ಮೊದಲೇ ಬರ, ಮಿತಿ ದಾಟಿರುವುದರಿಂದ ಸಾಲ ಪಡೆಯಲೂ ಆಗಲ್ಲ
ಸಿಬ್ಬಂದಿಗೆ ವೇತನ ಪಾವತಿಸುವುದೂ ಕಷ್ಟವಾಗಿದೆ, ಯೋಚಿಸಿ: ಸಲಹೆ
ಬೆಂಗಳೂರು: ತೀವ್ರ ಬರಗಾಲ, ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊರತೆ ಸೇರಿದಂತೆ ಹಲವು ರೀತಿಯ ಆತಂಕಗಳ ನಡುವೆಯೇ ಇದೀಗ ಆರ್ಥಿಕ ಇಲಾಖೆ ರಾಜ್ಯದಲ್ಲಿ ಹೊಸ ಯೋಜನೆಗಳನ್ನು ಘೋಷಿಸುವ ಮೊದಲು ‘ಸ್ವಲ್ಪ ಕಾಯಿರಿ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಂಗಳೂರಿನಲ್ಲಿ ನಡೆದ ಸಂಪುಟ ಸಭೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 15000 ಕಿಮೀ ರಸ್ತೆಗಳನ್ನು 10 ಸಾವಿರ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ಹೆಚ್ಚುವರಿ ಅನುದಾನದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯ ಮುಂದಿಟ್ಟಿದ್ದು, ಈ ಯೋಜನೆಗೆ ತೀವ್ರ ಆಕ್ಷೇಪವನ್ನು ಆರ್ಥಿಕ ಇಲಾಖೆ ವ್ಯಕ್ತಪಡಿಸಿದೆ.
ಹೊಸ ಯೋಜನೆಗಳಿಗೆ ಅನುದಾನ ನೀಡಲು ಹಣದ ಕೊರತೆಯಿರುವ ಬಗ್ಗೆ ವಿವರಿಸಿದೆ. ಆರ್ಥಿಕ ಇಲಾಖೆ ಸಲ್ಲಿಸಿರುವ ಅಕ್ಷೇಪಣೆಯಲ್ಲಿ ಪ್ರಮುಖವಾಗಿ, 2026-27 ಹಾಗೂ 2027-28ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಹೊಸ ಯೋಜನೆಗಳ ಬಗ್ಗೆ ತಕರಾರು ಎತ್ತಿದೆ. ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಸುಮಾರು 10000 ಕೋಟಿ ರು. ವೆಚ್ಚಕ್ಕಾಗಿ ಬೇಡಿಕೆಯಿಟ್ಟಿದೆ. ಆದರೆ ಬಜೆಟ್ನಲ್ಲಿ ಈ ಹೊಸ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿಲ್ಲ. ಹೊಸ ಯೋಜನೆಗಳಿಂದ ವಿತ್ತೀಯ ನಿರ್ವಹಣೆ ಹಾಗೂ ಹಣದ ಹರಿವಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: CM DK Shivakumar: ಸಿಎಂ ಡಿ.ಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು; ವಿಧಾನಸೌಧದಲ್ಲೇ ಚಿಕಿತ್ಸೆ
ರಾಜ್ಯ ಸರಕಾರ ಈಗಾಗಲೇ ಸಾಲ ಪಡೆಯುವ ಗರಿಷ್ಠ ಮಿತಿಯನ್ನು ಮುಟ್ಟಿದೆ. ಇದರೊಂದಿಗೆ ರಸ್ತೆ ಸಾರಿಗೆ ನಿಗಮಗಳು, ನೀರಾವರಿ ನಿಗಮ ಹಾಗೂ ಎಸ್ಕಾಂ ಸಿಬ್ಬಂದಿಗೆ ವೇತನ ನೀಡಲು ಹಣಕಾಸಿನ ಕೊರತೆ ಎದುರಾಗಿದೆ. ಜತೆಗೆ ಮಾಸಿಕ ಪಿಂಚಣಿ ಪಾವತಿಯಲ್ಲೂ ವಿಳಂಬವಾಗುತ್ತಿದೆ.
ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬರ ನಿರ್ವಹಣೆ, ಕುಡಿಯುವ ನೀರು, ಪರಿಹಾರಕ್ಕಾಗಿ ಬಜೆಟ್ ಹಂಚಿಕೆ ಮೀರಿ ಹೆಚ್ಚುವರಿ ಅನುದಾನದ ಅಗತ್ಯತೆ ಇದೆ. ಆದ್ದರಿಂದ ಹೊಸ ಯೋಜನೆಗಳಿಗೆ ಅನುದಾನ ಕೊಡಬೇಕಾದರೆ, ಈಗಾಗಲೇ ಬಜೆಟ್‌ನಲ್ಲಿ ಹಂಚಿಕೆಯಾಗಿರುವ ಅನುದಾನವನ್ನು ಕಡಿತಗೊಳಿಸಬೇಕಾಗುತ್ತದೆ ಎಂದು ಸ್ಪಷ್ಟವಾಗಿದೆ ಹೇಳಿದೆ.
ಬರ ನಿರ್ವಹಣೆಗೆ ದುಡ್ಡಿಲ್ಲ: ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಸದನದಲ್ಲಿ ಮಾತನಾಡಿದ್ದು, ರಾಜ್ಯದಲ್ಲಿ ಬರಗಾಲ ಬಂದು ರೈತರು ಗುಳೆ ಹೋಗು ತ್ತಿದ್ದಾರೆ. ಮತ್ತೊಂದೆಡೆ ಸರ್ಕಾರದ ಖಜಾನೆ ಖಾಲಿಯಾಗಿ ಆರ್ಥಿಕ ಬರ ಉಂಟಾಗಿದೆ. ನೈಸರ್ಗಿಕ ಬರಕ್ಕೆ ಪರಿಹಾರ ನೀಡಬೇಕೆಂದರೆ ಆರ್ಥಿಕ ಇಲಾಖೆಯಲ್ಲಿ ಬರ ಇರಬಾರದು. ಆರ್ಥಿಕ ಇಲಾಖೆ ಸರಕಾರದ ಮಾನಮರ್ಯಾದೆಯನ್ನು ಹರಾಜು ಹಾಕಿದೆ.
ಈ ರೀತಿ ಆರ್ಥಿಕ ಇಲಾಖೆ ಮಾಡಿರುವುದನ್ನು ನಾನೆಂದೂ ನೋಡಿಲ್ಲ. ಸೆ.17ರಂದು ಆರ್ಥಿಕ ಇಲಾಖೆಯ ಪತ್ರದಲ್ಲಿ 10000 ಕೋಟಿ ರು. ಮೊತ್ತದ ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸಿಲ್ಲ ಎಂದು ಹೇಳಿದೆ. ಕಳೆದ ಬಜೆಟ್‌ನಲ್ಲಿ ಶೇ.2.95 ವಿತ್ತೀಯ ಕೊರತೆ ಉಂಟಾಗಿದೆ. ಆದರೆ ಎಫ್ಆರ್‌ಪಿಎಂ ಕಾಯ್ದೆಯಲ್ಲಿ ಶೇ.3ರಷ್ಟು ವಿತ್ತೀಯ ಕೊರತೆ ಮಿತಿಯನ್ನು ನಿಗದಿಪಡಿಸಲಾಗಿದೆ.
ರಾಜಸ್ವದ ಕೊರತೆ 22,952 ಕೋಟಿ ರು. ಇದೆ. ಈಗಾಗಲೇ ಈ ಮಿತಿಯನ್ನು ದಾಟಲಾಗಿದೆ. ಜಿಎಸ್‌ಡಿಪಿಗೆ ಹೋಲಿಸಿದರೆ ರಾಜ್ಯದ ವೆಚ್ಚದ ಬಾಧ್ಯತೆಗಳು ಶೇ.24.94ಕ್ಕೆ ತಲುಪಿದೆ. ಅದರ ಮಿತಿ ಶೇ.25ರೊಳಗೇ ಇರಬೇಕು. ಇದರ ಅರ್ಥ ಕರ್ನಾಟಕ ತನ್ನ ಅಗತ್ಯತೆ ಪೂರೈಸಲು ಸಾಲ ಪಡೆಯುವ ಸಾಮರ್ಥ್ಯದ ಮಿತಿಯನ್ನು ಮೀರಿದೆ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ಇನ್ನು ಮುಂದೆ ಸಾಲ ಮಾಡಬಾರದು, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರ್ಥ ಎಂದು ವಾಗ್ದಾಳಿ ನಡೆಸಿದರು.
ವರದಿಯಲ್ಲೇನಿದೆ ?
ಬಜೆಟ್‌ನಲ್ಲಿ ಅನುದಾನ ಹಣವನ್ನು ನಿಗದಿಪಡಿಸದ ಯೋಜನೆ ಆರಂಭಿಸುವುದರಿಂದ ಸಮಸ್ಯೆ ಗಳು ಉಂಟಾಗಲಿವೆ
ರಾಜ್ಯದ ಒಟ್ಟು ಸಂಚಿತ ಬಾಧ್ಯತೆಗಳು ಶೇ.24.94ಕ್ಕೆ ತಲುಪಿವೆ. ಕರ್ನಾಟಕ ಸಾಲ ಪಡೆಯುವ ಸಾಮರ್ಥ್ಯದ ಮಿತಿಯನ್ನು ಬಳಸಿಕೊಂಡಿದೆ
ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆ ಹಿನ್ನೆಲೆಯಲ್ಲಿ,ಹೊಸ ಯೋಜನೆಗಳಿಗೆ ಹೆಚ್ಚಿನ ಸಾಲ ಪಡೆಯಲು ಅವಕಾಶವಿಲ್ಲ
ಇನ್ನೂ 2 ಲಕ್ಷ ಕೋಟಿ ರು.ಗೂ ಹೆಚ್ಚಿನ ಮೊತ್ತವನ್ನು ಕಾಮಗಾರಿಗಳಿಗೆ ವಿನಿಯೋಗಿಸಬೇಕಾಗಿದೆ. ಬಿಲ್ ಬಾಕಿಯಿದೆ
ಬರ ಇರುವುದರಿಂದ ಕೃಷಿ ಪಂಪ್‌ಸೆಟ್ ಸಬ್ಸಿಡಿಯಲ್ಲಿ 4000-5000 ಕೋಟಿ ರು. ಹೆಚ್ಚಳವಾಗುವ ಸಾಧ್ಯತೆಯಿದೆ
ಸರಕಾರ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಅನಿವಾರ್ಯವಿರುವ ಯೋಜನೆಗಳು ಅಂತಿಮಗೊಳ್ಳುವವರೆಗೆ, ಕಾಯುವುದು ಒಳಿತು.
![]()
ಆರ್ಥಿಕ ಇಲಾಖೆ ತನ್ನ ಅಭಿಪ್ರಾಯವನ್ನು ತಿಳಿಸಿದೆ. ಈ ವಿಷಯ ನನಗೆ ಗೊತ್ತಿದೆ. ಸಚಿವನಾಗಿ ಯಾವ ಯೋಜನೆ ಕೈಬಿಡಬೇಕು. ಯಾವುದನ್ನು ಮಾಡಬೇಕು ಎನ್ನುವುದು ಗೊತ್ತಿದೆ. ಮಾತನಾ ಡೋರೆ ಮೊದಲು ನಮಗೆ ಬರಬೇಕಾದ ಅನುದಾನವನ್ನು ಕೇಂದ್ರ ಸರಕಾರದಿಂದ ಕೊಡಿಸಲಿ.
-ಡಿ.ಕೆ.ಶಿವಕುಮಾರ್, ಸಿಎಂ
![]()
ಹಿಂದಿನ ಸಿಎಂ ಸಿದ್ದರಾಮಯ್ಯ 3 ಲಕ್ಷ ಕೋಟಿ ರು. ಸಾಲ ಮಾಡಿದ್ದು, ಅದರ ಬಡ್ಡಿ 30000 ಕೋಟಿ ರು. ಗೂ ಅಧಿಕವಿದೆ. ನಾವು ಹೊಸ ಸಾಲ ಪಡೆಯಲು ಯೋಗ್ಯತೆ ಕಳೆದುಕೊಂಡಿದ್ದೇವೆ. ರಾಜ್ಯ ಸರಕಾರದಲ್ಲಿ 2 ಲಕ್ಷ ಕೋಟಿ ರು. ಕಾಮಗಾರಿಗಳ ಬಿಲ್ ಬಾಕಿಯಿದೆ.
-ಅಶೋಕ್, ವಿಪಕ್ಷ ನಾಯಕ