ಬೆಂಗಳೂರು: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ (LPG Shortage) ಉಂಟಾಗಿರುವುದರಿಂದ ರಾಜಧಾನಿಯಲ್ಲಿ ಹೋಟೆಲ್, ರೆಸ್ಟೋರೆಂಟ್‌ಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಈಗ ನಗರ ಪಿಜಿಗಳಿಗೂ (Bengaluru PGs) ಗ್ಯಾಸ್ ಕೊರತೆ ಬಿಸಿ ತಟ್ಟಿದ್ದು, ಅಡುಗೆ ಮಾಡುವುದಕ್ಕೆ ಮಾಲೀಕರು ಚಿಂತಿಸುವಂತಾಗಿದೆ.
ವಾಣಿಜ್ಯ ಸಿಲಿಂಡರ್ಗೆ 115 ರೂ ಏರಿಕೆ ಆಗಿದ್ದು, ಪೂರೈಕೆಯಲ್ಲೂ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಇದರಿಂದ ಬೆಂಗಳೂರಿನ ಜನಜೀವನದ ಮೇಲೂ ಪರಿಣಾಮ ಬೀರುತ್ತಿದೆ.
ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ದೇಶದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಜನರು ಆಗಮಿಸುತ್ತಾರೆ. ಹೀಗೆ ಆಗಮಿಸುವವರಲ್ಲಿ ಹಲವರು ಹೆಚ್ಚಾಗಿ ಪಿಜಿಗಳನ್ನೇ ಅವಲಂಬಿಸಿದ್ದಾರೆ. ಪ್ರಸ್ತುತ ನಗರದಲ್ಲಿ 15 ಸಾವಿರ ಪಿಜಿಗಳಲ್ಲಿದ್ದು, 10 ಲಕ್ಷಕ್ಕೂ ಹೆಚ್ಚರು ಜನರು ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಸಾಮಾನ್ಯವಾಗಿ ಪಿಜಿಗಳಲ್ಲಿ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಇದೀಗ ಉಂಟಾಗಿರುವ ಗ್ಯಾಸ್ ಕೊರತೆಯಿಂದಾಗಿ ಒಂದು ಹೊತ್ತು ಅಡುಗೆ ಮಾಡಲೂ ಪಿಜಿ ಮಾಲೀಕರು ಪರದಾಡುವಂತಾಗಿದೆ.
ಈ ಬಗ್ಗೆ ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಪಿಜಿಗಳಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಸಿಗುತ್ತಿಲ್ಲ. ಸದ್ಯ ಇರುವ ಸಿಲಿಂಡರ್‌ಗಳಲ್ಲಿ ಇನ್ನೊಂದು ವಾರ ಮ್ಯಾನೇಜ್ ಮಾಡಬಹುದು. ಮುಂದೆ ಹೇಗೆ ಎಂಬ ಭೀತಿ ಎದುರಾಗಿದೆ ಎಂದು ಹೇಳಿದ್ದಾರೆ.
ಇನ್ನು ಗ್ಯಾಸ್ ಕೊರತೆಯಿಂದ ಊಟದ ಮೆನುವಿನಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಿಜಿಗಳಲ್ಲಿ ಚಪಾತಿ, ರೊಟ್ಟಿ ಮಾಡದಂತೆ ನಿರ್ಧರಿಸಲಾಗಿದೆ. ಅನ್ನ, ಸಾಂಬಾರ್, ಪಲಾವ್ ಹೀಗೆ ಗ್ಯಾಸ್ ಕಡಿಮೆ ಬಳಕೆ ಆಗುವ ಪದಾರ್ಥಗಳನ್ನು ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಪಿಜಿಗಳಲ್ಲಿ ಇಂದಿನಿಂದಲೇ ಹೊಸ ಮೆನು ಜಾರಿ ಆಗುತ್ತದೆ. ಕಮರ್ಷಿಯಲ್ ಗ್ಯಾಸ್ ದರ ಹೆಚ್ಚಾದರೂ ನಾವು ಬಾಡಿಗೆ ಹೆಚ್ಚಳ ಮಾಡಲ್ಲ. ಸದ್ಯ ನಾವೇ ಭರಿಸುತ್ತೇವೆ. ಇದೇ ದರ ಮುಂದುವರೆದರೆ ಮುಂದೆ ನೋಡಬೇಕಾಗುದೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಳು ನಮ್ಮ ನೆರವಿಗೆ ಮುಂದಾಗಬೇಕಿದೆ ಎಂದು ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಮನವಿ ಮಾಡಿದ್ದಾರೆ.