ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೈಸೂರು ಸ್ಯಾಂಡಲ್ ಸೋಪ್‌ ರಾಯಭಾರಿಯಾಗಿ ಪ್ರಚಾರ ಕಾರ್ಯ ಆರಂಭಿಸಿದ ನಟಿ ತಮನ್ನಾ

Mysore Sandal Soap brand ambassador: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್) ಸಂಸ್ಥೆಯು ತಮನ್ನಾ ಭಾಟಿಯಾ ಅವರೊಂದಿಗೆ ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಅವರಿಗೆ 6.2 ಕೋಟಿ ಸಂಭಾವನೆ ನೀಡಲಾಗುತ್ತಿದೆ.

ನಟಿ ತಮನ್ನಾ ಭಾಟಿಯಾ

ಬೆಂಗಳೂರು: ತೀವ್ರ ವಿರೋಧದ ನಡುವೆಯೂ ಮೈಸೂರು ಸ್ಯಾಂಡಲ್ ಸೋಪ್‌ (Mysore Sandal Soap) ರಾಯಭಾರಿಯಾಗಿ ಖ್ಯಾತ ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಹೊರ ರಾಜ್ಯದ ನಟಿಯನ್ನು ರಾಜ್ಯದ ಪ್ರತಿಷ್ಠಿತ ಸೋಪ್‌ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ನೇಮಕ ಮಾಡಿದ ಸರ್ಕಾರದ ನಿರ್ಧಾರಕ್ಕೆ ಈ ಹಿಂದೆ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಇದೀಗ ಒಪ್ಪಂದದಂತೆ ನಟಿ ತಮನ್ನಾ ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಈ ಬಗ್ಗೆ ಸಚಿವ ಎಂ.ಬಿ.ಪಾಟೀಲ್‌ ಅವರು ಸೋಮವಾರ ಮಾಹಿತಿ ನೀಡಿದ್ದಾರೆ. ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆ.ಎಸ್.ಡಿ.ಎಲ್) ತಯಾರಿಸುವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಯ ಅಂಗವಾಗಿ ಖ್ಯಾತ ಹಿಂದಿ ನಟಿ ತಮನ್ನಾ ಭಾಟಿಯಾ ಅವರನ್ನು 2 ವರ್ಷಗಳ ಅವಧಿಗೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಅವರ ಈ ಕೆಲಸವು ಮಂಗಳವಾರದಿಂದ (ಫೆ.10) ವಿಧ್ಯುಕ್ತವಾಗಿ ಆರಂಭವಾಗಲಿದೆ. ಇದೇ ಸಂದರ್ಭದಲ್ಲಿ ಪಾರಂಪರಿಕ ಹೆಮ್ಮೆಯ ಉತ್ಪನ್ನವಾಗಿರುವ ಮೈಸೂರು ಸ್ಯಾಂಡಲ್ ಸೋಪನ್ನು (Mysore Sandal Soap) ನವನವೀನ ರೂಪದಿಂದಿಗೆ ಬಿಡುಗಡೆ ಮಾಡಲಾಗುವುದು ತಿಳಿಸಿದ್ದಾರೆ.

`ಕೆ.ಎಸ್.ಡಿ.ಎಲ್. ಸಂಸ್ಥೆಯ ವಾರ್ಷಿಕ ವಹಿವಾಟನ್ನು 2030ರ ಹೊತ್ತಿಗೆ 5,000 ಕೋಟಿ ರೂ.ಗಳ ಮಟ್ಟಕ್ಕೆ ಬೆಳೆಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಯುವಜನಾಂಗವನ್ನು ತಲುಪಲು ವ್ಯಾಪಕ ಪ್ರಸಾರ ಆಂದೋಲವನ್ನು ನಡೆಸಲಾಗುತ್ತಿದೆ. ಇದಕ್ಕಾಗಿ, ಸೋಶಿಯಲ್ ಮೀಡಿಯಾದಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ತಾರಾ ವರ್ಚಸ್ಸಿನ ನಟಿ ತಮನ್ನಾ ಅವರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಉತ್ತರ ಭಾರತದಲ್ಲಿ ಕೂಡ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್ ಸಹಿತ ನಮ್ಮ ಸಂಸ್ಥೆಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಸಿಕೊಳ್ಳಲಾಗುವುದು’ ಎಂದಿದ್ದಾರೆ.

ಕೆ.ಎಸ್.ಡಿ.ಎಲ್ ಸಂಸ್ಥೆಗೆ ಶತಮಾನಕ್ಕೂ ಮೀರಿದ ಭವ್ಯ ಪರಂಪರೆ ಇದೆ. ಇದು ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಕೈಗಾರಿಕಾ ರಸಾಯನಶಾಸ್ತ್ರಜ್ಞ ಎಸ್.ಜಿ.ಶಾಸ್ತಿ (ಸೋಪ್ ಶಾಸ್ತ್ರಿ) ಅವರ ದೂರದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ಉದ್ಯಮವಾಗಿದೆ. ಒಳ್ಳೆಯ ವಹಿವಾಟು ಮತ್ತು ಲಾಭವನ್ನು ಕಾಣುತ್ತಿರುವ ಸಂಸ್ಥೆಯು ಹೋದ ತಿಂಗಳು ಸಾಬೂನು, ಮಾರ್ಜಕ ಮತ್ತು ಸೌಂದರ್ಯವರ್ಧಕ ಈ ಮೂರು ವಿಭಾಗಗಳಲ್ಲೂ ಸಾರ್ವಕಾಲಿಕ ಉತ್ಪಾದನೆ ಮಾಡಿದೆ ಎಂದು ಅವರು ಹೇಳಿದ್ದಾರೆ.

Nandini Brand Ambassador: ನಂದಿನಿ ಬಮುಲ್ ಉತ್ಪನ್ನಗಳ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ನೇಮಕ

ಸಂಸ್ಥೆಯಲ್ಲಿ ಈಗ ಒಟ್ಟು 57 ಉತ್ಕೃಷ್ಟ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಮೈಸೂರು ಸ್ಯಾಂಡಲ್ ಸೋಪಿನಿಂದ ಹಿಡಿದು ಕುಡಿಯುವ ನೀರಿನವರೆಗೂ ವ್ಯಾಪ್ತಿ ಇದೆ. ಪ್ರಚಾರ ರಾಯಭಾರಿಯಾಗಿರುವ ತಮನ್ನಾ ಅವರು ಕೆಎಸ್ಡಿಎಲ್ ಉತ್ಪನ್ನಗಳ ಪ್ರಸಾರ ಜಾಹೀರಾತು, ಕಾರ್ಯಕ್ರಮ ಇತ್ಯಾದಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅವರು ಉಳಿದ ಖಾಸಗಿ ಕಂಪನಿಗಳ ಇದೇ ತರಹದ ಉತ್ಪನ್ನಗಳ ಪ್ರಚಾರಾರ್ಥ ರೂಪದರ್ಶಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಅವರು ನುಡಿದಿದ್ದಾರೆ.

ಮೈಸೋಪು ಸೇರಿದಂತೆ ಸಂಸ್ಥೆಯ ಶವರ್ ಜೆಲ್, ಟಾಲ್ಕಂ ಪೌಡರ್, ಹ್ಯಾಂಡ್ ವಾಶ್, ಅಗರಬತ್ತಿ, ಸಾಂಬ್ರಾಣಿ, ಧೂಪ, ಮಿಲೆನಿಯಂ ಸೋಪ್ ಮುಂತಾದವುಗಳಿಗೆ ಅಪಾರ ಬೇಡಿಕೆ ಇದೆ. ಪ್ರಚಾರಾರ್ಥವಾಗಿ ಸಿದ್ಧಪಡಿಸಿರುವ ವಿಡಿಯೋ ಇತ್ಯಾದಿಗಳನ್ನು ಕೂಡ ಮಂಗಳವಾರ ಬಿಡುಗಡೆ ಮಾಡಲಾಗುವುದು. ಜತೆಗೆ ವಿಜಯಪುರ ಮತ್ತು ಡಾಬಸಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಸಂಸ್ಥೆಯ ಉತ್ಪಾದನಾ ಘಟಕಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಜೊತೆಗೆ ಈಗ 25-30 ಕೋಟಿ ರೂ. ಆಸುಪಾಸಿನಲ್ಲಿರುವ ರಫ್ತು ವಹಿವಾಟನ್ನು ಮುಂದಿನ ದಿನಗಳಲ್ಲಿ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.

ಕೆಎಸ್ ಡಿಎಲ್ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ಸಿ ಎಸ್ ಅಪ್ಪಾಜಿ ನಾಡಗೌಡ ಮಾತನಾಡಿ, `ಯಾವುದೇ ಹೊಸ ಸಾಧನ ಸಲಕರಣೆಗಳನ್ನು ಖರೀದಿಸದೆ, ಹಳೆಯ ಯಂತ್ರೋಕರಣಗಳನ್ನು ಬಳಸಿಕೊಂಡೇ ಸಂಸ್ಥೆಯಲ್ಲಿ ಉತ್ಪಾದನಾ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಕಟ್ಟುನಿಟ್ಟಾಗಿ ದಿನಕ್ಕೆ ಮೂರು ಪಾಳಿಯ ಕೆಲಸದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಯೂರೋಪ್ ಮತ್ತು ಮಧ್ಯ ಪ್ರಾಚ್ಯದ ದೇಶಗಳ ಮಾರುಕಟ್ಟೆಯೂ ನಮ್ಮ ಗಮನಲ್ಲಿದೆ. ಜತೆಗೆ ಅನಿವಾಸಿ ಕನ್ನಡಿಗರಿಗೂ ಸಂಸ್ಥೆಯ ಉತ್ಪನ್ನಗಳನ್ನು ತಲುಪಿಸುವ ಹಾಗೆ ನೋಡಿಕೊಳ್ಳಲಾಗುವುದು’ ಎಂದಿದ್ದಾರೆ.

ಕೆಎಂಎಫ್‌ನಿಂದ ಗುಡ್‌ ನ್ಯೂಸ್‌; 10ರೂ. ಸಿಗುತ್ತೆ, ನಂದಿನಿ ಹಾಲು, ಮೊಸರು

ಮುಖ್ಯವಾಗಿ, ಮೈಸೂರು ಸ್ಯಾಂಡಲ್ ಸೋಪಿನ ನಕಲನ್ನು ಮಟ್ಟ ಹಾಕಲಾಗಿದೆ. ನಮ್ಮ ಉತ್ಪನ್ನಗಳು ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಮಾರುಕಟ್ಟೆ ವಿಸ್ತರಣೆಗೆ ದೆಹಲಿ, ಮಧ್ಯ ಭಾರತ ಮುಂತಾದ ಭಾಗಗಳ ಮೇಲೆ ಹೆಚ್ಚಿನ ಒತ್ತು ಕೊಡಲಾಗಿದೆ. 2025-26ರಲ್ಲಿ ಸಂಸ್ಥೆಯ ವಹಿವಾಟು 2 ಸಾವಿರ ಕೋಟಿ ರೂ. ಮುಟ್ಟುವ ನಿರೀಕ್ಷೆ ಇದೆ ಎಂದು ಕೆಎಸ್ ಡಿ ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಅವರು ಹೇಳಿದ್ದಾರೆ.