ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Devanahalli Land Protest: ಕೆಐಎಡಿಬಿಗೆ 1,777 ಎಕರೆ ಜಮೀನು ನೀಡಲು ರೈತರ ಒಪ್ಪಿಗೆ; ಸಿಎಂ ಸಿದ್ದರಾಮಯ್ಯಗೆ ಪತ್ರ

Devanahalli Land Protest: ದೇವನಹಳ್ಳಿ ತಾಲೂಕು, ಚನ್ನರಾಯಪ್ಪಟಣ ಹೋಬಳಿ ರೈತ ಹೋರಾಟ ಸಮಿತಿಯು ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದೆ. ಚನ್ನರಾಯಪಟ್ಟಣ ಹೋಬಳಿಯ 1777 ಎಕರೆ ಜಮೀನನನ್ನು ಕೆಐಎಡಿಬಿಗೆ ಕೊಡುವುದಕ್ಕೆ 13 ಗ್ರಾಮಗಳ ರೈತರ ಒಪ್ಪಿಗೆಯಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕೆಐಎಡಿಬಿಗೆ 1,777 ಎಕರೆ ಜಮೀನು ನೀಡಲು ರೈತರ ಒಪ್ಪಿಗೆ; ಸಿಎಂಗೆ ಪತ್ರ

Profile Prabhakara R Jul 12, 2025 8:20 PM

ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ 1777 ಎಕರೆ ಭೂಮಿಯ ಉಳಿವಿಗಾಗಿ ವಿವಿಧ ರೈತ ಸಂಘಟನೆಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಯುತ್ತಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಪತ್ರ ಬರೆದಿರುವ ದೇವನಹಳ್ಳಿ ತಾಲೂಕು, ಚನ್ನರಾಯಪ್ಪಟಣ ಹೋಬಳಿ ರೈತ ಹೋರಾಟ ಸಮಿತಿಯು, ಕೆಐಎಡಿಬಿಗೆ ಜಮೀನು ನೀಡಲು ರೈತರ ಒಪ್ಪಿಗೆ ಇದೆ ಎಂದು ತಿಳಿಸಿದೆ.

ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದೇವನಹಳ್ಳಿ ತಾಲೂಕು, ಚನ್ನರಾಯಪ್ಪಟಣ ಹೋಬಳಿ ರೈತ ಹೋರಾಟ ಸಮಿತಿಯು ಪತ್ರ ಬರೆದಿದೆ. ಚನ್ನರಾಯಪಟ್ಟಣ ಹೋಬಳಿಯ 1777 ಎಕರೆ ಜಮೀನನನ್ನು ಕೆಐಎಡಿಬಿಗೆ ಕೊಡುವುದಕ್ಕೆ 13 ಗ್ರಾಮಗಳ ರೈತರ ಒಪ್ಪಿಗೆಯಿದೆ. ರಾಜ್ಯ ಸರ್ಕಾರವು ರೈತರ ಭೂಮಿಗೆ ಒಳ್ಳೆಯ ಬೆಲೆ ನಿಗದಿ ಪಡಿಸಬೇಕು. ಆ ಮೂಲಕ ಜಮೀನು ಖರೀದಿ ಮಾಡಬೇಕು ಎಂಬುದಾಗಿ ಸಿಎಂಗೆ ವಿನಂತಿಸಿದೆ. ಭೂಮಿ ಖರೀದಿಗೆ ನಾಲ್ಕು ಷರತ್ತುಗಳನ್ನು ರೈತ ಹೋರಾಟ ಸಮಿತಿ ವಿಧಿಸಿದೆ.

ರೈತ ಹೋರಾಟ ಸಮಿತಿಯ ಷರತ್ತುಗಳು

  • ಪ್ರತಿ ಎಕರೆಗೆ 3.50 ಕೋಟಿ ರೂ. ದರ ನಿಗದಿಪಡಿಸಬೇಕು.
  • ಜಮೀನು ಕಳೆದುಕೊಂಡ ರೈತ ಮಕ್ಕಳಿಗೆ ವಿದ್ಯಾಭ್ಯಾಸದ ಅನುಗುಣವಾಗಿ ಉದ್ಯೋಗ ನೀಡುವುದು.
  • ಯಾವುದೇ ಕಾರಣಕ್ಕೂ ಹಸಿರು ವಲಯವಾಗಿ ಪರಿವರ್ತಿಸಬಾರದು.
  • ಗ್ರಾಮದ ಅಕ್ಕಪಕ್ಕ ಉಳಿದ ಜಮೀನುಗಳನ್ನು ಹಳದಿ ವಲಯವನ್ನಾಗಿ ಪರಿವರ್ತಿಸಬೇಕು.


ವಿವಿಧ ಸಂಘಟನೆಗಳ ವಿರೋಧ

ಮತ್ತೊಂದೆಡೆ ಭೂಮಿ ನೀಡಲು ರೈತರ ಒಪ್ಪಿಗೆ ಎಂದಿರುವ ರೈತ ಹೋರಾಟ ಸಮಿತಿ ಮುಖಂಡರ ವಿರುದ್ಧ ವಿವಿಧ ಸಂಘಟನೆಗಳ ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಭೂಸ್ವಾಧೀನ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 15ರಂದು ಸಭೆ ಕರೆದಿದ್ದಾರೆ. ಈ ಹಂತದಲ್ಲಿ ವಿರೋಧಾಭಾಸದ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳು ಖಂಡಿಸಿವೆ.

ಮುಖ್ಯಮಂತ್ರಿ ಸಭೆಗೆ ಇನ್ನೂ ನಾಲ್ಕು ದಿನ ಬಾಕಿ ಇರುವಾಗ ಬೆಂಗಳೂರಿನಲ್ಲಿ ರೈತರ ಹೆಸರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಗುಂಪೊಂದು ಶೇ.80ರಷ್ಟು ರೈತರು ಭೂಮಿ ಕೊಡಲು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಇದು ಸರ್ಕಾರಿ ಪ್ರಾಯೋಜಿತ ಹೇಳಿಕೆ. ಸುದ್ದಿಗೋಷ್ಠಿಯಲ್ಲಿ ಇದ್ದವರೆಲ್ಲ ಕಾಂಗ್ರೆಸ್ ಮುಖಂಡರು ಎಂದು ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಸಮಿತಿ ಆರೋಪಿಸಿದೆ.

ಈ ಸುದ್ದಿಯನ್ನೂ ಓದಿ | Farmers Protest: ದೇವನಹಳ್ಳಿ ರೈತ ಹೋರಾಟ; ಸರ್ಕಾರದ ಅಂತಿಮ ನಿರ್ಧಾರ ಪ್ರಕಟಕ್ಕೆ 10 ದಿನ ಕಾಲಾವಕಾಶ ಕೋರಿದ ಸಿಎಂ

ಸಿಎಂ ಸಿದ್ದರಾಮಯ್ಯಗೆ ಮನವಿ ಪತ್ರ

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯಿಂದ ಆಗಮಿಸಿದ್ದ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಭೂಮಿಯನ್ನು ನೀಡಲು ಸಿದ್ಧವಿರುವುದಾಗಿ ತಿಳಿಸಿ, ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ನ್ಯಾಯಯುತವಾದ ಬೆಲೆ ನಿಗದಿ ಪಡಿಸಲು ಮನವಿ ಸಲ್ಲಿಸಿದರು.

ಈ ವೇಳೆ ಸಚಿವರಾದ ಕೆ.ಎಚ್. ಮುನಿಯಪ್ಪ, ಬಿ.ಎಸ್. ಸುರೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಇತರರು ಈ ವೇಳೆ ಉಪಸ್ಥಿತರಿದ್ದರು.