ಬೆಂಗಳೂರು: ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಬೆಳಕಿಗೆ ಬಂದ ನಕಲಿ ಔಷಧಗಳ ತಯಾರಿಕೆ ಮತ್ತು ಪೂರೈಕೆ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಆರು ರಾಜ್ಯಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಈ ಜಾಲದ ಬೃಹತ್ ವ್ಯಾಪ್ತಿಯನ್ನು ಬಯಲಿಗೆಳೆದಿದ್ದಾರೆ.
ಎಸ್‌ಐಟಿ ಮತ್ತು ಔಷಧ ನಿಯಂತ್ರಣ ಇಲಾಖೆಯ ಸುಮಾರು 80 ರಿಂದ 100 ಅಧಿಕಾರಿಗಳ ತಂಡವು ಕರ್ನಾಟಕ, ಹಿಮಾಚಲ ಪ್ರದೇಶ, ಹರಿಯಾಣ, ತಮಿಳುನಾಡು, ಮಹಾರಾಷ್ಟ್ರ ಮತ್ತು ತೆಲಂಗಾಣ ದಲ್ಲಿ ದಾಳಿ ನಡೆಸಿದೆ. ನಕಲಿ ಫಾಮ್‌ಗಳ ಕಚೇರಿಗಳು, ಔಷಧ ಸಂಗ್ರಹಣಾ ಕೇಂದ್ರಗಳು ಮತ್ತು ಕಿಂಗ್‌ಪಿನ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಳ್ಳಲಾಗಿದೆ.
ಈ ಜಾಲವು ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿತ್ತು. ಒಂದೇ ಸ್ಥಳದಲ್ಲಿ ಎಲ್ಲವನ್ನೂ ತಯಾರಿಸುವ ಬದಲು, ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಲು ವಿಭಿನ್ನ ರಾಜ್ಯಗಳಲ್ಲಿ ಔಷಧಗಳ ಸ್ಟಾಕ್ ಸಂಗ್ರಹಿಸ ಲಾಗುತ್ತಿತ್ತು. ಲೇಬಲ್‌ಗಳು ಒಂದು ಕಡೆ, ಬಾಟಲ್‌ಗಳು ಇನ್ನೊಂದು ಕಡೆ ಹಾಗೂ ನಕಲಿ ಮಾತ್ರೆಗಳನ್ನು ಬೇರೆ ಕಡೆ ಸಂಗ್ರಹಿಸಿ ಅಂತಿಮವಾಗಿ ಪೂರೈಕೆ ಮಾಡಲಾಗುತ್ತಿತ್ತು. ಬೆಂಗಳೂರಿನ ಮಿನರ್ವ ಸರ್ಕಲ್ ಸಮೀಪದ ಗೋಡೌನ್ ಅನ್ನು ಈ ಜಾಲದ ಪ್ರಮುಖ ಪೂರೈಕೆ ಕೇಂದ್ರವಾಗಿ ಬಳಸಲಾಗುತ್ತಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: Poor-quality medicines: ರಾಜ್ಯದಲ್ಲಿ 40,48,436 ರೂ. ಮೌಲ್ಯದ ಕಳಪೆ ಔಷಧ ಜಪ್ತಿ: ದಿನೇಶ್ ಗುಂಡೂರಾವ್
ಆಸ್ಪತ್ರೆಗಳೇ ಟಾರ್ಗೆಟ್: ವೀರೇಶ್ ಎಂಬಾತ 2021ರಲ್ಲಿ ಕೃಪಾ ಹೆಲ್ತ್‌ಕೇರ್ ಹೆಸರಿನಲ್ಲಿ ಕಂಪನಿ ನೋಂದಣಿ ಮಾಡಿಸಿದ್ದ. ಈ ಕಂಪನಿಯ ನೆಪದಲ್ಲಿ ಈತ ಪ್ರಶಾಂತ್ ಎಂಬಾತನ ಮೂಲಕ ನಕಲಿ ಔಷಧಗಳನ್ನು ತರಿಸುತ್ತಿದ್ದ. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಆಸ್ಪತ್ರೆಗಳಿಗೆ ಔಷಧ ಒದಗಿಸುವ ಮೂಲಕ ಈ ಜಾಲ ನಂಬಿಕೆ ಗಳಿಸಿತ್ತು. ಔಷಧಗಳನ್ನು ಆಸ್ಪತ್ರೆ ಗಳಿಗೆ ಮಾರಾಟ ಮಾಡುವಂತೆ ಮೆಡಿಕಲ್ ರೆಪ್ರೆಸೆಂಟೇ ಟಿವ್‌ಗಳಿಗೆ ಅತಿಯಾದ ಕಮಿಷನ್ ಆಮಿಷವೊಡ್ಡ ಲಾಗುತ್ತಿತ್ತು. ಹೀಗಾಗಿ, ಸುಮಾರು 15ಕ್ಕೂ ಹೆಚ್ಚು ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳು ಈ ಜಾಲದಲ್ಲಿ ಸಕ್ರಿಯರಾಗಿದ್ದರು.
ಕ್ಯಾನ್ಸರ್, ಜೀವರಕ್ಷಕ ಔಷಧಗಳ ಮೇಲೆ ಕಣ್ಣು ಅತ್ಯಂತ ದುಬಾರಿಯಾದ ಮತ್ತು ಗಂಭೀರ ಕಾಯಿಲೆ ಗಳಿಗೆ ಬಳಸುವ ಔಷಧಗಳನ್ನೇ ಇವರು ನಕಲಿ ಮಾಡುತ್ತಿದ್ದರು. ಇವು ಅತ್ಯಂತ ದುಬಾರಿ ಮತ್ತು ಮಾರಣಾಂತಿಕ ಕಾಯಿಲೆಗೆ ಬಳಸುವ ಔಷಧಗಳಾಗಿರುವುದರಿಂದ ಲಾಭ ಹೆಚ್ಚು ಸಿಗುತ್ತದೆ ಎಂದು ಈ ಜಾಲ ಇವುಗಳನ್ನೇ ಪ್ರಮುಖವಾಗಿ ಆಯ್ಕೆ ಮಾಡಿತ್ತು.
ಥೈರಾಯ್ಡ್ ಮಾತ್ರೆಗಳು, ವಿಟಮಿನ್ ಇಂಜೆಕ್ಷನ್‌ಗಳು ಮತ್ತು ವಿವಿಧ ಜೀವ ರಕ್ಷಕ ಇಂಜೆಕ್ಷನ್‌ಗಳ ಮೇಲೆ ನಕಲಿ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು. ಎಸ್‌ಐಟಿ ಅಧಿಕಾರಿಗಳ ದಾಳಿಯಿಂದಾಗಿ ಈ ಜಾಲದ ಪೂರೈಕೆ ಸರಪಳಿ ಮತ್ತು ಹಣಕಾಸಿನ ವಹಿವಾಟಿನ ಕುರಿತು ಸ್ಪಷ್ಟ ಚಿತ್ರಣ ಸಿಗುತ್ತಿದೆ. ಕಿಂಗ್‌ಪಿನ್ ಪ್ರಶಾಂತ್ ಮತ್ತು ವೀರೇಶ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.