ಬೆಂಗಳೂರು: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳದ ಬೆನ್ನಲ್ಲೇ ಇದೀಗ ಆಟೋ ಚಾಲಕರಿಗೂ ಬೆಲೆ ಏರಿಕೆಯ ಬಿಸಿ ಬಿಸಿ ತಟ್ಟಿದೆ. ಇಂದಿನಿಂದ ಜಾರಿಗೆ ಬರುವಂತೆ ಆಟೋ ಗ್ಯಾಸ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 5.73 ರೂಪಾಯಿ ಹೆಚ್ಚಳವಾಗಿದೆ. ಈ ಹಿಂದೆ ಪ್ರತಿ ಲೀಟರ್‌ಗೆ 89 ರೂ. ಇದ್ದ ದರವು, ಈ ಏರಿಕೆಯ ನಂತರ 95.08 ರೂಪಾಯಿಗೆ ತಲುಪಿದೆ.
ಆಟೋ ಎಲ್‌ಪಿಜಿ ದಿಢೀರ್ ಸುಮಾರು 6 ರೂ ಏರಿಕೆಯಾಗಿರುವುದು ಆಟೋ ಚಾಲಕರ ನಿದ್ದೆಗೆಡಿಸಿದೆ. ಇಂಧನ ದರ ಏರಿಕೆಯಾದಷ್ಟೂ ಚಾಲಕರ ನಿವ್ವಳ ಲಾಭ ಕಡಿಮೆಯಾಗಲಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಲಿದೆ. ಗ್ಯಾಸ್ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಆಟೋ ಪ್ರಯಾಣ ದರವನ್ನು ಹೆಚ್ಚಿಸುವಂತೆ ಸರ್ಕಾರವನ್ನು ಚಾಲಕರು ಮತ್ತು ಸಂಘಟನೆಗಳು ಒತ್ತಾಯಿಸುತ್ತಿದ್ದಾರೆ.
ವಿದ್ಯುತ್ ದರ ಏರಿಕೆ; ಪರಿಷ್ಕೃತ ದರ ಇಂದಿನಿಂದ ಜಾರಿ
ಬೆಂಗಳೂರು: ಎಲ್‌ಪಿಜಿ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ದರ ಏರಿಕೆಯ ಶಾಕ್ ತಟ್ಟಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ವಿದ್ಯುತ್ ದರ ಏರಿಕೆ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ಗ್ರಾಹಕರಿಗೆ ಪ್ರತಿ ಯೂನಿಟ್ ವಿದ್ಯುತ್ ಬಳಕೆಯ ಮೇಲೆ 56 ಪೈಸೆ ಹೆಚ್ಚುವರಿ ಹೊರೆ ಬೀಳಲಿದೆ.
ಈ ದರ ಏರಿಕೆಯು 2024-25ರ ಆರ್ಥಿಕ ವರ್ಷದ ಆದಾಯದ ಕೊರತೆಯನ್ನು ಸರಿದೂಗಿಸಲು ಮಾಡಲಾದ 'ಟ್ರೂ ಅಪ್' (True up Charges) ಪ್ರಕ್ರಿಯೆಯಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಬೆಸ್ಕಾಂ ಒಟ್ಟು 34,087.94 ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸಿತ್ತು. ಆದರೆ, ವಾಸ್ತವದಲ್ಲಿ ವಿದ್ಯುತ್ ಮಾರಾಟದಿಂದ ಬಂದ ಆದಾಯ ಕೇವಲ 32,019.56 ಕೋಟಿ ರೂಪಾಯಿಗಳು ಮಾತ್ರ. ಇದರಿಂದಾಗಿ ಬೆಸ್ಕಾಂಗೆ ಬರೋಬ್ಬರಿ 2,068.38 ಕೋಟಿ ರೂಪಾಯಿಗಳ ಬೃಹತ್ ಆದಾಯದ ಕೊರತೆ ಉಂಟಾಗಿದೆ.
ಈ ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಕೊರತೆಯನ್ನು ತುಂಬಿಕೊಳ್ಳಲು ಎಸ್ಕಾಂಗಳು ದರ ಏರಿಕೆಯ ಪ್ರಸ್ತಾವನೆಯನ್ನು ಸಲ್ಲಿಸಿದ್ದವು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಕೆಇಆರ್‌ಸಿ, ಕೊರತೆಯನ್ನು ನೀಗಿಸಲು ಪ್ರತಿ ಯೂನಿಟ್‌ಗೆ 56 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅನುಮತಿ ನೀಡಿದೆ.
ಚುನಾವಣೆ ಮುಗಿದ ಬೆನ್ನಲ್ಲೇ ಎಲ್‌ಪಿಜಿ ದುಬಾರಿ, ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ
ಕೆಇಆರ್‌ಸಿ ಆದೇಶದ ಹಿನ್ನೆಲೆಯಲ್ಲಿ ಪರಿಷ್ಕೃತ ದರವು ಇಂದು (ಮೇ 1) ಜಾರಿಗೆ ಬರಲಿದೆ. ಅಂದರೆ, ಮೇ ತಿಂಗಳಿನಲ್ಲಿ ಬರುವ ವಿದ್ಯುತ್ ಬಿಲ್‌ಗಳಲ್ಲಿ ಗ್ರಾಹಕರು ಪ್ರತಿ ಯೂನಿಟ್‌ಗೆ ಹೆಚ್ಚುವರಿ 56 ಪೈಸೆ ಪಾವತಿಸಬೇಕಾಗುತ್ತದೆ. ಈ ವಸೂಲಾತಿಯು 2026-27ರ ಇಡೀ ಆರ್ಥಿಕ ವರ್ಷದಲ್ಲಿ ಅನ್ವಯವಾಗಲಿದ್ದು, ಏಪ್ರಿಲ್ 30, 2027 ರವರೆಗೆ ಮುಂದುವರಿಯಲಿದೆ. ವಿದ್ಯುತ್ ದರ ಏರಿಕೆಯಿಂದ ಗೃಹಬಳಕೆದಾರರು ಮಾತ್ರವಲ್ಲದೆ ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶದ ವಿದ್ಯುತ್ ಗ್ರಾಹಕರಿಗೂ ಈ ಏರಿಕೆ ಅನ್ವಯವಾಗಲಿದೆ.