ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೇ ತಿಂಗಳಿನಿಂದ ಗೃಹ ಬಳಕೆ ವಿದ್ಯುತ್‌ ದರ ಏರಿಕೆ; ಯೂನಿಟ್ ಗೆ 91 ಪೈಸೆ ಹೆಚ್ಚಳ

Electricity Bill Hike: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಗೃಹ ಬಳಕೆಯ ವಿದ್ಯುತ್‌ ದರ ಪರಿಷ್ಕರಿಸಿದ್ದು, ಬೆಸ್ಕಾಂ ಮತ್ತು ಸೆಸ್ಕ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ದರ ಹೆಚ್ಚಿಸಲಾಗಿದೆ. ಉಳಿದಂತೆ ಜೆಸ್ಕಾಂ, ಹೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ದರ ಇಳಿಕೆಯಾಗಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ಗೃಹ ಬಳಕೆಯ ವಿದ್ಯುತ್‌ ದರ (Electricity Bill Hike) ಪರಿಷ್ಕರಿಸಿದ್ದು, ಬೆಸ್ಕಾಂ ಮತ್ತು ಸೆಸ್ಕ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ದರ ಹೆಚ್ಚಿಸಲಾಗಿದೆ. ಉಳಿದಂತೆ ಜೆಸ್ಕಾಂ, ಹೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ದರ ಇಳಿಕೆಯಾಗಿದೆ. ಬೆಂಗಳೂರು ವಿದ್ಯುತ್ ಸರಬರಾಜು ನಿಗಮವು (ಬೆಸ್ಕಾಂ) ಗೃಹ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ ಒಟ್ಟು 91 ಪೈಸೆ ದರ ಹೆಚ್ಚಳ ಮಾಡಿದ್ದು, ಮೇ ತಿಂಗಳಿನಿಂದಲೇ ಈ ಹೊಸ ದರ ಜಾರಿಗೆ ಬರಲಿದೆ.

ಈಗಾಗಲೇ ಏಪ್ರಿಲ್ ತಿಂಗಳಿನಿಂದ ಪ್ರತಿ ಯೂನಿಟ್‌ಗೆ 35 ಪೈಸೆ ಏರಿಕೆ ಮಾಡಲಾಗಿತ್ತು. ಪ್ರಸ್ತುತ ಮೇ ತಿಂಗಳಿನಿಂದ ಟ್ರೂ ಅಪ್ ಚಾರ್ಜ್ ಹೆಸರಿನಲ್ಲಿ ಹೆಚ್ಚುವರಿಯಾಗಿ 56 ಪೈಸೆ ದರ ವಿಧಿಸಲಾಗುತ್ತಿದೆ.ಒಟ್ಟಾರೆಯಾಗಿ ಗ್ರಾಹಕರು ಪ್ರತಿ ಯೂನಿಟ್‌ಗೆ 91 ಪೈಸೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಆದಾಯ ಖೋತಾ ಆಗಿರುವ ಬೆಸ್ಕಾಂ ಮತ್ತು ಸೆಸ್ಕ್‌ನ ಆರ್ಥಿಕ ನಷ್ಟ ಸರಿದೂಗಿಸಲು ಕೆಇಆರ್‌ಸಿ ವಿದ್ಯುತ್‌ ದರ ಹೆಚ್ಚಿಸಿದೆ. ಅದೇ ರೀತಿ ನಿಗದಿಗಿಂತ ಹೆಚ್ಚಿನ ಆದಾಯ ಗಳಿಸಿರುವ ಜೆಸ್ಕಾಂ, ಹೆಸ್ಕಾಂ ಮತ್ತು ಮೆಸ್ಕಾಂ ವ್ಯಾಪ್ತಿಯಲ್ಲಿ ದರ ಇಳಿಕೆ ಮಾಡಿದೆ.

ಜೆಸ್ಕಾಂ ಮತ್ತು ಹೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 10 ಪೈಸೆ, ಮೆಸ್ಕಾಂ ವ್ಯಾಪ್ತಿಯಲ್ಲಿ9 ಪೈಸೆ ಇಳಿಕೆಯಾಗಿದೆ. ಪರಿಷ್ಕೃತ ವಿದ್ಯುತ್‌ ದರವು 2025ರ ಏಪ್ರಿಲ್‌ನಿಂದ ಪೂರ್ವಾನ್ವಯವಾಗಲಿದೆ. ಬೆಸ್ಕಾಂ ದರ ಹೆಚ್ಚಳದಿಂದಾಗಿ ಗೃಹ ಬಳಕೆದಾರರಿಗಿಂತಲೂ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರ ಮೇಲೆ ಪರಿಣಾಮ ಬೀರಲಿದೆ. ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಈ ದರ ಏರಿಕೆಯಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ. 200 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡುವವರಿಗೆ ಯೋಜನೆಯ ಮಿತಿಯೊಳಗೆ ಉಚಿತ ವಿದ್ಯುತ್ ಲಭ್ಯವಿರಲಿದೆ. ಆದರೆ, ಮಿತಿ ಮೀರಿದ ಬಳಕೆಗೆ ಹೊಸ ದರ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಸ್ಕಾಂ ವ್ಯಾಪ್ತಿಗೆ ಒಳಪಡುವ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಜನರಿಗೆ ವಿದ್ಯುತ್‌ ದರದ ಎಫೆಕ್ಟ್‌ ತಟ್ಟಲಿದೆ.

Vishakha Bhat Heggar

View all posts by this author