ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಅವಘಡ: ಬೆಂಗಳೂರಿನಲ್ಲಿ 44ಕ್ಕೂ ಹೆಚ್ಚು ಜನರಿಗೆ ಗಾಯ

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಸಿಡಿತದಿಂದಾಗಿ ಈವರೆಗೆ 44ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಬ್ಬದ ಆರಂಭದಲ್ಲೇ ನಗರದ ವಿವಿಧ ಪ್ರಮುಖ ಕಣ್ಣಿನ ಆಸ್ಪತ್ರೆಗಳಿಗೆ ಗಾಯಾಳುಗಳು ದಾಖಲಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ನಡುವೆಯೇ (Diwali celebrations) ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಸಿಡಿತದಿಂದಾಗಿ (Firecracker) ಈವರೆಗೆ 44ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಬ್ಬದ ಆರಂಭದಲ್ಲೇ ನಗರದ ವಿವಿಧ ಪ್ರಮುಖ ಕಣ್ಣಿನ ಆಸ್ಪತ್ರೆಗಳಿಗೆ ಗಾಯಾಳುಗಳು ದಾಖಲಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪಟಾಕಿ ಸಿಡಿಸುತ್ತಿದ್ದ ಮಕ್ಕಳಷ್ಟೇ ಅಲ್ಲದೆ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೂ ಪೆಟ್ಟಾಗಿದೆ.

  • ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ಅತಿ ಹೆಚ್ಚು ಅಂದರೆ 25 ಪ್ರಕರಣಗಳು ದಾಖಲಾಗಿವೆ.
  • ಸರ್ಕಾರಿ ಸ್ವಾಮ್ಯದ ಮಿಂಟೋ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿಯ ವೇಳೆಗೆ 16 ಪ್ರಕರಣಗಳು ವರದಿಯಾಗಿವೆ. ಇವರಲ್ಲಿ 10 ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಇಬ್ಬರಿಗೆ ತುರ್ತು ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿದೆ.
  • ಪ್ರಭಾ ಮತ್ತು ಶಂಕರ ಕಣ್ಣಿನ ಆಸ್ಪತ್ರೆ: ತಲಾ 2 ಪ್ರಕರಣಗಳು ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಹಬ್ಬದ ದಿನಗಳಲ್ಲಿ ಅವಘಡಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮಿಂಟೋ ಸೇರಿದಂತೆ ನಗರದ ಬಹುತೇಕ ಕಣ್ಣಿನ ಆಸ್ಪತ್ರೆಗಳಲ್ಲಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ವಿಶೇಷ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿದೆ. ಸುರಕ್ಷಿತ ಅಂತರ ಕಾಯ್ದುಕೊಂಡು, ಹಿರಿಯರ ಸಮ್ಮುಖದಲ್ಲಿಯೇ ಜಾಗರೂಕತೆಯಿಂದ ಪಟಾಕಿ ಸಿಡಿಸುವಂತೆ ಹಾಗೂ ಯಾವುದೇ ತುರ್ತು ಸಂದರ್ಭದಲ್ಲಿ ವಿಳಂಬ ಮಾಡದೆ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡುವಂತೆ ವೈದ್ಯರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪಟಾಕಿ ಸಿಡಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

  • ಸುರಕ್ಷಿತ ಅಂತರ: ಪಟಾಕಿಗೆ ಕಿಡಿ ಹೊತ್ತಿಸಿದ ತಕ್ಷಣ ಕನಿಷ್ಠ 5 ಮೀಟರ್ ದೂರ ಸರಿಯಿರಿ.
  • ತೆರೆದ ಮೈದಾನ ಬಳಸಿ: ಪಟಾಕಿಗಳನ್ನು ಮನೆಗಳ ಒಳಗೆ, ಬಾಲ್ಕನಿಗಳಲ್ಲಿ ಅಥವಾ ಕಿರಿದಾದ ಗಲ್ಲಿಗಳಲ್ಲಿ ಸಿಡಿಸಬೇಡಿ. ಮೈದಾನ ಅಥವಾ ಮುಕ್ತ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಿ.
  • ಕಾಟನ್ ಬಟ್ಟೆ ಧರಿಸಿ: ಪಟಾಕಿ ಸಿಡಿಸುವಾಗ ಸಡಿಲವಾದ ನೈಲಾನ್ ಅಥವಾ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬೇಡಿ. ದೇಹಕ್ಕೆ ಸರಿಯಾಗಿ ಹೊಂದುವ ಹತ್ತಿ (ಕಾಟನ್) ಬಟ್ಟೆಗಳನ್ನು ಮತ್ತು ಪಾದರಕ್ಷೆಗಳನ್ನು ಧರಿಸಿ.
  • ಉದ್ದದ ಅಗರಬತ್ತಿ ಬಳಸಿ: ಪಟಾಕಿಗೆ ಕಿಡಿ ಹಚ್ಚಲು ಸಣ್ಣ ಬೆಂಕಿಪೊಟ್ಟಣ ಅಥವಾ ಲೈಟರ್ ಬಳಸುವ ಬದಲಾಗಿ, ಉದ್ದದ ಅಗರಬತ್ತಿ (ಊದುಬತ್ತಿ) ಬಳಸಿ. ಇದರಿಂದ ಮುಖ ಮತ್ತು ಕೈಗಳು ಪಟಾಕಿಯಿಂದ ದೂರವಿರುತ್ತವೆ.

Vishakha Bhat Heggar

View all posts by this author