ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡೆ ಮತ್ತು ಯೋಗಕ್ಕೆ ಹೆಚ್ಚು ಒತ್ತು ನೀಡಬೇಕು. ಜೊತೆಗೆ ಪ್ರತಿ ಕಾಲೇಜಿನಲ್ಲೂ ವಿದ್ಯಾರ್ಥಿಗಳಿಗೆ ಮನೋವೈಜ್ಞಾನಿಕ ಸಲಹಾ ಕೇಂದ್ರಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಾಗುವಂತೆ ನಿಗಾ ವಹಿಸಬೇಕು ಎಂದು ಬೆಂಗಳೂರು ದಕ್ಷಿಣ ವಲಯದ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ)ಯ ಉಪನಿರ್ದೇಶಕ ಮನೋಜ್‌ಕುಮಾರ್ ಕೊಳ್ಳ ಹೇಳಿದ್ದಾರೆ.
ಇದನ್ನೂ ಓದಿ: IPL 2025: ʻಫೈನಲ್‌ನಲ್ಲಿ ಅಪರಾಧವೆಸಗಿದ ಶ್ರೇಯಸ್ ಅಯ್ಯರ್ʼ-ಯೋಗರಾಜ್ ಸಿಂಗ್ ಆರೋಪ!
ನಗರದ ಎನ್.ಆರ್. ಕಾಲೋನಿಯ ಆಚಾರ್ಯ ಪಾಠಶಾಲಾ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ತರಗತಿಗಳನ್ನು ಉದ್ಘಾಟಿಸಿ, ಕಾಲೇಜಿನ ವಾರ್ಷಿಕ ಸಂಚಿಕೆ "ಹೊಂಗಿರಣ: 2024-25" ವನ್ನು ಅನಾವರಣ ಮಾಡಿ ಮಾತನಾಡಿದ ಅವರು, ಇಂತಹ ಉತ್ತಮ ಹಿನ್ನೆಲೆಯ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡುವುದು ನಿಮ್ಮೆಲ್ಲರ ಅದೃಷ್ಟ. ಅನುಭವಿಗಳ ಹಾರೈಕೆ ಕಾಲೇಜಿನ ಹಿರಿಮೆ ಯನ್ನು ಹೆಚ್ಚಿಸಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿರಬೇಕು ಎಂದರು.
ಎ.ಪಿ.ಎಸ್‌ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷ ಸಿ.ಎ. ಡಾ. ವಿಷ್ಣುಭರತ್ ಅಲಂಪಲ್ಲಿ, ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಪದವಿ ಪೂರ್ವ ಕಾಲೇಜಿನ ಜಿ.ಸಿ ಅಧ್ಯಕ್ಷ ಡಾ. ಟಿ.ವಿ. ಗುರು ದೇವಯ್ಯ, ಪ್ರಾಂಶುಪಾಲ ಪ್ರೊ.ಎಸ್.ನಾಗರಾಜ, ಉಪಪ್ರಾಂಶುಪಾಲರಾದ ಹೆಚ್.ಎಸ್. ರಂಜನಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಎಸ್.ಹೇಮಾವತಿ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.