JDS Protest: ಕಾಂಗ್ರೆಸ್ ಪುಢಾರಿಗಳು ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ: ಎಚ್.ಡಿ. ಕುಮಾರಸ್ವಾಮಿ ಗುಡುಗು
JDS Protest: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ.


ಬೆಂಗಳೂರು: ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳು ಇವೆ ಎಂಬುದು ನಿಜ. ಆದರೆ ಕೆಲವರು ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ದನಿಯನ್ನು ಅಡಗಿಸುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ. ಹೆದರುವ ವ್ಯಕ್ತಿಯೂ ನಾನಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಗುಡುಗಿಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಪುಢಾರಿಗಳು ನನ್ನನ್ನು ಹೆದರಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಗೊತ್ತಿರಲಿ, ನಾನು ಹೆದರುವ ವ್ಯಕ್ತಿ ಅಲ್ಲ. ನನ್ನ ವಿರುದ್ಧ ಪ್ರತಿಭಟನೆ ಮಾಡಿ ಲಾರಿಯಲ್ಲಿ ದಾಖಲೆಗಳನ್ನು ತಂದು ಕೊಡುತ್ತಾರಂತೆ. ತಂದು ಕೊಡಲಿ, ನಾನೂ ನೋಡುತ್ತೇನೆ. ಯಾವ ಮಟ್ಟದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಕಾಂಗ್ರೆಸ್ ಪುಡಾರಿಗಳು ಎನ್ನುವುದು ನನಗೆ ಗೊತ್ತಿದೆ. ನನ್ನಲ್ಲಿರುವ ದಾಖಲೆಗಳನ್ನು ಬಿಚ್ಚಿಟ್ಟರೆ ಜನರೇ ಇವರನ್ನು ಓಡಿಸುತ್ತಾರೆ ಎಂದು ಕೇಂದ್ರ ಸಚಿವರು ಎಚ್ಚರಿಕೆ ನೀಡಿದರು.
ಕಾಂಗ್ರೆಸ್‌ನವರು ನನಗೆ ಕಿರುಕುಳ ನೀಡುತ್ತಿದ್ದಾರೆ
ಟನ್ ಗಟ್ಟಲೆ ದಾಖಲೆ ಇದೆ ಅಂತ ಹೇಳಿದ್ದೆ, ಅದೇನು ಸುಳ್ಳಲ್ಲ. ಅಕ್ಷರಶಃ ಸತ್ಯ. ಹಿಂದೆ ಅಧಿಕಾರದಲ್ಲಿದ್ದಾಗ ನನ್ನ ಧ್ವನಿ ಅಡಗಿಸೋ ಕೆಲಸ ಮಾಡಿದ್ದರು. ನಾನು ಯಾವುದೇ ಕಾನೂನು ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿಲ್ಲ. ನ್ಯಾಯ, ಕೋರ್ಟ್ ಇದೆ ಎಂದು ಹೋರಾಟ ಮಾಡುತ್ತಿದ್ದೇನೆ. ನನ್ನಲ್ಲಿ ಅಧಿಕಾರ ಇದ್ದಾಗಲೂ ನಾನು ನನ್ನ ಕೆಲಸ ಮಾಡಿಕೊಳ್ಳಲಿಲ್ಲ. ಈಗ ಕೇಂದ್ರ ಸಚಿವನಾಗಿದ್ದಾಗಲೂ ಕಾಂಗ್ರೆಸ್ ನವರು ನನಗೆ ಕಿರುಕುಳ ನೀಡುತ್ತಿದ್ದಾರೆ. ಅದಕ್ಕೆ ಹೆದರಲ್ಲ ನಾನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮೇಲೆ ಕಿಕ್‌ಬ್ಯಾಕ್ ಪಡೆದ ಆರೋಪ
ನನ್ನ ಮೇಲೆ ಗಣಿ ಗುತ್ತಿಗೆ ಆರೋಪ ಮಾಡಿರುವ ಸಿದ್ದರಾಮಯ್ಯ ಅವರು, ಈಗ ಗಣಿ ಗುತ್ತಿಗೆ ನವೀಕರಣಕ್ಕೆ ಕಿಕ್‌ಬ್ಯಾಕ್ ಪಡೆದಿರುವ ಅಕ್ರಮದ ಬಗ್ಗೆ ಮಾತನಾಡಲಿ. ತಮ್ಮ ವಿರುದ್ಧ ಬಂದಿರುವ ಆರೋಪಕ್ಕೆ ಅವರು ಏನು ಹೇಳುತ್ತಾರೆ? ರಾಮಮೂರ್ತಿ ಗೌಡ ಎನ್ನುವವರು ಸಿದ್ದರಾಮಯ್ಯ ವಿರುದ್ಧ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆಗೆ ಪ್ರಾಸಿಕ್ಯೂಷನ್ ಕೊಡಿ ಅಂತ ರಾಜ್ಯಪಾಲರನ್ನು ಕೇಳಿದ್ದಾರೆ.
ಸಿದ್ದರಾಮಯ್ಯ ಅವರು ಮೊದಲ ಅವಧಿಗೆ ಸಿಎಂ ಆಗಿದ್ದ ಸಂದರ್ಭದಲ್ಲಿ ಗಣಿ ಗುತ್ತಿಗೆ ನವೀಕರಣಕ್ಕೆ ₹500 ಕೋಟಿ ಕಿಕ್‌ಬ್ಯಾಕ್ ಪಡೆದಿರುವ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಗಣಿ ಗುತ್ತಿಗೆ ನವೀಕರಣದಿಂದ ಸರಕಾರದ ಬೊಕ್ಕಸಕ್ಕೆ ₹5,000 ಕೋಟಿ ನಷ್ಟ ಉಂಟು ಮಾಡಿರುವ ಗಂಭೀರ ಆಪಾದನೆಯನ್ನು ಸಿದ್ದರಾಮಯ್ಯ ಎದುರಿಸುತ್ತಿದ್ದಾರೆ. ವಿಚಾರಣೆಗೆ ಅನುಮತಿ ನೀಡುವಂತೆ ಅವರು ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆನಪ್ಪ ಉತ್ತರ ಕೊಡುತ್ತೀರಿ ಎಂದು ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಅಲ್ಲಿ ನಾನು ಅಕ್ರಮವನ್ನೇ ಮಾಡಿಲ್ಲ ಎಂದು ಸಿಎಂ ಹೇಳುತ್ತಿದ್ದಾರೆ. ಒಂದಿಚೂ ಮಣ್ಣು ಎತ್ತಿಲ್ಲ ಅಂತ ಹೇಳಿದ್ದಾರೆ. ಅವರು ಅಕ್ರಮ ಮಾಡಿದ್ದಾರೋ ಸಕ್ರಮ ಮಾಡಿದ್ದಾರೋ ಎನ್ನುವುದು ನನಗೆ ಗೊತ್ತಿದೆ. ಅದರ ಬಗ್ಗೆ ದಾಖಲೆಗಳೂ ನನ್ನಲ್ಲಿ ಇವೆ. ಮುಂದೆ ಅವರೆಲ್ಲವೂ ಮಾತನಾಡುತ್ತವೆ ಎಂದು ಕೇಂದ್ರ ಸಚಿವರು ಮಾರ್ಮಿಕವಾಗಿ ಹೇಳಿದರು.
ಈ ಮಹಾನುಭಾವರು ನನ್ನ ಬಗ್ಗೆ ಗಣಿ ಗುತ್ತಿಗೆ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಅನುಮತಿ ನೀಡುವುದು ಇರಲಿ, ಅಲ್ಲಿ ಚನಿಕೆಯಷ್ಟು ಮಣ್ಣನ್ನೇ ಅವರು ಎತ್ತಿಲ್ಲ. ಅವರಿಗೆ ಆ ಗಣಿ ಮಂಜೂರಾಗಿಯೂ ಇಲ್ಲ. ರಾಜ್ಯದ ಬೊಕ್ಕಸಕ್ಕೆ ನಯಾಪೈಸೆ ನಷ್ಟ ಆಗಿಲ್ಲ. ಹಾಗಿದ್ದ ಮೇಲೆ ನನ್ನ ವಿರುದ್ಧ ವಿಚಾರಣೆ ಯಾಕೆ ನಡೆಯುತ್ತಿದೆ? ಯಾಕೆ ಆರೋಪ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.
ನನ್ನ ಬಾಯಿ ಮುಚ್ಚಿಸೋ ಕೆಲಸ ಮಾಡ್ತಿದ್ದಾರೆ ಇವರು. ಇವರ ಜನ್ಮದಲ್ಲಿ ನನ್ನನ್ನು ಹೆದರಿಸುವ ಶಕ್ತಿ ಇಲ್ಲ. ಎರಡು ಸಲ ಸಿಎಂ ಆಗಿದ್ದೆ. ನಾನೇನಾದ್ರೂ ಅಕ್ರಮ ಮಾಡಿದ್ದಿದ್ದರೆ ಐದೇ ನಿಮಿಷದಲ್ಲಿ ಸರಿ ಮಾಡಿಕೊಳ್ಳಲು ಆಗುತ್ತಿರಲಿಲ್ಲವೇ? ನಾನು ಅಧಿಕಾರ ದುರುಪಯೋಗಪಡಿಸಿಕೊಳ್ಳಲಿಲ್ಲ ಎಂದು ತಿರುಗೇಟು ಕೊಟ್ಟರು.
ನಮ್ಮ ಪಕ್ಷದ ಕಾರ್ಯಕರ್ತರು ಎದೆಗುಂದಬೇಕಿಲ್ಲ:
ನಮ್ಮ ಪಕ್ಷ ಬಲವಾಗಿದೆ. ಕಾರ್ಯಕರ್ತರು ಹೆದರಬೇಕಿಲ್ಲ. ನಾವು ಮುಂದೆ ಅಧಿಕಾರಕ್ಕೆ ಬರುತ್ತೇವೆ. ಈ ಸರ್ಕಾರ, ಇವರ ಮಂತ್ರಿಗಳು ಬೆಂಗಳೂರು ನಗರದಲ್ಲಿ ಏನೆಲ್ಲಾ ಅಕ್ರಮ ಮಾಡ್ತಿದ್ದಾರೆ ಎಂದು ನೋಡಿದ್ದೇವೆ. ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಹಲವಾರು ಜಿಲ್ಲೆಗಳಲ್ಲಿ ಬೆಳೆ ನಾಶವಾಗಿದೆ. ಸರ್ಕಾರ ಮಾತ್ರ ರೈತರ ನೆರವಿಗೆ ಧಾವಿಸಿದೆ ಪ್ರತಿಪಕ್ಷಗಳನ್ನು ಹತ್ತಿಕ್ಕುವ ರಾಜಕೀಯ ಮಾಡುತ್ತಿದೆ. ನಾವು ಈ ಸರ್ಕಾರದ ವಿರುದ್ಧ ಹೋರಾಟ ನಡೆಸೋಣ ಎಂದು ಕೇಂದ್ರ ಸಚಿವರು ಕರೆ ನೀಡಿದರು.
ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹೋರಾಟ ಆರಂಭಿಸಿದ್ದೀರಿ. ಸಾಕಪ್ಪ ಸಾಕು ಕಾಂಗ್ರೆಸ್ ಸಾಕು ಈ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದೀರಿ. ಇದೊಂದು ಒಳ್ಳೆಯ ಹೋರಾಟ. ಪ್ರತೀ ಇಲಾಖೆಯಲ್ಲಿಯು ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.
ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ ನಾಟಕ
ಜಾತಿಗಣತಿ ವರದಿಗೆ ಅರ್ಥವೇ ಇಲ್ಲ, ಕಾಂತರಾಜು ಆಯೋಗದ ವರದಿ ಸಿದ್ದ ಮಾಡಿ ಹತ್ತು ವರ್ಷಗಳೇ ಕಳೆದಿವೆ. ಜನರಲ್ಲಿ ಗ್ಯಾರಂಟಿ ವೈಫಲ್ಯ, ಭ್ರಷ್ಟಾಚಾರ, ದರ ಏರಿಕೆ ವಿರುದ್ಧ ಆಕ್ರೋಶ ಸ್ಫೋಟವಾಗುವ ಹಂತದಲ್ಲಿದೆ. ಹೀಗಾಗಿ ಜನರ ಗಮನ ಬೇರೆಡೆಗೆ ಹೊರಳಿಸಲು ಜಾತಿ ಗಣತಿ ಡ್ರಾಮಾ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಫ್ರೀಡಂ ಪಾರ್ಕ್ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇವರು ಜಾತಿ ಗಣತಿ ಮಾಡಬೇಕಾದರೆ ಹೊಸದಾಗಿ ಸಮೀಕ್ಷೆ ಮಾಡಬೇಕು. ಹೊಸದಾಗಿ ನೀವು ವರದಿ ಕೊಡಬೇಕಾಗುತ್ತದೆ. ಹತ್ತು ವರ್ಷದಲ್ಲಿ ಬಹಳ ಬದಲಾವಣೆ ಆಗಿದೆ. ಈಗ ನೋಡಿದರೆ ಇವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಾತಿ ಜಾತಿ ಮಧ್ಯ ಸಂಘರ್ಷ ತರುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ರಾಜ್ಯವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಜಾತ್ಯತೀತ ಎಂದು ಹೇಳಿಕೊಳ್ಳುವ, ಸಂವಿಧಾನ ಪ್ರತಿಯನ್ನು ಸದಾ ಕೈಯ್ಯಲ್ಲಿ ಹಿಡಿದು ಶೋ ಮಾಡುವ ಕಾಂಗ್ರೆಸ್ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಈ ಸುದ್ದಿಯನ್ನೂ ಓದಿ | JDS Protest: ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ; ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ
ಜಾತಿ ಸಂಘರ್ಷಕ್ಕೆ ಏನೇನು ಮಾಡಬೇಕೋ ಅದಕ್ಕೆ ವೇದಿಕೆ ಸಿದ್ಧ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಇವರು ಬಂದು ಎರಡು ವರ್ಷವಾಯಿತು. ಆವಾಗಿನಿಂದ ಯಾಕೆ ವರದಿ ಜಾರಿ ಮಾಡಲಿಲ್ಲ. ಕುರ್ಚಿ ಉಳಿಸಿಕೊಳ್ಳಬೇಕೆಂದು ಈ ಡ್ರಾಮಾ ಆರಂಭ ಮಾಡಿದ್ದಾರೆ ಎಂದು ಅವರು ದೂರಿದರು.