‘ನಮ್ಮ ಶಾಲೆ’ ಡಿಜಿಟಲ್ ವೇದಿಕೆಗೆ ಧ್ರುವ್ ಜತ್ತಿ ಚಾಲನೆ; ಸರ್ಕಾರಿ ಶಾಲೆಗಳ ಸಮಸ್ಯೆಗಳ ವರದಿ ಮಾಡಿ, ಪರಿಹಾರದ ಪ್ರಗತಿ ಟ್ರ್ಯಾಕ್ ಮಾಡಲು ಸಾರ್ವಜನಿಕರಿಗೆ ಅವಕಾಶ
NammaShale: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಗುರುತಿಸಿ, ಅವುಗಳ ಪರಿಹಾರ ಕಲ್ಪಿಸುವ ಉದ್ದೇಶದಿಂದ ‘ನಮ್ಮ ಶಾಲೆʼ ಡಿಜಿಟಲ್ ವೇದಿಕೆಯನ್ನು ಧ್ರುವ್ ಜತ್ತಿ ಗುರುವಾರ ಲೋಕಾರ್ಪಣೆ ಮಾಡಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
-
ಬೆಂಗಳೂರು, ಆ.27: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಗುರುತಿಸಿ, ಅವುಗಳ ಪರಿಹಾರ ಕಲ್ಪಿಸುವ ಉದ್ದೇಶದಿಂದ ‘ನಮ್ಮ ಶಾಲೆ’ (NammaShale) ಡಿಜಿಟಲ್ ವೇದಿಕೆಯನ್ನು ಧ್ರುವ್ ಜತ್ತಿ ಅವರು ಗುರುವಾರ ಲೋಕಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಧ್ರುವ್ ಜತ್ತಿ ಅವರು, ಕರ್ನಾಟಕದ ಸರ್ಕಾರಿ ಶಾಲೆಗಳೊಂದಿಗೆ ಹಲವು ವರ್ಷಗಳಿಂದ ನಿಕಟವಾಗಿ ಕೆಲಸ ಮಾಡಿರುವ ಧ್ರುವ್ ಜತ್ತಿ, ರಾಜ್ಯದ ಅನೇಕ ಶಾಲೆಗಳು ಉತ್ತಮ ಪ್ರಗತಿ ಸಾಧಿಸುತ್ತಿದ್ದರೂ, ಇನ್ನೂ ಹಲವು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಸುಸಜ್ಜಿತ ತರಗತಿ ಕೊಠಡಿಗಳು ಹಾಗೂ ಅಗತ್ಯ ಪೀಠೋಪಕರಣಗಳಂತಹ ಮೂಲಭೂತ ಸೌಕರ್ಯಗಳ ಕೊರತೆ ಮುಂದುವರಿದಿದೆ ಎಂದು ಹೇಳಿದರು.
ವೈಯಕ್ತಿಕವಾಗಿ ಸಿಎಸ್‌ಆರ್ ನೆರವಿನ ಮೂಲಕ ಕೆಲವು ಸರ್ಕಾರಿ ಶಾಲೆಗಳ ಪುನರಾಭಿವೃದ್ಧಿಯಲ್ಲಿ ಭಾಗವಹಿಸಿದ ಅನುಭವವನ್ನು ಹೊಂದಿರುವ ಅವರು, ಕರ್ನಾಟಕದಲ್ಲಿ 56,000ಕ್ಕೂ ಹೆಚ್ಚು ಶಾಲೆಗಳಿರುವ ಹಿನ್ನೆಲೆಯಲ್ಲಿ ಇಂತಹ ದೊಡ್ಡ ಸವಾಲನ್ನು ಒಬ್ಬ ವ್ಯಕ್ತಿ, ಒಂದು ಸಂಸ್ಥೆ ಅಥವಾ ಕೆಲವೇ ಯೋಜನೆಗಳ ಮೂಲಕ ಪರಿಹರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಉದ್ದೇಶದಿಂದ ‘ನಮ್ಮ ಶಾಲೆʼ ವೇದಿಕೆಯನ್ನು ರೂಪಿಸಲಾಗಿದೆ.
ಸಮಸ್ಯೆ ವರದಿ ಮಾಡಿ, ಪ್ರಗತಿ ಗಮನಿಸಿ, ಪರಿಹಾರ ಕಂಡುಕೊಳ್ಳಿ
ʼನಮ್ಮ ಶಾಲೆʼ ಮೂಲಕ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಕಂಡುಬರುವ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಸಾರ್ವಜನಿಕರು ಆನ್‌ಲೈನ್‌ನಲ್ಲಿ ವರದಿ ಮಾಡಬಹುದು. ಪರಿಶೀಲನೆಗೆ ಒಳಪಟ್ಟ ವರದಿಗಳನ್ನು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಲುಪಿಸಲಾಗುತ್ತದೆ. ಸಮಸ್ಯೆಯ ಪರಿಹಾರದ ಪ್ರಗತಿಯನ್ನು ಸಾರ್ವಜನಿಕರು ವೇದಿಕೆಯ ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ.
ವೇದಿಕೆಯ ಕಾರ್ಯವಿಧಾನವನ್ನು ಸರಳವಾಗಿ: ವರದಿ ಮಾಡಿ (Report) → ಪ್ರಗತಿ ಗಮನಿಸಿ (Track) → ಪರಿಹರಿಸಿ (Fix) ಎಂಬ ಮೂರು ಹಂತಗಳಲ್ಲಿ ರೂಪಿಸಲಾಗಿದೆ.
ʼನಮ್ಮ ಶಾಲೆʼ ಯಲ್ಲಿ ಸರ್ಕಾರದ ಕ್ರಮಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಪರಿಶೀಲಿಸಲಾದ ಸಮಸ್ಯೆಯು 30 ದಿನಗಳ ನಂತರವೂ ಬಗೆಹರಿಯದೆ ಉಳಿದಿದ್ದರೆ, ನೋಂದಾಯಿತ ಎನ್‌ಜಿಒಗಳು, ಸಿಎಸ್‌ಆರ್ ಸಂಸ್ಥೆಗಳು ಹಾಗೂ ವೈಯಕ್ತಿಕ ದಾನಿಗಳು ಆ ಸಮಸ್ಯೆಯ ಪರಿಹಾರಕ್ಕೆ ಕೈಜೋಡಿಸುವ ಅವಕಾಶವನ್ನು ವೇದಿಕೆ ಕಲ್ಪಿಸುತ್ತದೆ.
ಸರ್ಕಾರಕ್ಕೆ ಪರ್ಯಾಯವಲ್ಲ — ಸಹಭಾಗಿತ್ವಕ್ಕೆ ಸೇತುವೆ
ʼನಮ್ಮ ಶಾಲೆʼ ಸರ್ಕಾರದ ವಿರುದ್ಧದ ವೇದಿಕೆಯಲ್ಲ ಎಂದು ಧ್ರುವ್ ಜತ್ತಿ ಸ್ಪಷ್ಟಪಡಿಸಿದರು. ಬದಲಾಗಿ, ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಲು ವ್ಯವಸ್ಥೆಗೆ ನೆರವಾಗುವುದು, ಸಮಸ್ಯೆಗಳ ಪರಿಹಾರದಲ್ಲಿ ಪಾರದರ್ಶಕತೆ ತರುವುದು ಮತ್ತು ಸಾರ್ವಜನಿಕರು, ಶಾಲೆಗಳು, ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಜವಾಬ್ದಾರಿಯುತ ಪಾಲುದಾರರನ್ನು ಒಂದೇ ವೇದಿಕೆಗೆ ತರುವುದು ಇದರ ಉದ್ದೇಶವಾಗಿದೆ.
“ಕರ್ನಾಟಕದ ಭವಿಷ್ಯವು ಇಂದಿನ ಮಕ್ಕಳಿಗೆ ಸಿಗುವ ಶಿಕ್ಷಣದ ಗುಣಮಟ್ಟದ ಮೇಲೆ ನಿಂತಿದೆ. ಪ್ರತಿಯೊಂದು ಮಗುವಿಗೂ ಸುರಕ್ಷಿತ, ಗೌರವಾನ್ವಿತ ಮತ್ತು ಉತ್ತಮ ಸೌಲಭ್ಯಗಳನ್ನು ಹೊಂದಿರುವ ಶಾಲೆಯಲ್ಲಿ ಕಲಿಯುವ ಹಕ್ಕಿದೆ. ‘ನಮ್ಮ ಶಾಲೆʼ ಮೂಲಕ ಸಮಸ್ಯೆಗಳನ್ನು ಕೇವಲ ಗುರುತಿಸುವುದಷ್ಟೇ ಅಲ್ಲದೆ, ಅವುಗಳ ಪರಿಹಾರದವರೆಗೆ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಗಮನಹರಿಸುವ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಉದ್ದೇಶ” ಎಂದು ಧ್ರುವ್ ಜತ್ತಿ ಹೇಳಿದರು.
ʼನಮ್ಮ ಶಾಲೆʼ ಯಲ್ಲಿ ಸಾರ್ವಜನಿಕರು ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ವರದಿ ಮಾಡುವುದರ ಜತೆಗೆ, ಅವುಗಳ ಪರಿಹಾರದ ಪ್ರಗತಿಯನ್ನು ಗಮನಿಸಬಹುದು. ಪರಿಹಾರವಾಗದ ಸಮಸ್ಯೆಗಳ ಸಂದರ್ಭದಲ್ಲಿ ಅರ್ಹ ಸಂಸ್ಥೆಗಳು ಮತ್ತು ದಾನಿಗಳು ಜವಾಬ್ದಾರಿಯುತವಾಗಿ ಕೈಜೋಡಿಸಲು ವೇದಿಕೆ ಅವಕಾಶ ಕಲ್ಪಿಸುತ್ತದೆ.
ʼನಮ್ಮ ಶಾಲೆʼ ಯೊಂದಿಗೆ ಕೈಜೋಡಿಸಿ
ಸರ್ಕಾರಿ ಶಾಲೆಯ ಸಮಸ್ಯೆ ವರದಿ ಮಾಡಲು:
NammaShale WhatsApp Community:
Instagram: @namma.shale