ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Actor Rishab Shetty: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯಲ್ಲಿ ನಟ ರಿಷಬ್‌ ಶೆಟ್ಟಿ ಭಾಗಿ; ಸಿಎಂ ಡಿಕೆಶಿಗೆ ಮಹತ್ವದ ಮನವಿ

Coastal Tourism Development: ಕರಾವಳಿಯಲ್ಲಿ ಹೂಡಿಕೆದಾರರಿಗೆ ಸುಗಮವಾದ ಮತ್ತು ಸರಳವಾದ ಮಾರ್ಗಗಳನ್ನು ಸೃಜಿಸಬೇಕು. ಕರಾವಳಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದರ ಜತೆಗೆ ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕರಾವಳಿಯ ಜಾನಪದ ಕಲೆ, ಸಂಗೀತಕ್ಕೆ ಪ್ರೋತ್ಸಾಹ ನೀಡಿ: ರಿಷಬ್‌ ಶೆಟ್ಟಿ

ಸಿಎಂ ಡಿ.ಕೆ.ಶಿವಕುಮಾರ್‌ ಅವರ ಸಭೆಯಲ್ಲಿ ನಟ ರಿಷಬ್‌ ಶೆಟ್ಟಿ. -

Prabhakara R
Prabhakara R Jun 19, 2026 8:25 PM

ಬೆಂಗಳೂರು: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು. ಖ್ಯಾತ ನಟ ರಿಷಬ್ ಶೆಟ್ಟಿ (Actor Rishab Shetty), ಕರಾವಳಿ ಭಾಗದ ಶಾಸಕರು, ಉದ್ಯಮಿಗಳು ಸಭೆಯಲ್ಲಿ ಭಾಗಿಯಾಗಿ, ತಮ್ಮ ಅಭಿಪ್ರಾಯಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ.

ಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿ, ಕರಾವಳಿಯಲ್ಲಿ ಕ್ಯಾಬಿನೆಟ್‌ ಸಭೆ ನಡೆಸುತ್ತೇವೆ. ಅಷ್ಟರೊಳಗೆ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸಿದ್ಧವಿರಬೇಕು. ಸಿಆರ್‌ಝಡ್‌ ಮತ್ತು ಅರಣ್ಯ ಇಲಾಖೆಯಿಂದ ಆಗುತ್ತಿರುವ ತಾಂತ್ರಿಕ ತಕರಾರುಗಳು, ಪರಿಹಾರಗಳ ಬಗ್ಗೆ 15-20 ದಿನಗಳಲ್ಲಿ ವರದಿ ಸಿದ್ಧಪಡಿಸಬೇಕ ಎಂದು ಅಧಿಕಾರಿಗಳಿಗೆ ಸೂಚಿಸಿದರು.

CM Meeting  (2)

ಇನ್ನು ಕರಾವಳಿಯಲ್ಲಿ ಹೂಡಿಕೆದಾರರಿಗೆ ಸುಗಮವಾದ ಮತ್ತು ಸರಳವಾದ ಮಾರ್ಗಗಳನ್ನು ಸೃಜಿಸಬೇಕು. ಉದ್ಯಮಿಗಳಿಗೆ ಆಗುತ್ತಿರುವ ಇಲಾಖಾ ಕಿರಿಕಿರಿಗಳಿಗೆ ಪರಿಹಾರ ಕಂಡು ಹಿಡಿಯಬೇಕು. ಕರಾವಳಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದರ ಜತೆಗೆ ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ಸಿಎಂ ತಾಕೀತು ಮಾಡಿದರು.

ಸದ್ಯ ಅನುಮೋದಿಸಿರುವ 45 ಯೋಜನೆಗಳಿಂದ 4500 ಉದ್ಯೋಗ ಸೃಷ್ಟಿಯಾಗುತ್ತದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು. ಅತಿ ಉದ್ದದ ಸಮುದ್ರ ತೀರಗಳು ಇರುವ ಪ್ರದೇಶಗಳಲ್ಲಿ ರಾಜ್ಯದ ಕರಾವಳಿಯೂ ಸೇರಿದೆ. ನಮ್ಮ ಪರಿಸರಕ್ಕೆ ಧಕ್ಕೆ ಆಗದಂತೆ ಸಮುದ್ರ ತೀರಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪರಿಗಣಿಸಲು ಸೂಚನೆ ನೀಡಿದರು.

ಕರಾವಳಿಯ ಕಲೆಗೆ ಪ್ರಾಶಸ್ತ್ಯ ಹೆಚ್ಚಿಸಬೇಕು: ರಿಷಬ್‌ ಶೆಟ್ಟಿ ಮನವಿ

ಸಭೆಯಲ್ಲಿ ಮಾತನಾಡಿದ ನಟ ರಿಷಬ್‌ ಶೆಟ್ಟಿ ಅವರು, ಕರಾವಳಿಯ ಜಾನಪದ ಕಲೆ, ಸಂಗೀತಕ್ಕೆ ಪ್ರೋತ್ಸಾಹ ನೀಡಬೇಕು ಮನವಿ ಮಾಡಿದರು. ಇನ್ನು ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವುದರಿಂದ ಕೇರಳ-ಗೋವಾ-ಕರ್ನಾಟಕದ ಸಿನಿಮಾ ಜಗತ್ತಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

ಹೆಲಿ ಟೂರಿಸಂ ಅಭಿವೃದ್ಧಿಗೆ ಒತ್ತು ನೀಡಿ

ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ತೊಂದರೆ ಆಗದಂತೆ ನಾನಾ ಅನುಮತಿಗಳನ್ನು ಪಡೆಯಲು ಏಕ ಗವಾಕ್ಷಿ (ಸಿಂಗಲ್‌ ವಿಂಡೋ) ವ್ಯವಸ್ಥೆ ಜಾರಿಗೆ ಸಿಎಂ ಒಲವು ತೋರಿದರು. ಈ ವೇಳೆ ಹೆಲಿ ಟೂರಿಸಂ ಅಭಿವೃದ್ಧಿಗೆ ಒತ್ತು ನೀಡಲು ಸಿಎಂಗೆ ಉದ್ಯಮಿಗಳು ಮನವಿ ಮಾಡಿದರು.

CM Meeting  (1)

45 ಯೋಜನೆಗಳಿಗೆ ಅನುಮೋದನೆ

ಕರ್ನಾಟಕ ಪ್ರವಾಸೋದ್ಯಮ ನೀತಿಯಡಿಯಲ್ಲಿ 718.63 ಕೋಟಿ ರೂಪಾಯಿ ಅಂದಾಜು ಹೂಡಿಕೆಯ 45 ಯೋಜನೆಗಳನ್ನು ಅನುಮೋದಿಸಿರುವ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇದರಲ್ಲಿ ವಿಶೇಷ ಕ್ಷೇತ್ರವಾಗಿ ಕರಾವಳಿ ಪ್ರವಾಸೋದ್ಯಮ, ಪ್ರವಾಸೋದ್ಯಮ ವಲಯಗಳು ಮತ್ತು ಬೃಹತ್‌ ಪ್ರವಾಸೋದ್ಯಮ ಯೋಜನೆಗಳು, ಕರಾವಳಿ ಮೇಳಗಳು, ಉತ್ಸವಗಳು ಮತ್ತು ಮಾರ್ಕೆಟಿಂಗ್‌, ಕರಾವಳಿ ಸಂಸ್ಕೃತಿ, ಆಚರಣೆ, ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮತ್ತು ಪ್ರಚಾರ ಮಾಡಲು ಒತ್ತು ನೀಡಲಾಗುತ್ತದೆ.

ಸರ್ಕಾರದ ಈ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಮತ್ತು ಬಂಡವಾಳ ಆಕರ್ಷಿಸಲು ಸಹಾಯಧನ, ಬಡ್ಡಿ ಸಹಾಯಧನ ಮತ್ತು ರಿಯಾಯ್ತಿಗಳ ಮೂಲಕ ಪ್ರೋತ್ಸಾಹಗಳನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಈ ಸಮಾಲೋಚನೆ ಸಭೆಯಲ್ಲಿ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ ಜೆ ಜಾರ್ಜ್, ಶಾಸಕರಾದ ಜಿ.ಟಿ.ದೇವೇಗೌಡ, ಸತೀಶ್ ಸೈಲ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.