ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲುಗಲ್ಲು: ಅಂತಾರಾಷ್ಟ್ರೀಯ ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ, ಪ್ರಯೋಗ ಯಶಸ್ವಿ!

Kempegowda international Airport: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್), ಇಂಡಿಗೋ, ಡಿಜಿ ಯಾತ್ರಾ ಫೌಂಡೇಶನ್ ಹಾಗೂ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆ (ಐಎಟಿಎ) ಜಂಟಿಯಾಗಿ, ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಟಿಕೆಟ್ ಬುಕಿಂಗ್‌ನಿಂದ ಹಿಡಿದು ಬೋರ್ಡಿಂಗ್‌ವರೆಗಿನ ಸಂಪೂರ್ಣ ಸಂಪರ್ಕ ರಹಿತ ಪ್ರಯಾಣದ ತಾಂತ್ರಿಕ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿವೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಅಂತಾರಾಷ್ಟ್ರೀಯ ಪ್ರಯಾಣಕ್ಕೂ ಬಯೋಮೆಟ್ರಿಕ್

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ). -

Profile
Siddalinga Swamy Apr 9, 2026 5:55 PM

ಬೆಂಗಳೂರು, ಏ.9: ದೇಶೀಯ ವಿಮಾನ ಪ್ರಯಾಣಿಕರಿಗೆ ಈಗಾಗಲೇ ಅತ್ಯಾಧುನಿಕ 'ಡಿಜಿ ಯಾತ್ರಾ' ಸೌಲಭ್ಯವನ್ನು ಒದಗಿಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) (Kempegowda international Airport), ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಮುಖಚಹರೆ (ಬಯೋಮೆಟ್ರಿಕ್) ಆಧಾರಿತ ಸ್ಪರ್ಶರಹಿತ ಪ್ರಯಾಣದ ಅನುಭವ ನೀಡಲು ಸಜ್ಜಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್), ಇಂಡಿಗೋ, ಡಿಜಿ ಯಾತ್ರಾ ಫೌಂಡೇಶನ್ ಹಾಗೂ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆ (ಐಎಟಿಎ) ಜಂಟಿಯಾಗಿ, ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಟಿಕೆಟ್ ಬುಕಿಂಗ್‌ನಿಂದ ಹಿಡಿದು ಬೋರ್ಡಿಂಗ್‌ವರೆಗಿನ ಸಂಪೂರ್ಣ ಸಂಪರ್ಕ ರಹಿತ ಪ್ರಯಾಣದ ತಾಂತ್ರಿಕ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿವೆ.

ಭಾರತದಲ್ಲಿ ಇದೇ ಮೊದಲು!

ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ವಿನೂತನ ಪ್ರಯೋಗ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ತಡೆರಹಿತ ವಿಮಾನ ಪ್ರಯಾಣ ವ್ಯವಸ್ಥೆಯ ಅನುಷ್ಠಾನದತ್ತ ಇದು ಮಹತ್ವದ ಹೆಜ್ಜೆಯಾಗಿದೆ.

ಈ ವರ್ಷದ ಆರಂಭದಲ್ಲಿ ಇಂಡಿಗೋ ಹಾಗೂ ಡಿಜಿ ಯಾತ್ರಾ ಫೌಂಡೇಶನ್ ಸಂಸ್ಥೆಗಳು, ಪ್ರಯಾಣಿಕರ ದತ್ತಾಂಶ ಸುರಕ್ಷತೆಗಾಗಿ 'ಸೆಲ್ಫ್-ಸೋವರಿನ್ ಐಡೆಂಟಿಟಿ' (ಎಸ್‌ಎಸ್‌ಐ) ಎಂಬ ಸ್ವಯಂ-ಗುರುತು ವ್ಯವಸ್ಥೆ ಹಾಗೂ ಬೋರ್ಡಿಂಗ್ ಪಾಸ್‌ಗಳನ್ನು ಸುಲಭವಾಗಿ ವರ್ಗಾಯಿಸಲು 'ಆ್ಯಪ್-ಟು-ಆ್ಯಪ್' ತಂತ್ರಜ್ಞಾನವನ್ನು ಪರಿಚಯಿಸಿದ್ದವು. ಇದೇ ಯಶಸ್ವಿ ಮಾದರಿಯನ್ನು ಇದೀಗ ಬಿಐಎಎಲ್ ನೆರವಿನೊಂದಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೂ ವಿಸ್ತರಿಸಿ, ಅದರ ಕಾರ್ಯಸಾಧ್ಯತೆಯನ್ನು ಯಶಸ್ವಿಯಾಗಿ ಸಾಬೀತುಪಡಿಸಲಾಗಿದೆ.

ಪ್ರತಿಷ್ಠಿತ ಯೋಜನೆಯಲ್ಲಿ ಪಾಲ್ಗೊಂಡ ಭಾರತದ ಏಕೈಕ ವಿಮಾನ ನಿಲ್ದಾಣ ಕೆಐಎ

ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಈ ತಂತ್ರಜ್ಞಾನದ ಅಳವಡಿಕೆಯು ಪ್ರಯಾಣದ ಸಮಯವನ್ನು ಉಳಿಸುವುದಲ್ಲದೆ, ಭದ್ರತೆಯನ್ನೂ ಹೆಚ್ಚಿಸಲಿದೆ. ವಿಶೇಷವೆಂದರೆ, ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಜಾರಿಗೆ ತರುವ ಈ ಪ್ರತಿಷ್ಠಿತ ಯೋಜನೆಯಲ್ಲಿ ಪಾಲ್ಗೊಂಡಿರುವ ಭಾರತದ ಏಕೈಕ ವಿಮಾನ ನಿಲ್ದಾಣವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗುರುತಿಸಿಕೊಂಡಿದೆ.

ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಬಿಐಎಎಲ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಜಾರ್ಜ್ ಫಾಂಥೋಮ್, ʼಪ್ರಯಾಣಿಕರಿಗೆ ಅತ್ಯಂತ ಸುರಕ್ಷಿತ ಹಾಗೂ ತಂತ್ರಜ್ಞಾನ ಆಧಾರಿತ ಸುಗಮ ಅನುಭವ ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಈ ತಾಂತ್ರಿಕ ಪ್ರಯೋಗವು ಮೈಲಿಗಲ್ಲಾಗಿದೆʼ ಎಂದಿದ್ದಾರೆ.

ಇಂಡಿಗೋದ ಡಿಜಿಟಲ್ ಮತ್ತು ಐಟಿ ವಿಭಾಗದ ಮುಖ್ಯಸ್ಥ ನೀತನ್ ಚೋಪ್ರಾ ಮಾತನಾಡಿ, ʼಡಿಜಿಟಲ್ ಗುರುತು ಮತ್ತು ಬಯೋಮೆಟ್ರಿಕ್ ಮೂಲಕ ಭವಿಷ್ಯದ ಪ್ರಯಾಣವನ್ನು ರೂಪಿಸುವಲ್ಲಿ ಈ ಪ್ರಯೋಗವು ಅತ್ಯಂತ ಮಹತ್ವದ ಸಾಧನೆʼ ಎಂದು ಬಣ್ಣಿಸಿದ್ದಾರೆ.

ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆಯ ಕಿಮ್ ಮಕಾಲೇ ಪ್ರತಿಕ್ರಿಯಿಸಿ, ʼಡಿಜಿಟಲ್ ಪ್ರಯಾಣ ವ್ಯವಸ್ಥೆಯಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದ್ದು, ಈ ಸಹಭಾಗಿತ್ವವು ಜಗತ್ತಿಗೇ ಒಂದು ಉತ್ತಮ ಮಾದರಿಯಾಗಿದೆʼ ಎಂದು ಶ್ಲಾಘಿಸಿದ್ದಾರೆ.

ಡಿಜಿ ಯಾತ್ರಾ ಪ್ರತಿಷ್ಠಾನದ ಸಿಇಒ ಸುರೇಶ್ ಖಡಕ್‌ಭಾವಿ, ʼಪ್ರಯಾಣಿಕರ ಗುರುತನ್ನು ಮುಂಚಿತವಾಗಿಯೇ ದೃಢೀಕರಿಸಿ, ಮುಖದ ಗುರುತಿನ ಮೂಲಕವೇ ಸಂಪೂರ್ಣ ಪ್ರಯಾಣ ಪ್ರಕ್ರಿಯೆ ಮುಗಿಸುವ ಈ ವ್ಯವಸ್ಥೆಯು ಸುರಕ್ಷತೆ, ವೇಗ ಮತ್ತು ಸುಗಮ ಪ್ರಯಾಣದ ಭವಿಷ್ಯದ ಪ್ರತೀಕವಾಗಿದೆʼ ಎಂದು ವಿವರಿಸಿದ್ದಾರೆ.

ಏಪ್ರಿಲ್ 20ರಿಂದ ಬೆಂಗಳೂರಿನಲ್ಲಿ ಪರಮ್‌ ಫೌಂಡೇಶನ್‌ನಿಂದ ವಿನೂತನ ಬೇಸಿಗೆ ಶಿಬಿರ

ಮುಂಬರುವ ದಿನಗಳಲ್ಲಿ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಈ ವ್ಯವಸ್ಥೆಯನ್ನು ಇನ್ನಷ್ಟು ವಿಮಾನ ನಿಲ್ದಾಣಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದೆ.