ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಕಟ್ಟಡಗಳ ಎತ್ತರದ ನಿರ್ಬಂಧ ಸಡಿಲಿಸಿ; ಕೇಂದ್ರ ರಕ್ಷಣಾ ಸಚಿವರಿಗೆ ಡಿ.ಕೆ.ಶಿವಕುಮಾರ್‌ ಮನವಿ

DK Shivakumar: ರಕ್ಷಣಾ ಇಲಾಖೆ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ವಿಧಿಸಲಾಗಿರುವ ಕಟ್ಟಡಗಳ ಎತ್ತರದ ನಿರ್ಬಂಧಗಳು ಬೆಂಗಳೂರಿನ ಪ್ರಗತಿಗೆ ಅಡ್ಡಿಯಾಗಿದ್ದು, ಸುರಕ್ಷತೆ ಹಾಗೂ ಪ್ರಗತಿಯ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧಗಳನ್ನು ಸಡಿಲಗೊಳಿಸಿ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಟ್ಟಡಗಳ ಎತ್ತರದ ನಿರ್ಬಂಧ ಸಡಿಲಿಕೆಗೆ ಡಿಕೆಶಿ ಮನವಿ

ಡಿಸಿಎಂ ಡಿ.ಕೆ. ಶಿವಕುಮಾರ್. -

Profile
Siddalinga Swamy Apr 24, 2026 9:21 PM

ನವದೆಹಲಿ, ಏ.24: ರಕ್ಷಣಾ ಇಲಾಖೆ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ವಿಧಿಸಲಾಗಿರುವ ಕಟ್ಟಡಗಳ ಎತ್ತರದ ನಿರ್ಬಂಧಗಳು ಬೆಂಗಳೂರಿನ ಪ್ರಗತಿಗೆ ಅಡ್ಡಿಯಾಗಿದ್ದು, ಸುರಕ್ಷತೆ ಹಾಗೂ ಪ್ರಗತಿಯ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧಗಳನ್ನು ಸಡಿಲಗೊಳಿಸಿ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar), ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದರು. ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಶುಕ್ರವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿ, ಅವರು ಮನವಿ ಪತ್ರ ಸಲ್ಲಿಸಿದರು.

ಬೆಂಗಳೂರಿನ ರಕ್ಷಣಾ ಇಲಾಖೆ ಸುಪರ್ದಿಯ ವಿಮಾನ ನಿಲ್ದಾಣಗಳ 20 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ನಿರಾಕ್ಷೇಪಣಾ ಪತ್ರ (NOC) ನೀಡುವಾಗ ವಿಮಾನ ನಿಲ್ದಾಣದ ಅಧಿಕಾರಿಗಳು ವಿಪರೀತ ನಿರ್ಬಂಧಗಳನ್ನು ವಿಧಿಸುತ್ತಿದ್ದಾರೆ. ಬೆಂಗಳೂರು ವಿಶ್ವದ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಎಚ್ಎಎಲ್ ವಿಮಾನ ನಿಲ್ದಾಣ ಬೆಂಗಳೂರಿನ ಹೃದಯ ಭಾಗದಲ್ಲಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಹೆಚ್ಚುವರಿಯಾಗಿ ವಿಧಿಸಲಾಗಿರುವ ನಿರ್ಬಂಧಗಳು ಈ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಅಡ್ಡಿಯಾಗಿವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಈ ವಿಚಾರವಾಗಿ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಗಳು, ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ ಕಾರ್ಯದರ್ಶಿಗಳು ಹಾಗೂ ರಕ್ಷಣಾ ಕಾರ್ಯದರ್ಶಿಗಳಿಗೆ ಪತ್ರಗಳನ್ನು ಬರೆಯಲಾಗಿದೆ. ವಿಮಾನ ಸುರಕ್ಷತೆ ಹಾಗೂ ನಗರದ ಅಭಿವೃದ್ಧಿ ಎರಡರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪರಿಶೀಲನೆ ನಡೆಸಿ, ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಎಂದು ಮನವಿ ಮಾಡಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ನಾಲ್ಕು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಎಚ್ಎಎಲ್ ಹಾಗೂ ಯಲಹಂಕ ವಾಯುನೆಲೆ ರಕ್ಷಣಾ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು ವಿಮಾನ ನಿಲ್ದಾಣ ಅಧಿಕಾರಿಗಳಿಂದ ನಿರಾಕ್ಷೇಪಣ ಪತ್ರ ಪಡೆಯಬೇಕಾಗಿದೆ.

Cabinet meeting: ಹೊಸ ಒಳ ಮೀಸಲಾತಿ ಅನ್ವಯ 56,432 ಹುದ್ದೆಗಳ ನೇಮಕಾತಿಗೆ ತುರ್ತು ಕ್ರಮ: ಸಿಎಂ ಘೋಷಣೆ

ವಿಮಾನ ನಿಲ್ದಾಣದ ಸುತ್ತಮುತ್ತಲ 15 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡಗಳ ಎತ್ತರದ ಮಿತಿಯನ್ನು 150 ಮೀ. ನಿಗದಿಪಡಿಸಲಾಗಿದೆ ಎಂದು ಜಿ.ಎಸ್.ಆರ್ 751 (ಇ) ನಿಯಮದಲ್ಲಿ ಸೂಚಿಸಲಾಗಿದೆ. ಆದರೆ ರಕ್ಷಣಾ ಇಲಾಖೆ ವಿಮಾನ ನಿಲ್ದಾಣಗಳು ಈ ವಿಪರೀತ ನಿರ್ಬಂಧ ಹೇರುವುದರ ಜತೆಗೆ 150 ಮೀ. ಎತ್ತರದ ಮಿತಿಯನ್ನು 15 ಕಿ.ಮೀ ಮೀರಿ 20 ಕಿ.ಮೀ ವರೆಗೂ ವಿಸ್ತರಿಸಿವೆ. ಈ ನಿರ್ಬಂಧಗಳು ಈ ಬೆಂಗಳೂರು ನಗರದ ಪ್ರಗತಿಗೆ ಮಾರಕವಾಗಿವೆ. ‌ಸಿಂಗಾಪುರ, ಆಂಸ್ಟರ್ಡ್ಯಾಮ್, ಡಲ್ಲಾಸ್, ಲಂಡನ್ ಹಾಗೂ ದುಬೈ ಸೇರಿದಂತೆ ಅನೇಕ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ಕಚೇರಿ, ಮನರಂಜನೆ ಸೇರಿದಂತೆ ವಿವಿದೋದ್ದೇಶಕ್ಕೆ ಬಳಸಲಾಗುತ್ತಿದೆ. ಈ ನಗರಗಳಲ್ಲಿ ವಿಮಾನ ನಿಲ್ದಾಣಗಳು ಕೇವಲ ಸಂಚಾರ ಉದ್ದೇಶಕ್ಕೆ ಮಾತ್ರವಲ್ಲದೇ ಉದ್ಯೋಗದ ಕೇಂದ್ರವಾಗಿ ನಗರ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಹೀಗಾಗಿ ಜಿ.ಎಸ್.ಆರ್ 751 (ಇ) ನಿಯಮವನ್ನು ಸಡಿಲಗೊಳಿಸಬೇಕು. 150 ಮೀ. ಎತ್ತರದ ಮಿತಿಯನ್ನು 20 ಕಿ.ಮೀ ಬದಲಿಗೆ 15 ಕಿ.ಮೀ ವ್ಯಾಪ್ತಿಗೆ ಸೀಮಿತಗೊಳಿಸಬೇಕು ಎಂದು ರಾಜ್ಯ ಸರ್ಕಾರದ ವಿವಿಧ ಅಧಿಕಾರಿಗಳು ಕೇಂದ್ರ ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.