Dharmasthala Case: ಧರ್ಮಸ್ಥಳ ಪ್ರಕರಣಕ್ಕೆ ಇಡಿ ಎಂಟ್ರಿ; ಎನ್‌ಜಿಒಗಳಿಗೆ ವಿದೇಶಿ ಫಂಡಿಂಗ್ ಕುರಿತು ಪರಿಶೀಲನೆ
ED investigation: ಕೆಲ ಎನ್‌ಜಿಒಗಳಿಗೆ ವಿದೇಶದಿಂದ ಫಂಡಿಂಗ್ ಆಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ಒಡನಾಡಿ ಹಾಗೂ ಸಂವಾದ ಸಂಸ್ಥೆಯ ಹಣಕಾಸಿನ ವಹಿವಾಟು ಬಗ್ಗೆ ಪರಿಶೀಲಿಸಲು ಇಡಿ ಮುಂದಾಗಿದೆ ಎಂದು ತಿಳಿದುಬಂದಿದೆ. ಬ್ಯಾಂಕ್‌ಗಳಿಗೆ ಪತ್ರ ಬರೆದು ಎನ್‌ಜಿಒಗಳ ಕಳೆದ 5 ವರ್ಷಗಳ ಟ್ರಾನ್ಸಾಕ್ಷನ್ ಬಗ್ಗೆ ಮಾಹಿತಿ ಕೋರಲಾಗಿದೆ.

-

ಮಂಗಳೂರು: ಧರ್ಮಸ್ಥಳ ಪ್ರಕರಣದ (Dharmasthala Case) ತನಿಖೆಗೆ ಇದೀಗ ಇಡಿ ಎಂಟ್ರಿಯಾಗಿದೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ವಿದೇಶದಿಂದ ಹಣ ಬಂದಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಫೆಮಾ ಮತ್ತು ಫೆರಾ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಜಾರಿ ನಿರ್ದೇಶನಾಲಯ (ಇಡಿ) ತನಿಖೆಗೆ ಮುಂದಾಗಿದೆ.
ತೇಜಸ್ ಎ ಗೌಡ ಹಾಗೂ ಮತ್ತೊಬ್ಬರ ದೂರು ಆಧರಿಸಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಈಗಾಗಲೇ ಧರ್ಮಸ್ಥಳ ಪ್ರಕರಣವನ್ನು ಎಸ್ಐಟಿ ತನಿಖೆ ಮಾಡುತ್ತಿದೆ. ಇದರ ನಡುವೆಯೇ ಈಗ ಧರ್ಮಸ್ಥಳ ಪ್ರಕರಣಕ್ಕೆ ಇಡಿ ಕೂಡ ಎಂಟ್ರಿಯಾಗಿದೆ.
ಕೆಲ ಎನ್‌ಜಿಒಗಳಿಗೆ ವಿದೇಶದಿಂದ ಫಂಡಿಂಗ್ ಆಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ಒಡನಾಡಿ ಹಾಗೂ ಸಂವಾದ ಸಂಸ್ಥೆಯ ಹಣಕಾಸಿನ ವಹಿವಾಟು ಬಗ್ಗೆ ಪರಿಶೀಲಿಸಲು ಇಡಿ ಮುಂದಾಗಿದೆ. ಈ ಬಗ್ಗೆ ಮಾಹಿತಿ ಕೋರಿ ಎಸ್ಬಿಐ ಸೇರಿ ಇತರೆ ಬ್ಯಾಂಕ್‌ಗಳಿಗೆ ಪ್ಯಾನ್ ಹಾಗೂ ಅಕೌಂಟ್ಗಳ ಕುರಿತು ಪತ್ರ ಬರೆಯಲಾಗಿದೆ. ಕಳೆದ 5 ವರ್ಷಗಳ ಟ್ರಾನ್ಸಾಕ್ಷನ್ ಬಗ್ಗೆ ನೀಡುವಂತೆ ಮನವಿ ಮಾಡಲಾಗಿದೆ.
ವಿದೇಶದಿಂದ ಹಣ ಬಂದಿರುವ ಕುರಿತು ಮಾಹಿತಿ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆ ನೀಡುವಂತೆ ಬ್ಯಾಂಕ್‌ಗಳಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಮಾಹಿತಿ ಸಂಗ್ರಹವಾದ ಮೇಲೆ ಮುಂದಿನ ಕ್ರಮವನ್ನು ಇಡಿ ಅಧಿಕಾರಿಗಳು ಕೈಗೊಳ್ಳಲಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಪತ್ರ
ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಯೂಟ್ಯೂಬರ್ಗಳಿಗೆ ವಿದೇಶಗಳಿಂದ ಹಣ ಸಂದಾಯವಾಗುತ್ತಿದೆ ಎಂಬ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಬೇಕು ಎಂದು ಕೋರಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು.
ಈ ಸುದ್ದಿಯನ್ನೂ ಓದಿ | Dharmasthala Case: ಗಿರೀಶ್ ಮಟ್ಟಣ್ಣವರ್ ವಿರುದ್ಧ ಮತ್ತೊಂದು ಎಫ್‌ಐಆರ್
ಧರ್ಮಸ್ಥಳ ದೇವಸ್ಥಾನಕ್ಕೆ ದೇಶ ವಿದೇಶಗಳಿಂದದ ಭಕ್ತರು ಬರುತ್ತಾರೆ. ಹೀಗಾಗಿ ದೇಗುಲದ ಪಾವಿತ್ರ್ಯತೆ ಉಳಿಸಬೇಕಿದೆ. ದೇವಾಲಯದ ಗೌರವಕ್ಕೆ ಧಕ್ಕೆ ಆಗಬಾರದು. ಅಪಪ್ರಚಾರಕ್ಕಾಗಿ ವಿದೇಶದಿಂದ ಹಣ ಬಂದ ಬಗ್ಗೆ ದೂರುಗಳು ಕೇಳಿಬಂದಿವೆ. ಹೀಗಾಗಿ ಇ.ಡಿ ಮೂಲಕ ತನಿಖೆ ನಡೆಸಲು ನಾನು ಒತ್ತಾಯ ಮಾಡಿದ್ದೇನೆ. ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ನಾನು ವ್ಯಕ್ತಿಗತವಾಗಿ ಪತ್ರ ಬರೆದಿಲ್ಲ. ಕರ್ನಾಟಕ ಸರ್ಕಾರ ಎಸ್ಐಟಿ ಮೂಲಕ ತನಿಖೆಗೆ ಸೂಚಿಸಿದ್ದಕ್ಕೆ ಸ್ವಾಗತವಿದೆ. ಆದರೆ, ಅನಾಮಧೇಯ ಭೀಮನಿಂದ ದಾರಿ ತಪ್ಪಿಸುವ ಕೆಲಸ ಆಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು.