ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Double Decker Flyover: ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್‌ ಫ್ಲೈಓವರ್‌ ಸದ್ಯವೇ ಸಂಚಾರಮುಕ್ತ

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್ ಮತ್ತು ಬೆಳ್ಳಂದೂರುವರೆಗಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ.‌ 2024ರಲ್ಲಿ ಫ್ಲೈಓವರ್‌ನ ಒಂದು ಬದಿಯ ಭಾಗ ತೆರೆದಿತ್ತು. ಆದರೆ ಅಸ್ತಿತ್ವದಲ್ಲಿರುವ ರಸ್ತೆ ಮಾರ್ಗದ ಮೇಲೆ 42 ಮೀಟರ್ ಉಕ್ಕಿನ ಸೇತುವೆಯನ್ನು ಅಳವಡಿಸಿದ್ದರಿಂದ ಒಂದು ಭಾಗ ವಿಳಂಬವಾಗಿತ್ತು. ಕಾರ್ಮಿಕರು ಈಗ ಕಾಂಕ್ರೀಟ್ ಚಪ್ಪಡಿ ಹಾಕುವ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ.

ಡಬಲ್‌ ಡೆಕ್ಕರ್‌ ಫ್ಲೈಓವರ್

ಬೆಂಗಳೂರು, ಜ.29: ನಗರದ (Bengaluru) ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿರುವ (Silk board Junction) ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ (Double Decker Flyover) ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ 449 ಕೋಟಿ ರೂ. ವೆಚ್ಚದ ಈ ಯೋಜನೆಯು ಫೆಬ್ರವರಿ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಇದು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್ ಮತ್ತು ಬೆಳ್ಳಂದೂರುವರೆಗಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ.

2024ರಲ್ಲಿ ಫ್ಲೈಓವರ್‌ನ ಒಂದು ಬದಿಯ ಭಾಗ ತೆರೆದಿತ್ತು. ಆದರೆ ಅಸ್ತಿತ್ವದಲ್ಲಿರುವ ರಸ್ತೆ ಮಾರ್ಗದ ಮೇಲೆ 42 ಮೀಟರ್ ಉಕ್ಕಿನ ಸೇತುವೆಯನ್ನು ಅಳವಡಿಸಿದ್ದರಿಂದ ಒಂದು ಭಾಗ ವಿಳಂಬವಾಗಿತ್ತು. ಕಾರ್ಮಿಕರು ಈಗ ಕಾಂಕ್ರೀಟ್ ಚಪ್ಪಡಿ ಹಾಕುವ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ಫೆಬ್ರವರಿ ಅಂತ್ಯದ ವೇಳೆಗೆ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದಾರೆ.

ಎಚ್‌ಎಸ್‌ಆರ್ ಲೇಔಟ್ ಅನ್ನು ಬಿಟಿಎಂ ಲೇಔಟ್ ಜೊತೆ ಸಂಪರ್ಕಿಸುವ ಫ್ಲೈಓವರ್, ಅಸ್ತಿತ್ವದಲ್ಲಿರುವ ಮೂಲಸೌಕರ್ಯದ ಮೇಲೆ 42 ಮೀಟರ್ ಸ್ಟೀಲ್ ಗಿರ್ಡರ್ ಅಳವಡಿಸುವಲ್ಲಿ ವಿಳಂಬವನ್ನು ಎದುರಿಸಿತು. ಇದರ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಯ ಬಗ್ಗೆ ಪ್ರಯಾಣಿಕರಲ್ಲಿ ಭರವಸೆಯನ್ನು ಹುಟ್ಟುಹಾಕಿದೆ.

"ನಾನು ಬನಶಂಕರಿಯಿಂದ ದಿನವೂ ಪ್ರಯಾಣಿಸಬೇಕು. ಸಿಲ್ಕ್ ಬೋರ್ಡ್ ನನ್ನ ಪ್ರಯಾಣದ ಅತ್ಯಂತ ಕೆಟ್ಟ ಭಾಗ. ಈ ಕಾಯುವ ಸಮಯದಲ್ಲಿ 10 ನಿಮಿಷ ಕಡಿತವಾದರೂ ಸಹ ಪ್ರಯೋಜನವಾಗುತ್ತದೆ. ಸಿಲ್ಕ್ ಬೋರ್ಡ್‌ನಲ್ಲಿ ಪ್ರತಿದಿನ ಸಂಜೆ ಒಂದು ದುಃಸ್ವಪ್ನ. ಈ ರ‍್ಯಾಂಪ್ ಮುಕ್ತಗೊಳಿಸಿದರೆ, HSR ಮತ್ತು ಹೊಸೂರು ರಸ್ತೆಯ ಕಡೆಗೆ ವಾಹನಗಳು ವೇಗವಾಗಿ ಚಲಿಸಬಹುದು. ಈಗ ಎಲ್ಲರೂ ಒಂದೇ ಸಿಗ್ನಲ್‌ನಲ್ಲಿ ಕಾಯುತ್ತಾ ನಿಲ್ಲಬೇಕಾಗಿದೆ" ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಕಾರ್ಯಾರಂಭ ಮಾಡಿದ ನಂತರ ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಬೈಪಾಸ್ ಮಾಡಿ ಸಂಚರಿಸಲು ಈ ಫ್ಲೈಓವರ್ ಅವಕಾಶ ನೀಡುತ್ತದೆ. ಇದರಿಂದಾಗಿ ದಟ್ಟಣೆ ಕಡಿಮೆಯಾಗುತ್ತದೆ. "ಸಿಲ್ಕ್ ಬೋರ್ಡ್‌ನಿಂದ ಬಿಟಿಎಂ ಲೇಔಟ್‌ಗೆ ಸಿಗ್ನಲ್ ಅನ್ನು ತಪ್ಪಿಸುವುದೇ ದೊಡ್ಡ ಪರಿಹಾರ" ಎಂದು ಇನ್ನೊಬ್ಬ ಪ್ರಯಾಣಿಕರು ಹೇಳಿದ್ದಾರೆ.

ಅಂತಿಮ ಹಂತದಲ್ಲಿ ಕಾಮಗಾರಿ

ಕೆಲಸವು ಅಂತಿಮ ಹಂತದಲ್ಲಿದ್ದು, ಪೂರ್ಣಗೊಳ್ಳುವ ದಿನಾಂಕ ಪೊಲೀಸ್ ಪರಿಶೀಲನೆಗೆ ಬಾಕಿ ಇದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಗುತ್ತಿಗೆದಾರರು ಫೈನಲ್‌ ಟಚ್‌ ನೀಡಿದ ನಂತರ, ಸಂಚಾರ ಪೊಲೀಸರು ಸಾರ್ವಜನಿಕರಿಗೆ ಸಂಚಾರ ಮುಕ್ತ ಮಾಡುವ ಮೊದಲು ರಚನೆಯನ್ನು ಪರಿಶೀಲಿಸುತ್ತಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಬ್ರವರಿ ಅಂತ್ಯದ ವೇಳೆಗೆ ಫ್ಲೈಓವರ್ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ಬೆಂಗಳೂರು ದಕ್ಷಿಣ ಸಂಚಾರ ಡಿಸಿಪಿ ಗೋಪಾಲ್ ಎಂ ಬ್ಯಾಕೋಡ್ ದೃಢಪಡಿಸಿದ್ದಾರೆ.

ಹರೀಶ್‌ ಕೇರ

View all posts by this author