆಸ್‌ಗೆ ಹೋಗುವ ಚರ್ಚೆಗಳು ನಡೆಯುತ್ತಿದೆ. ಆದರೆ ಮೂಲಗಳ ಪ್ರಕಾರ, ಬಿಜೆಪಿಗಿಂತ ಜೆಡಿಎಸ್ ಶಾಸಕರ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ. ಅದರಲ್ಲಿಯೂ ಹಳೇ ಮೈಸೂರು ಭಾಗದ ಶಾಸಕರು ಚುನಾವಣೆ ಆರೇಳು ತಿಂಗಳಿರುವಾಗ ಜಿಗಿಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಹೋಗೋರೆಲ್ಲ ಈಗಲೇ ಹೋಗಿ: ಎಚ್‌ಡಿಕೆ: ಈ ನಡುವೆ ಜೆಡಿಎಸ್'ನಿಂದ ಕೆಲ ಶಾಸಕರು ಹೊರನಡೆಯುವುದು ಮಾತುಗಳು ಕೇಳಿಬರುತ್ತಿರುವುದು ಜೆಡಿಎಸ್ ಪಕ್ಷದ ಆಮೂಲಾಗ್ರ ಬದಲಾವಣೆಗೆ ಎಚ್.ಡಿ.ಕುಮಾರಸ್ವಾಮಿ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಶಾಸಕರು ಹೋದರೆ, ಹೊಸಬರನ್ನು, ಜೆನ್‌ಜೀ ತಲೆಮಾರಿನ ಯುವಕರನ್ನು ಕರೆದುಕೊಂಡು ಬಂದು ಪಕ್ಷವನ್ನು ಮತ್ತೊಮ್ಮೆ ಕಟ್ಟೋಣ. ಆದರೆ ಪಕ್ಷ ಬಿಡುವ ಮನಸ್ಥಿತಿಯಲ್ಲಿರುವವರನ್ನು ಮನವೊಲಿಸಿ, ಉಳಿಸಿಕೊಂಡು ಪುನಃ ಪಕ್ಷಕ್ಕೆ ಸಮಸ್ಯೆಯಾಗದಂತೆ ಮಾಡಿಕೊಳ್ಳುವುದು ಬೇಡ ಎನ್ನುವ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿ ಇದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಕುಮಾರಸ್ವಾಮಿ ಅವರು, ಹೋಗುವವರೆಲ್ಲ ಹೋಗಲಿ ಎನ್ನುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಶಾ ಜೊತೆಗೆ ಮಾತುಕತೆ
ಈ ನಡುವೆ ಬಿಜೆಪಿ ಶಾಸಕರಿಂದ ಆಗಿರುವ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಕುಮಾರ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದು, ಈಗಾಗಲೇ ಈ ವಿಷಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೂ ತಂದಿದ್ದಾರೆ. ಇದರೊಂದಿಗೆ ಬಿಜೆಪಿಗರು ರಚಿಸಿರುವ ಸತ್ಯಶೋಧನಾ ಸಮಿತಿಯ ವರದಿಯ ಬಳಿಕ ಕುಮಾರಸ್ವಾಮಿ ಅವರು ಪ್ರತ್ಯೇಕವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿಯಾಗಿ ರಾಜ್ಯದ ಮೈತ್ರಿ ಪರಿಸ್ಥಿತಿಯ ಬಗ್ಗೆಯೂ ವರದಿ ನೀಡಲಿದ್ದಾರೆ ಎನ್ನಲಾಗಿದೆ.
50 ಕೋಟಿ ರು. ಆಮಿಷ
ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೊಟ್ಟರೆ ನಿಮಗೆ (ಕಿಸೆಗೆ) 50 ಕೋಟಿ ಕೊಡುತ್ತೇವೆ, ಅದರ ಜತೆಗೆ 100 ಕೋಟಿ ಅನುದಾನ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಆ ಆಮಿಷಗಳು ಚುನಾವಣೆಯಲ್ಲಿ ಕೆಲಸ ಮಾಡಿವೆ. ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಬೇಕು. ಯಾರಾದರೂ ಹತ್ತು ರುಪಾಯಿ ಕೇಳಿದರೆ ಈ ನಂಬರ್‌ಗೆ ಕಾಲ್ ಮಾಡಿ ಎಂದು ಸಿಎಂ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.