ಬೆಂಗಳೂರು: ಅಪರೂಪದ ಮತ್ತು ಗಮನಾರ್ಹವಾದ ವೈದ್ಯಕೀಯ ಸಾಧನೆಯೊಂದರಲ್ಲಿ, ವೈಟ್‌ಫೀಲ್ಡ್‌ನ ಮಣಿಪಾಲ್ ಆಸ್ಪತ್ರೆಯ ವೈದ್ಯರು ಕೇವಲ 4.6 ಕೆಜಿ ತೂಕದ ಒಂದು ತಿಂಗಳ ಹಸುಗೂಸಿಗೆ ಜೀವ ಉಳಿಸುವ ರೋಬೋಟಿಕ್ ಮೇದೋಜ್ಜೀರಕ ಗ್ರಂಥಿಯ (Pancreatic) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಇದು ಭಾರತದ ಇಂತಹ ಮೊದಲ ಪ್ರಕರಣಗಳಲ್ಲಿ ಒಂದಾಗಿದ್ದು, ಬಹುಶಃ ರೋಬೋಟಿಕ್ ಮೇದೋಜ್ಜೀರಕ ಶಸ್ತ್ರಚಿಕಿತ್ಸೆಗೆ ಒಳಗಾದ ಜಾಗತಿಕವಾಗಿ ಅತ್ಯಂತ ಕಿರಿಯ ವಯಸ್ಸಿನ ಮಗು ಇದಾಗಿರಬಹುದು.
ಸಂಭ್ರಮಿಸಬೇಕಾಗಿದ್ದ ಸಮಯವು ಬೇಬಿ ಇನಾಯಾ (ಹೆಸರು ಬದಲಾಯಿಸಲಾಗಿದೆ) ಪಾಲಿಗೆ ಅನಿರೀಕ್ಷಿತವಾಗಿ ಸಮಯದ ವಿರುದ್ಧದ ಓಟವಾಗಿ ಬದಲಾಯಿತು. ಹುಟ್ಟಿದ ಕೇವಲ 16 ದಿನಗಳ ನಂತರ, ಆಕೆಗೆ 'ಕನ್ಜೆನಿಟಲ್ ಹೈಪರ್ ಇನ್ಸುಲಿನಿಜಂ' (Congenital Hyperinsulinism) ಇರುವುದು ಪತ್ತೆಯಾಯಿತು. ಇದು ಜೀವಕ್ಕೆ ಅಪಾಯಕಾರಿಯಾದ ಸ್ಥಿತಿಯಾಗಿದ್ದು, ಇದರಲ್ಲಿ ಮೇದೋಜ್ಜೀರಕ ಗ್ರಂಥಿಯು ಅತಿಯಾದ ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ.
ಇದು ರಕ್ತದಲ್ಲಿನ ಸಕ್ಕರೆ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಇಳಿಯಲು ಕಾರಣವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶ ಹೀಗೆ ಪದೇ ಪದೇ ಕುಸಿಯುವುದು ಮೆದುಳಿಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡುವ ಮೌನ ಹಾಗೂ ಗಂಭೀರ ಬೆದರಿಕೆಯನ್ನು ಒಡ್ಡುತ್ತಿತ್ತು.
ಇದನ್ನೂ ಓದಿ: Health Tips: ಈ ಆಹಾರ ಅರಿವಿಲ್ಲದೆಯೇ ನಿಮ್ಮ ರಕ್ತದೊತ್ತಡ ಹೆಚ್ಚಿಸಬಹುದು; ಎಚ್ಚರ!
ತಾನು ಜನಿಸಿದ ಆಸ್ಪತ್ರೆಯಲ್ಲಿ ಅತ್ಯಧಿಕ ಸಾಂದ್ರತೆಯ 'ಇಂಟ್ರಾವೆನಸ್ ಗ್ಲೂಕೋಸ್' (ನರಗಳ ಮೂಲಕ ನೀಡುವ ಗ್ಲೂಕೋಸ್) ಪಡೆದ ಹೊರತಾಗಿಯೂ, ಆಕೆಯ ರಕ್ತದಲ್ಲಿನ ಸಕ್ಕರೆ ಮಟ್ಟವು ಗಂಭೀರ ಮಟ್ಟಕ್ಕೆ ಕುಸಿಯುತ್ತಲೇ ಇತ್ತು. ಮಗುವಿನ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ, ಆಕೆಯನ್ನು ವೈಟ್‌ಫೀಲ್ಡ್‌ನ ಮಣಿಪಾಲ್ ಆಸ್ಪತ್ರೆಯ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿ ವಿಭಾಗದ ಸಮಾಲೋಚಕರಾದ ಡಾ.ಕವಿತಾ ಭಟ್ ಅವರ ಬಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಯಿತು.
ಚಿಕಿತ್ಸೆಯ ತುರ್ತು ಪರಿಸ್ಥಿತಿಯನ್ನು ವಿವರಿಸುತ್ತಾ ಡಾ. ಭಟ್ ಅವರು ಹೀಗೆ ಹೇಳಿದರು, "ನವಜಾತ ಶಿಶುಗಳಲ್ಲಿ ಮೆದುಳು ಶಕ್ತಿಗಾಗಿ ಬಹುತೇಕ ಸಂಪೂರ್ಣವಾಗಿ ಸಕ್ಕರೆಯನ್ನೇ ಅವಲಂಬಿಸಿರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಪದೇ ಪದೇ ಕುಸಿದಾಗ, ಮೆದುಳಿಗೆ ಅಗತ್ಯ ವಿರುವ ಇಂಧನ ಸಿಗುವುದಿಲ್ಲ. ಇದು ಮಗುವಿನ ಕಲಿಕೆ, ಚಲನೆ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಶಾಶ್ವತ ಹಾನಿಯನ್ನು ಉಂಟುಮಾಡಬಹುದು. ಈ ಹಾನಿಯು ಸಾಮಾನ್ಯವಾಗಿ ಮೌನವಾಗಿರುತ್ತದೆ ಮತ್ತು ಇದನ್ನು ನಂತರ ಸರಿಪಡಿಸಲು ಸಾಧ್ಯವಿಲ್ಲ."
ವಂಶವಾಹಿ ವಿಶ್ಲೇಷಣೆ (Genetic Analysis) ಸೇರಿದಂತೆ ನಡೆಸಲಾದ ವಿವರವಾದ ಮೌಲ್ಯ ಮಾಪನವು, ಇದು 'ಫೋಕಲ್ ಕನ್ಜೆನಿಟಲ್ ಹೈಪರ್ ಇನ್ಸುಲಿನಿಜಂ' ಎಂಬ ರೂಪದ ಕಾಯಿಲೆ ಎಂದು ಸೂಚಿಸಿತು—ಇದನ್ನು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸುವ ಸಾಧ್ಯತೆ ಇರುತ್ತದೆ. ಈ ರೋಗನಿರ್ಣಯವನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು, ವೈದ್ಯಕೀಯ ತಂಡವು ಅತ್ಯಂತ ವಿಶೇಷವಾದ '18F-DOPA PET/CT' ಸ್ಕ್ಯಾನ್ ಅನ್ನು ನಡೆಸಿತು.
ಇದು ವಿಶ್ವದ ಆಯ್ದ ವೈದ್ಯಕೀಯ ಕೇಂದ್ರಗಳಲ್ಲಿ ಮಾತ್ರ ಲಭ್ಯವಿರುವ ತಂತ್ರಜ್ಞಾನ ವಾಗಿದೆ. ಈ ಸ್ಕ್ಯಾನ್ ವರದಿಯು ಮೇದೋಜ್ಜೀರಕ ಗ್ರಂಥಿಯಲ್ಲಿ ಕೇವಲ 0.5 ಸೆಂಟಿ ಮೀಟರ್ ಗಾತ್ರದ ಒಂದು ಸಣ್ಣ ಗಡ್ಡೆಯನ್ನು (Lesion) ಪತ್ತೆಹಚ್ಚಿತು. ಬಟಾಣಿ ಕಾಳಿನ ಗಾತ್ರದಷ್ಟಿದ್ದ ಈ ಗಡ್ಡೆಯೇ ಅತಿಯಾದ ಇನ್ಸುಲಿನ್ ಉತ್ಪಾದನೆಯ ನಿಖರವಾದ ಮೂಲ ವಾಗಿತ್ತು.
ಈ ನಿಖರವಾದ ರೋಗನಿರ್ಣಯವು ರೋಗವನ್ನು ಪೂರ್ಣವಾಗಿ ಗುಣಪಡಿಸುವ ಹಾದಿ ಯನ್ನು ಸುಲಭಗೊಳಿಸಿತು. ಕಾಯಿಲೆಯು ಇಡೀ ಗ್ರಂಥಿಗೆ ಹರಡಿರುವ (Diffuse disease) ಸ್ಥಿತಿಗೆ ಹೋಲಿಸಿದರೆ, 'ಫೋಕಲ್ ಹೈಪರ್ ಇನ್ಸುಲಿನಿಜಂ' ಸ್ಥಿತಿಯಲ್ಲಿ ಶಸ್ತ್ರಚಿಕಿತ್ಸಕರಿಗೆ ಮೇದೋಜ್ಜೀರಕ ಗ್ರಂಥಿಯ ಬಾಧಿತ ಭಾಗವನ್ನು ಮಾತ್ರ ತೆಗೆದು ಹಾಕಲು ಸಾಧ್ಯವಾಗುತ್ತದೆ. ಇದರಿಂದ ಗ್ರಂಥಿಯ ಉಳಿದ ಭಾಗವು ಸಹಜವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವು ದಲ್ಲದೆ, ಮಗು ಆಜೀವ ಪರ್ಯಂತ ಔಷಧಿ ಅಥವಾ ಇನ್ಸುಲಿನ್ ಚಿಕಿತ್ಸೆ ಪಡೆಯುವ ಅಗತ್ಯ ವನ್ನು ಇದು ತಪ್ಪಿಸುತ್ತದೆ.
ಇದರ ಮುಂದಿನ ನಿರ್ಣಾಯಕ ನಿರ್ಧಾರವೆಂದರೆ ಶಸ್ತ್ರಚಿಕಿತ್ಸೆಯನ್ನು ಯಾವ ವಿಧಾನ ದಲ್ಲಿ ಮಾಡಬೇಕು ಎನ್ನುವುದು. ಸಾಂಪ್ರದಾಯಿಕ 'ಓಪನ್ ಸರ್ಜರಿ' (ದೇಹವನ್ನು ಕೊಯ್ದು ಮಾಡುವ ಶಸ್ತ್ರಚಿಕಿತ್ಸೆ) ಒಂದು ಆಯ್ಕೆಯಾಗಿದ್ದರೂ, ಅಷ್ಟು ಚಿಕ್ಕ ಮಗುವಿನಲ್ಲಿ ಅದು ಹೆಚ್ಚಿನ ಅಪಾಯಗಳನ್ನು ಹೊಂದಿತ್ತು. ಅದರಲ್ಲಿ ಮೇದೋಜ್ಜೀರಕ ಅಂಗಾಂಶದ ಅತಿ ಯಾದ ನಷ್ಟ, ಭವಿಷ್ಯದಲ್ಲಿ ಮಧುಮೇಹ ಬರುವ ಸಾಧ್ಯತೆ ಮತ್ತು ಜೀರ್ಣಕಾರಿ ಸಮಸ್ಯೆ ಗಳ ಅಪಾಯವಿತ್ತು. ಈ ಕೆಲಸಕ್ಕೆ ವಿಪರೀತ ನಿಖರತೆಯ ಅವಶ್ಯಕತೆ ಇದ್ದುದರಿಂದ, ವೈದ್ಯಕೀಯ ತಂಡವು 'ರೋಬೋಟಿಕ್-ಅಸಿಸ್ಟೆಡ್' ವಿಧಾನವನ್ನು ಆಯ್ದುಕೊಂಡಿತು. ಇಷ್ಟು ಚಿಕ್ಕ ವಯಸ್ಸಿನ ರೋಗಿಗಳಿಗೆ ಇದು ಅತ್ಯಾಧುನಿಕ ಮತ್ತು ಅತ್ಯಂತ ಅಪರೂಪದ ಆಯ್ಕೆಯಾಗಿದೆ.
ಈ ಶಸ್ತ್ರಚಿಕಿತ್ಸೆಯ ನೇತೃತ್ವವನ್ನು ಡಾ. ಮಂಜುನಾಥ್ ಹರಿದಾಸ್ (ಕೊಲೊರೆಕ್ಟಲ್, ಜಿಐ ಮತ್ತು ರೋಬೋಟಿಕ್ ಸರ್ಜರಿ ಸಮಾಲೋಚಕರು) ಹಾಗೂ ಡಾ. ಅರವಿಂದ್ ಸಬರ್ವಾಲ್ (ಪೀಡಿಯಾಟ್ರಿಕ್ ಸರ್ಜರಿ ಸಮಾಲೋಚಕರು) ಅವರು ವಹಿಸಿದ್ದರು. ಇವರಿಗೆ ಪೀಡಿಯಾ ಟ್ರಿಕ್ ಎಂಡೋಕ್ರೈನಾಲಜಿ, ನವಜಾತ ಶಿಶುಗಳ ತೀವ್ರ ನಿಗಾ ಘಟಕ (NICU) ಮತ್ತು ಅನೆಸ್ತೇಷಿಯಾ ವಿಭಾಗಗಳ ಬಹುಶಿಸ್ತೀಯ ತಂಡಗಳು ಬೆಂಬಲ ನೀಡಿದವು.
ಹೈ-ಡೆಫಿನಿಷನ್ ರೋಬೋಟಿಕ್ ಕ್ಯಾಮೆರಾಗಳು ಮತ್ತು ಅತ್ಯಂತ ನಿಖರವಾದ ಉಪಕರಣ ಗಳನ್ನು ಬಳಸಿ, ವೈದ್ಯಕೀಯ ತಂಡವು ಮೇದೋಜ್ಜೀರಕ ಗ್ರಂಥಿಯ ಉಳಿದ ಭಾಗಕ್ಕೆ ಯಾವುದೇ ಹಾನಿಯಾಗದಂತೆ ಆ 0.5 ಸೆಂ.ಮೀ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆಯಿತು. ಶಸ್ತ್ರಚಿಕಿತ್ಸೆಯು ಯಾವುದೇ ತೊಂದರೆಗಳಿಲ್ಲದೆ ಮತ್ತು ರಕ್ತದ ನಷ್ಟವಿಲ್ಲದೆ ಪೂರ್ಣಗೊಂಡಿತು. ಗಮನಾರ್ಹ ಸಂಗತಿಯೆಂದರೆ, ಆಪರೇಷನ್ ಥಿಯೇಟರ್'ನಲ್ಲಿರು ವಾಗಲೇ ಮಗುವಿನ ರಕ್ತದ ಸಕ್ಕರೆ ಮಟ್ಟವು ತಕ್ಷಣವೇ ಸ್ಥಿರವಾಯಿತು. ಇದರಿಂದ ಮಗುವಿಗೆ ಮತ್ತೆ ಹೊರಗಿನಿಂದ ಗ್ಲೂಕೋಸ್ ನೀಡುವ ಅವಶ್ಯಕತೆ ಇಲ್ಲದಂತಾಯಿತು.
ಈ ಮೈಲಿಗಲ್ಲಿನ ಬಗ್ಗೆ ಮಾತನಾಡಿದ ಡಾ. ಹರಿದಾಸ್, "ಶಿಶುಗಳಲ್ಲಿ ರೋಬೋಟಿಕ್ ಮೇದೋಜ್ಜೀರಕ ಶಸ್ತ್ರಚಿಕಿತ್ಸೆ ನಡೆದ ವರದಿಗಳು ಬಹಳ ಕಡಿಮೆ ಇವೆ, ಅದರಲ್ಲೂ ಒಂದು ತಿಂಗಳ ಮಗುವಿನಲ್ಲಿ ಇಂತಹ ಶಸ್ತ್ರಚಿಕಿತ್ಸೆ ನಡೆದಿರುವ ಯಾವುದೇ ವರದಿ ಇಲ್ಲ. ನಮಗೆ ತಿಳಿದಿರುವಂತೆ, ಇದು ವಿಶ್ವಾದ್ಯಂತ ವರದಿಯಾಗಿರುವ ಇಂತಹ ಮೊದಲ ಪ್ರಕರಣವಾಗಿದೆ. ಆಧುನಿಕ ತಂತ್ರಜ್ಞಾನ, ಪರಿಣತಿ ಮತ್ತು ಸಾಂಘಿಕ ಪ್ರಯತ್ನಗಳು ಒಂದಾದಾಗ ಅತ್ಯಂತ ಚಿಕ್ಕ ಹಾಗೂ ದುರ್ಬಲ ರೋಗಿಗಳಿಗೆ ಏನು ಮಾಡಲು ಸಾಧ್ಯ ಎಂಬುದಕ್ಕೆ ಈ ಸಾಧನೆ ಸಾಕ್ಷಿಯಾಗಿದೆ.
ನಾವು ಕಳೆದ ಎರಡು ವರ್ಷಗಳಲ್ಲಿ 800ಕ್ಕೂ ಹೆಚ್ಚು ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ್ದೇವೆ. ನಮ್ಮ ಅನುಭವ ಮತ್ತು ಪರಿಣತಿ ಹೆಚ್ಚುತ್ತಿರುವಂತೆ, ಇಂತಹ ಪುಟ್ಟ ರೋಗಿಗಳ ಸಂಕೀರ್ಣ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ನಾವು ಶಕ್ತರಾ ಗಿದ್ದೇವೆ," ಎಂದು ಹೇಳಿದರು.
ಶಸ್ತ್ರಚಿಕಿತ್ಸೆಯ ನಂತರ, ಬೇಬಿ ಇನಾಯಾ ಅವರನ್ನು ಎನ್‌ಐಸಿಯುನಲ್ಲಿ ಒಂಬತ್ತು ದಿನಗಳ ಕಾಲ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಯಿತು. ಅಲ್ಲಿ ಮಗು ಅತ್ಯುತ್ತಮ ಚೇತರಿಕೆಯನ್ನು ತೋರಿಸಿತು. ಅಂತಿಮವಾಗಿ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಈಗ ಮಗು ಸಹಜವಾಗಿ ಹಾಲು ಕುಡಿಯುತ್ತಿದೆ. ಮಗುವಿಗೆ ಕನಿಷ್ಠ ಔಷಧಿಗಳನ್ನು ನೀಡಲಾಗುತ್ತಿದ್ದು, ಪದೇ ಪದೇ ಗ್ಲೂಕೋಸ್ ನೀಡುವ ಅಗತ್ಯ ಈಗ ಉಳಿದಿಲ್ಲ.
ಈ ಪ್ರಕರಣವು ಕೇವಲ ಒಂದು ಜೀವವನ್ನು ಉಳಿಸಿದ್ದಲ್ಲದೆ, ಆರಂಭಿಕ ರೋಗನಿರ್ಣಯ, ಸುಧಾರಿತ ಸ್ಕ್ಯಾನಿಂಗ್ ವಿಧಾನಗಳು ಮತ್ತು ಶಸ್ತ್ರಚಿಕಿತ್ಸಾ ನಾವೀನ್ಯತೆಗಳು ಮಕ್ಕಳ ಚಿಕಿತ್ಸಾ ಪದ್ಧತಿಯಲ್ಲಿ (Pediatric care) ಹೇಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿವೆ ಎಂಬುದನ್ನು ಎತ್ತಿ ತೋರಿಸುತ್ತದೆ. ಅತ್ಯಂತ ನಾಜೂಕಾದ ರೋಗಿಗಳಿಗೂ ಅತ್ಯುನ್ನತ ಮಟ್ಟದ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂಬ ಗಡಿಗಳನ್ನು ಈ ಸಾಧನೆ ವಿಸ್ತರಿಸಿದೆ.