ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಸೆ.15ರ ಒಳಗೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣ: ಡಿ.ಕೆ.ಶಿವಕುಮಾರ್

ಮೇ 15ರಿಂದ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಜಿಎ) ಆಗಿ ಪರಿವರ್ತನೆಗೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. 120 ದಿನಗಳಲ್ಲಿ ನಾವು ಪಾಲಿಕೆಗಳನ್ನು ರಚನೆ ಮಾಡಲೇಬೇಕು. ಹೀಗಾಗಿ ಎಷ್ಟು ಪಾಲಿಕೆ ಮಾಡಬೇಕು ಎಂದು ಬೆಂಗಳೂರಿನ ಎಲ್ಲ ಶಾಸಕರ ಬಳಿ ಸಲಹೆಗಳನ್ನು ಕೇಳಿದ್ದೇನೆ. ನಂತರ ಮುಂದೆ ಎಲ್ಲೆಲ್ಲಿ ವಿಸ್ತರಣೆ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಸೆಪ್ಟೆಂಬರ್ 15ರ ಒಳಗಾಗಿ ಈ ಪಾಲಿಕೆಗಳು ರಚನೆಯಾಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸೆ.15ರ ಒಳಗೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣ: ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್.

Profile Siddalinga Swamy May 24, 2025 11:35 PM

ಬೆಂಗಳೂರು: ಸೆಪ್ಟೆಂಬರ್ 15ರ ಒಳಗಾಗಿ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣಗೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು. ಗ್ರೇಟರ್ ಬೆಂಗಳೂರು ಸಭೆ ನಂತರ ವಿಧಾನಸೌಧದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಇನ್ನೂ ಮೂರ್ನಾಲ್ಕು ಶಾಸಕರ ಜತೆ ಚರ್ಚೆ ಮಾಡುತ್ತೇನೆ. ಎಲ್ಲರ ಸಲಹೆ ಪಡೆದ ಬಳಿಕ ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಮೇ 15ರಿಂದ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಜಿಎ) ಆಗಿ ಪರಿವರ್ತನೆಗೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. 120 ದಿನಗಳಲ್ಲಿ ನಾವು ಪಾಲಿಕೆಗಳನ್ನು ರಚನೆ ಮಾಡಲೇಬೇಕು. ಹೀಗಾಗಿ ಎಷ್ಟು ಪಾಲಿಕೆ ಮಾಡಬೇಕು ಎಂದು ಬೆಂಗಳೂರಿನ ಎಲ್ಲಾ ಶಾಸಕರ ಬಳಿ ಸಲಹೆಗಳನ್ನು ಕೇಳಿದ್ದೇನೆ. ನಂತರ ಮುಂದೆ ಎಲ್ಲೆಲ್ಲಿ ವಿಸ್ತರಣೆ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಸೆಪ್ಟೆಂಬರ್ 15ರ ಒಳಗಾಗಿ ಈ ಪಾಲಿಕೆಗಳು ರಚನೆಯಾಗಬೇಕು ಎಂದು ತಿಳಿಸಿದರು.

ಮಳೆ ಪೀಡಿತ ಪ್ರದೇಶಗಳ ಶಾಸಕರ ಜತೆ ಚರ್ಚೆ ಮಾಡಿ ತುರ್ತು ಕೆಲಸ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದೇವೆ. ಇದಕ್ಕೆ ಅಗತ್ಯವಿರುವ ಬಜೆಟ್ ಅನ್ನು ಸರ್ಕಾರದಿಂದ ನೀಡುತ್ತೇವೆ ಎಂದರು. ಟ್ಯಾಂಕರ್ ನೀರಿನ ವಿಚಾರವಾಗಿ ದೂರು ಬಂದಿರುವ ಪ್ರದೇಶಗಳಲ್ಲಿ ಆಯಾ ಋತುವಿಗೆ ತಕ್ಕಂತೆ ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಎಲ್ಲ ಫುಟ್‌ಪಾತ್ ಅಂಗಡಿಗಳು ತೆರವುಗೊಳಿಸಲು ನಿರ್ಧಾರ

ಬೆಂಗಳೂರಿನ ಎಲ್ಲ ಫುಟ್‌ಪಾತ್ ಅಂಗಡಿಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದೇವೆ. 27,665 ಬೀದಿ ಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ನಾವು ಅವರಿಗೆ ತಳ್ಳುವ ವಾಹನ ನೀಡಲು ಸಿದ್ಧರಿದ್ದೇವೆ. ನಾವು ನಿಗದಿ ಮಾಡುವ ಜಾಗದಲ್ಲಿ ವಾಹನ ಇಟ್ಟುಕೊಂಡು ವ್ಯಾಪಾರ ಮಾಡಬೇಕು. 3,755 ಜನ ವ್ಯಾಪಾರಿಗಳು ವಾಹನ ಬೇಕು ಎಂದು ಕೇಳಿದ್ದಾರೆ ಎಂದು ಹೇಳಿದರು. ನೀವು ಶಾಸಕರ ಮೂಲಕ ಒತ್ತಡ ತರಬೇಡಿ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ನಾವು ಒಂದೇ ಬಾರಿಗೆ ಇದನ್ನು ತೆರವುಗೊಳಿಸಲು ಆಗದಿದ್ದರೂ, ವ್ಯವಸ್ಥಿತವಾಗಿ ಹಂತ ಹಂತವಾಗಿ ಇದನ್ನು ಸರಿಪಡಿಸಲಾಗುವುದು ಎಂದರು.

ರಸ್ತೆ ಅಗಲಗೊಳಿಸುವ ವಿಚಾರವಾಗಿ ಶಾಸಕರ ಜತೆ ಚರ್ಚೆ ಮಾಡಲಾಗಿದ್ದು, ಶಾಸಕರು ಎಲ್ಲೆಲ್ಲಿ ರಸ್ತೆ ಅಗಲೀಕರಣ ಆಗಬೇಕು ಎಂದು ಶಿಫಾರಸ್ಸು ಮಾಡುತ್ತಾರೋ ಅಲ್ಲಿ ಆಸ್ತಿ ಮಾಲೀಕರಿಗೆ ಟಿಡಿಆರ್ ನೀಡಲಾಗುವುದು. ಶಾಸಕರು ಆಸ್ತಿ ಮಾಲೀಕರ ಜತೆ ಚರ್ಚೆ ಮಾಡಬೇಕು ಎಂದು ತಿಳಿಸಿದರು.

ರಾಜಕಾಲುವೆ ಅಕ್ಕಪಕ್ಕದ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಚರ್ಚಿಸಿದ್ದು, ನಾವು 300 ಕಿ.ಮೀ ಉದ್ದದ ರಸ್ತೆ ಗುರುತಿಸಿದ್ದು, ಶಾಸಕರು ಕೂಡ ಸುಮಾರು 300 ಕಿ.ಮೀ ಉದ್ದದಷ್ಟು ರಸ್ತೆ ಮಾಡಲು ಶಿಫಾರಸ್ಸು ನೀಡಬಹುದು ಎಂದು ಹೇಳಿದ್ದೇವೆ. ಮುಂದೆ ತಗ್ಗು ಪ್ರದೇಶಗಳಲ್ಲಿ ಬೇಸ್‌ಮೆಂಟ್ ಪಾರ್ಕಿಂಗ್‌ಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಸೀವೇಜ್ ಹಾಗೂ ನೀರು ಗಾಲುವೆಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂದು ಕೆಲವು ಶಾಸಕರು ಹೇಳಿದ್ದಾರೆ. ಈ ರೀತಿ ಎಳೆದಿರುವ ಕೇಬಲ್‌ಗಳನ್ನು ಕತ್ತರಿಸಿ ಹಾಕಲು ನಾನು ಹೇಳಿದ್ದೇನೆ. ಇನ್ನು ಚರಂಡಿಗಳಲ್ಲಿ ಹೂಳು ಎತ್ತಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ 5 ಲಕ್ಷ ಆಸ್ತಿಗಳ ಡಿಜಿಟಲೀಕರಣ ಪೂರ್ಣ

ನಗರದ 25 ಲಕ್ಷ ಆಸ್ತಿಗಳನ್ನು ಈ ಖಾತಾ ಮಾಡಲು ಹೇಳಿದ್ದು, ಎಲ್ಲಾ ಆಸ್ತಿಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡುತ್ತಿದ್ದು, ಈಗಾಗಲೇ 5 ಲಕ್ಷ ಆಸ್ತಿಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಇದನ್ನು ದೊಡ್ಡ ಅಭಿಯಾನವಾಗಿ ಮಾಡುತ್ತಿದ್ದೇವೆ. ಆ ಮೂಲಕ ತೆರಿಗೆ ಹಾಗೂ ಆಸ್ತಿ ದಾಖಲಾತಿಯಲ್ಲಿ ಪಾರದರ್ಶಕತೆ ತರಲಾಗುತ್ತಿದೆ. ಇದಕ್ಕಾಗಿ ನ್ಯಾಷನಲ್ ಈ ಗವರ್ನೆನ್ಸ್ ಅವಾರ್ಡ್ ಕೂಡ ಸಿಕ್ಕಿದೆ ಎಂದು ಮಾಹಿತಿ ನೀಡಿದರು.

ಇನ್ನು ಸ್ಕೈ ಡೆಕ್ ಅನ್ನು ಹೆಮ್ಮಿಗೆಪುರದಲ್ಲಿ ನಿರ್ಮಿಸಲು ತೀರ್ಮಾನಿಸಿದ್ದೆವು. ಆದರೆ ವಿಮಾನ ನಿಲ್ದಾಣದಿಂದ 20 ಕಿ.ಮೀ ದೂರ ಇರಬೇಕು ಎಂಬ ಕಾರಣದಿಂದ ಅಲ್ಲಿ ಸಮಸ್ಯೆ ಎದುರಾಗಿದೆ. ಹೀಗಾಗಿ ಇದನ್ನು ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎ ಜಾಗದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದರು

ರಸ್ತೆಗಳಲ್ಲಿ ಹಳೆ ವಾಹನಗಳನ್ನು ನಿಲ್ಲಿಸಿ ಹೋಗುತ್ತಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆಯಿಂದ 100 ಎಕರೆ ಜಾಗ ಒದಗಿಸಿ, ಆ ಎಲ್ಲಾ ವಾಹನಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಸಂಚಾರಿ ಪೊಲೀಸರಿಗೆ ಸೂಚಿಸಲಾಗಿದೆ. ಪಾಲಿಕೆ ಕಾನೂನಿನ ಪ್ರಕಾರ 21 ದಿನಗಳ ಕಾಲ ರಸ್ತೆಯಲ್ಲಿ ನಿಲ್ಲಿಸಿರುವ ವಾಹನ ತೆಗೆಯದಿದ್ದರೆ ಅದನ್ನು ಅನಾಥ ವಾಹನ ಎಂದು ಪರಿಗಣಿಸಿ ಹರಾಜು ಹಾಕಲು ಅವಕಾಶವಿದೆ. ಇನ್ನು ಪೊಲೀಸರು ನಿಗದಿ ಮಾಡುವ ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ ಎಂದರು.

ಇನ್ನು ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ಸರ್ವೀಸ್ ರಸ್ತೆಗಳನ್ನು ಮುಖ್ಯ ರಸ್ತೆ ಜತೆ ವಿಲೀನ ಮಾಡಿ ಸುಗಮವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಸುಮಾರು 40-50 ಕಿ.ಮೀ ಪ್ರಮುಖ ರಸ್ತೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವಾಗಿ ಶಾಸಕರನ್ನು ವಿಶ್ವಾಸಕ್ಕೆ ಪಡೆದಿದ್ದು, ಎಲ್ಲರೂ ಒಪ್ಪಿದ್ದಾರೆ ಎಂದರು.

ಬಿಬಿಎಂಪಿ ವಿಭಜನೆ ಬಗ್ಗೆ ಬಿಜೆಪಿ ನಾಯಕರು ಅಪಸ್ವರ ಎತ್ತಿದ್ದಾರೆ ಎಂದು ಕೇಳಿದಾಗ, ʼಅವರು ನಿಮ್ಮ ಮುಂದೆ ಏನು ಹೇಳುತ್ತಾರೋ. ಆದರೆ ನನ್ನ ಬಳಿ ಅವರು ಏನು ಹೇಳುತ್ತಾರೆ ಎಂದು ನನಗೆ ಮಾತ್ರ ಗೊತ್ತಿದೆ ಎಂದರು. ‌

ಈ ಸುದ್ದಿಯನ್ನೂ ಓದಿ | CM Siddaramaiah: 600 ಕೋಟಿ ರೂ.ಗೂ ಅಧಿಕ ವೆಚ್ಚದ ಅನುಭವ ಮಂಟಪ ಮುಂದಿನ ವರ್ಷ ಲೋಕಾರ್ಪಣೆ: ಸಿದ್ದರಾಮಯ್ಯ

ಟನಲ್ ರಸ್ತೆ ಮಾಡುವುದು ಅಸಾಧ್ಯ ಎಂಬ ಬಿಜೆಪಿ ನಾಯಕರ ಮಾತಿನ ಬಗ್ಗೆ ಕೇಳಿದಾಗ, ʼಈ ಯೋಜನೆಯ ಟೆಂಡರ್ ಬಂದಾಗ ಗೊತ್ತಾಗುತ್ತದೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.