ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಡ್ಡ ಮತದಾನ: ಐವರು ಬಿಜೆಪಿ ಶಾಸಕರ ಉಚ್ಛಾಟನೆ ?

ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತ ದಾನ ಮಾಡಿರುವವರಿಗೆ ದೊಡ್ಡ ಮೊತ್ತದ ಹಣ ನೀಡಲಾಗಿದೆ ಎಂಬ ಗುಸುಗುಸು ಬಿಜೆಪಿಯೊಳಗೆ ಕೇಳಿ ಬರುತ್ತಿದ್ದು, ಅಡ್ನಾಡಿಗಳು ಯಾರೆಂಬ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರಿಗೆ ನೀಡಲಾಗಿರುವ ವರದಿಯಲ್ಲಿ ಪಕ್ಷದೊಳಗೆ ಯಾರು ಅಡ್ಡಮತ ದಾನ ಮಾಡಿದ್ದಾರೆಂಬ ವಿಸ್ತೃತ ವರದಿ ನೀಡಲಾಗಿದೆ.

ರಾಜ್ಯ ನಾಯಕರಿಂದ ವರಿಷ್ಠರಿಗೆ ವಿಸ್ತೃತ ವರದಿ ಸಲ್ಲಿಕೆ

ಕಠಿಣಕ್ರಮಕ್ಕೆ ಹೈಕಮಾಂಡ್‌ಗೆ ರಾಜ್ಯ ಬಿಜೆಪಿ ಶಿಫಾರಸು

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತ ದಾನ ಮಾಡಿರುವವರಿಗೆ ದೊಡ್ಡ ಮೊತ್ತದ ಹಣ ನೀಡಲಾಗಿದೆ ಎಂಬ ಗುಸುಗುಸು ಬಿಜೆಪಿಯೊಳಗೆ ಕೇಳಿ ಬರುತ್ತಿದ್ದು, ಅಡ್ನಾಡಿಗಳು ಯಾರೆಂಬ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರಿಗೆ ನೀಡಲಾಗಿರುವ ವರದಿಯಲ್ಲಿ ಪಕ್ಷದೊಳಗೆ ಯಾರು ಅಡ್ಡಮತ ದಾನ ಮಾಡಿದ್ದಾರೆಂಬ ವಿಸ್ತೃತ ವರದಿ ನೀಡಲಾಗಿದೆ. ಈ ರೀತಿ ಅಡ್ಡ ಮತದಾನ ಮಾಡಲು ಸುಮಾರು 5-6 ಕೋಟಿ ರು. ಕೈಬದಲಾಗಿರುವ ವಿಚಾರವಲ್ಲದೆ, ಅನುದಾನದ ವಿಚಾರವೂ ಹೊರಬಿದ್ದಿದೆ. ಇಂಥವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸುವಂತೆ ಶಿಫಾರಸು ಮಾಡಲಾಗಿದೆ.

ಅಡ್ಡಮತದಾನ ಮಾಡಿರುವ ಶಾಸಕರನ್ನು ಪತ್ತೆ ಹಚ್ಚಲು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವದಲ್ಲಿ ರಚಿಸಲಾದ ಸತ್ಯಶೋಧನಾ ಸಮಿತಿ ತುರ್ತಾಗಿ ಮಧ್ಯಂತರ ವರದಿಯನ್ನು ಕೇಂದ್ರದ ವರಿಷ್ಠರಿಗೆ ಕಳುಹಿಸಿದ್ದು, ಇನ್ನು ಕೆಲದಿನಗಳಲ್ಲಿ ಅಂತಿಮವಾದ ವರದಿ ಸಲ್ಲಿಸುವ ಸಾಧ್ಯತೆ ಇದೆ. ಈ ವರದಿ ಆಧರಿಸಿ ಅಡ್ಡ ಮತದಾನ ಮಾಡಿರುವ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ.

ಬಹುಮುಖ್ಯವಾಗಿ ಅಡ್ಡಮತದಾನ ನಡೆಸಿದವರಲ್ಲಿ ಬೆಂಗಳೂರಿನ ಓರ್ವರು, ಕಲ್ಯಾಣ ಕರ್ನಾ ಟಕದ ಇಬ್ಬರು ಹಾಗೂ ಕಿತ್ತೂರು ಕರ್ನಾಟಕದ ಇಬ್ಬರು ಶಾಸಕರ ಮೇಲೆ ಉಚ್ಚಾಟನೆಯ ತೂಗುಗತ್ತಿ ಆವರಿಸಿದೆ. ಇನ್ನು ಬೆಂಗಳೂರು ಮೂಲದ ಓರ್ವ ಹಾಗೂ ಹಳೇ ಮೈಸೂರು ಭಾಗದ ಮತ್ತೊಬ್ಬ ಶಾಸಕರೂ ಅಡ್ಡಮತದಾನ ನಡೆಸಿರಬಹುದೆಂಬ ಅನುಮಾನಗಳು ವ್ಯಕ್ತವಾಗಿವೆ. ಆದರೂ, ಕೊನೆಯ ಕ್ಷಣದಲ್ಲಿ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಇವರು ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: BJP-JDS alliance: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅಡ್ಡಡ್ಡ ಅನುಮಾನ

ಬಂಪರ್ ಆಫರ್: ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಭಾರೀ ಮೊತ್ತದ ಆಫರ್ ನೀಡಲಾಗಿತ್ತು. ಮತದಾನಕ್ಕೂ ಮುನ್ನ ಅಂದರೆ ಮೂರು ದಿನಗಳ ಹಿಂದೆ ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಮೊದಲ ಕಂತಿನ ಹಣವನ್ನು ನಗದು ರೂಪದಲ್ಲಿ ನೀಡಲಾಗಿತ್ತು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಮತದಾನದ ಹಿಂದಿನ ದಿನ ಒಪ್ಪಂದದಂತೆ ಎಲ್ಲಾ ಹಣ ನೀಡಿದ ಮೇಲೆಯೇ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿರುವುದು ನಿಜ ಎಂಬ ಚರ್ಚೆ ಕಾರ್ಯಕರ್ತರಲ್ಲಿ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿ ಮಾಡಿ ಇಲ್ಲಿನ ಬೆಳವಣಿಗೆಗಳು ಹಾಗೂ ಅಡ್ಡ ಮತದಾನ ನಡೆಸಿದ ಶಾಸಕರ ವಿವರಗಳನ್ನು ರಾಜ್ಯ ಘಟಕವು ತಮ್ಮದೇಯಾದ ಆಂತರಿಕ ಮೂಲಗಳಿಂದ ಸಂಗ್ರಹಿಸಿದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಇದಲ್ಲದೆ, ಈ ವರದಿಯು ಅಧಿಕೃತವಲ್ಲದಿದ್ದರೂ ತಮಗಿರುವ ಮಾಹಿತಿಗಳು, ವಿವಿಧ ಮೂಲ ಗಳಿಂದ ಸಂಗ್ರಹಿಸಿರುವ ದಾಖಲೆಗಳು ಮತ್ತು ಕೆಲವು ಅನುಮಾನಾಸ್ಪದ ಶಾಸಕರ ನಡವಳಿಕೆಗಳ ಆಧಾರದ ಮೇಲೆ ರಾಷ್ಟ್ರೀಯ ಅಧ್ಯಕ್ಷರಿಗೆ ವರದಿ ನೀಡಲಾಗಿದೆ. ಪಕ್ಷದ ಶಿಸ್ತು ಉಲ್ಲಂಘಿಸಿ ಅಡ್ಡ ಮತದಾನ ಮಾಡಿರುವ ಶಾಸಕರಿಗೆ ಊಹೆ ಮಾಡದ ರೀತಿಯಲ್ಲಿ ಅತ್ಯಂತ ಕಠಿಣ ಕ್ರಮ ಜರುಗಿಸ ಬೇಕೆಂದು ಶಿಫಾರಸು ಮಾಡಲಾಗಿದೆ.

ಕರುಣೆ ಬೇಡಿ, ಹೊರ ಹಾಕಿ: ಆಗ್ರಹ: ಬಿಜೆಪಿ ಸಂಗ್ರಹಿಸಿ ದಾಖಲಿಸಿರುವ ವರದಿಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ 5 ರಿಂದ 7 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರುವು ದನ್ನು ಖಚಿತಪಡಿಸಿಕೊಂಡಿದ್ದಾರೆ. ಪಕ್ಷದಲ್ಲಿದ್ದು ನಮ್ಮ ಅಭ್ಯರ್ಥಿಗೆ ಮತ ಹಾಕುತ್ತೇವೆಂದು ವಾಗ್ದಾನ ಮಾಡಿ ಕೊನೆಕ್ಷಣದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಅಡ್ಡಮತದಾನ ನಡೆಸಿರುವ ಇವರಿಗೆ ನೋಟಿಸ್ ಇಲ್ಲವೇ ಅಮಾನತು ಮಾಡಿದರೆ ಸಾಲದು. ಬದಲಿಗೆ ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದು. ಮುಲಾಜಿಲ್ಲದೆ ಬೇಲಿ ಜಿಗಿವ ಇಂತಹ ಶಾಸಕರಿಗೆ ಸ್ವಲ್ಪವೂ ಕರುಣೆ ತೋರದೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆ ಮಾಡುವಂತೆ ಮನವಿ ಮಾಡಲಾಗಿದೆ. ಈ ಹಿಂದೆ ಇದೇ ರೀತಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಶಾಸಕರಾದ ಎಸ್.ಟಿ. ಸೋಮಶೇಖರ್(ಯಶವಂತಪುರ), ಶಿವರಾಮ್ ಹೆಬ್ಬಾರ್ (ಯಲ್ಲಾಪುರ) ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ (ವಿಜಾಪುರ) ಅವರನ್ನು ಯಾವ ರೀತಿ ಉಚ್ಚಾಟನೆ ಮಾಡಲಾಗಿತ್ತೋ, ಅದೇ ರೀತಿ ಅಡ್ಡಮತದಾನ ನಡೆಸಿದ ಶಾಸಕರನ್ನು ಪಕ್ಷದಿಂದಲೇ ಹೊರ ಹಾಕಬೇಕೆಂದು ರಾಜ್ಯಘಟಕ ರಾಷ್ಟ್ರೀಯ ನಾಯಕರಿಗೆ ಮನವಿ ಮಾಡಿರುವುದಾಗಿ ಮೂಲಗಳು ಖಚಿತಪಡಿಸಿವೆ.

ಮಾಜಿ ಸಿಎಂ ಸದಾನಂದ ಗೌಡ ವಿರುದ್ದವೂ ಗರಂ

ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ, ಕೋರ್ ಕಮಿಟಿ ಸದಸ್ಯರಾಗಿರುವ ಸದಾನಂದಗೌಡ ಅಡ್ಡ ಮತದಾನದ ಮಾಹಿತಿ ಗೊತ್ತಿದ್ದರೂ ಪಕ್ಷದ ಗಮನಕ್ಕೆ ತರದೆ, ಕಡೆಗೆ ತಮಗೆ ಮೊದಲೇ ಗೊತ್ತಿತ್ತು ಎಂದು ಹೇಳಿರುವುದು ವರಿಷ್ಠರ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ. ಇನ್ನು ಯಾರೇ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ವರಿಷ್ಠರು ನೀಡಿದ್ದಾರೆ. ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ ಸಂಬಂಧಿಸಿದಂತೆ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕಿದ್ದ ಬೆಂಗಳೂರಿನ ಶಾಸಕರ ವಿರುದ್ದವೂ ವರಿಷ್ಠರು ಸಿಟ್ಟಾಗಿದ್ದಾರೆನ್ನಲಾಗಿದೆ.