ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi's birthday) ಅವರ ಜನ್ಮದಿನದ ಪ್ರಯುಕ್ತ ಡಿಸಿಎಂ ಡಾ. ಜಿ.ಪರಮೇಶ್ವರ್ ಅವರು ಪತ್ರ ಬರೆಯುವ ಮೂಲಕ ಶುಭ ಹಾರೈಸಿದ್ದಾರೆ. ಭಾರತ ಜೋಡೋದಂತಹ ಕಾರ್ಯಕ್ರಮದ ಮೂಲಕ ದೇಶದ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಿದ್ದೀರಿ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ಅವಿರತ ಹೋರಾಟ ನಡೆಸುತ್ತಿದ್ದೀರಿ. ದೇಶದ ಬಡ - ಮಧ್ಯಮ- ಶೋಷಿತ ಜನರ ಧ್ವನಿಯಾಗಿ ಸಂಸತ್ತಿನ ಹೊರಗೆ ಮತ್ತು ಒಳಗೆ ತಾವು ನಡೆಸುತ್ತಿರುವ ಹೋರಾಟಕ್ಕೆ ಭಗವಂತ ಸುದೀರ್ಘ ಆಯಸ್ಸು, ಉತ್ತಮ ಆರೋಗ್ಯವನ್ನು ನೀಡಿ ಬಲತುಂಬಲಿ ಎಂದು ಹಾರೈಸುತ್ತೇನೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಪ್ರಿಯ ರಾಹುಲ್ ಗಾಂಧಿ ಅವರೇ,
ನಿಮ್ಮ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಜನಸೇವೆಯಲ್ಲಿ ಇನ್ನಷ್ಟು ಶಕ್ತಿ ಸಿಗಲಿ ಎಂದು ಹಾರೈಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ದೇಶ ಸೇವೆ ಮಾಡಲು ಧೈರ್ಯ, ಸ್ಥೈರ್ಯ, ಬದ್ಧತೆ ನಿಮ್ಮದಾಗಲಿ ಎಂದು ಆಶಿಸುತ್ತೇನೆ.
ಸಾಮಾನ್ಯವಾಗಿ ರಾಜಕೀಯ ಜೀವನದಲ್ಲಿ ಕೆಲವೊಮ್ಮೆ ಚುನಾವಣಾ ಗೆಲುವು ಅಥವಾ ಹುದ್ದೆಗಳ ಆಧಾರದ ಮೇಲೆ ನಾಯಕರನ್ನು ಅಳೆಯಲಾಗುತ್ತದೆ. ಆದರೆ ಇತಿಹಾಸದಲ್ಲಿ ನಿಜವಾದ ಸ್ಥಾನ ಪಡೆಯುವುದು ಮೌಲ್ಯಗಳನ್ನು ಉಳಿಸುವವರೇ ಆಗಿರುತ್ತಾರೆ. ನಾಯಕತ್ವ ಎಂದರೆ ಕೇವಲ ಅಧಿಕಾರದಲ್ಲಿರುವುದು ಅಲ್ಲ, ಉತ್ತಮ ಆಲೋಚನೆ ಮತ್ತು ಮೌಲ್ಯಗಳನ್ನು ಜನರ ಮುಂದೆ ಕೊಂಡೊಯ್ಯುವುದಾಗಿದೆ.
ಶತಮಾನದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಮ್ಮ ಗಣರಾಜ್ಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯ, ಸಾಂವಿಧಾನಿಕ ನೈತಿಕತೆಯ ವಿಚಾರಗಳಿಗೆ ಪೂರಕ ಆಕರಗಳನ್ನು ನೀಡುತ್ತಾ ಬಂದಿದೆ. ಈ ತತ್ವಾದರ್ಶಗಳು ಕೇವಲ ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ಪದಗಳಲ್ಲ, ಅವುಗಳು ಅಸಂಖ್ಯ ಸ್ವತಂತ್ರ ಹೋರಾಟಗಾರರ ಮತ್ತು ರಾಷ್ಟ್ರ ನಿರ್ಮಾತೃಗಳ ತ್ಯಾಗ ಬಲಿದಾನದಿಂದ ಮೂಡಿದ ಆಧುನಿಕ ಭಾರತದ ಸದ್ಧರ್ಮದ ನುಡಿಗಳಾಗಿವೆ.
ಇತ್ತೀಚಿನ ವರ್ಷಗಳಲ್ಲಿ, ಒಡೆದಾಳುವ ರಾಜಕಾರಣವು ಉತ್ತುಂಗದಲ್ಲಿದ್ದಂತಹ ಸಂದರ್ಭದಲ್ಲಿ, ನಮ್ಮ ರಾಷ್ಟ್ರದ ಏಕತೆಗೆ ಅಪಾಯವನ್ನುಂಟು ಮಾಡುವಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣಗೊಂಡಿದ್ದ ವೇಳೆ ನೀವು ಮಾಡಿದ ಭಾರತ್ ಜೋಡೊ ಯಾತ್ರೆ ಮತ್ತು ಭಾರತ್ ಜೋಡೊ ನ್ಯಾಯ ಯಾತ್ರೆಗಳು ಸಾಂಪ್ರದಾಯಿಕ ರಾಜಕಾರಣದ ಗಡಿಗಳನ್ನು ಮೀರಿದ್ದಾಗಿತ್ತು. ಭಾರತದ ಉದ್ದಗಲಕ್ಕೂ ಸಾವಿರಾರು ಕಿಲೋಮೀಟರ್‌ಗಳನ್ನು ನಡೆದು, ಲಕ್ಷಾಂತರ ಜನರಿಗೆ ನಾಯಕತ್ವವು ಆಲಿಸುವಿಕೆಯಿಂದ ಆರಂಭಗೊಳ್ಳುತ್ತದೆ.
ಪ್ರಜಾಪ್ರಭುತ್ವವು ಮಾತುಕತೆಯಿಂದ ಮೂಡುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದೀರಿ. ಏಕತೆಯನ್ನು ಕಾನೂನಿನ ನೆಲೆಗಟ್ಟಿನಲ್ಲಿ ಒಗ್ಗೂಡಿಸಲು ಸಾಧ್ಯವಿಲ್ಲ ಎಂಬುದನ್ನು ಸಾರಿ ಹೇಳಿದ್ದೀರಿ. ಸಾಮಾನ್ಯ ಜನರೊಂದಿಗಿನ ನಿಮ್ಮ ಒಡನಾಟ, ವಿಚ್ಛಿದ್ರಕಾರಿ ಶಕ್ತಿಗಳನ್ನು ಎದುರಿಸುವ ನಿಟ್ಟಿನಲ್ಲಿ ನಿಮ್ಮ ಸಲಹೆಗಳು ಮತ್ತು ಭಾರತದ ಬಹುತ್ವದ ಗುಣವನ್ನು ರಕ್ಷಿಸುವ ನಿಟ್ಟಿನಲ್ಲಿ ನಿಮ್ಮ ಹೋರಾಟವು ರಾಜಕೀಯವೆಂದರೆ ಜನರಿಗೆ ಸೇವೆ ಸಲ್ಲಿಸುವ ಹಾಗೂ ಪ್ರಜಾಪ್ರಭುತ್ವವನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ಇರಬೇಕು ಎಂಬ ನಂಬಿಕೆ ಹುಟ್ಟುವಂತೆ ಮಾಡಿದ್ದೀರಿ.
ನೀವು ಮಾಡಿದ ಯಾತ್ರೆಗಳಿಂದ ಭಾರತದ ಯುವಜನತೆಯಲ್ಲಿ ಅದ್ಭುತ ಪರಿಣಾಮವನ್ನು ಬೀರಿತು. ಆ ಸಮಯದಲ್ಲಿ ಲಕ್ಷಾಂತರ ಯುವ ಜನತೆ ಸಿನಿಕತನದ ಮೇಲಿನ ವ್ಯಾಮೋಹ ಬಿಟ್ಟು ವೈಚಾರಿಕತೆಯೆಡೆಗೆ ಭಾಗಿದರು. ಪ್ರಜಾಪ್ರಭುತ್ವದಲ್ಲಿ ಭಾಗಿಧಾರಿಕೆಯಲ್ಲಿ ನಂಬಿಕೆಯನ್ನು ಇರಿಸಿದರು. ನಿಮ್ಮ ಯಾತ್ರೆಯುದ್ದಕ್ಕೂ ಹಗೆತನಕ್ಕಿಂತ ಸಹಾನುಭೂತಿ ಉತ್ತಮ, ಸಂಘರ್ಷಕ್ಕಿಂತ ಸಂವಾದ ಉತ್ತಮ, ಸಂಕುಚಿತ ವ್ಯಕ್ತಿತ್ವಕ್ಕಿಂತ ಸಾಂವಿಧಾನಿಕ ಮೌಲ್ಯಗಳು ಉತ್ತಮ ಎಂಬುದನ್ನು ಅರ್ಥೈಸಿಕೊಂಡರು. ನಿಮ್ಮ ಜೊತೆ ಜೊತೆಯಾಗಿ ಯುವಜನತೆಯು ನಡೆದರು. ಪ್ರಶ್ನೆಗಳನ್ನು ಕೇಳಿದರು. ಅವರ ಅಪೇಕ್ಷೆಗಳನ್ನು ಹಂಚಿಕೊಂಡರು. ಸಾರ್ವಜನಿಕ ಸಂವಾದದ ಮೂಲಕ ತಮ್ಮ ನೆಲೆಯನ್ನು ಗುರುತಿಸಿಕೊಂಡರು. ಈ ಮೂಲಕ ನಿಮ್ಮ ಯಾತ್ರೆಯು ಸಮಕಾಲೀನ ಭಾರತದ ರಾಜಕಾರಣದಲ್ಲಿ ಅಚ್ಚಳಿಯದೆ ಉಳಿಯುವ ಯಾತ್ರೆಯಾಗಿ ಮಾರ್ಪಟ್ಟಿತು.
ಯಾತ್ರೆಯುದ್ದಕ್ಕೂ ನಡೆದ ಸಂವಾದದಿಂದ ಭವಿಷ್ಯ ಭಾರತದ ಉತ್ತಮ ದಿನಗಳ ಬೀಜಗಳು ಹುಟ್ಟಿಕೊಂಡವು. ಇಡೀ ಭಾರತೀಯ ಸಮುದಾಯಕ್ಕೆ ಸಾರ್ವಜನಿಕ ಬದುಕಲ್ಲಿ ತಮ್ಮನ್ನು ತೊಡಗಿಸಿಕೊಳ್ಳವ ನಿಟ್ಟಿನಲ್ಲಿ ಉತ್ತೇಜನವನ್ನು ನೀಡಿತು. ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ, ಬಹುತ್ವವನ್ನು ಸಂಭ್ರಮಿಸುವ ನಿಟ್ಟಿನಲ್ಲಿ , ವಿವಿಧತೆಯಲ್ಲಿ ಏಕತೆಯು ನಮ್ಮ ಗಣರಾಜ್ಯದ ಮೂಲ ಶಕ್ತಿ ಎಂಬುದನ್ನು ಅರ್ಥೈಸಿಕೊಂಡರು. ಇಂತಹ ಆಂದೋಲನಗಳು ಯಾತ್ರೆಯು ಮುಗಿಯುತ್ತಿದ್ದಂತೆ ಅಂತ್ಯಗೊಳ್ಳುವುದಿಲ್ಲ. ಇಲ್ಲಿ ಹುಟ್ಟಿದ ಆಲೋಚನೆಗಳು ಶಾಲಾ-ಕಾಲೇಜುಗಳ ಆವರಣಗಳಲ್ಲಿ, ಗ್ರಾಮಗಳಲ್ಲಿ, ಕಾರ್ಯಾಲಯಗಳಲ್ಲಿ, ಮನೆಗಳಲ್ಲಿ ಸಂಚರಿಸುವ ಮೂಲಕ ಹೆಚ್ಚು ಪ್ರಬಲ ಮತ್ತು ಸಹಾನುಭೂತಿ ಭಾರತಕ್ಕೆ ಅಡಿಪಾಯವಾಗಿದೆ.
ಸಂವಿಧಾನ ಎಂಬುದು ಕೇವಲ ಶಾಸನಬದ್ಧ ದಾಖಲಾತಿಗಳಲ್ಲ. ನಮ್ಮ ಗಣರಾಜ್ಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಭಾರತೀಯನಿಗೆ ಜಾತಿ, ನಂಬಿಕೆ, ಭಾಷೆ, ಧರ್ಮ, ಲಿಂಗ ಅಥವಾ ಪ್ರದೇಶಗಳ ಹಂಗಿಲ್ಲದೆ ಘನತೆಯಿಂದ ಬದುಕುವ, ಸಮಾನ ಅವಕಾಶಗಳನ್ನು ಪಡೆಯುವ, ನ್ಯಾಯವನ್ನು ಪಡೆಯುವ ನಮ್ಮ ಹಕ್ಕುಗಳ ಕುರಿತು ಮಾರ್ಗದರ್ಶನಗಳನ್ನು ನೀಡುವ ಸೂತ್ರಗಳಾಗಿವೆ. ಇದನ್ನು ರಕ್ಷಿಸುವ ಹೊಣೆಗಾರಿಕೆಯು ಕೇವಲ ಒಂದು ಸಂಸ್ಥೆಯ ಅಥವಾ ಓರ್ವ ನಾಯಕನ ಕೆಲಸವಲ್ಲ. ಮಹಾತ್ಮ ಗಾಂಧಿ, ಡಾ. ಬಿ. ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್, ಮೌಲಾನ ಆಜಾದ್ ಹಾಗೂ ಅನೇಕ ಮಹನೀಯರು ಕಟ್ಟಿದ ಭಾರತದ ಮೇಲೆ ನಂಬಿಕೆಯಿಟ್ಟ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ಭಾರತದ ಯುವಕರ ಬಗ್ಗೆ ನಮ್ಮ ಮೇಲಿರುವ ಜವಾಬ್ದಾರಿಯೂ ಅಷ್ಟೇ ಮುಖ್ಯವಾಗಿದೆ. ನಮ್ಮದು ವಿಶ್ವದಲ್ಲೇ ಯುವ ರಾಷ್ಟ್ರವಾಗಿದೆ. ಅದೃಷ್ಟವಶಾತ್ ನಮ್ಮ ದೇಶವು ಅಸಾಧಾರಣ ಯುವ ಪ್ರತಿಭೆಗಳಿಂದ ಮತ್ತು ಅಪರಿಮಿತ ಆಕಾಂಕ್ಷಿಗಳಿಂದ ಕೂಡಿದೆ. ಭಾರತದ ಯುವಜನತೆಗೆ ಅಸಮಾನತೆಯಿರದ ಅವಕಾಶಗಳು ದೊರಕಬೇಕು, ಎಲ್ಲಿ ಶಿಕ್ಷಣವು ಸಬಲೀಕರಣದತ್ತ ಕೊಂಡೊಯ್ಯುವುದೋ, ಎಲ್ಲಿ ಉದ್ಯೋಗವು ನಾವೀನ್ಯತೆ ಮತ್ತು ಉದ್ಯಮದೆಡೆಗೆ ಕೊಂಡೊಯ್ಯುವುದೋ ಹಾಗೂ ಎಲ್ಲಿ ಭಿನ್ನತೆಗಳನ್ನು ಹತ್ತಿಕ್ಕದೆ ಉತ್ತೇಜನ ಸಿಗುವುದೋ ಅಂತಹ ವಾತಾವರಣ ಅವರಿಗೆ ದಕ್ಕಬೇಕು. ಅವರು ರಾಜಕಾರಣದಲ್ಲಿ ನೌಟಂಕಿಗಳಿಗಿಂತ ಆತ್ಮವಿಶ್ವಾಸವನ್ನು ಉದ್ದೀಪನಗೊಳಿಸುವ ವಾತಾವರಣವನ್ನು ಬಯಸಿದ್ದಾರೆ. ದ್ವೇಷಕ್ಕಿಂತ ಏಕತೆಗೆ ಹಾಗೂ ಭಯಕ್ಕಿಂತ ಭರವಸೆಗೆ ಉತ್ತೇಜನ ನೀಡುವ ರಾಜಕಾರಣವನ್ನು ಬಯಸಿದ್ದಾರೆ.
ಭಾರತದ ಭವಿಷ್ಯವು ಕೇವಲ ಆರ್ಥಿಕ ಬೆಳವಣಿಗೆ ಅಥವಾ ತಂತ್ರಜ್ಞಾನದ ಪ್ರಗತಿಯಿಂದ ಮಾತ್ರ ನಿರ್ಧರಿತವಾಗುವುದಿಲ್ಲ. ಸರ್ವರಿಗೂ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಒದಗಿಸುವ ನಮ್ಮ ಸಂವಿಧಾನದ ಮೌಲ್ಯಗಳನ್ನು ಕಾಪಿಟ್ಟುಕೊಳ್ಳುವುದರಿಂದ ನಿರ್ಧಾರವಾಗುತ್ತದೆ. ಈ ಸಮತೋಲನವನ್ನು ಕಾಂಗ್ರೆಸ್ ಅಭಿಯಾನ ಹಾಗೂ ರಾಷ್ಟ್ರದೆಡೆಗಿನ ಅದರ ದೃಷ್ಟಿಕೋನ ವಿವರಿಸುತ್ತದೆ.
ಭಾರತದ ಯುವಜನತೆಯ ಮುಂದೆ ಐತಿಹಾಸಿಕ ಜವಾಬ್ದಾರಿಯಿದೆ. ಅವರು ಕೇವಲ ಗಣರಾಜ್ಯದ ವಾರಸುದಾರರಲ್ಲ, ಅವರು ಅದರ ಭವಿಷ್ಯದ ರಕ್ಷಕರು. ನಾನು ನಮ್ಮ ರಾಷ್ಟ್ರದ ಯುವ ಜನತೆಗೆ ಸಂವಿಧಾನವನ್ನು ಓದುವಂತೆ, ಅದನ್ನು ಅರ್ಥೈಸಿಕೊಳ್ಳುವಂತೆ, ಸಾರ್ವಜನಿಕ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವಂತೆ, ಆಡಳಿತದಲ್ಲಿರುವವರಿಗೆ ಕಠಿಣ ಪ್ರಶ್ನೆಗಳನ್ನು ಕೇಳುವಂತೆ, ಎಲ್ಲ ವಿಧದ ಅನ್ಯಾಯ, ಅಸಮಾನತೆಗಳ ವಿರುದ್ಧ ಧ್ವನಿಯೆತ್ತುವಂತೆ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಆರ್ಥಿಕ ಅಥವಾ ರಾಜಕೀಯ ಶಕ್ತಿಯ ಮೇಲೆ ಎಚ್ಚರಿಕೆಯ ಕಣ್ಣಿಡುವಂತೆ ಒತ್ತಾಯಿಸುತ್ತಿದ್ದೇನೆ. ಪ್ರತಿಯೊಬ್ಬ ನಾಗರಿಕನು ಪ್ರಭುತ್ವಕ್ಕೆ ಶರಣಾಗದೆ ಪ್ರಶ್ನಿಸುವುದರಿಂದ ಪ್ರಗತಿ ಸಾಧ್ಯವಿದೆ.
ಈ ವಿಶೇಷ ಸಂದರ್ಭದಲ್ಲಿ, ಯುವ ಭಾರತೀಯರಿಗೆ ಸ್ಫೂರ್ತಿಯನ್ನು ತುಂಬುವ ಹಾಗೂ ಪ್ರಜಾಪ್ರಭುತ್ವದ ಮೇಲಿನ ಅಚಲ ನಂಬಿಕೆ, ಸಹಾನುಭೂತಿ ಹಾಗೂ ಪ್ರಾಮಾಣಿಕತೆಯನ್ನು ಒಳಗೊಂಡ ನಿಮ್ಮ ಯಾತ್ರೆಯು ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತೇನೆ. ನಮ್ಮ ಮುಂದಿರುವುದು ಚುನಾವಣೆಗಳನ್ನು ಗೆಲ್ಲುವುದಲ್ಲ, ನಮ್ಮ ಗಣರಾಜ್ಯವನ್ನು ಪ್ರಬಲಗೊಳಿಸುವುದಾಗಿದೆ. ಸಂವಿಧಾನದ ಮೌಲ್ಯಗಳನ್ನು ಉಳಿಸುವುದಾಗಿದೆ. ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯವನ್ನು ಒದಗಿಸುವುದಾಗಿದೆ. ನಿಮ್ಮ ಧ್ವನಿಯಲ್ಲಿ ಪೀಳಿಗೆಗಳನ್ನು ಎಚ್ಚರಿಸುವ ಶಕ್ತಿಯಿದೆ. ನಮ್ಮ ಸಂವಿಧಾನವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಿಮ್ಮ ನಡೆಯು ಒಂದು ಕ್ರಾಂತಿಯಾಗಲಿ.
ಸಾರ್ವಜನಿಕರ ಸೇವೆಗೆ ಸಮರ್ಪಿತಗೊಂಡಿರುವ ನಿಮ್ಮ ಬದುಕಿನ ಮತ್ತೊಂದು ವರ್ಷದ ಸಂಭ್ರಮದಲ್ಲಿ ಅಸಂಖ್ಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಗರಿಕರೊಂದಿಗೆ ನಾನು ಸೇರಿದ್ದೇನೆ. ನಿಮಗೆ ಉತ್ತಮ ಆರೋಗ್ಯ, ಹೊಸ ಚೈತನ್ಯ ಸಿಗಲಿ. ಮಾನವೀಯತೆ ಮತ್ತು ಸ್ಥೈರ್ಯದೊಂದಿಗೆ ಸಂವಿಧಾನದ ಮೌಲ್ಯಗಳ ಮೇಲೆ ಬೆಳಕು ಹರಿಸುವ ನಿಮ್ಮ ಕಾಯಕ ಎಂದಿನಂತೆ ಮುಂದುವರಿಯಲಿ.
Shakti scheme: ಶಕ್ತಿ ಯೋಜನೆಯಡಿ ಮೇ ಅಂತ್ಯದವರೆಗೆ ಮಹಿಳೆಯರಿಂದ 763 ಕೋಟಿ ಉಚಿತ ಪ್ರಯಾಣ
ಯಾರನ್ನೂ ಹೊರಗಿಡದೆ, ವಿಭಜಿಸದೆ, ನಿರ್ಭೀತ, ಭ್ರಾತೃತ್ವದ, ವಿವಿಧತೆಯಲ್ಲಿ ಏಕತೆಯಿರುವ ಭಾರತವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಿಮ್ಮ ಮಾರ್ಗವು ನವ ಪೀಳಿಗೆಗೆ ಸ್ಫೂರ್ತಿ ತುಂಬಲಿ. ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಗೌರವ ಸಿಗುವಂತಹ ಭವ್ಯ ಭಾರತ ನಿರ್ಮಾಣವಾಗಲಿ ಎಂದು ಆಶಿಸುತ್ತೇನೆ ಎಂದು ರಾಹುಲ್ ಗಾಂಧಿ ಅವರಿಗೆ ಪರಮೇಶ್ವರ್ ತಿಳಿಸಿದ್ದಾರೆ.