ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಭೂಮಿ ದಾಖಲೆ ನೀಡುವುದು ನಮ್ಮ 6ನೇ ಗ್ಯಾರಂಟಿ: ಡಿ.ಕೆ. ಶಿವಕುಮಾರ್‌

State Congress Government: ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, 4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ 500 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಡಿಪಿಆರ್ ಸಿದ್ಧಪಡಿಸುತ್ತಿದ್ದೇವೆ. ನಗರದಲ್ಲಿ 1650 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಿದ್ದು, ಹೊಸದಾಗಿ 104 ಕಿಮೀ ರಸ್ತೆಗೆ ವೈಟ್ ಟಾಪಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು: 4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ 500 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಡಿಪಿಆರ್ ಸಿದ್ಧಪಡಿಸುತ್ತಿದ್ದೇವೆ. ನಗರದಲ್ಲಿ 1650 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಿದ್ದು, ಹೊಸದಾಗಿ 104 ಕಿಮೀ ರಸ್ತೆಗೆ ವೈಟ್ ಟಾಪಿಂಗ್ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ವೈಟ್ ಟಾಪಿಂಗ್ ರಸ್ತೆಗಳು ಸುಮಾರು 25-30 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಈಗಾಗಲೇ 148 ಕಿ.ಮೀ ಉದ್ದದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 83 ರಸ್ತೆಗಳ ಅಭಿವೃದ್ದಿಗೆ 1,800 ಕೋಟಿ ಹಣ ವ್ಯಯಿಸಲಾಗುತ್ತಿದೆ. 350 ಕಿಲೋ ಮೀಟರ್ ಉದ್ದದ 182 ರಸ್ತೆಗಳಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇದಕ್ಕೆ 695 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಮುಖ್ಯಮಂತ್ರಿಯವರು ಹೊಸದಾಗಿ 1100 ಕೋಟಿ ರೂಪಾಯಿ ಅನುದಾನ ನೀಡಿದ್ದು, ಇದರಿಂದ 550 ಕಿ.ಮೀ. ಉದ್ದದ ರಸ್ತೆಗಳ ಡಾಂಬರೀಕರಣ ಕೈಗೆತ್ತಿಕೊಂಡಿದ್ದೇವೆ ಎಂದು ವಿವರಿಸಿದರು.

ಕಳೆದ ಸಚಿವ ಸಂಪುಟ ಸಭೆಯಲ್ಲಿ 117 ಕಿಮೀ ಉದ್ದದ ಬೆಂಗಳೂರು ಬಿಜಿನೆಸ್ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಬಿಡಿಎ ಕಾಯ್ದೆ ಪ್ರಕಾರ ದುಪ್ಪಟ್ಟು ಪರಿಹಾರ ನೀಡಲು ಅವಕಾಶವಿಲ್ಲ. ಆದರೂ ನಮ್ಮ ಸರ್ಕಾರ ರೈತರಿಗೆ ಬಂಪರ್ ಪರಿಹಾರ ನೀಡಲು ಮುಂದಾಗಿದೆ. ಮೂರು ಪಟ್ಟು ಪರಿಹಾರ, ಟಿಡಿಆರ್ ಅಥವಾ ಎಫ್‌ಎಆರ್ ‌ನೀಡಲು ತೀರ್ಮಾನ ಮಾಡಿದ್ದೇವೆ. ಹಿಂದಿನ ಯಾವ ಸರ್ಕಾರವೂ ಈ ವಿಚಾರದಲ್ಲಿ ಧೈರ್ಯ ತೋರಿಸಿರಲಿಲ್ಲ. 2007-08 ರಲ್ಲಿ ತೀರ್ಮಾನವಾಗಿದ್ದರೂ ಅನುಷ್ಠಾನ ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.

ಪ್ರಧಾನಿಯವರಿಂದ ಇನ್ನೂ ಉತ್ತರ ಬಂದಿಲ್ಲ

ಪ್ರಧಾ‌ನಿ ನರೇಂದ್ರ ಮೋದಿಯವರು ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಬಂದಿದ್ದ ಸಂದರ್ಭದಲ್ಲಿ, ನಗರದ ಅಭಿವೃದ್ದಿಗೆ 1.5 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುದಾನ ನೀಡಬೇಕು, ಮುಂಬೈ ನಂತರ ಬೆಂಗಳೂರು ಅತಿ ಹೆಚ್ಚು ತೆರಿಗೆ ನೀಡುತ್ತಿದೆ‌ ಎಂದು ಮನವಿ ಮಾಡಿದ್ದೆ. ಆದರೆ ಅವರಿಂದ ಇದುವರೆಗೂ ಉತ್ತರ ಬಂದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ನಗರದಲ್ಲಿ 113 ಕಿಲೋಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಮೊದಲ ಹಂತದಲ್ಲಿ 40 ಕಿಲೋಮೀಟರ್ ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದಕ್ಕೆ ಖಾಲಿಡಬ್ಬ ಸಂಸದನೊಬ್ಬ ಬರೀ ಟ್ವೀಟ್ ಮಾಡಿಕೊಂಡು ಟೀಕೆ ಮಾಡುತ್ತಿದ್ದಾನೆ ಎಂದು ಕಿಡಿಕಾರಿದರು.

ಐದು ಜನ ಸಂಸದರನ್ನು ಬೆಂಗಳೂರು ಜನತೆ ಗೆಲ್ಲಿಸಿದ್ದಾರೆ. ನಿರ್ಮಲ ಸೀತಾರಾಮನ್ ಕೇಂದ್ರ ಹಣಕಾಸು ಸಚಿವರಾಗಿದ್ದಾರೆ‌. ಒಬ್ಬನೇ ಒಬ್ಬ ಸಂಸದ ಹತ್ತು ರೂಪಾಯಿ ಅನುದಾನವನ್ನು ಕರ್ನಾಟಕಕ್ಕೆ ತಂದಿದ್ದರೆ ಜನರು ನೀಡುವ ಶಿಕ್ಷೆಗೆ ನಾನು ತಲೆಬಾಗುತ್ತೇನೆʼ ಎಂದು ಕಿಡಿಕಾರಿದರು.

ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಅನುದಾನ ಸಿಕ್ಕಿತ್ತು

ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಜೆ- ನರ್ಮ್ ಯೋಜನೆಯಡಿ ಎಲ್ಲದಕ್ಕೂ ಅನುದಾನ ಬರುತ್ತಿತ್ತು. ಈಗಿನ ಸಂಸದರು ಒಂದು ಯೋಜನೆಗೂ ಅರ್ಜಿ ಕೊಟ್ಟಿಲ್ಲ. ಒಬ್ಬರಾದರೂ ಪ್ರಧಾನಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆಯೇ? ಬಿಜೆಪಿ ಸಂಸದರ ಕೊಡುಗೆ ರಾಜ್ಯಕ್ಕೆ ಶೂನ್ಯ. ರಾಜ್ಯಸಭಾ ಸಂಸದ ಲೆಹರ್ ಸಿಂಗ್ ಅವರು ಮಂಗಳವಾರ (ಇಂದು) ನನ್ನನ್ನು ಭೇಟಿ ಮಾಡಿದ್ದರು. ದೇಶಕ್ಕೆ ಬೆಂಗಳೂರು ಇಷ್ಟೆಲ್ಲಾ ಕೊಡುಗೆ ನೀಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಸೂಕ್ತ ಅನುದಾನ ನೀಡುವಂತೆ ಹೇಳಿ ಎಂದು ಅವರಿಗೆ ಹೇಳಿದೆ ಎಂದರು.

10 ಸಾವಿರ ಗುಂಡಿ ಮುಚ್ಚಿದ್ದೇವೆ

ನಗರದಾದ್ಯಂತ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಗರದಾದ್ಯಂತ 20 ಸಾವಿರ ಗುಂಡಿಗಳಿವೆ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ನ್ಯಾಯಾಲಯ ಇದರ ಬಗ್ಗೆ ಪರಿಶೀಲನೆ ಮಾಡುತ್ತಿತ್ತು. ಆದರೆ ನಿಮ್ಮ ಕಾಂಗ್ರೆಸ್ ಸರ್ಕಾರ ಸಮಸ್ಯೆ ತಿಳಿಸುವ ಅಧಿಕಾರವನ್ನು ಜನರಿಗೆ‌ ನೀಡಿದೆ. ನೀವು ಓಡಾಡುವ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ, ನಿಮ್ಮ ಮನೆ ಬಳಿ ಕಸವಿದ್ದರೆ ಅದರ ಫೋಟೋ ತೆಗೆದು ಸರ್ಕಾರದ ಗಮನಕ್ಕೆ ತನ್ನಿ ಎಂದು ಇದುವರೆಗೂ ಯಾರು ಹೇಳಿದ್ದಾರೆ. ಈ ಕೆಲಸವನ್ನು ನಿಮ್ಮ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸರ್ಕಾರ ಮಾಡಿದೆ ಎಂದು ವಿವರಿಸಿದರು.

10 ವರ್ಷಗಳ ಬಳಿಕ ನಮ್ಮ ಕೆಲಸ ಸ್ಮರಿಸುತ್ತೀರಿ

ಹಳೆಯದನ್ನು ಮರೆಯಬೇಕು, ಹೊಸ ರೂಪ ನೀಡಬೇಕು ಎಂದು ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಬದಲಾವಣೆಗೆ ನಾವು ಹೆಜ್ಜೆ ಇಟ್ಟಿದ್ದೇವೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಂಗಳೂರನ್ನು ಬೆಳೆಸಬೇಕು ಎಂದು ಪಣತೊಟ್ಟಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳನ್ನು ಇಲ್ಲಿನ ಜನತೆ ಮುಂದಿನ 10 ವರ್ಷಗಳ ನಂತರ ನೆನಪಿಸಿಕೊಳ್ಳುತ್ತಾರೆ. ಒಂದೇ ದಿನದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ‌ ಹಂತವಾಗಿ ನಾವು ನಮ್ಮ ಜವಾಬ್ದಾರಿ ನಿರ್ವಹಿಸುತ್ತೇವೆ ಎಂದರು.

ಈ ಸುದ್ದಿಯನ್ನೂ ಓದಿ | ಬೆಂಗಳೂರಿನ ಮೆಟ್ರೋಗೆ ರಾಜ್ಯ ಸರ್ಕಾರದಿಂದಲೇ ಶೇ.87ರಷ್ಟು ಹಣ: ಸಿಎಂ ಸಿದ್ದರಾಮಯ್ಯ

ಸಚಿವರಾದ ಕೃಷ್ಣಬೈರೇಗೌಡ ಹಾಗೂ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಹಟ್ಟಿ, ತಾಂಡಗಳಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರ ನೀಡುತ್ತಿದ್ದೇವೆ. ಜನಸಾಮಾನ್ಯರ ಆಸ್ತಿಗಳನ್ನ ರಕ್ಷಣೆ ಮಾಡುವುದೇ ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ ಎಂದರು.‌ ಈ ಹಿಂದೆ 'ಬಿ' ಖಾತೆ ನೀಡುತ್ತಿದ್ದರು. ಇದರಿಂದ ಯಾರಿಗೂ ಸಹ ಬ್ಯಾಂಕ್‌ನಲ್ಲಿ ಸಾಲ ದೊರೆಯುತ್ತಿರಲಿಲ್ಲ. ಆದಕಾರಣಕ್ಕೆ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರಿಗೂ 'ಎ' ಖಾತೆ ನೀಡುವ ಐತಿಹಾಸಿಕ ತೀರ್ಮಾನವನ್ನ ಸರ್ಕಾರ ಮಾಡಿದೆ. ಈ ಕೆಲಸವನ್ನು ನೋಡಿದ ಕೇಂದ್ರ‌ ಸರ್ಕಾರವು ನಮ್ಮ ಅಧಿಕಾರಿಗಳನ್ನು ಕರೆಸಿ ಇಡೀ ದೇಶಕ್ಕೆ ಮಾದರಿ ಕೆಲಸ ಮಾಡುತ್ತಿದ್ದೀರಾ ಎಂದು ಶ್ಲಾಘಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.