ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ricky Rai Case: ರಿಕ್ಕಿ ರೈ ಮೇಲೆ ಗುಂಡಿನ ದಾಳಿ; ಮುತ್ತಪ್ಪ ರೈ 2ನೇ ಪತ್ನಿ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

Ricky Rai Case: ರಿಯಲ್ ಎಸ್ಟೇಟ್ ವಿಚಾರವಾಗಿ ಈ ಹಿಂದೆಯೂ ವಿವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೇಸ್‌ಗೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ರಿಕ್ಕಿ ರೈ ಮೇಲೆ ಗುಂಡಿನ ದಾಳಿ; ನಾಲ್ವರ ವಿರುದ್ಧ ಎಫ್‌ಐಆರ್‌

Profile Prabhakara R Apr 19, 2025 2:04 PM

ರಾಮನಗರ: ಭೂಗತ ಲೋಕದ ಮಾಜಿ ಡಾನ್‌ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ (Ricky Rai Case) ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಬಿಡದಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಶನಿವಾರ ಎಫ್‌ಐಆರ್ ದಾಖಲಾಗಿದೆ. ರಿಕ್ಕಿ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈಗೆ ಆಪ್ತವಾಗಿದ್ದ ರಾಕೇಶ್ ಮಲ್ಲಿ, ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ಬಿಡದಿ ಹೋಬಳಿಯ ಕರಿಯಪ್ಪನದೊಡ್ಡಿಯಲ್ಲಿ ಶುಕ್ರವಾರ ರಾತ್ರಿ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿತ್ತು. ಕೂದಳೆಲೆ ಅಂತರದಲ್ಲಿ ರಿಯಲ್ ಎಸ್ಟೇಟ್​ ಬ್ಯುಸಿನೆಸ್​ ಮ್ಯಾನ್ ರಿಕ್ಕಿ ರೈ ಬಚಾವ್ ಆಗಿದ್ದರು. ಸದ್ಯ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಘಟನೆ ವೇಳೆ ಬಸವರಾಜ್​​ ಕಾರು ಚಾಲನೆ ಮಾಡುತ್ತಿದ್ದರು. ಹೀಗಾಗಿ ಫೈರಿಂಗ್​ ಆಗುತ್ತಿದ್ದಂತೆ ಅವರು ಮುಂದೆ ಬಾಗಿದ್ದಾರೆ. ಇದೀಗ ಬಸವರಾಜ್ ದೂರು ಆಧರಿಸಿ ಎ1 ರಾಕೇಶ್ ಮಲ್ಲಿ, ಎ2 ಅನುರಾಧಾ, ಎ3 ನಿತೇಶ್ ಶೆಟ್ಟಿ ಹಾಗೂ ಎ4 ವೈದ್ಯನಾಥನ್ ವಿರುದ್ಧ ಬಿಎನ್​ಎಸ್ 109,3(5) ಹಾಗೂ ಆರ್ಮ್ಸ್ ಆ್ಯಕ್ಟ್ ಅಡಿ ಕೇಸ್​ ದಾಖಲಾಗಿದೆ.

ರಿಯಲ್ ಎಸ್ಟೇಟ್ ವಿಚಾರವಾಗಿ ಈ ಹಿಂದೆಯೂ ವಿವಾದವಾಗಿತ್ತು. ಈ ಹಿನ್ನೆಲೆಯಲ್ಲಿ ರಿಕ್ಕಿ ರೈ ಮೇಲೆ ಫೈರಿಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಸವರಾಜುವನ್ನು ವಿಚಾರಣೆ ಮಾಡಿದಾಗ, ಒಂದು ಬಾರಿ ದೊಡ್ಡ ಸದ್ದು ಕೇಳಿ ಬಂತು ಎಂದಿದ್ದಾರೆ. ಹಾಗಾಗಿ ಕಾರಿಗೆ ತಗುಲಿರುವ ಗುಂಡಿನ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಮನೆ ಸಿಬ್ಬಂದಿ, ಆಪ್ತರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ.

ಪ್ರಕರಣದ ತನಿಖೆಗೆ ಐದು ತಂಡಗಳನ್ನು ರಚಿಸಲಾಗಿದ್ದು, ರೈ ಮಾಜಿ ಪತ್ನಿ ಮತ್ತು ರೈ ಬಲಗೈ ಬಂಟನಾಗಿದ್ದ ಮಿಥುನ್‌ ರೈ ಮೇಲೆ ಪೊಲೀಸರ ಅನುಮಾನದ ರೇಡಾರ್‌ ಹರಿದಿದೆ. ಮುತ್ತಪ್ಪ ರೈ ಅವರ 2000 ಕೋಟಿ ರೂಪಾಯಿಯ ಆಸ್ತಿಪಾಸ್ತಿಗೆ ಸಂಬಂಧಿಸಿದ ತಗಾದೆಯೇ ಈ ಗುಂಡಿನ ದಾಳಿಗೆ (Shoot out) ಕಾರಣವಾಗಿರುವ ಶಂಕೆ ಇದೆ.

ಪೊಲೀಸರು ಈ ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ಮಾಡಲು ಮುಂದಾಗಿದ್ದಾರೆ. ಮುತ್ತಪ್ಪ ರೈ ಅವರ ಭೂಗತ ಲೋಕದ ಹಿನ್ನೆಲೆಯಿಂದ ರಿಕ್ಕಿ ರೈ ಟಾರ್ಗೆಟ್ ಆಗಿರಬಹುದು. ರಿಕ್ಕಿ ರೈಯ ಬ್ಯುಸಿನೆಸ್ ವಿಷಯಕ್ಕೆ ಸಂಬಂಧಿಸಿದಂತೆ ಅಥವಾ ಹಳೆಯ ವೈರತ್ವದಿಂದ ರಿಕ್ಕಿ ರೈ ವಿರುದ್ಧ ದಾಳಿ ನಡೆಸಿರಬಹುದು. ಹಣಕಾಸಿನ ಗಲಾಟೆಯಿಂದ, ವೈಯಕ್ತಿಕ ದ್ವೇಷದಿಂದ, ಅಥವಾ ರಿಯಲ್ ಎಸ್ಟೇಟ್ ವಿವಾದದಿಂದಲೂ ಆಗಿರಬಹುದು. ಈ ಎಲ್ಲ ಕೋನಗಳಿಂದಲೂ ಪೊಲೀಸರು ತನಿಖೆಗೆ ಇಳಿದಿದ್ದಾರೆ.

ಈ ಸುದ್ದಿಯನ್ನೂ ಓದಿ | Muthappa Rai: ರಿಕ್ಕಿ ರೈ ಮೇಲೆ ಗುಂಡಿನ ದಾಳಿ: ತನಿಖೆಗೆ 5 ತಂಡ, ಬಲಗೈ ಬಂಟನ ಮೇಲೂ ಅನುಮಾನ

ಮುತ್ತಪ್ಪ ರೈ ಅವರ ₹2000 ಕೋಟಿ ಆಸ್ತಿಗೆ ಸಂಬಂಧಿಸಿದ ವಿವಾದದಿಂದ ರಿಕ್ಕಿ ರೈ ಕೊಲೆಗೆ ಯತ್ನ ನಡೆದಿರಬಹುದು ಎಂಬ ಅನುಮಾನವೂ ಇದೆ. ಮುತ್ತಪ್ಪ ರೈ ಬೆಂಗಳೂರು, ಗೋವಾ, ಮೈಸೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ವ್ಯಾಪಕ ಬ್ಯುಸಿನೆಸ್ ಹೊಂದಿದ್ದರು. ಈಗ ಈ ಬ್ಯುಸಿನೆಸ್‌ ಅನ್ನು ರಿಕ್ಕಿ ರೈ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿಯ ಕಾರಣಗಳನ್ನು ಪೊಲೀಸರು ಆಳವಾಗಿ ಪರಿಶೀಲಿಸುತ್ತಿದ್ದಾರೆ.