ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ ಗ್ರಾಮ ಆಡಳಿತಾಧಿಕಾರಿ (ವಿಎಒ) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, 151.25 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಅಭ್ಯರ್ಥಿ ಶಂಕರ್ ಬನ್ನೂರ ಪೊಲೀಸರ ಅತಿಥಿಯಾಗಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಶಂಕರ್ ಬನ್ನೂರ, ಅ.4ರಂದು ನಡೆದಿದ್ದ ವಿಎಒ ನೇಮಕಾತಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಗಮನ ಸೆಳೆದಿದ್ದ. ಆದರೆ, ಈ ಹಿಂದೆ ನಡೆದಿದ್ದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ಅಭ್ಯರ್ಥಿ ವಿಎಒ ಪರೀಕ್ಷೆಯಲ್ಲಿ 151.25 ಅಂಕ ಗಳಿಸಿರುವುದು ಹಲವು ಅನುಮಾನ ಗಳಿಗೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ ಸೇರಿದಂತೆ ವಿವಿಧ ಸಂಘಟನೆಗಳು ಆತನ ಅಂಕಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಒತ್ತಾಯಿಸಿದ್ದವು. ವಿದ್ಯಾರ್ಥಿ ಸಂಘಟನೆಗಳ ದೂರಿನ ಹಿನ್ನೆಲೆಯಲ್ಲಿ ಕೆಇಎ, ಹಾವೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಸೂಚಿಸಿತ್ತು.
ಇದನ್ನೂ ಓದಿ: Post Man Cheat: ಪೋಸ್ಟ್ ಮ್ಯಾನ್ ವಂಚನೆಯಿಂದ ಹಣ ಕಳೆದುಕೊಂಡ ಸಾವಿರಾರು ಖಾತೆದಾರರು
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ವಿಶೇಷ ತಂಡ ರಚಿಸಿ, ಸವಣೂರು ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ವಿಚಾರಣೆ ನಡೆಸಲು ಆದೇಶಿಸಿದ್ದರು. ಈ ವೇಳೆ ಶಿಗ್ಗಾಂವಿಯ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಶಂಕರ್ ಮೊಬೈಲ್ ಬಳಸಿ ಪರೀಕ್ಷೆ ಬರೆದಿರುವುದು ಪತ್ತೆಯಾಗಿದೆ.
ಗೂಗಲ್ ಲೆನ್ಸ್ ಬಳಸಿ ಉತ್ತರ: ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಕೊಂಡೊಯ್ದಿದ್ದ ಶಂಕರ್, ಕೊನೆಯ ಬೆಂಚ್ನಲ್ಲಿ ಕುಳಿತು ಗೂಗಲ್ ಲೆನ್ಸ್ ಆಪ್ ಮೂಲಕ ಪ್ರಶ್ನೆಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಉತ್ತರಗಳನ್ನು ಹುಡುಕಿದ್ದಾನೆ. ಬಳಿಕ ಅವುಗಳನ್ನು ಒಎಂಆರ್ ಉತ್ತರ ಪತ್ರಿಕೆಯಲ್ಲಿ ಟಿಕ್ ಮಾಡಿದ್ದಾನೆ ಎನ್ನಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿ ಆಧಾರ್ ಕಾರ್ಡ್ ಮಾತ್ರ ಪರಿಶೀಲಿಸಿದ್ದು, ಮೊಬೈಲ್ ತಪಾಸಣೆ ನಡೆಸಿರಲಿಲ್ಲ ಎಂದು ವಿಚಾರಣೆ ವೇಳೆ ಶಂಕರ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಹಾನಗಲ್ ಪೊಲೀಸರು ಆತನನ್ನು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗಾಗಿ ಶಿಗ್ಗಾಂವಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
![]()
ಕೆಇಎ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಅವರ ಸೂಚನೆಯಂತೆ ಸವಣೂರು ಉಪ ವಿಭಾಗಾಧಿಕಾರಿ ಮೂಲಕ ವಿಚಾರಣೆ ನಡೆಸಲಾಗಿದೆ. ಎರಡು-ಮೂರು ದಿನಗಳಲ್ಲಿ ವರದಿ ಸಲ್ಲಿಕೆಯಾಗಲಿದ್ದು, ಬಳಿಕ ಪ್ರಕರಣದ ಸಂಪೂರ್ಣ ವಿವರಗಳು ತಿಳಿಯಲಿವೆ.
-ವಿಜಯ ಮಹಾಂತೇಶ ದಾನಮ್ಮನವರ, ಹಾವೇರಿ ಜಿಲ್ಲಾಧಿಕಾರಿ