ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ; ರಾಜ್ಯದ 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ ಎಂದ ಸಿಎಂ ಡಿ ಕೆ ಶಿವಕುಮಾರ್

ವಾಹನ ಇಂಧನಗಳಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣ ಹೆಚ್ಚಳದಿಂದ ವಾಹನಗಳ ಎಂಜಿನ್ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ 67 ಕಡೆ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗಿದೆ. ಪೆಟ್ರೋಲ್ ನಲ್ಲಿ ಶೇ.31.5ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿರುವ ಬಗ್ಗೆ ಕೇಳಿಬಂದಿರುವ ದೂರುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಸಂಗ್ರಹ ಚಿತ್ರ

ಬೆಂಗಳೂರು: ವಾಹನ ಇಂಧನಗಳಲ್ಲಿ ಎಥೆನಾಲ್ ಮಿಶ್ರಣ (E20) ಪ್ರಮಾಣ ಹೆಚ್ಚಳದಿಂದ ವಾಹನಗಳ ಎಂಜಿನ್ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ 67 ಕಡೆ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಸೋಮವಾರ ಸಂಬಂಧಪಟ್ಟ ಸಚಿವರು ಅಧಿಕೃತವಾಗಿ ಪತ್ರಿಕಾಗೋಷ್ಠಿ ನಡೆಸಿ ಪರಿಶೀಲನಾ ವರದಿ ಹಾಗೂ ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ" ಎಂದು ಸಿಎಂ ಡಿ ಕೆ ಶಿವಕುಮಾರ್ (CM D.K. Shivakumar) ಅವರು ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಪೆಟ್ರೋಲ್ ನಲ್ಲಿ ಶೇ.31.5ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿರುವ ಬಗ್ಗೆ ಕೇಳಿಬಂದಿರುವ ದೂರುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಸಚಿವರಿಗೆ ಅಗತ್ಯ ಸೂಚನೆ ನೀಡಿದ್ದು, ಕೇಂದ್ರ ಸರ್ಕಾರಕ್ಕೂ ಮಾಹಿತಿ ರವಾನಿಸಲಾಗಿದೆ. ಸಾವಿರಾರು ವಾಹನ ಸವಾರರು ವಾಹನಗಳ ಮೈಲೇಜ್ ಕಡಿಮೆಯಾಗುವುದು, ನಿರೀಕ್ಷಿತ ದೂರ ಕ್ರಮಿಸದಿರುವುದು ಹಾಗೂ ಚಲಿಸುತ್ತಿರುವಾಗಲೇ ಎಂಜಿನ್ ಸ್ಥಗಿತಗೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ" ಎಂದರು.

"ಪೆಟ್ರೋಲ್ ಬಂಕ್ ಗಳಲ್ಲಿ ಮಾತ್ರವಲ್ಲದೆ, ಎಥೆನಾಲ್ ಮಿಶ್ರಣ ಮತ್ತು ವಿತರಣೆಯಾಗುವ ಹಂತದಲ್ಲೂ ಪರಿಶೀಲನೆ ನಡೆಸಲಾಗಿದೆ. ಎಲ್ಲಿ, ಹೇಗೆ ಮಿಶ್ರಣ ಮಾಡಲಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸಂಗ್ರಹಿಸಲಾಗಿದೆ. ಸಚಿವರು ವಿವರವಾದ ವರದಿ ಬಿಡುಗಡೆ ಮಾಡಲಿದ್ದಾರೆ" ಎಂದು ಹೇಳಿದರು. "ಕೇಂದ್ರ ಸರ್ಕಾರ ಈ ವಿಚಾರದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ವಾಹನಗಳ ಕಾರ್ಯಕ್ಷಮತೆ, ಇಂಧನದ ಗುಣಮಟ್ಟ ಹಾಗೂ ಜನರ ಸುರಕ್ಷತೆ ಮುಖ್ಯ. ಕಡಿಮೆ ಬೆಲೆಗೆ ಎಥೆನಾಲ್ ದೊರೆಯುತ್ತದೆ ಎಂಬ ಕಾರಣಕ್ಕೆ ಅದರಿಂದ ಲಾಭ ಪಡೆಯುವ ಉದ್ದೇಶದಿಂದ ಮಿಶ್ರಣದ ಪ್ರಮಾಣ ಹೆಚ್ಚಿಸುವುದು ಸರಿಯಲ್ಲ.

ಜನರಿಗೆ ತೊಂದರೆ ಉಂಟುಮಾಡುವುದು ಒಳ್ಳೇದಲ್ಲ. ಇಡೀ ದೇಶದ ವಾಹನ ಸವಾರರಲ್ಲಿ ಆತಂಕ ಮೂಡಿಸಿರುವ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಅಪಾಯಕಾರಿ ಪರಿಸ್ಥಿತಿಯನ್ನು ನಾವು ಖಂಡಿಸುತ್ತೇವೆ" ಎಂದು ತಿಳಿಸಿದರು. ಬಿಜೆಪಿ, ಜೆಡಿಎಸ್ ನಾಯಕರು ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಎಲ್ಲರೂ ಧ್ವನಿ ಎತ್ತಬೇಕು" ಎಂದು ಹೇಳಿದರು.

E20 ಪೆಟ್ರೋಲ್ ಬಳಕೆಗೆ ಎನ್‌ಡಿಎ ಬೆಂಬಲಿಗರಲ್ಲೂ ಹಿಂದೇಟು: ಸಿ-ವೋಟರ್ ಸಮೀಕ್ಷೆಯಲ್ಲಿ ಬಹಿರಂಗ

ದೀಪಾವಳಿಗೆ ಶುಭ ಕೋರಿದ ಸಿಎಂ, "ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರುತ್ತೇನೆ. ಕರ್ನಾಟಕದ ಎಲ್ಲ ಜನರ ಮನೆಗಳಲ್ಲೂ ಬೆಳಕು ತುಂಬಲಿ" ಎಂದು ಹಾರೈಸಿದರು. "ಭಾನುವಾರ ಪವಿತ್ರ ದಿನವಾಗಿದ್ದು, ತಾಯಿ ಹಾಸನಾಂಬೆಯ ದರ್ಶನಕ್ಕೆ ತೆರಳುತ್ತಿದ್ದೇನೆ. ರಾಜ್ಯವು ಬರಗಾಲದ ಸಂಕಷ್ಟ ಎದುರಿಸುತ್ತಿದೆ. ಆಗಾಗ ಸ್ವಲ್ಪ ಮಳೆಯಾಗುತ್ತಿದ್ದರೂ ರೈತರಿಗೆ ನಿರೀಕ್ಷಿತ ಸಮಾಧಾನ ಸಿಕ್ಕಿಲ್ಲ. ಈ ಕಷ್ಟಗಳಿಂದ ಹೊರಬರುವ ಶಕ್ತಿಯನ್ನು ಭಗವಂತ ಎಲ್ಲರಿಗೂ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರ ಬದುಕಿನಲ್ಲೂ ನೆಮ್ಮದಿ ಮತ್ತು ಬೆಳಕು ಸದಾ ನೆಲೆಸಿರಲಿ" ಎಂದು ಹಾರೈಸಿದರು.

Vishakha Bhat Heggar

View all posts by this author