ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bidadi Township: ಬಿಡದಿ ಟೌನ್‌ಶಿಪ್‌ಗೆ ಕಾಂಗ್ರೆಸ್‌ ನಾಯಕರೇ ವಿರೋಧಿಸಿದ್ದರು: ದಾಖಲೆ ಸಮೇತ ಎಚ್‌ಡಿಕೆ ತಿರುಗೇಟು

2025ರ ಮಾರ್ಚ್ 12ರಂದು ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿ ಕಾಂಗ್ರೆಸ್ ಸರ್ಕಾರವೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಜೂನ್ 10ರಂದು ಅಂತಿಮ ಅಧಿಸೂಚನೆಯನ್ನೂ ಇದೇ ಸರ್ಕಾರ ಹೊರಡಿಸಿದೆ. ಹಾಗಿದ್ದಾಗ ಇದರಲ್ಲಿ ನನ್ನ ಪಾತ್ರ ಎಲ್ಲಿದೆ? ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬಿಡದಿ ಟೌನ್‌ಶಿಪ್‌ಗೆ ಕಾಂಗ್ರೆಸ್‌ನವರೇ ವಿರೋಧಿಸಿದ್ದರು: ಎಚ್‌ಡಿಕೆ

-

Prabhakara R
Prabhakara R Jun 22, 2026 3:31 PM

ಬೆಂಗಳೂರು: ಬಿಡದಿ ಟೌನ್‌ಶಿಪ್‌ (Bidadi Township) ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿ ನಡೆಸಿರುವ ಅವರು, ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಐದು ಹೊಸ ಬಡಾವಣೆಗಳನ್ನು ಘೋಷಣೆ ಮಾಡಿದ್ದು ಸತ್ಯ. ಆದರೆ, ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡುವುದಾಗಿ 2007ರಲ್ಲೇ ಸದನದಲ್ಲಿ ಘೋಷಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಬಿಡದಿ ಟೌನ್‌ಶಿಪ್ ಯೋಜನೆ ಘೋಷಣೆ ಸಮಯದಲ್ಲಿ ಸದನದಲ್ಲಿ ಇದೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಈಗ ಅವರೇ ಯೋಜನೆಗೆ ಕೈ ಹಾಕಿದ್ದಾರೆ ಎಂದು ಹೇಳಿ, ಬಿಡದಿ ಟೌನ್‌ಶಿಪ್ ವಿರೋಧಿಸಿ 2007ರಲ್ಲಿ ಕಾಂಗ್ರೆಸ್ ನಾಯಕರು ನೀಡಿದ್ದ ಹೇಳಿಕೆಗಳ ವಿವರ ಬಿಡುಗಡೆ ಮಾಡಿದ್ದಾರೆ.



ಬಿಡದಿ ಟೌನ್‌ಶಿಪ್‌ ಬಗ್ಗೆ ಸಿದ್ದರಾಮಯ್ಯ ಏನು ಹೇಳಿದ್ದರು?

2007ರ ಜುಲೈ 31ರಂದು ವಿಧಾನಸಭೆಯಲ್ಲಿ ನಿಯಮ 69ರಡಿ ಕೈಗಾರಿಕಾ ಉದ್ದೇಶಕ್ಕಾಗಿ ಐದು ಉಪನಗರಗಳ ಸ್ಥಾಪನೆ ಮತ್ತು SEZ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿರುವ ಕುರಿತು ಚರ್ಚೆ ನಡೆದಿತ್ತು. ಅಂದು ಸರ್ಕಾರದ ಈ ಯೋಜನೆ ವಿರುದ್ಧ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸೇರಿ ಹಲವು ಕಾಂಗ್ರೆಸ್‌ ನಾಯಕರು ಸದನದಲ್ಲಿ ವಿರೋಧ ವ್ಯಕ್ತಪಡಿಸಿದ್ದರು.

ಅಂದು ಸಿಎಂ ಸಿದ್ದರಾಮಯ್ಯ ಸದನದಲ್ಲಿ ಮಾತನಾಡುತ್ತಾ, ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರವು ಬೆಂಗಳೂರು ಸುತ್ತಮುತ್ತ ಟೌನ್‌ಶಿಪ್‌, ವಿಶೇಷ ಆರ್ಥಿಕ ವಲಯಗಳ ನಿರ್ಮಾಣಕ್ಕೆ ಮುಂದಾಗಿದೆ. ಕೈಗಾರಿಕೆಗಳು ಬರಬಾರದೆಂದಾಗಲಿ, SEZ ಮಾಡಬಾರದೆಂದಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಅಥವಾ ಇಲ್ಲಿ ಕುಳಿತಿರುವ ನಾವ್ಯಾರು ಕೂಡ ವಾದ ಮಾಡುತ್ತಿಲ್ಲ. ಆದರೆ, ಬೆಂಗಳೂರು ಇವತ್ತು ಇಡೀ ದೇಶದಲ್ಲೇ ಏಷ್ಯಾ ಖಂಡದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರ. ಈಗಾಗಲೇ ಸುಮಾರು 45 ಲಕ್ಷ ಜನರು ವಾಸವಿದ್ದಾರೆ. ಈಗ ಇವರು ಗ್ರೇಟರ್ ಬೆಂಗಳೂರು ಮಾಡುವುದಕ್ಕೆ ಹೊರಟಿದ್ದಾರೆ.

ಈಗಿರುವ ಪರಿಸ್ಥಿತಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿ 226 ಚ.ಕಿ.ಮೀ. ಈಗ ಗ್ರೇಟರ್ ಬೆಂಗಳೂರು ಮಾಡುವಾಗ ಸುಮಾರು 800ಕ್ಕೂ ಹೆಚ್ಚು ಚ.ಕಿ.ಮೀ. ವ್ಯಾಪ್ತಿಯಾಗುತ್ತಿದೆ. ಈಗ ಬೆಂಗಳೂರಿನಲ್ಲಿರುವ ಮೂರನೇ ಒಂದು ಭಾಗದಷ್ಟು ಜನರಿಗೆ ಕುಡಿಯುವುದಕ್ಕೆ ನೀರು ಕೊಡುವುದಕ್ಕಾಗುತ್ತಿಲ್ಲ. 2015ಕ್ಕೆ ಬೆಂಗಳೂರಿನ ಜನಸಂಖ್ಯೆ 1 ಕೋಟಿ ಆಗುತ್ತದೆ ಎಂದು ಈಗಾಗಲೇ ಅಂದಾಜು ಮಾಡಿದ್ದಾರೆ. ನಗರದಲ್ಲಿ ಸದ್ಯ 45 ಲಕ್ಷ ವಾಹನಗಳಿವೆ, ಪ್ರತಿ ದಿವಸ 900 ಹೊಸ ವಾಹನಗಳು ರಿಜಿಸ್ಟರ್ ಆಗಿ ರಸ್ತೆಗೆ ಇಳಿಯುತ್ತಿವೆ. ಈಗಲೇ ಬೆಂಗಳೂರು ರಸ್ತೆಗಳಲ್ಲಿ ತಿರುಗಾಡುವುದಕ್ಕಾಗುತ್ತಿಲ್ಲ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಬೇಕಾದರೆ 5-6 ಗಂಟೆಗಳು ಬೇಕಾಗುತ್ತದೆ.

ಈಗಾಗಲೇ ನಾವು ಯಲಹಂಕ ಟೌನ್‌ಶಿಪ್ ಮಾಡಿ ನೋಡಿದ್ದೇವೆ, ಅದರಿಂದ ಅನುಕೂಲವಾಗಿದೆಯೋ ಅನಾನುಕೂಲವಾಗಿದೆಯೋ? ಯಲಹಂಕವೆಲ್ಲಾ ಬೆಂಗಳೂರಿಗೆ ಸೇರಿಕೊಂಡಿದೆ. ನೀವು ನಂದಗುಡಿನಲ್ಲಿ, ಟೌನ್‌ಶಿಪ್ ಅಥವಾ ಎಸ್‌ಇಜೆಡ್ ಇಲ್ಲಿಂದ 30 ಕಿ. ಮೀ ದೂರದಲ್ಲಿ ಮಾಡಿದರೆ, ಅದು ಎಲ್ಲಿಗೆ ಸೇರುತ್ತದೆ? ಅದು ಬೆಂಗಳೂರಿಗೆ ಸೇರಿಕೊಳ್ಳುತ್ತದೆ. ಅಥವಾ ರಾಮನಗರ ಬಿಡದಿನಲ್ಲಿ ಟೌನ್‌ಶಿಪ್ ಮಾಡಿದರೆ ಎಲ್ಲಿಗೆ ಸೇರಿಕೊಳ್ಳುತ್ತದೆಂದರೆ ಅದು ಬೆಂಗಳೂರಿಗೆ ಸೇರಿಕೊಳ್ಳುತ್ತದೆ. ಈಗ ಬೆಂಗಳೂರು ಯದ್ವಾತದ್ವ ಬೆಳೆದು ಇಲ್ಲಿ ಜನರು ಜೀವನ ಮಾಡುವುದೇ ಕಷ್ಟವಾಗಿದೆ. ಪರಿಸರ ಮಾಲಿನ್ಯದಿಂದ ಇಲ್ಲಿ ವಾಸ ಮಾಡುವವರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕರ್ನಾಟದಲ್ಲಿರುವ 90% ಎಲ್ಲಾ ಸ್ಲಂಗಳು ಬೆಂಗಳೂರು ನಗರದಲ್ಲೇ ಇವೆ. ಅವರಿಗೆ ಮೂಲಸೌಕರ್ಯ ಕೊಡುವುದಕ್ಕೆ ನಮಗೆ ಸಾಧ್ಯವಾಗಿಲ್ಲ. ಇನ್ನು ಇವರು ಯಾರಿಗೋಸ್ಕರ ಇವತ್ತು ಕೈಗಾರಿಕೆಗಳಿಗೆ, ಎಸ್‌ಇಜಡ್‌ಗೆ ರೈತರ ಜಮೀನುಗಳನ್ನು ಕೊಡುವುದಕ್ಕೆ ಹೊರಟಿದ್ದಾರೆ? ನೀವು ಎಸ್‌ಇಜಡ್ ಮಾಡುವುದಾದರೆ ಹೋಗಿ ದೂರದಲ್ಲಿ ಮಾಡಿ, ಹಾಸನದಲ್ಲಿ ಮಾಡಿ, ಮಂಡ್ಯಕ್ಕೆ ಹೋಗಿ ಅಥವಾ ದೂರದಲ್ಲಿರುವ ಜಿಲ್ಲೆಗಳಿಗೆ ಹೋಗಿ ಮಾಡಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು.

ಕಾಂಗ್ರೆಸ್‌ ಸರ್ಕಾರದಿಂದಲೇ ಅಂತಿಮ ಅಧಿಸೂಚನೆ

2025ರ ಮಾರ್ಚ್ 12ರಂದು ಈ ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು ಕಾಂಗ್ರೆಸ್ ಸರ್ಕಾರವೇ. ಜೂನ್ 10ರಂದು ಅಂತಿಮ ಅಧಿಸೂಚನೆಯನ್ನೂ ಇದೇ ಸರ್ಕಾರ ಹೊರಡಿಸಿದೆ. ಹಾಗಿದ್ದಾಗ ಇದರಲ್ಲಿ ನನ್ನ ಪಾತ್ರ ಎಲ್ಲಿದೆ? ನನಗೆ ಅಷ್ಟು ಆಸಕ್ತಿ ಇದ್ದಿದ್ದರೆ 2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಯೋಜನೆ ಜಾರಿಗೊಳಿಸಬಹುದಿತ್ತಲ್ಲವೇ? ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಅವರು, ಈ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಕಡತಗಳ ವಿಲೇವಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿಲ್ಲ. ಬದಲಾಗಿ ನಾಗರಭಾವಿ ಬಳಿಯ ಬಾಡಿಗೆ ಮನೆಯಲ್ಲಿ ಕೆಲವರನ್ನು ಕೂರಿಸಿಕೊಂಡು ಕೆಲಸ ನಡೆಸಲಾಗುತ್ತಿದೆ. 4,500ಕ್ಕೂ ಹೆಚ್ಚು ರೈತರು ಭೂಸ್ವಾಧೀನಕ್ಕೆ ವಿರೋಧಿಸಿ ಆಕ್ಷೇಪಣೆ ಸಲ್ಲಿಸಿದ್ದರೂ ಒಂದಕ್ಕೂ ಉತ್ತರ ನೀಡಿಲ್ಲ. ಬದಲಾಗಿ ಡಿಸಿ ಕಚೇರಿಗೆ ಕರೆಸಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಯಾರೋ ನಾಲ್ಕು ಜನರಿಂದ ಬ್ಯಾನರ್ ಹಾಕಿಸಿ ರೈತರು ಜಮೀನು ಕೊಡ್ತಾರೆ ಅನ್ನಿಸಬೇಡಿ. ಡಿ.ಕೆ. ಶಿವಕುಮಾರ್ ಅವರೇ, ಧೈರ್ಯವಿದ್ದರೆ ನನ್ನ ಜೊತೆ ಭೈರಮಂಗಲಕ್ಕೆ ಬನ್ನಿ. ಅಲ್ಲಿನ ಸಣ್ಣ ರೈತರು ಭೂಮಿ ಕೊಡಲು ಸಮ್ಮತಿಸಿದ್ದಾರಾ ಇಲ್ಲವಾ ಅಂತ ಜನರ ಮುಂದೆ ಕೇಳೋಣ ಎಂದು ನೇರ ಸವಾಲು ಹಾಕಿದ್ದಾರೆ.

Bidadi Township: ಬಿಡದಿ ಯೋಜನೆಯ ಪಿತಾಮಹ ಕುಮಾರಸ್ವಾಮಿ: ಸಿಎಂ ಡಿ.ಕೆ. ಶಿವಕುಮಾರ್

ಸರ್ಕಾರ ರೈತರಿಗೆ ಆಮಿಷ ಒಡ್ಡುತ್ತಿದೆ. ಶೇ.50ರಷ್ಟು ಹಣ ಕೊಡ್ತೀವಿ, ಅಭಿವೃದ್ಧಿ ಆದ ಮೇಲೆ ಸೈಟ್ ಕೊಡ್ತೀವಿ ಎನ್ನುವುದು ಕೇವಲ ಆಮಿಷ. ನೈಸ್ ಯೋಜನೆಯಲ್ಲಿ ರೈತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಈಗ ಹೊಸ ಯೋಜನೆ ಹೆಸರಲ್ಲಿ ಮತ್ತೊಂದು ಲೂಟಿಗೆ ಸಿದ್ಧತೆ ನಡೆದಿದೆ. ಅಡಿಕೆ, ರೇಷ್ಮೆ ಸೇರಿದಂತೆ ಫಲವತ್ತಾದ ಕೃಷಿ ಭೂಮಿಯನ್ನು ನಾಶಮಾಡಿ ರಿಯಲ್ ಎಸ್ಟೇಟ್ ದಂಧೆಗೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ.