ಈ ಹೆಲ್ಮೆಟ್ ಸುರಕ್ಷತಾ ಅಭಿಯಾನದ ಭಾಗವಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳ ಸಮೀಪದ ಜನ ದಟ್ಟಣೆಯ ಟ್ರಾಫಿಕ್ ಸಿಗ್ನಲ್ ಗಳ ಬಳಿ ಹೆಲ್ಮೆಟ್ ಇಲ್ಲದೆ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಸುಮಾರು 275 ಬ್ರಾಂಡೆಡ್ ಹೆಲ್ಮೆಟ್ ಗಳನ್ನು ಮತ್ತು ಪ್ರಥಮ ಚಿಕಿತ್ಸೆ ಕಿರು ಪುಸ್ತಕಗಳನ್ನು ವಿತರಿಸಲಾಯಿತು.
ಬೆಂಗಳೂರು: ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಆಗಿರುವ ಫೋರ್ಟಿಸ್ ಹೆಲ್ತ್ ಕೇರ್ ಸಂಸ್ಥೆಯು ದ್ವಿಚಕ್ರ ವಾಹನ ಅಪಘಾತಗಳಿಂದ ಉಂಟಾಗಬಹುದಾದ, ಆದರೆ ಎಚ್ಚರಿಕೆಯಿಂದ ತಪ್ಪಿಸ ಬಹುದಾದ ತುರ್ತು ಪರಿಸ್ಥಿತಿಗಳನ್ನು ತಡೆಯುವ ಮತ್ತು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಪ್ರೋತ್ಸಾಹಿಸುವ ಮುಖ್ಯ ಉದ್ದೇಶದಿಂದ ದೇಶದಾದ್ಯಂತ ಹೆಲ್ಮೆಟ್ ಸುರಕ್ಷತಾ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಭಾಗವಾಗಿ ಸಂಸ್ಥೆಯು ದೇಶದಾದ್ಯಂತ ಹಲವು ಫೋರ್ಟಿಸ್ ಆಸ್ಪತ್ರೆಗಳಲ್ಲಿ ಸ್ಥಳೀಯ ಟ್ರಾಫಿಕ್ ಪೊಲೀಸ್ ಇಲಾಖೆಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದೆ. ಅದರಂತೆ ಬೆಂಗಳೂರಿನ ಹಲವಾರು ಫೋರ್ಟಿಸ್ ಹಾಸ್ಪಿಟಲ್ ಗಳಲ್ಲಿ ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್ಸ್ ಸಮೂಹವು ಈ ಅಭಿಯಾನದ ಭಾಗವಾಗಿ ಬೆಂಗಳೂರಿನ ವಿವಿಧ ಫೋರ್ಟಿಸ್ ಆಸ್ಪತ್ರೆಗಳ ಸಮೀಪದ ಜನ ದಟ್ಟಣೆಯ ಟ್ರಾಫಿಕ್ ಚೌಕಗಳಲ್ಲಿ ಹೆಲ್ಮೆಟ್ ಇಲ್ಲದೆ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಸುಮಾರು 275 ಬ್ರಾಂಡೆಡ್ ಹೆಲ್ಮೆಟ್ ಗಳನ್ನು ಮತ್ತು ಪ್ರಥಮ ಚಿಕಿತ್ಸೆ ಕುರಿತಾದ ಕಿರುಪುಸ್ತಕಗಳನ್ನು ವಿತರಿಸಿದೆ. ಈ ಮೂಲಕ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಪ್ರೋತ್ಸಾಹ ಒದಗಿಸಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಗಳ ಹತ್ತಿರದ ಜನ ದಟ್ಟಣೆ ಪ್ರದೇಶಗಳಲ್ಲಿ ವಿಶೇಷ ಕಿಯೋಸ್ಕ್ ಅಳವಡಿಸಿ ಸುಗಮವಾಗಿ ಕಾರ್ಯಕ್ರಮ ನಡೆಯುವಂತೆ ಅನುವು ಮಾಡಿಕೊಡಲಾಯಿತು. ವಿವಿಧ ಆಸ್ಪತ್ರೆಗಳಲ್ಲಿ ವಿವಿಧ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿ ದರು.
ಇದನ್ನೂ ಓದಿ: Bangalore News: ಇಎಂಇಯಲ್ಲಿ ಬ್ರೂಸ್ ಲೀ ಮಣಿಯವರ ಮತ್ತು ಎಂ.ಡಿ. ಪಲ್ಲವಿ ಅವರ ಮಾಸ್ಟರ್‌ಕ್ಲಾಸ್
- ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಈ ಅಭಿಯಾನವನ್ನು ಮೈಕೋ ಲೇಔಟ್ ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶ್ರೀ ಪುಟ್ಟೇಗೌಡ ಎಸ್.ಎನ್. ಅವರು ಉದ್ಘಾಟಿಸಿದರು
- ಕನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಪ್ರಭಾಕರ್ ರೆಡ್ಡಿ ಅವರು ಅಭಿಯಾನ ಉದ್ಘಾಟಿಸಿದರು
- ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯಲ್ಲಿ ಇನ್‌ಸ್ಪೆಕ್ಟರ್ ಶ್ರೀ ಪ್ರೀತಮ್ ಡಿ. ಶ್ರೇಯಕರ್ ಅಭಿಯಾನ ಉದ್ಘಾಟಿಸಿದರು
- ರಾಜಾಜಿನಗರ ಫೋರ್ಟಿಸ್ ಆಸ್ಪತ್ರೆಯಲ್ಲಿ ಇನ್‌ಸ್ಪೆಕ್ಟರ್ ಶ್ರೀ ಹನುಮಂತ ಪವಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಅಭಿಯಾನದ ವಿಶೇಷ ಆಕರ್ಷಣೆ ಎಂದರೆ ಯಮರಾಜನ ವೇಷ ಧರಿಸಿದ ವ್ಯಕ್ತಿಯೊಬ್ಬರು ಸವಾರರಿಗೆ ಹೆಲ್ಮೆಟ್ ಅನ್ನು ವಿತರಣೆ ಮಾಡಿದ್ದು. ಅವರು ಹೆಲ್ಮೆಟ್ ನೀಡುವ ಮೊದಲು ಹೆಲ್ಮೆಟ್ ಧರಿಸುವುದರಿಂದ ಜೀವ ಉಳಿಯುತ್ತದೆ ಎಂಬ ಎಚ್ಚರಿಕೆ ಮಾತನ್ನೂ ಸವಾರರಿಗೆ ತಿಳಿಸಿದರು. ಈ ವೇಳೆ ಯಮನ ಪಾತ್ರಧಾರಿಯು ಹೆಲ್ಮೆಟ್ ಅನ್ನು ಧರಿಸಲು ದ್ವಿಚಕ್ರ ಸವಾರರಿಗೆ ಎಚ್ಚರಿಕೆ ನೀಡಿದರು. ಈ ಕ್ರಮವು ಅನೇಕರ ಗಮನ ಸೆಳೆಯಿತು.
ಫೋರ್ಟಿಸ್ ಸಂಸ್ಥೆಯ “ಫೋರ್ಟಿಸ್ ಹೈ ನಾ” (ಫೋರ್ಟಿಸ್ ಇದೆಯಲ್ಲ) ಎಂಬ ಅಭಿಯಾನದ ಆಶಯಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿದೆ. ಎಚ್ಚರಿಕೆ, ಸಿದ್ಧತೆ, ಕಾಳಜಿ ಮತ್ತು ಸಮಯಕ್ಕೆ ಸರಿಯಾಗಿ ಸ್ಪಂದಿಸುವ ಮೂಲಕ ಅಪಾಯ ತಪ್ಪಿಸಬಹುದು ಎಂದು ಸಾರುತ್ತದೆ. ಸುರಕ್ಷಿತ ಸವಾರಿ ಮಾಡಲು ಪ್ರೋತ್ಸಾಹ ನೀಡುವ ಮೂಲಕ ತಪ್ಪಿಸಬಹುದಾದ ತುರ್ತು ಪರಿಸ್ಥಿತಿಗಳನ್ನು ಕಡಿಮೆ ಮಾಡುವುದು ಫೋರ್ಟಿಸ್ ನ ಗುರಿಯಾಗಿದೆ. ಈ ಅಭಿಯಾನದ ಮೂಲಕ ಸಂಸ್ಥೆಯು ಕಷ್ಟದ ಕ್ಷಣಗಳಲ್ಲಿ ನಂಬಿಕಾರ್ಹ ವೈದ್ಯಕೀಯ ಸಂಗಾತಿಯಾಗಿ ಜೊತೆ ನಿಲ್ಲುವ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಈ ಸಂದರ್ಭದಲ್ಲಿ ಈ ಕುರಿತು ಮಾತನಾಡಿದ ಫೋರ್ಟಿಸ್ ಹೆಲ್ತ್ ಕೇರ್‌ನ ಚೀಫ್ ಗ್ರೋತ್ & ಇನ್ನೋವೇಷನ್ ಆಫೀಸರ್ ಡಾ.ರಿತು ಗಾರ್ಗ್ ಅವರು, “ಹೆಲ್ಮೆಟ್ ಧರಿಸುವುದರಿಂದ ಜೀವ ಉಳಿಯುತ್ತದೆ ಎಂಬ ಜಾಗೃತಿ ಮೂಡಿಸುವುದೇ ಈ ಅಭಿಯಾನದ ನಮ್ಮ ಮುಖ್ಯ ಉದ್ದೇಶವಾಗಿದೆ. ಈ ಮೂಲಕ ಹೆಲ್ಮೆಟ್ ಧರಿಸಲು ದ್ವಿಚಕ್ರ ಸವಾರರಿಗೆ ಉತ್ತೇಜನ ನೀಡಲಾಗುತ್ತದೆ. ಒಂದು ಸಣ್ಣ ಮುಂಜಾಗ್ರತೆಯಿಂದ ಜೀವನವನ್ನು ಬದಲಾಯಿಸುವ ಅಪಘಾತ ಅಥವಾ ಗಾಯಗಳನ್ನು ತಡೆಯಬಹುದು ಎಂಬುದನ್ನು ಈ ಅಭಿಯಾನದ ಮೂಲಕ ಸಾರುತ್ತಿದ್ದೇವೆ. ಈ ಚಟುವಟಿಕೆಯ ಮೂಲಕ ನಾವು ದೇಶದ ವಿವಿಧ ನಗರಗಳಲ್ಲಿ ಹೆಚ್ಚಿನ ಸಂಖ್ಯೆ ಜನರನ್ನು ತಲುಪಿ ಜವಾಬ್ದಾರಿ ಯುತವಾಗಿ ಸವಾರಿ ಮಾಡುವ ಅಗತ್ಯವನ್ನು ಮತ್ತೊಮ್ಮೆ ಒತ್ತಿ ಹೇಳುತ್ತಿದ್ದೇವೆ. ಈ ಅಭಿಯಾನವು ಸಾರ್ವಜನಿಕ ಸುರಕ್ಷತೆ ಮತ್ತು ಆರೋಗ್ಯ ಪಾಲನೆಯನ್ನು ಪ್ರೋತ್ಸಾಹಿಸುವಲ್ಲಿ ಫೋರ್ಟಿಸ್ ನ ದೀರ್ಘಕಾಲಿಕ ಬದ್ಧತೆಯನ್ನು ಸಾರುತ್ತದೆ. ಸಮಾಜದಲ್ಲಿ ಯೋಗಕ್ಷೇಮ ಮತ್ತು ತುರ್ತು ಸಿದ್ಧತೆ ಯನ್ನು ಪಾಲಿಸಲು ಉತ್ತೇಜಿಸಲು ನಮ್ಮ ಫೋರ್ಟಿಸ್ ಸಂಸ್ಥೆ ಬದ್ಧವಾಗಿದೆ” ಎಂದು ಹೇಳಿದರು.
ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್ಸ್ ನ ವಿಪಿ ಮತ್ತು ಬಿಸಿನೆಸ್ ಹೆಡ್ ಡಾ. ಅನಂತ ರಾವ್ ಅವರು, “ದ್ವಿಚಕ್ರ ವಾಹನ ಅಪಘಾತಗಳಿಂದ ಉಂಟಾಗುವ ತಲೆಗೆ ಗಾಯಗಳ ಭಯಾನಕ ಪರಿಣಾಮವನ್ನು ನಾವು ದಿನನಿತ್ಯ ನೇರವಾಗಿ ನೋಡುತ್ತಿರುತ್ತೇವೆ. ಅವುಗಳಲ್ಲಿ ಬಹಳಷ್ಟು ಅಫಘಾತಗಳನ್ನು, ನೋವುಗಳನ್ನು ಸರಳವಾಗಿ ಹೆಲ್ಮೆಟ್ ಧರಿಸುವುದರಿಂದ, ಎಚ್ಚರಿಕೆ ವಹಿಸುವುದರಿಂದ ಪೂರ್ತಿಯಾಗಿ ತಡೆಯಬಹುದಿತ್ತು. ಈ ಅಭಿಯಾನದ ಮೂಲಕ ನಾವು ಹೆಲ್ಮೆಟ್ ವಿತರಣೆ ಮಾಡಿರುವುದು ಮಾತ್ರವಲ್ಲ, ನಮ್ಮ ರಸ್ತೆಗಳಲ್ಲಿ ಜವಾಬ್ದಾರಿಯುತವಾಗಿ ಸವಾರಿ ನಡೆಸುವ ಸಂಸ್ಕೃತಿಯನ್ನು ಬೆಳೆಸುವುದು ಈ ಅಭಿಯಾನದ ಉದ್ದೇಶವಾಗಿದೆ. ನಾವು ವೈದ್ಯಕೀಯ ಕ್ಷೇತ್ರದಲ್ಲಿ ಪಡೆದ ಒಳನೋಟವನ್ನು ಸಮಾಜದ ಜನರಿಗೆ ತಲುಪಿಸುವ ಮೂಲಕ ಅಪಘಾತ ಗಳನ್ನು, ತುರ್ತು ಸ್ಥಿತಿಗಳನ್ನು ಕಡಿಮೆ ಮಾಡಲು ಬಯಸುತ್ತೇವೆ. ಈ ಮೂಲಕ ಈ ಅಪಘಾತಗಳಿಂದ ಆಗಬಹುದಾದ ನೋವುಗಳನ್ನು ಕಡಿಮೆ ಮಾಡಿ ಕುಟುಂಬಗಳಿಗೆ ನೆಮ್ಮದಿ ಒದಗಿಸಲು ಬಯಸುತ್ತೇವೆ. ಆಸ್ಪತ್ರೆಯ ಆವರಣಗಳನ್ನು ಮೀರಿ ನಮ್ಮ ಜವಾಬ್ದಾರಿ ಇದ್ದು, ಜನರು ತೀವ್ರ ಆರೈಕೆ ಪಡೆಯುವ ಸ್ಥಿತಿಗೆ ಹೋಗುವ ಬದಲು ಸುರಕ್ಷಿತರಾಗಿರಲಿ ಎಂಬುದು ನಮ್ಮ ಆಶಯವಾಗಿದೆ” ಎಂದು ಹೇಳಿದರು.
ಫೋರ್ಟಿಸ್ ಸಂಸ್ಥೆಯ “ಫೋರ್ಟಿಸ್ ಹೈ ನಾ” (ಫೋರ್ಟಿಸ್ ಇದೆಯಲ್ಲ) ಅಭಿಯಾನದ ಮುಖ್ಯ ಭಾಗವಾಗಿರುವ ಈ ಹೆಲ್ಮೆಟ್ ಸುರಕ್ಷತಾ ಅಭಿಯಾನವು ತುರ್ತು ಜಾಗೃತಿ, ಎಚ್ಚರಿಕೆ ಮೂಡಿಸಲು ಮತ್ತು ಜನರು ಉತ್ತಮ ವೈದ್ಯಕೀಯ ಸಂಸ್ಥೆ ಎಂದು ಫೋರ್ಟಿಸ್ ಮೇಲೆ ಇಟ್ಟಿರುವ ನಂಬಿಕೆಯನ್ನು ಬಲಪಡಿಸಲಿದೆ. ಈ ವ್ಯಾಪಕ ಪ್ರಯತ್ನದ ಮೂಲಕ ಫೋರ್ಟಿಸ್ ಹೆಲ್ತ್ ಕೇರ್ ಸಂಸ್ಥೆಯು ಸಮಾಜದ ಆರೋಗ್ಯ ಮತ್ತು ಸುರಕ್ಷತೆ ಕಡೆಗಿನ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ಆಸ್ಪತ್ರೆ ಆವರಣಗಳನ್ನು ಮೀರಿ ದೈನಂದಿನ ಜೀವನದಲ್ಲಿ ಎಚ್ಚರಿಕೆಯನ್ನು ಪಾಲಿಸಲು ಆಸ್ಪತ್ರೆ ಕ್ರಮ ಕೈಗೊಂಡಿರುವುದು ಇದರ ವಿಶೇಷತೆಯಾಗಿದೆ.