ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವನ್ಯಜೀವಿ ಸಂರಕ್ಷಣಾ ವಿಜ್ಞಾನಿ ಕೃತಿ ಕಾರಂತ್‌ಗೆ ನ್ಯಾಷನಲ್ ಜಿಯಾಗ್ರಫಿಕ್ ಎಕ್ಸ್‌ಪ್ಲೋರರ್ ಆಫ್ ದಿ ಇಯರ್ ಪ್ರಶಸ್ತಿ

ವನ್ಯಜೀವಿ ಸಂರಕ್ಷಣಾ ವಿಜ್ಞಾನಿ ಕೃತಿ ಕಾರಂತ್ ಅವರಿಗೆ 2026ರ ಪ್ರತಿಷ್ಠಿತ 'ರೋಲೆಕ್ಸ್ ನ್ಯಾಷನಲ್ ಜಿಯಾಗ್ರಫಿಕ್ ಎಕ್ಸ್‌ಪ್ಲೋರರ್ ಆಫ್ ದ ಇಯರ್' ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆಗೆ ಕೃತಿ ಪಾತ್ರರಾಗಿದ್ದು, ಮೇ 6 ರಂದು ಮುಂಬೈನಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಸಂಗ್ರಹ ಚಿತ್ರ

ಬೆಂಗಳೂರು: ವನ್ಯಜೀವಿ ಸಂರಕ್ಷಣಾ ವಿಜ್ಞಾನಿ ಕೃತಿ ಕಾರಂತ್ (Krithi Karanth) ಅವರಿಗೆ 2026ರ ಪ್ರತಿಷ್ಠಿತ 'ರೋಲೆಕ್ಸ್ ನ್ಯಾಷನಲ್ ಜಿಯಾಗ್ರಫಿಕ್ ಎಕ್ಸ್‌ಪ್ಲೋರರ್ ಆಫ್ ದ ಇಯರ್' ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆಗೆ ಕೃತಿ ಪಾತ್ರರಾಗಿದ್ದು, ಮೇ 6 ರಂದು ಮುಂಬೈನಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕೃತಿ ಕೆ. ಕಾರಂತ್ ಅವರು ಭಾರತದ ಪ್ರಖ್ಯಾತ ವನ್ಯಜೀವಿ ಸಂರಕ್ಷಣಾ ಜೀವಶಾಸ್ತ್ರಜ್ಞೆ (Conservation Biologist) ಮತ್ತು ಬೆಂಗಳೂರಿನ 'ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್'ನ ಸಿಇಒ ಆಗಿದ್ದಾರೆ. ವೈಲ್ಡ್ ಸೆವೆ' (Wild Save) ಮತ್ತು 'ವೈಲ್ಡ್ ಶಾಲಾ' (Wild school) ಸೇರಿದಂತೆ ಅವರ ಮಹತ್ವದ ಉಪಕ್ರಮಗಳು ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿವೆ. ಈ ಪ್ರಶಸ್ತಿಯು ಅವರ ಸಮರ್ಪಿತ ಪ್ರಯತ್ನಗಳು ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಅವರು ತಂದ ಬದಲಾವಣೆಗಳಿಗೆ ಸಂದ ಗೌರವವಾಗಿದೆ.

ಭಾರತದಲ್ಲಿ ಮಾನವ-ವನ್ಯಜೀವಿ ಸಂಘರ್ಷವನ್ನು (Human-Wildlife Conflict) ಪರಿಹರಿಸಲು ಮೂರು ದಶಕಗಳಿಂದ ಕೃತಿ ಶ್ರಮಿಸುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿ. ಇವರು ಖ್ಯಾತ ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಅವರ ಪುತ್ರಿ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತ ಅವರ ಮೊಮ್ಮಗಳು. ಕೃತಿ 28 ವರ್ಷಗಳಲ್ಲಿ 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಇದರಲ್ಲಿ ಯುಕೆಯ ಎಸ್ಮಂಡ್ ಬಿ ಮಾರ್ಟಿನ್ ರಾಯಲ್ ಜಿಯಾಗ್ರಫಿಕಲ್ ಸೊಸೈಟಿ ಪ್ರಶಸ್ತಿ ಕೂಡ ಸೇರಿದೆ. 2019 ರಲ್ಲಿ ರೋಲೆಕ್ಸ್ ಪ್ರಶಸ್ತಿಗೆ ಆಯ್ಕೆಯಾದ ಹತ್ತು ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು.

ಸದ್ಯ ವೈಲ್ಡ್ ಸೇವೆ' ಮತ್ತು 'ವೈಲ್ಡ್ ಶಾಲೆ' ಯೋಜನೆಗಳ ಮೂಲಕ ವನ್ಯಜೀವಿ ಸಂರಕ್ಷಣೆಯ ಅರಿವು ಮೂಡಿಸುವಲ್ಲಿ ಕೃತಿ ಕಾರಂತ್‌ ಅವರ ಪಾತ್ರ ದೊಡ್ಡದು. 7,000 ಹಳ್ಳಿಗಳಲ್ಲಿ 1,00,000 ಕ್ಕೂ ಹೆಚ್ಚು ಜನರಿಗೆ ಮಾನವ-ವನ್ಯಜೀವಿ ಸಂಘರ್ಷವನ್ನು ನಿಭಾಯಿಸಲು ಇವರ ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್ ಸಹಾಯ ಮಾಡಿದೆ. ಕೃತಿ 100 ಕ್ಕೂ ಹೆಚ್ಚು ವನ್ಯಜೀವಿ ಮೀಸಲು ಪ್ರದೇಶಗಳಲ್ಲಿ 50,000 ಸ್ಥಳೀಯ ಸಮುದಾಯದ ಸದಸ್ಯರಿಗೆ ತರಬೇತಿ ನೀಡಿದ್ದಾರೆ. ವೈಲ್ಡ್ ಸೆವೆ ಕಾರ್ಯಕ್ರಮವು ಕರ್ನಾಟಕ, ತಮಿಳುನಾಡು ಮತ್ತು ಕೇರಳದ 2914 ಹಳ್ಳಿಗಳಿಗೆ ವಿಸ್ತರಿಸಿದೆ.

ವೈಲ್ಡ್ ಸ್ಕೂಲ್ ಸ್ಥಾಪನೆ

ರೈತರ ಬೆಳೆ ನಾಶವಾದಾಗ, ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಕಷ್ಟಪಡುತ್ತಾರೆ. ಇದನ್ನು ಮನಗಂಡ ಕೃತಿ ಕಾರಂತ್, 'ವೈಲ್ಡ್ ಶಾಲಾ' ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಶಾಲೆ ಎಂಬುದು ಸಂರಕ್ಷಣಾ ಶಿಕ್ಷಣ ಕಾರ್ಯಕ್ರಮವಾಗಿದ್ದು, ಕಾಡುಗಳ ಬಳಿ ವಾಸಿಸುವ ಮಕ್ಕಳಿಗೆ ವನ್ಯಜೀವಿಗಳೊಂದಿಗೆ ಹೇಗೆ ಸಹಬಾಳ್ವೆ ನಡೆಸಬೇಕೆಂದು ಆಟ, ಕಲೆ, ಹಾಡುಗಳ ಮೂಲಕ ಶಿಕ್ಷಣ ನೀಡುವ ಯೋಜನೆಯಾಗಿದೆ. 2018 ರಿಂದ ಇಲ್ಲಿಯವರೆಗೆ 1,626 ಶಾಲೆಗಳಲ್ಲಿ 72,000 ಮಕ್ಕಳಿಗೆ ಈ ಕುರಿತು ತರಬೇತಿ ನೀಡಿದ ಹೆಗ್ಗಳಿಕೆ ಕೃತಿ ಕಾರಂತ್‌ ಅವರಿಗೆ ಸಲ್ಲುತ್ತದೆ.

Vishakha Bhat Heggar

View all posts by this author