ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ; ಮಕ್ಕಳಿಗೆ ಭಾರವಾಗಬಾರದೆಂದು ವಿಷ ಸೇವಿಸಿ ವೃದ್ಧ ದಂಪತಿ ಆತ್ಮಹತ್ಯೆ!
Bengaluru News: ಬೆಂಗಳೂರಿನ ಬಸವೇಶ್ವರ ನಗರ ವ್ಯಾಪ್ತಿಯ ಮಂಜುನಾಥನಗರದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಹೊಂದಿದ್ದ ವೃದ್ಧ ದಂಪತಿ, ಇಳಿವಯಸ್ಸಿನಲ್ಲಿ ಯಾರಿಗೂ ಹೊರೆಯಾಗಬಾರದು ಎನ್ನುವ ಒಂದೇ ಕಾರಣಕ್ಕೆ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ.
-
ಬೆಂಗಳೂರು: ರಾಜಧಾನಿಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಇಬ್ಬರು ಹೆಣ್ಣು ಮಕ್ಕಳಿಗೆ ಇಳಿವಯಸ್ಸಿನಲ್ಲಿ ಹೊರೆಯಾಗಬಾರದು ಎನ್ನುವ ಕಾರಣಕ್ಕೆ ವಿಷ ಸೇವಿಸಿ ವೃದ್ಧ ದಂಪತಿ ಪ್ರಾಣ ಕಳೆದುಕೊಂಡಿರುವುದು ಬೆಂಗಳೂರಿನ (Bengaluru News) ಬಸವೇಶ್ವರ ನಗರ ವ್ಯಾಪ್ತಿಯ ಮಂಜುನಾಥನಗರದಲ್ಲಿ ನಡೆದಿದೆ.
ಮೃತರನ್ನು ಈಶ್ವರಾಚಾರ್ (73ವ) ಹಾಗೂ ಪತ್ನಿ ಗೌರಿ ಎಂದು ಗುರುತಿಸಲಾಗಿದೆ. ಬಸವೇಶ್ವರನಗರದ ಶಿವನಗರದಲ್ಲಿ ಲೀಸ್ ಮನೆಯಲ್ಲಿ ಇವರು ವಾಸವಾಗಿದ್ದರು. ಗುರುವಾರ ಬೆಳಗ್ಗೆ ಮಕ್ಕಳು ಪೋಷಕರಿಗೆ ಹಲವು ಬಾರಿ ಕರೆ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಆತಂಕದಿಂದ ಮನೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಈಶ್ವರಾಚಾರ್ ಅವರು ಹಿಂದೆ ಚಿನ್ನದ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಉದ್ಯೋಗವಿಲ್ಲದೆ ಇದ್ದರು. ವಿಷ ಬೆರೆಸಿದ ಜ್ಯೂಸ್ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗೌರಿಯವರಿಗೆ ಬಿಪಿ, ಶುಗರ್ ಹೆಚ್ಚಾಗಿ, ಸೊಂಟದ ಸ್ವಾಧೀನ ಕಳೆದುಕೊಂಡು ಸಂಪೂರ್ಣ ಬೆಡ್‌ರೆಸ್ಟ್‌ನಲ್ಲಿದ್ದರು. ಪತಿಯೇ ಎಲ್ಲಾ ಆರೈಕೆ ಮಾಡುತ್ತಿದ್ದರು. ಆದರೆ, ಈಶ್ವರ್ ಅವರಿಗೂ ವಯೋಸಹಜ ಕಾಯಿಲೆಗಳು ಕಾಡಲು ಶುರುವಾಗಿತ್ತು. ಹೀಗಾಗಿ ಇತೀಚೆಗೆ ಪುತ್ರಿಯರೇ ತಮ್ಮ ವಯೋವೃದ್ಧ ಪೋಷಕರ ಆರೈಕೆ ಮಾಡುತ್ತಿದ್ದರು.
ತಮ್ಮ ಪುತ್ರಿಯರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವುದು ದಂಪತಿಗೆ ಮಾನಸಿಕವಾಗಿ ಬೇಸರ ಉಂಟುಮಾಡಿತ್ತು ಎನ್ನಲಾಗಿದೆ. ಆದರೆ, ಪೋಷಕರ ಆರೈಕೆ ಮಾಡುವುದಕ್ಕೆ ಮಕ್ಕಳಿಗೆ ಯಾವುದೇ ಸಮಸ್ಯೆಯಿರಲಿಲ್ಲ ಎಂದು ವಿಚಾರಿಸಿದಾಗ ಗೊತ್ತಾಗಿದೆ.
ದಂಪತಿಯ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ಅನಾರೋಗ್ಯ ಒಂದು ಕಾರಣವಾಗಿರಬಹುದು ಎಂಬ ಶಂಕೆ ಇದ್ದರೂ, ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಆದ್ದರಿಂದ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಭೀಮಾ ತೀರದಲ್ಲಿ ಮತ್ತೆ ರಕ್ತದ ಓಕುಳಿ: ಟಂ-ಟಂ ಚಾಲಕನಿಗೆ ಮಾರಣಾಂತಿಕ ಹಲ್ಲೆ
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ. ಬಸವೇಶ್ವರನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.