ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆ; ಮಹಿಳೆಯಿಂದ ಕೆಎಂಎಫ್‌ಗೆ ದೂರು ದಾಖಲು

KMF: ಇತ್ತೀಚೆಗಷ್ಟೇ ಹಾಲಿನ ದರ ಏರಿಕೆಯಿಂದಾಗಿ ಭಾರಿ ಚರ್ಚೆಯಲ್ಲಿದ್ದ ಕರ್ನಾಟಕ ಹಾಲು ಮಹಾಮಂಡಳಿ ಈಗ ಗ್ರಾಹಕರ ಆರೋಗ್ಯ ಮತ್ತು ಆಹಾರ ಸುರಕ್ಷತೆಯ ವಿಚಾರವಾಗಿ ತೀವ್ರ ಮುಖಭಂಗ ಎದುರಿಸುವಂತಾಗಿದೆ. ಬೆಂಗಳೂರಿನಲ್ಲಿ ಅರ್ಧ ಲೀಟರ್‌ನ ನಂದಿನಿ ಹಸುವಿನ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡವೊಂದು ಪತ್ತೆಯಾಗಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಇತ್ತೀಚೆಗಷ್ಟೇ ಹಾಲಿನ ದರ ಏರಿಕೆಯಿಂದಾಗಿ ಭಾರಿ ಚರ್ಚೆಯಲ್ಲಿದ್ದ ಕರ್ನಾಟಕ ಹಾಲು ಮಹಾಮಂಡಳಿ (KMF) ಈಗ ಗ್ರಾಹಕರ ಆರೋಗ್ಯ ಮತ್ತು ಆಹಾರ ಸುರಕ್ಷತೆಯ ವಿಚಾರವಾಗಿ ತೀವ್ರ ಮುಖಭಂಗ ಎದುರಿಸುವಂತಾಗಿದೆ. ಬೆಂಗಳೂರಿನಲ್ಲಿ ಅರ್ಧ ಲೀಟರ್‌ನ ನಂದಿನಿ ಹಸುವಿನ (Nandini milk) ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡವೊಂದು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಂಬಂಧಿಯಾದ ನಾಗೂರ್ ರೋಜಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರು ಕೆಎಂಎಫ್ ಸಂಸ್ಥೆಗೆ ಅಧಿಕೃತ ದೂರು ನೀಡಿದ್ದಾರೆ. ಬೆಂಗಳೂರಿನ ನಿವಾಸಿಯಾದ ನಾಗೂರ್ ರೋಜಾ ಅವರ ಕುಟುಂಬವು ಕಳೆದ ಎರಡು ದಶಕಗಳಿಂದ ನಿರಂತರವಾಗಿ ನಂದಿನಿ ಹಾಲಿನ ಉತ್ಪನ್ನಗಳನ್ನು ಬಳಸುತ್ತಿದೆ. ಎಂದಿನಂತೆ ಮಾರಾಟಗಾರರಿಂದ ಬಾಕ್ಸ್‌ನಲ್ಲಿ ತಂದಿದ್ದ ಹಾಲಿನ ಪ್ಯಾಕೆಟ್ ಅನ್ನು ನೀರಿನಲ್ಲಿ ತೊಳೆದು ಫ್ರಿಡ್ಜ್‌ನಲ್ಲಿ ಇಟ್ಟಿದ್ದರು. ಭಾನುವಾರ ಬಳಕೆಗಾಗಿ ಪ್ಯಾಕೆಟ್ ಕತ್ತರಿಸಿ ಪಾತ್ರೆಗೆ ಸುರಿಯುತ್ತಿದ್ದಾಗ, ಹಾಲಿನೊಂದಿಗೆ ಕಪ್ಪು ಬಣ್ಣದ ಕಲ್ಮಶ ಹೊರಬಂದಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಅದು ದೊಡ್ಡ ಗಾತ್ರದ ಸತ್ತ ಜೇಡ ಎಂಬುದು ತಿಳಿದುಬಂದಿದೆ.

ಇದನ್ನು ಕಂಡು ತೀವ್ರ ಆಘಾತಕ್ಕೊಳಗಾದ ಅವರು, ತಕ್ಷಣವೇ ಜೇಡ ಬಿದ್ದಿರುವ ಹಾಲಿನ ವಿಡಿಯೋ ಚಿತ್ರೀಕರಿಸಿ ಸ್ಥಳೀಯ ಹಾಲಿನ ಏಜೆಂಟರಿಗೆ ಕಳುಹಿಸಿದ್ದಾರೆ. ಏಜೆಂಟರು ಆ ಹಾಲನ್ನು ಚೆಲ್ಲುವಂತೆ ಸಲಹೆ ನೀಡಿದ್ದರೂ, ಆಹಾರ ಸುರಕ್ಷತೆಯ ದೃಷ್ಟಿಯಿಂದ ನಾಗೂರ್ ರೋಜಾ ಅವರು ಆ ಹಾಲಿನ ಸ್ಯಾಂಪಲ್ ಅನ್ನು ಸಾಕ್ಷಿಯಾಗಿ ಹಾಗೇ ಸಂರಕ್ಷಿಸಿಟ್ಟಿದ್ದಾರೆ.

ಆಹಾರ ಉತ್ಪನ್ನಗಳಲ್ಲಿ ಇಂತಹ ಕಲ್ಮಶ ಪತ್ತೆಯಾಗಿರುವುದು ಗಂಭೀರ ಲೋಪ ಎಂದು ಪರಿಗಣಿಸಿರುವ ದೂರುದಾರರು, ಕೆಎಂಎಫ್‌ನ ಮದರ್ ಡೈರಿ ಮಾರ್ಕೆಟಿಂಗ್ ಮ್ಯಾನೇಜರ್‌ಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 26, 27 ಮತ್ತು 54 ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. "ಲಕ್ಷಾಂತರ ಜನ, ಪುಟ್ಟ ಮಕ್ಕಳು ನಂಬಿ ಕುಡಿಯುವ ಹಾಲಿನಲ್ಲಿ ಇಂತಹ ಬೇಜವಾಬ್ದಾರಿತನ ತೋರಿದರೆ ಹೇಗೆ? ಗಮನಿಸದೆ ಹಾಲನ್ನು ಮಕ್ಕಳಿಗೆ ಕೊಟ್ಟಿದ್ದರೆ ಅವರ ಗತಿಯೇನಾಗುತ್ತಿತ್ತು?" ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಜನರಿಗೆ ಬೆಣ್ಣೆಯೇರಿಕೆ ಬರೆ: 1000 ರು. ಸನಿಹ ಒಂದು ಲೀ. ನಂದಿನಿ ತುಪ್ಪದ ಬೆಲೆ

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು 3 ದಿನಗಳ ಕಾಲಾವಕಾಶ ನೀಡಿದ್ದು, ಇಲ್ಲದಿದ್ದರೆ ಗ್ರಾಹಕರ ವೇದಿಕೆ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಕೆಎಂಎಫ್‌ನ ಇಬ್ಬರು ಹಿರಿಯ ಅಧಿಕಾರಿಗಳು ಸೋಮವಾರ ನಾಗೂರ್ ರೋಜಾ ಅವರ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸತ್ತ ಜೇಡ ಪತ್ತೆಯಾದ ಹಾಲಿನ ಪ್ಯಾಕೆಟ್ ಹಾಗೂ ಸ್ಯಾಂಪಲ್ ಅನ್ನು ಪರೀಕ್ಷೆಗಾಗಿ ವಶಕ್ಕೆ ಪಡೆದಿದ್ದಾರೆ. ಹಾಲನ್ನು ಪ್ಯಾಕ್ ಮಾಡುವ ಘಟಕದಲ್ಲಿ ಈ ತಪ್ಪು ಸಂಭವಿಸಿದೆಯೇ ಅಥವಾ ಹೇಗೆ ಎಂಬ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Vishakha Bhat Heggar

View all posts by this author