Voters List: ಬೆಂಗಳೂರಿನ ಮತದಾರರ ಪಟ್ಟಿ ಪ್ರಕಟ: ನಿಮ್ಮ ಹೆಸರು, ವಾರ್ಡ್ ಹುಡುಕಿ, ಆಕ್ಷೇಪ ಸಲ್ಲಿಕೆಗೆ ಮಾ.16ರವರೆಗೆ ಅವಕಾಶ
ಮತದಾರರು ತಮ್ಮ ಹೆಸರು ಅಥವಾ ಮತದಾರರ ಚೀಟಿಯ ಎಪಿಕ್ ಸಂಖ್ಯೆಯೊಂದಿಗೆ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಹೆಸರು ಬಿಟ್ಟು ಹೋಗಿದ್ದರೆ, ಸೇರ್ಪಡೆ ಆಗಿರದೇ ಇದ್ದರೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಲೋಪದೋಷಗಳಾಗಿದ್ದರೆ, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವಾದರೆ, ಮತ್ತೊಂದು ವಾರ್ಡ್ ವ್ಯಾಪ್ತಿಯಲ್ಲಿ ಹೆಸರು ಪ್ರಕಟವಾಗಿದ್ದರೆ, ಮಾರ್ಚ್ 16ರೊಳಗೆ ಆಕ್ಷೇಪಣೆ ಸಲ್ಲಿಸಬೇಕು.
ಜಿಬಿಎ ಮತದಾರರ ಪಟ್ಟಿ -
ಬೆಂಗಳೂರು, ಮಾ.11: ದೇಶಾದ್ಯಂತ ಮತದಾರರ ಪಟ್ಟಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಪರಿಷ್ಕರಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲೆಯ ಐದೂ ನಗರಪಾಲಿಕೆ ಪ್ರದೇಶಗಳ ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ಇರುವ ಬಗ್ಗೆ ಪರಿಶೀಲಿಸಿಕೊಂಡು ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಮಾರ್ಚ್ 16ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ರಚನೆಯಾಗಿರುವ 05 ನಗರಪಾಲಿಕೆಗಳಾದ (1) ಬೆಂಗಳೂರು ಕೇಂದ್ರ (2) ಬೆಂಗಳೂರು ಉತ್ತರ (3) ಬೆಂಗಳೂರು ದಕ್ಷಿಣ (4) ಬೆಂಗಳೂರು ಪೂರ್ವ ಮತ್ತು (5) ಬೆಂಗಳೂರು ಪಶ್ಚಿಮ ನಗರಪಾಲಿಕೆಗಳಲ್ಲಿ ಇರುವ 369 ವಾರ್ಡ್‌ಗಳಿಗೆ ದಿನಾಂಕ: 19.01.2026 ರಂದು ಮತದಾರರ ನೋಂದಣಾಧಿಕಾರಿಗಳು ಸಂಬಂಧಪಟ್ಟ ವಾರ್ಡ್‌ವಾರು ವ್ಯಾಪ್ತಿಯ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿರುತ್ತಾರೆ. ತದನಂತರ ಸ್ವೀಕೃತವಾಗಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಸರಿಪಡಿಸಿ ದಿನಾಂಕ: 09.03.2026 ರಂದು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ.
ಮತದಾರರು ತಮ್ಮ ವಾರ್ಡಿನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ಇರುವ ಬಗ್ಗೆ ಪರಿಶೀಲಿಸಿಕೊಂಡು ಏನಾದರೂ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ: 10.03.2026 ರಿಂದ 16.03.2026 ರೊಳಗೆ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ಈ ಮೂಲಕ ತಿಳಿಸಲಾಗಿದೆ.
ಮನೆಯಲ್ಲಿಯೇ ತಿದ್ದುಪಡಿ ಮಾಡಬಹುದು
ಮತದಾರರು ತಮ್ಮ ಹೆಸರು, ವಾರ್ಡ್, ಮತಗಟ್ಟೆಯನ್ನು ತಿಳಿದುಕೊಳ್ಳಬಹುದು. ಮಾತ್ರವಲ್ಲದೇ, ತಪ್ಪಿದ್ದರೆ ತಿದ್ದುಪಡಿಯನ್ನೂ ಮಾಡಬಹುದು. ಜ. 19ರಂದು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ, ಕೆಲ ಮಾರ್ಪಾಡುಗಳೊಂದಿಗೆ ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಂದು 88,91,411 ರಷ್ಟಿದ್ದ ಮತದಾರರ ಸಂಖ್ಯೆ ಈಗ 88,92,528 ಕ್ಕೆ ಏರಿಕೆಯಾಗಿದೆ. ಇದರಲ್ಲಿ 45,69,752 ಪುರುಷ ಮತ್ತು 43,21,143 ಮಹಿಳಾ ಹಾಗೂ 1635 ಇತರೆ ಮತದಾರರಿದ್ದಾರೆ. ಮತಗಟ್ಟೆಗಳ ಸಂಖ್ಯೆ 8044ರ ಬದಲಿಗೆ 8024ಕ್ಕೆ ಕುಸಿದಿದೆ. ಅಂತಿಮ ಮತದಾರರ ಪಟ್ಟಿಯನ್ನು ಏಪ್ರಿಲ್ 6ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಹೆಸರು, ವಾರ್ಡ್, ಬೂತ್ ಹುಡುಕುವುದು ಹೇಗೆ?
ಸಾರ್ವಜನಿಕರು ವಾರ್ಡ್‌ವಾರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹುಡುಕಲು ಅನುಕೂಲ ಕಲ್ಪಿಸಲು ಪರಿಷ್ಕೃತ ಪಟ್ಟಿಯನ್ನು ಜಿಬಿಎ ಅಧಿಕೃತ https://gba.karnataka.gov.in/electoral2026/ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದೆ.
ಮತದಾರರು ತಮ್ಮ ಹೆಸರು, ಮತದಾರರ ಚೀಟಿಯ ಎಪಿಕ್ ಸಂಖ್ಯೆ, ಪೋಲಿಂಗ್ ಸ್ಟೇಷನ್ ಸೇರಿ ಹುಡುಕಾಟಕ್ಕೆ 3 ಆಯ್ಕೆಗಳನ್ನು ನೀಡಲಾಗಿದೆ. ಮೊದಲಿಗೆ ವೆಬ್‌ಸೈಟ್‌ಗೆ ಪ್ರವೇಶಿಸಿ ಮತದಾರರ ಚೀಟಿಯ ಎಪಿಕ್ ಸಂಖ್ಯೆ ಮೂಲಕ ಹುಡುಕಾಟ ಆಯ್ಕೆ ಮಾಡಿ ಸಂಖ್ಯೆ ನಮೂದಿಸಿದರೆ ವಾರ್ಡ್, ಮತಗಟ್ಟೆ, ಹೆಸರು ಸೇರಿದಂತೆ ಸಂಪೂರ್ಣ ವಿವರ ಸಿಗಲಿದೆ.
ಹೆಸರಿನ ಮೂಲಕ ಹುಡುಕಾಟಕ್ಕೆ ಮುಂದಾದರೆ, ನಗರ ಪಾಲಿಕೆ, ಹೊಸ ವಾರ್ಡ್, ಹೆಸರು, ಸಂಬಂಧಿಕರ ಹೆಸರು, ವಯಸ್ಸು, ಜನ್ಮ ದಿನಾಂಕ ಉಲ್ಲೇಖಿಸಿದರೆ ಪರಿಷ್ಕೃತ ಮತಚೀಟಿ ಮಾಹಿತಿ ಸಿಗಲಿದೆ.
ಪೋಲಿಂಗ್ ಸ್ಟೇಷನ್ ಪ್ರಕಾರ ಹುಡುಕುವುದಾದರೆ ನಗರ ಪಾಲಿಕೆ, ವಾರ್ಡ್, ಮತದಾನ ಕೇಂದ್ರ ಆಯ್ಕೆ ಮಾಡಿದರೆ ಆ ವ್ಯಾಪ್ತಿಯ ಮತದಾರರ ಹೊಸ ಮಾಹಿತಿ ಲಭ್ಯವಾಗಲಿದೆ.
ಆಕ್ಷೇಪಣೆ ಸಲ್ಲಿಸಬಹುದು
ಮತದಾರರು ತಮ್ಮ ಹೆಸರು ಅಥವಾ ಮತದಾರರ ಚೀಟಿಯ ಎಪಿಕ್ ಸಂಖ್ಯೆಯೊಂದಿಗೆ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಹೆಸರು ಬಿಟ್ಟು ಹೋಗಿದ್ದರೆ, ಸೇರ್ಪಡೆ ಆಗಿರದೇ ಇದ್ದರೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಲೋಪದೋಷಗಳಾಗಿದ್ದರೆ, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವಾದರೆ, ಮತ್ತೊಂದು ವಾರ್ಡ್ ವ್ಯಾಪ್ತಿಯಲ್ಲಿ ಹೆಸರು ಪ್ರಕಟವಾಗಿದ್ದರೆ, ಮಾರ್ಚ್ 16ರೊಳಗೆ ಆಕ್ಷೇಪಣೆ ಸಲ್ಲಿಸಬೇಕು. ಮತದಾರರ ಪಟ್ಟಿಗಳ ಪರಿಷ್ಕರಣೆಯ ವೇಳಾಪಟ್ಟಿ ಕುರಿತು ವ್ಯಾಪಕ ಪ್ರಚಾರ ಕ್ರಮ ಕೈಗೊಳ್ಳಲಾಗಿದ್ದು, ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಲಾಗುತ್ತಿದೆ. ಮತದಾರರ ಅನುಕೂಲಕ್ಕಾಗಿ ಐದು ನಗರ ಪಾಲಿಕೆಗಳಲ್ಲಿ ತೆರೆದಿರುವ ಸಹಾಯವಾಣಿ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಪ್ರಮುಖ ಅಂಕಿ ಅಂಶಗಳು
ತಿದ್ದುಪಡಿಗೆ ಅವಕಾಶ: ಮಾರ್ಚ್ 17 ರಿಂದ 18
ಪರಿಶೀಲನೆ ನಂತರದ ಬದಲಾವಣೆ: ಮಾರ್ಚ್ 20ರಿಂದ 22
ಆಕ್ಷೇಪಣೆಗೆ ಕೊನೇ ದಿನ: ಮಾರ್ಚ್ 16
ಮಹಿಳಾ ಮತದಾರರು: 43,21,143
ಪುರುಷ ಮತದಾರರು: 45,69,752
ಇತರೆ ಮತದಾರರು: 1635
ಒಟ್ಟು ಮತದಾರರು: 88,92,528
ಮತಗಟ್ಟೆಗಳ ಸಂಖ್ಯೆ: 8024
ಏ. 6ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ
ಅತಿ ಹೆಚ್ಚು ಮತದಾರರು: ಸುಬ್ರಮಣ್ಯಪುರ ವಾರ್ಡ್ (54,026 ಮತದಾರರು)
ಅತಿ ಕಡಿಮೆ ಮತದಾರರು: ಕೊತ್ತೂರು (10,940 ಮತದಾರರು)
ಅತಿ ಹೆಚ್ಚು ಮತದಾರರು: ಪಶ್ಚಿಮ ನಗರ ಪಾಲಿಕೆ 27,26,573 ಮತದಾರರು.
ಅತಿ ಕಡಿಮೆ ಮತದಾರು: ಪೂರ್ವ ನಗರ ಪಾಲಿಕೆ 10,41,396 ಮತದಾರರು.
ಪಾಲಿಕೆವಾರು ಸಹಾಯವಾಣಿ ಸಂಖ್ಯೆ
ಬೆಂಗಳೂರು ಕೇಂದ್ರ : 080-22975803
ಬೆಂಗಳೂರು ಉತ್ತರ : 080-22975936
ಬೆಂಗಳೂರು ದಕ್ಷಿಣ : 9480685704
ಬೆಂಗಳೂರು ಪೂರ್ವ : 9480685706
ಬೆಂಗಳೂರು ಪಶ್ಚಿಮ : 9480685703