ಬೆಂಗಳೂರು, ಏ. 21: ಇತ್ತೀಚೆಗೆ ನಗರ ಪ್ರದೇಶಗಳು ಎಷ್ಟೇ ಅಭಿವೃದ್ಧಿಯಾದರೂ ರಸ್ತೆ ಗುಂಡಿಗಳ ಸಮಸ್ಯೆಯಂತೂ ಕಡಿಮೆಯಾಗಿಲ್ಲ. ವಾಹನಗಳ ಸಂಖ್ಯೆ ಮಿತಿ ಮೀರಿದರೂ ಅಲ್ಲಲ್ಲಿ ರಸ್ತೆ ಮಧ್ಯೆ ಸಿಗುವ ಗುಂಡಿಗಳು ಪ್ರಯಾಣಿಕರನ್ನು ಆತಂಕಕ್ಕೆ ತಳ್ಳುತ್ತವೆ. ಇದೀಗ ಈ ಸಮಸ್ಯೆಯ ಬಗ್ಗೆ ಬೆಂಗಳೂರಿನ ಖ್ಯಾತ ಉದ್ಯಮಿಯೊಬ್ಬರು ವಿಶಿಷ್ಟ ರೀತಿಯಲ್ಲಿ ಗಮನ ಸೆಳೆದಿದ್ದಾರೆ. ಅವರು ತಮ್ಮ ಐಷಾರಾಮಿ ಪೋರ್ಷೆ ಕಾರಿನ ಬಾನೆಟ್‌ನಲ್ಲಿ ಸಿಮೆಂಟ್ ಬೆರೆಸಿ ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ಸದ್ಯ ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳುವವರೆಗೆ ಕಾಯುವ ಬದಲು, ಬೆಂಗಳೂರಿನ ಉದ್ಯಮಿ ಅಖಿಲ್ ಹಿಮಾದ್ರಿ ರಸ್ತೆ ಸಮಸ್ಯೆಯನ್ನು ಸ್ವತಃ ಪರಿಹರಿಸಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ವಿಡಿಯೊ ನೋಡಿ:
ಕ್ಲಿಪ್‌ನಲ್ಲಿ ಉದ್ಯಮಿ ರಸ್ತೆ ಬದಿಯಲ್ಲಿ ತಮ್ಮ ಕಾರನ್ನು ನಿಲ್ಲಿಸಿ ಬಾನೆಟ್ ಮೇಲೆಯೇ ಸಿಮೆಂಟ್ ಮತ್ತು ಜಲ್ಲಿಯನ್ನು ಮಿಶ್ರಣ ಮಾಡುತ್ತಿರುವುದು ಕಂಡು ಬಂದಿದೆ. ಕಾರಿನ ಬಾನೆಟ್‌ಗೆ ನೇರವಾಗಿ ಸಿಮೆಂಟ್ ಮತ್ತು ಕಾಂಕ್ರೀಟ್ ಸುರಿಯುವುದನ್ನು ಕಾಣಬಹುದು. ನಂತರ ಅವರು ಬಿಸ್ಲೆರಿ ಬಾಟಲಿಯಿಂದ ನೀರನ್ನು ಸೇರಿಸಿ ಮಿಶ್ರಣ ಮಾಡಿದ್ದಾರೆ.
ಹಸುವಿಗೆ ಚಿಕನ್ ಮೋಮೋಸ್ ತಿನ್ನಿಸಿದ ಯುವಕ! ವ್ಯಾಪಕ ಆಕ್ರೋಶ
ನಂತರ ಸಿಮೆಂಟ್ ಮಿಶ್ರಣವನ್ನು ಗುಂಡಿಗೆ ಒಯ್ದು ಅದನ್ನು ಭರ್ತಿ ಮಾಡಿದ್ದಾರೆ. ಅವರು ಕಾರಿನ ರಕ್ಷಣೆಗಾಗಿ ಬಾನೆಟ್ ಮೇಲೆ ಪ್ಲಾಸ್ಟಿಕ್ ಶೀಟ್ ಹಾಸಿದ್ದಾರೆ. ಅವರ ಕೆಲಸ ಮುಗಿದ ನಂತರ ಆ ಶೀಟ್ ತೆಗೆದಾಗ ಕಾರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎನ್ನುವುದು ತಿಳಿದು ಬಂದಿದೆ. ವಿಡಿಯೊ ತ್ವರಿತವಾಗಿ ವೈರಲ್ ಆಗಿ, ಹಲವು ರೀತಿಯ ಪ್ರತಿಕ್ರಿಯೆ ಗಳಿಸಿದೆ. ಕೆಲವರು ಇದನ್ನು ಸೃಜನಶೀಲ ಉದಾಹರಣೆ ಎಂದು ಕರೆದರು. ಇನ್ನು ಕೆಲವರು ಇದು ಕೇವಲ ಶ್ರೀಮಂತಿಕೆಯ ಪ್ರದರ್ಶನ ಹಾಗೂ ವೈರಲ್ ಆಗಲು ಪ್ಲ್ಯಾನ್ ಎಂದು ಟೀಕಿಸಿದ್ದಾರೆ.